ETV Bharat / state

2028ಕ್ಕೆ ನಾಗೇಂದ್ರ ಎಲ್ಲಿ ಸ್ಪರ್ಧಿಸುತ್ತಾರೋ ಅಲ್ಲೇ ನಿಲ್ಲುತ್ತೇನೆ: ಬಿ.ನಾಗೇಂದ್ರ ಸವಾಲು ಸ್ವೀಕರಿಸಿದ ಶ್ರೀರಾಮುಲು

ತಮ್ಮ ರಾಜೀನಾಮೆ ಬಳಿಕ ಜನತಾ ನ್ಯಾಯಾಲಯಕ್ಕೆ ಬನ್ನಿ ಎಂದು ಬಿ.ನಾಗೇಂದ್ರ ನೀಡಿರುವ ಪಂಥಾಹ್ವಾನ ಸ್ವೀಕರಿಸಿರುವ ಮಾಜಿ ಸಚಿವ ಬಿ ಶ್ರೀರಾಮುಲು ಪ್ರತಿ ಸವಾಲು ಹಾಕಿದ್ದಾರೆ.

Ex Ministers Sriramulu and B Nagendra
ಶ್ರೀರಾಮುಲು ಮತ್ತು ಬಿ ನಾಗೇಂದ್ರ - ಸಂಗ್ರಹ ಚಿತ್ರಗಳು (ETV Bharat)
author img

By ETV Bharat Karnataka Team

Published : August 29, 2026 at 1:59 PM IST

4 Min Read
Choose ETV Bharat

ಬೆಂಗಳೂರು: ಬಿ.ನಾಗೇಂದ್ರ ಅವರ ಸವಾಲನ್ನು ಸ್ವೀಕರಿಸಿರುವ ಮಾಜಿ ಸಚಿವ, ಬಿಜೆಪಿ ನಾಯಕ ಶ್ರೀರಾಮುಲು 2028ರ ಚುನಾವಣೆ ವೇಳೆ ನಾಗೇಂದ್ರ ಎಲ್ಲಿ ಸ್ಪರ್ಧಿಸುತ್ತಾರೋ ನಾನು ಅಲ್ಲೇ ನಿಲ್ಲುತ್ತೇನೆ ಎಂದು ಪ್ರತಿ ಸವಾಲು ಹಾಕಿದ್ದಾರೆ.

ಪಕ್ಷದ ಮಲ್ಲೇಶ್ವರಂ ಕಚೇರಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2028ಕ್ಕೆ ಬಿ. ನಾಗೇಂದ್ರ ಎಲ್ಲಿ ಸ್ಪರ್ಧೆ ಮಾಡ್ತಾರೋ, ನಾನೂ ಅಲ್ಲೇ ನಿಲ್ತೇನೆ. ಒಬ್ಬ ಭ್ರಷ್ಟಾಚಾರಿ ವಿರುದ್ಧ ನಾನೇಕೆ ನಿಲ್ಲಲಿ, ಈಗ್ಯಾಕೆ ನಾನು ಸ್ಪರ್ಧಿಸಲಿ?. ಮುಂದಿನ ಚುನಾವಣೆಗೆ ಅವರು ಬರಲಿ, ಅವರು ಎಲ್ಲಿ ನಿಲ್ತಾರೋ, ನಾನೂ ಅಲ್ಲೇ ನಿಲ್ತೇನೆ. ಈ ಭ್ರಷ್ಟಾಚಾರದ ಹಣದಿಂದಲೇ ಲೋಕಸಭೆಯಲ್ಲಿ ಕಾಂಗ್ರೆಸ್‌ನಲ್ಲಿ ಹಲವರು ಗೆದ್ದಿದ್ದಾರೆ. ತುಕಾರಾಮ್, ಖರ್ಗೆ ಅಳಿಯ, ಬೀದರ್ ಸಂಸದ ಇದೇ ಹಣದಿಂದ ಗೆದ್ದವರು ಎಂದು ಆರೋಪಿಸಿದರು. ಈಗಲೇ ಜನತಾ ನ್ಯಾಯಾಲಯಕ್ಕೆ ಬನ್ನಿ ಅಂದ್ರೆ ಅವರು ಸರ್ಕಾರ ವಜಾ‌ ಮಾಡಿ ಬರಲಿ. ಸರ್ಕಾರ ವಿಸರ್ಜನೆ ಮಾಡಿ ಅವರು ಬರಲಿ. ನಾವೂ ಈಗಲೇ ಜನತಾ‌ ನ್ಯಾಯಾಲಯಕ್ಕೆ ಬರಲು ರೆಡಿ ಎಂದು ಪ್ರತಿಸವಾಲು ಹಾಕಿದ್ದಾರೆ.

ನಾಗೇಂದ್ರ ಜನತಾ ನ್ಯಾಯಾಲಯಕ್ಕೆ ಬನ್ನಿ ಅಂದಿದ್ದಾರೆ. ಯಾಕೆ ಅಷ್ಟೊಂದು ಅವಸರ. ಚುನಾವಣೆ ನಡೆಯುವಾಗ ನಾವು ಎದುರಿಸ್ತೇವೆ. ಜನತಾ ನ್ಯಾಯಾಲಯ ನನಗೆ ತೀರ್ಪು ಕೊಟ್ಟಿದೆ‌. ಸೋತಿದ್ದೇನೆ ಹೌದು, ಮುಂದೆ ಮತ್ತೆ ಜನ ಕೈಹಿಡೀತಾರೆ. ಜನತಾ ನ್ಯಾಯಾಲಯಕ್ಕೆ ಹೋಗಲು ನಾಗೇಂದ್ರಗೆ ಯಾಕೆ ಅಷ್ಟೊಂದು ಅವಸರ ಎಂದು ಶ್ರೀರಾಮುಲು ಪ್ರಶ್ನಿಸಿದರು.

ನಾಗೇಂದ್ರ ರಾಜೀನಾಮೆಯನ್ನು ಸಿಎಂ ಡಿಕೆಶಿ ಬಯಸಿದ್ದರು: ನಿನ್ನೆ ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ. ಒಂದೇ ವಿಚಾರದಲ್ಲಿ ಎರಡು ಬಾರಿ ರಾಜೀನಾಮೆ ಕೊಟ್ಟಿರೋದು ವಿಶೇಷ. ಈ ತರ ಮೊದಲ ಬಾರಿ ಆಗಿದೆ. ಸಿದ್ದರಾಮಯ್ಯ ಸಿಎಂ ಇದ್ದಾಗ ನಿಗಮದಲ್ಲಿ ಭ್ರಷ್ಟಾಚಾರ ಆಗಿದೆ ಅಂತ ಒಪ್ಕೊಂಡಿದ್ರು. ಲೋಕಸಭೆ ಚುನಾವಣೆಗೆ ನಿಗಮದ ಹಣ ಬಳಕೆ ಆಗಿದೆ. ಸದನದಲ್ಲಿ ನಾಗೇಂದ್ರರನ್ನು ಸಿಎಂ ಸಮರ್ಥನೆ ಮಾಡಿಕೊಳ್ಳಲೇ ಇಲ್ಲ. ಅವರಿಗೂ ಬೇರೆ ಚರ್ಚೆ ಆಗೋದು ಬೇಕಿರಲಿಲ್ಲ. ನಾಗೇಂದ್ರ ರಾಜೀನಾಮೆಯನ್ನು ಡಿಕೆಶಿ ಬಯಸಿದ್ರು. ಹಾಗಾಗಿ ಸದನದಲ್ಲಿ ಯಾವ ಸಮರ್ಥನೆಯನ್ನೂ ಮಾಡಿಕೊಳ್ಳಲಿಲ್ಲ ಎಂದು ಆರೋಪಿಸಿದರು.

ಮೊದಲಿಗೆ ನಾಗೇಂದ್ರ ಗೆದ್ದಾಗ ಇದ್ದಿದ್ದು ಇದೇ ಮನುವಾದಿಗಳು: ಕಣ್ಣೀರು ಹಾಕಿದ್ದಾರೆ ನಾಗೇಂದ್ರ. ನಾವೇನು ನಿಮ್ಮ ಮಂತ್ರಿ ಸ್ಥಾನ ಕಸಿದುಕೊಂಡ್ವಾ?. ನೀವು ತಪ್ಪು ಮಾಡಿದ್ರಿ, ರಾಜೀನಾಮೆ ಕೊಟ್ರಿ. ವಿಪಕ್ಷ ಆಗಿ ಹೋರಾಟ ಮಾಡಬೇಕಿತ್ತು, ನಾವು ಹೋರಾಟ ಮಾಡಿದ್ವಿ. ಸಮುದಾಯಕ್ಕಾಗಿ ನಮ್ಮ ಹೋರಾಟ ನಡೀತು. ಮನುವಾದಿಗಳು ಅಂದಿದ್ದಾರೆ ನಾಗೇಂದ್ರ. ಇದೇ ಮನುವಾದಿಗಳೇ ಅಲ್ವಾ ನಾಗೇಂದ್ರಗೆ ವಿಧಾನಸೌಧ ಪರಿಚಯ ಮಾಡಿಸಿದ್ದು. 2013ರಲ್ಲಿ ನಾಗೇಂದ್ರ ಗೆದ್ದಾಗ ಯಾರು ಜೊತೆಗಿದ್ರು?. ಇದೇ ಮನುವಾದಿಗಳು ತಾನೇ ಜೊತೆಗೆ ಇದ್ದುದ್ದು. ಇಷ್ಟೊಂದು ಕಣ್ಣೀರು ಯಾಕೆ ಸುರಸ್ತಿದ್ದೀಯ ನಾಗೇಂದ್ರ?. ಇಷ್ಟೊಂದು ಕಣ್ಣೀರು ಹಾಕುವ ಅಗತ್ಯ ಏನು ಎಂದು ಮಾಜಿ ಸಚಿವ ಶ್ರೀರಾಮುಲು ಟೀಕಿಸಿದರು.

ನಾಗೇಂದ್ರ ಕಣ್ಣೀರಿಗೆ ನಾವು ಕಾರಣರಲ್ಲ, ಬಿಜೆಪಿ ಕಾರಣ ಅಲ್ಲ. ನಾಗೇಂದ್ರ ಕಣ್ಣೀರಿಗೆ ಕಾಂಗ್ರೆಸ್ ಕಾರಣ. ವಿಧಾನಸಭೆಯಲ್ಲಿ ಅತ್ತಿಂದ ಇತ್ತಿಂದ ಹೋಗ್ತಿದ್ದೀಯಲ್ಲ. ಅದಕ್ಕೆ ಕಾರಣ ನಿನ್ನ ಕರ್ಮ. ನಾಗೇಂದ್ರಗೆ ಕರ್ಮ ಕಾಡ್ತಿದೆ, ಕರ್ಮ ಹಿಂಬಾಲಿಸ್ತಿದೆ. ಚಂದ್ರಶೇಖರ್ ಕುಟುಂಬದ ಕಣ್ಣೀರು, ನೋವು ಕರ್ಮವಾಗಿ ಕಾಡ್ತಿದೆ. ಚಂದ್ರಶೇಖರ್ ಕುಟುಂಬಕ್ಕೆ ನೆರವಾದ್ಯಾ? ಹೋಗಿ ಅವರ ಪರಿಸ್ಥಿತಿ ನೋಡಿದ್ಯಾ?. ನನಗೆ ಅಣ್ಣ ಅಂದಿದ್ದೀಯ, ನಿನ್ನಂತವರಿಗೆ ಅಣ್ಣನಾಗುವ ಯೋಗ್ಯತೆ ನನಗಿಲ್ಲ. ನನಗೆ ಅಣ್ಣ ಅಂತ ಕರೀಬೇಡ ಎಂದು ಅವರು ವಾಗ್ದಾಳಿ ನಡೆಸಿದರು‌.

ನಾವೂ ದಲಿತರೇ, ದಲಿತರನ್ನು ಕಾಂಗ್ರೆಸ್ ಟೇಕನ್ ಫಾರ್ ಗ್ರ್ಯಾಂಟೆಡ್ ಅಂತ ಅನ್ಕೊಂಡಿದೆ. ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ದಲಿತರಿಗೆ ಅನ್ಯಾಯ ಮಾಡಿದೆ. ಕಾಂಗ್ರೆಸ್ ಎಸ್‌ಟಿ ಸಮುದಾಯದ ಮೀಸಲಾತಿ ಕಸಿದುಕೊಳ್ತು. ಬಿಜೆಪಿ 7% ಕೊಟ್ಟಿದ್ದ ಮೀಸಲಾತಿಯನ್ನು ಕಾಂಗ್ರೆಸ್ 3% ಕ್ಕೆ ಇಳಿಸಿತು. ಹತ್ತಾರು ಅನ್ಯಾಯಗಳನ್ನು ದಲಿತರಿಗೆ ಕಾಂಗ್ರೆಸ್ ಮಾಡಿದೆ. ದಲಿತರ ಶಾಪದಿಂದಲೇ ಕಾಂಗ್ರೆಸ್ ನಿರ್ನಾಮ ಆಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ಅದೇನು ಮಂಡಕ್ಕಿ ಕಟ್ಟುವ ಪೇಪರಾ? ನಾಗೇಂದ್ರ ತಪ್ಪು ಮಾಡಿ ಸಂವಿಧಾನ ಪುಸ್ತಕ ಹಿಡಿದು ಓಡಾಡ್ತಾರೆ. ಅದೇನು ಮಂಡಕ್ಕಿ ಕಟ್ಟುವ ಪೇಪರಾ?. ಸಂವಿಧಾನ ಪುಸ್ತಕಕ್ಕೆ ಅದರದ್ದೇ ಅದ ಘನತೆ, ಗೌರವ ಇದೆ. ಅದನ್ನು ಹೀಗೆ ಹಾದಿ ಬೀದೀಲಿ ಹಿಡಿದು ಅಡ್ಡಾಡಿದರೆ ತಪ್ಪು ಮರೆಯಾಗುತ್ತಾ?. ರಾಜೀನಾಮೆ ಕೊಟ್ಟು ಜೈಲಿಗೆ ಹೋಗಿದ್ರು ನಾಗೇಂದ್ರ. ಈಗ ಮತ್ತೆ ಜೈಲಿಗೆ ಹೋಗಬಹುದು ಎಂದು ಶ್ರೀರಾಮುಲು ಭವಿಷ್ಯ ನುಡಿದ್ರು.

ಸೂಟ್ ಕೇಸ್ ವ್ಯಾಲಿಡಿಟಿ ಮುಗಿದಿದ್ದಕ್ಕೆ ತೆಗೆದಿದ್ದಾರೆ: ನಾಗೇಂದ್ರ ಪ್ರಾಮಾಣಿಕ ಅಲ್ಲ, ಸಣ್ಣ ಹುಡುಗ ಅಲ್ಲ. ಎಲ್ಲಿ ಏನು ಮಾಡಬೇಕೋ ಅದು ನಾಗೇಂದ್ರಗೆ ಗೊತ್ತಿದೆ. ಸೂಟ್‌ಕೇಸ್ ಕೊಟ್ಟು ಮಂತ್ರಿ ಆದವನು ನಾಗೇಂದ್ರ. ಆ ಸೂಟ್‌ಕೇಸ್ ವ್ಯಾಲಿಡಿಟಿ ಮುಗಿದಿದೆ. ಅದಕ್ಕೆ ನಿನ್ನನ್ನು ಹೈಕಮಾಂಡ್ ತೆಗೆದಿದ್ದಾರೆ. ಸೂಟ್‌ಕೇಸ್ ತೂಕ ಕಡಿಮೆ ಇತ್ತು ಅದಕ್ಕೆ ತೆಗೆದಿದ್ದಾರೆ ಎಂದು ಟೀಕಿಸಿದರು.

ಬಳ್ಳಾರಿ ಚುನಾವಣೆಗೆ ಸೂಟ್‌ಕೇಸ್ ಹಣ ಹಂಚಿದೆ. ಬೇರೆಯವರಿಗೂ ಹಂಚಿದೆ. ಅದಕ್ಕೆ ಸೂಟ್‌ಕೇಸ್ ತೂಕ ಕಮ್ಮಿ ಆಗಿರಬಹುದು. ದಲಿತ ಅಂತ ಸಂಚು‌ ಮಾಡಿದ್ದಾರೆ ಅಂತ ಮೊಸಳೆ ಕಣ್ಣೀರು ಹಾಕಿದ್ದಾರೆ. ರಾಜಣ್ಣ ಅವರನ್ನು ತೆಗೆಯುವಾಗ ಎಲ್ಲಿ ಹೋಗಿತ್ತು ಈ ಕಣ್ಣೀರು, ನಿಮ್ಮ ನಾಟಕ?. ನಾಗೇಂದ್ರ ಆಸ್ತಿ ಅಂದಿದ್ದಾರೆ ಸಿಎಂ, ಹೌದು ಅವರು ಸಿಎಂ ಆಸ್ತಿ, ಸೋನಿಯಾ ಗಾಂಧಿ ಆಸ್ತಿನೇ. ಅವನು ನಿಮಗೆ ಆಸ್ತಿ, ನಮಗಲ್ಲ ಎಂದು ತಿರುಗೇಟು ನೀಡಿದರು.

ನೂರು ದಿನ ಓಡೋ ನಾಟಕ ನಿನ್ನದು: ನೀನು ಕಣ್ಣೀರು ಹಾಕ್ತಿರೋದ್ಯಾಕೆ, ನಿಮ್ಮನೆ ಆಸ್ತಿ ಏನಾದ್ರೂ ಹೋಗ್ತಿದೆಯಾ?. ನೀನು ಕಳೆದಿರೋದು ದಲಿತರ ಪಾಲಿನ ಹಣ. ನಿನ್ನ ಪಾಪಕ್ಕೆ ನೀನು ಕಣ್ಣೀರು ಹಾಕ್ತಿದ್ದೀಯ ಅಷ್ಟೇ. ನಾಗೇಂದ್ರ ನೀವು ಮಾಡಿರೋದು ತಪ್ಪು ಅದನ್ನು ಒಪ್ಕೊಳಿ, ಭ್ರಷ್ಟಾಚಾರ ಮಾಡಿದ್ದಕ್ಕೆ ನಾವು ಸಾಥ್ ಕೊಡಬೇಕಿತ್ತಾ?. ಅಧಿಕೃತವಾಗಿ ನೀನು ತಪ್ಪೊಪ್ಪಿಕೊಂಡಿದ್ದೀಯ. ನಿನ್ನನ್ನು ನಿನ್ನ ಪಾರ್ಟಿ ಉಳಿಸಿಕೊಳ್ಳಬೇಕಿತ್ತು. ನಾವು ನಮ್ಮ ಕೆಲಸ ಮಾಡ್ತಿದ್ದೇವೆ. ನೀನು ಒಳ್ಳೇ ನಾಟಕಕಾರ, ಚೆನ್ನಾಗಿ ಮಾಡಿದ್ದೀಯ. ನೂರು ದಿನ ಓಡೋ ಆ್ಯಕ್ಟಿಂಗ್ ನಿನ್ನದು ಎಂದು ಲೇವಡಿ ಮಾಡಿದರು.

ಪಾದಯಾತ್ರೆ ಲೋಗೋ ಬಿಡುಗಡೆ: ಇದೇ ವೇಳೆ ಬಿಜೆಪಿ ನಾಯಕರು ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಪಾದಯಾತ್ರೆ ಲೋಗೋ ಬಿಡುಗಡೆ ಮಾಡಿದರು. ಬಳ್ಳಾರಿ ಚಲೋ ಎಂಬ ಬರಹವುಳ್ಳ ಲೋಗೋ ಬಿಡುಗಡೆ ಮಾಡಿದರು. ಸೆಪ್ಟಂಬರ್ 1 ರಿಂದ 10 ರ ತನಕ ಪಾದಯಾತ್ರೆ ಮಾಡ್ತೇವೆ. ರಾಯಚೂರು ಟು ಬಳ್ಳಾರಿವರೆಗೆ ಪಾದಯಾತ್ರೆ ಮಾಡುತ್ತೇವೆ. ರಾಯಚೂರಿನಲ್ಲಿ ಕೇಂದ್ರದ ಮಂತ್ರಿಗಳಾದ ಪ್ರಲ್ಹಾದ್ ಜೋಷಿ ಹಾಗೂ ಕುಮಾರಸ್ವಾಮಿ ಪಾದಯಾತ್ರೆ ಉದ್ಘಾಟನೆ ಮಾಡ್ತಾರೆ. 9 ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಪಾದಯಾತ್ರೆ ಸಾಗಲಿದೆ ಎಂದು ಶ್ರೀರಾಮುಲು ಇದೇ ಸಂದರ್ಭದಲ್ಲಿ ತಿಳಿಸಿದರು.

ಇದನ್ನೂ ಓದಿ: ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ಘೋಷಣೆ: ಜನತಾ ನ್ಯಾಯಾಲಯಕ್ಕೆ ಬರುವಂತೆ ಪ್ರತಿಪಕ್ಷಗಳಿಗೆ ಸವಾಲು