ಬಿಎಸ್ವೈ 84ನೇ ಹುಟ್ಟುಹಬ್ಬ: ಯಡಿಯೂರಪ್ಪನವರು ಶೀಘ್ರ ಕೋಪಿಯೇ ಹೊರತು, ಶೀಘ್ರ ದ್ವೇಷಿ ಅಲ್ಲ: ಜೋಶಿ
ಬಿ.ಎಸ್. ಯಡಿಯೂರಪ್ಪ ಅವರ 84ನೇ ವರ್ಷದ ಹುಟ್ಟುಹಬ್ಬ ಹಿನ್ನೆಲೆ ಶಿಕಾರಿಪುರದ ಕುಮದ್ವತಿ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Published : February 28, 2026 at 2:23 PM IST
ಶಿವಮೊಗ್ಗ: ಬಿ.ಎಸ್. ಯಡಿಯೂರಪ್ಪ ಅವರು ಶೀಘ್ರ ಕೋಪಿಯೇ ಹೊರತು ಶೀಘ್ರ ದ್ವೇಷಿ ಅಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಶಿಕಾರಿಪುರದ ಕುಮದ್ವತಿ ಕಾಲೇಜು ಮೈದಾನದಲ್ಲಿ ನಿನ್ನೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ 84ನೇ ವರ್ಷದ ಹುಟ್ಟುಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾನು (ಪ್ರಲ್ಹಾದ್ ಜೋಶಿ) ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿದ್ದ ವೇಳೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ನನಗೂ ಅವರಿಗೆ ಸ್ವಲ್ಪ ಗಲಾಟೆ ಆಗಿತ್ತು. ಆಗ ನಾನು ಅವರು ನನ್ನ ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಾರೋ ಇಲ್ಲವೂ ಎಂದುಕೊಂಡಿದ್ದೆ. ಆದರೆ, ಪೋನಾಯಿಸಿ 'ನಾನು ನಿನ್ನ ಚುನಾವಣಾ ಪ್ರಚಾರಕ್ಕೆ ಬರುತ್ತೆನೆಂದು' ಹೇಳಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದರು ಎಂದು ನೆನಪು ಮಾಡಿಕೊಂಡರು.
ಯಡಿಯೂರಪ್ಪ ಅವರು ರಾಜ್ಯವನ್ನು ಅಭಿವೃದ್ದಿ ದಿಕ್ಕಿನಡೆ ಕರೆದುಕೊಂಡು ಹೋದರು. ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ನಾಮಕಾರಣ ಮಾಡಿದರು, ಅದೇ ರೀತಿ ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಿದರು. 2019 ರಲ್ಲಿ ಉತ್ತರ ಕರ್ನಾಟಕದಲ್ಲಿ ಬಂದ ಪ್ರವಾಹದಲ್ಲಿ ಮನೆ ಕಳೆದು ಕೊಂಡವರಿಗೆ 5 ಲಕ್ಷ ಘೋಷಣೆ ಮಾಡಿದರು. ರಾಜ್ಯದ ಜನತೆಗೆ ಶಿಕಾರಿಪುರ ಕ್ಷೇತ್ರ ಅಂದ್ರೆ ಗೊತ್ತಿರಲಿಲ್ಲ. ಆದರೆ, ಈಗ ಯಡಿಯೂರಪ್ಪ ಅಂದ್ರೆ ಶಿಕಾರಿಪುರ, ಶಿಕಾರಿಪುರ ಅಂದ್ರೆ ಯಡಿಯೂರಪ್ಪ ಎಂಬಂತೆ ಆಗಿದೆ. ಯಡಿಯೂರಪ್ಪನವರನ್ನು ಗೆಲ್ಲಿಸಿದ ಶಿಕಾರಿಪುರ ಜನತೆಗೆ ನನ್ನ ನಮಸ್ಕಾರ ಎಂದರು.
84 ವರ್ಷ ಅಂದ್ರೆ, ಸಹಸ್ರ ಚಂದ್ರ ದರ್ಶನ ಮಾಡಿದವರು ಯಡಿಯೂರಪ್ಪನವರು. ಶಿಕಾರಿಪುರ ಕ್ಷೇತ್ರದ ಜನರ ಸಹಕಾರದಿಂದ ಯಡಿಯೂರಪ್ಪನವರು ಪೂರ್ಣ ಚಂದ್ರನಂತೆ ಹೊಳೆಯುತ್ತಿದ್ದಾರೆ. ಯಡಿಯೂರಪ್ಪ ದಣಿವರೆಯದ ನಾಯಕರಾಗಿದ್ದಾರೆ. ಹಗಲು ರಾತ್ರಿ ಹೋರಾಟದ ಪರಿಕಲ್ಪನೆ ಕೊಟ್ಟವರು ಯಡಿಯೂರಪ್ಪನವರು ಎಂದರು
ಸಾಧನೆ ಮಾತನಾಡಬೇಕು -ಮಾತೇ ಸಾಧನೆಯಾಗಬಾರದು: ನಂತರ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, ಬರುವಂತಹ ದಿನಗಳಲ್ಲಿ ರಾಜ್ಯದ ಉದ್ದಗಲಕ್ಕೂ ಓಡಾಡಿ, ಕರ್ನಾಟಕದಲ್ಲಿ ನಮ್ಮ ಪಕ್ಷದವನ್ನು ಅಧಿಕಾರಕ್ಕೆ ತರುವ ಒಂದೇ ಗುರಿ. ಆ ನಿಟ್ಟಿನಲ್ಲಿ ನಾನು ಶ್ರಮ ವಹಿಸುತ್ತೇನೆ. ಸಾಧನೆ ಮಾತನಾಡಬೇಕು, ಸಾಧನೆ ಮಾತಾಗಬೇಕು, ಮಾತೆ ಸಾಧನೆಯಾಗಬಾರದು. ಶೋಷಿತ ಪೀಡಿತ ದಲಿತರ ಉದ್ಧಾರಕ್ಕೆ ಅನೇಕ ಕಾರ್ಯಕ್ರಮವನ್ನು ಮಾಡಿದ್ದೇನೆ. ರಾಜ್ಯದಲ್ಲಿ ಭ್ರಷ್ಟ ಸರ್ಕಾರವನ್ನು ಕಿತ್ತು ಹಾಕಿ, ನಮ್ಮ ಸರ್ಕಾರ ತರುವುದೇ ಮುಖ್ಯ ಗುರಿಯಾಗಿದೆ ಒತ್ತಿ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದ ಬಿ.ಎಸ್. ರಾಘವೇಂದ್ರ, ವಿವಿಧ ಪಕ್ಷದ ನಾಯಕರುಗಳು ಹಾಜರಿದ್ದರು.
ಇದನ್ನೂ ಓದಿ: ಶಿವಮೊಗ್ಗ: ಭದ್ರಾವತಿ ಆಕಾಶವಾಣಿಗೆ 10 ಕಿಲೋ ವ್ಯಾಟ್ ಸಾಮರ್ಥ್ಯದ FM ಪ್ರೇಷಕ ಅಳವಡಿಕೆ

