ETV Bharat / state

ಕೃಷ್ಣಮೃಗಗಳ ಸರಣಿ ಸಾವಿನ ಬಳಿಕ ಕಿತ್ತೂರು ರಾಣಿ ಚನ್ನಮ್ಮ ಮೃಗಾಲಯದ ಪರಿಸ್ಥಿತಿ ಹೇಗಿದೆ? ಪ್ರತ್ಯಕ್ಷ ವರದಿ

ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಬಳಿ ಇರುವ ಕಿತ್ತೂರು‌ ರಾಣಿ ಚನ್ನಮ್ಮ ಮೃಗಾಲಯ ಕೃಷ್ಣಮೃಗಗಳ ಸಾವಿನ ಮನೆಯಾಗಿ ಮಾರ್ಪಟ್ಟಿದೆ.

forest-department-staff-are-busy-to-sanitizing-the-kittur-rani-channamma-zoo
ಕಿತ್ತೂರು‌ ರಾಣಿ ಚನ್ನಮ್ಮ ಮೃಗಾಲಯದಲ್ಲಿನ ಕೃಷ್ಣಮೃಗಗಳು (ಎಡಬದಿ), ಅರಣ್ಯ ಸಿಬ್ಬಂದಿ ಸ್ಯಾನಿಟೈಸ್ ಮಾಡುತ್ತಿರುವುದು (ಬಲಬದಿ) (ETV Bharat)
author img

By ETV Bharat Karnataka Team

Published : November 18, 2025 at 6:51 PM IST

3 Min Read
Choose ETV Bharat

ಬೆಳಗಾವಿ: ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಐದು ದಿನಗಳ ಅಂತರದಲ್ಲಿ 31 ಕೃಷ್ಣಮೃಗಗಳ ಸಾವು ಆತಂಕಕ್ಕೀಡು ಮಾಡಿದೆ. ಇನ್ನುಳಿದ ಕೃಷ್ಣಮೃಗಗಳ ಆರೋಗ್ಯ ಸ್ಥಿತಿ ಹೇಗಿದೆ? ಅರಣ್ಯ ಅಧಿಕಾರಿಗಳು ಹೇಳುವುದೇನು? ನೋಡೋಣ.

ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಬಳಿ ಇರುವ ಕಿತ್ತೂರು‌ ರಾಣಿ ಚನ್ನಮ್ಮ ಮೃಗಾಲಯ ಈಗ ಕೃಷ್ಣಮೃಗಗಳ ಸಾವಿನ ಮನೆಯಾಗಿ ಮಾರ್ಪಟ್ಟಿದೆ. ಇಲ್ಲಿನ 38 ಕೃಷ್ಣಮೃಗಗಳ ಪೈಕಿ 31 ಸಾವನ್ನಪ್ಪಿದ್ದು, ಇನ್ನು 7 ಮಾತ್ರ ಉಳಿದಿವೆ. ಈ ಕೃಷ್ಣಮೃಗಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಅಲ್ಲದೇ, ಕ್ವಾರಂಟೈನ್ ಮಾಡಿ ಬನ್ನೇರುಘಟ್ಟದ ತಜ್ಞ ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ. ಹೀಗಾಗಿ, ಕೃಷ್ಣಮೃಗಗಳು ಎಂದಿನಂತೆ ತಮ್ಮ ಆವರಣದಲ್ಲಿ ಆರಾಮವಾಗಿ ಓಡಾಡುತ್ತಿರುವ ದೃಶ್ಯ ಕಂಡು ಬರುತ್ತಿದೆ.

ಕೃಷ್ಣಮೃಗಗಳ ಸಾವಿನ ಬಳಿಕ ರಾಣಿ ಚನ್ನಮ್ಮ ಮೃಗಾಲಯದ ಪರಿಸ್ಥಿತಿ ಕುರಿತು ಮಾಹಿತಿ ನೀಡುತ್ತಿರುವ ಡಿಎಫ್ಒ ಎನ್.ಇ.ಕ್ರಾಂತಿ (ETV Bharat)

ಇಡೀ ಮೃಗಾಲಯವನ್ನು ಅರಣ್ಯ ಇಲಾಖೆ ಸಿಬ್ಬಂದಿ ಸ್ಯಾನಿಟೈಸ್ ಮಾಡುವಲ್ಲಿ ನಿರತರಾಗಿದ್ದಾರೆ. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ, ಉಪ ಸಂರಕ್ಷಣಾಧಿಕಾರಿ ಎನ್.ಇ.ಕ್ರಾಂತಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜ ಬಾಳೆಹೊಸೂರ, ಮೃಗಾಲಯ ಸಂರಕ್ಷಣಾಧಿಕಾರಿ ಪವನ ಕುರನಿಂಗ ಸೇರಿ ಇಡೀ ಸಿಬ್ಬಂದಿ ಇಲ್ಲಿಯೇ ಬೀಡುಬಿಟ್ಟಿದ್ದು, ಹಗಲು-ರಾತ್ರಿ ಎನ್ನದೇ ಪ್ರಾಣಿಗಳ ರಕ್ಷಣೆಗೆ ಮುಂದಾಗಿದ್ದಾರೆ.

Forest Department staff
ಅರಣ್ಯ ಇಲಾಖೆಯ ಸಿಬ್ಬಂದಿ (ETV Bharat)

ಸಿಸಿಎಫ್ ಮಂಜುನಾಥ ಚವ್ಹಾಣ ಈಟಿವಿ ಭಾರತದ ಜೊತೆಗೆ ಮಾತನಾಡಿ, "ಹೆಮೊರೈಸಿಕ್ ಸೆಪ್ಪಿಸಿಮಿಯಾ (ಗಳಲೆ ರೋಗ) ಬ್ಯಾಕ್ಟೀರಿಯಾ ಸೋಂಕಿನಿಂದ ಕೃಷ್ಣಮೃಗಗಳು ಸಾವನ್ನಪ್ಪಿವೆ ಎಂದು ತಜ್ಞ ವೈದ್ಯರು ಅಂದಾಜಿಸಿದ್ದಾರೆ. ಸದ್ಯಕ್ಕೆ ಬದುಕುಳಿದಿರುವ 7 ಕೃಷ್ಣಮೃಗಗಳ ಆರೋಗ್ಯ ಚೆನ್ನಾಗಿದೆ. ಬೆಳಗಿನ ಜಾವ ಕೂಡ ತಜ್ಞರು ವೀಕ್ಷಣೆ ಮಾಡಿದ್ದಾರೆ. ಎಲ್ಲವೂ ಆ್ಯಕ್ಟಿವ್ ಆಗಿವೆ. ನಿರಂತರವಾಗಿ ಮಾನಿಟರ್ ಮಾಡಲಾಗುತ್ತಿದೆ. ಈ ಸೋಂಕು ಬೇರೆ ಪ್ರಾಣಿಗಳಿಗೆ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ'' ಎಂದರು.

sanitizing
ಮೃಗಾಲಯಕ್ಕೆ ಬರುವ ವಾಹನಗಳಿಗೆ ಸ್ಯಾನಿಟೈಸೇಶನ್ (ETV Bharat)

"ಬೆಳಗಾವಿ ಮೃಗಾಲಯದಲ್ಲಿ ಇಂಥ ಘಟನೆ ಇದೇ ಮೊದಲು. ಗುಜರಾತ್​ನ ವಡೋದರಾದಲ್ಲಿ ಇಂಥದ್ದೇ ಘಟನೆ ನಡೆದಿತ್ತು. ಅಲ್ಲಿಯೂ ಹಲವಾರು ಕೃಷ್ಣಮೃಗಗಳು ಸಾವನ್ನಪ್ಪಿದ್ದವು. ಆಗ ಹೆಮೊರೈಸಿಕ್ ಸೆಪ್ಪಿಸಿಮಿಯಾ ಬ್ಯಾಕ್ಟೀರಿಯಾದಿಂದಲೇ ಕೃಷ್ಣಮೃಗಗಳು ಮೃತಪಟ್ಟಿರುವುದು ದೃಢಪಟ್ಟಿತ್ತು. ಹಾಗಾಗಿ, ಇಲ್ಲಿಯೂ ಅದೇ ಸೋಂಕಿನಿಂದ ಸಾವನ್ನಪ್ಪಿವೆ ಎಂದು ತಜ್ಞರು ಶಂಕಿಸಿದ್ದಾರೆ" ಎಂದು ಅವರು ಹೇಳಿದರು.

sanitizing
ಅರಣ್ಯ ಇಲಾಖೆ ಸಿಬ್ಬಂದಿ ಸ್ಯಾನಿಟೈಸ್ ಮಾಡುತ್ತಿರುವುದು. (ETV Bharat)

ಮೃತಪಟ್ಟ ಕೃಷ್ಣಮೃಗಗಳ ಮಾದರಿ ಬೆಂಗಳೂರಿನ ಪಶು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಕಳಿಸಿಕೊಡಲಾಗಿದೆ. ಯಾವ ಬ್ಯಾಕ್ಟೀರಿಯಾ ಅದರಲ್ಲಿ ಪತ್ತೆ ಆಗಿವೆ.? ಯಾವ ಕಾರಣದಿಂದ ಸಾವಾಗಿದೆ‌.? ಎಂಬ ಬಗ್ಗೆ ಇಂದು ಸಂಜೆಯೊಳಗೆ ಆ ವರದಿ ಬರಬಹುದು ಎಂದ ಸಿಸಿಎಫ್ ಮಂಜುನಾಥ ಚವ್ಹಾಣ, "ಅರಣ್ಯ ಸಚಿವ ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಈ ರೋಗವು ಬೇರೆ ಪ್ರಾಣಿಗಳಿಗೆ ಹರಡದಂತೆ ಕಟ್ಟೆಚ್ಚರ ವಹಿಸಲು ಸೂಚಿಸಿದ್ದಾರೆ. ಅದೇ ರೀತಿ ಇಂಥ ಸಂದರ್ಭದಲ್ಲಿ ಪಾಲಿಸಬೇಕಾದ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ" ಎಂದರು.

ಕೃಷ್ಣಮೃಗಗಳ ಸಾವಿನ ಬಳಿಕ ರಾಣಿ ಚನ್ನಮ್ಮ ಮೃಗಾಲಯದ ಪರಿಸ್ಥಿತಿ ಕುರಿತು ಮಾಹಿತಿ ನೀಡುತ್ತಿರುವ ಸಿಸಿಎಫ್ ಮಂಜುನಾಥ ಚವ್ಹಾಣ (ETV Bharat)

ಡಿಎಫ್ಒ ಎನ್.ಇ.ಕ್ರಾಂತಿ ಅವರು ಮಾತನಾಡಿ, "31 ಕೃಷ್ಣಮೃಗಗಳು ಸಾವನ್ನಪ್ಪಿರುವುದು ನಮಗೂ ಕೂಡ ದುಃಖಕರ ಸಂಗತಿ. ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುತ್ತಿದ್ದ ಮೃಗಾಲಯ ಇದು. ಏಕಾಏಕಿ ಕೃಷ್ಣಮೃಗಗಳು ಸಾವನ್ನಪ್ಪಿವೆ. ಇನ್ನುಳಿದ 7 ಕೃಷ್ಣಮೃಗಗಳನ್ನು ಉಳಿಸಿಕೊಳ್ಳಲು ಎಲ್ಲ ರೀತಿ ಪ್ರಯತ್ನ ಮಾಡುತ್ತಿದ್ದೇವೆ. ತಜ್ಞ ವೈದ್ಯರ ಸೂಚನೆಯಂತೆ ಆಹಾರ, ಔಷಧಿ ನೀಡಲಾಗುತ್ತಿದೆ" ಎಂದು ಹೇಳಿದರು.

"ಬೇರೆ ಪ್ರಾಣಿಗಳ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಕಂಡು ಬಂದಿಲ್ಲ. ಎಲ್ಲವೂ ಆರಾಮ ಆಗಿವೆ. ಮೃಗಾಲಯದ ತುಂಬಾ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಅದೇ ರೀತಿ ಇಲ್ಲಿನ ಸಿಬ್ಬಂದಿ ಸುರಕ್ಷತೆಗೆ ಅಗತ್ಯ ಕ್ರಮ ವಹಿಸಿದ್ದೇವೆ. ಇನ್ನು ಮೃಗಾಲಯಕ್ಕೆ ಪ್ರವಾಸಿಗರು ಯಾವುದೇ ಆತಂಕ ಇಲ್ಲದೇ ಬರಬಹುದು. ರೋಗ ಕಾಣಿಸಿಕೊಂಡಿರುವ ಕೃಷ್ಣಮೃಗ ವ್ಯಾಪ್ತಿ ಬಿಟ್ಟು ಇನ್ನುಳಿದ ಎಲ್ಲಾ ಕಡೆ ಪ್ರಾಣಿಗಳ ವೀಕ್ಷಣೆಗೆ ಅವಕಾಶ ಇದೆ. ಸ್ಯಾನಿಟೈಜೇಷನ್ ಸೇರಿ ಮತ್ತಿತರ ಕ್ರಮಗಳನ್ನು ಕೈಗೊಂಡಿದ್ದೇವೆ" ಎಂದು ಸ್ಪಷ್ಟಪಡಿಸಿದರು.

ಮೃಗಾಲಯದಲ್ಲಿ 195 ಪ್ರಾಣಿ, ಪಕ್ಷಿಗಳಿವೆ: ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಈ ಮೊದಲು 226 ಪ್ರಾಣಿ ಪಕ್ಷಿಗಳಿದ್ದವು. ಇದರಲ್ಲಿ 31 ಕೃಷ್ಣಮೃಗಗಳು ಮೃತಪಟ್ಟಿದ್ದರಿಂದ ಇನ್ನು 195 ಉಳಿದಿವೆ. ಇದರಲ್ಲಿ 3 ಹುಲಿ, 2 ಸಿಂಹ, 3 ಚಿರತೆ, 2 ಕರಡಿ ಸೇರಿದಂತೆ ನರಿ, ಜಿಂಕೆ, ಕತ್ತೆಕಿರುಬ, ನವಿಲು, ಮೊಸಳೆ, ಕಡವೆ, ಯಮು ಸೇರಿ ಮತ್ತಿತರ ಪ್ರಾಣಿ-ಪಕ್ಷಿಗಳಿವೆ.

ಸುತ್ತಮುತ್ತಲಿನ ಗ್ರಾಮಗಳಲ್ಲೂ ಕಟ್ಟೆಚ್ಚರ: ಗಳಲೆ ರೋಗವು ಸಾಂಕ್ರಾಮಿಕವಾಗಿದ್ದು, ಇತರೆ ಸಸ್ಯಾಹಾರಿ ಪ್ರಾಣಿಗಳಿಗೂ ಸಹ ಹರಡುವ ಸಾಧ್ಯತೆ ಇದೆ. ಆದ್ದರಿಂದ ಈ ಕಾಯಿಲೆಯ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಿರು ಮೃಗಾಲಯದ ಅಕ್ಕ-ಪಕ್ಕದ ಗ್ರಾಮಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸಿಸಿಎಫ್ ಮಂಜುನಾಥ ಚವ್ಹಾಣ ಕೋರಿದ್ದಾರೆ.

ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದೇನು?: "ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿಂದ ವೈದ್ಯರು, ಎಕ್ಸ್‌ಪರ್ಟ್ಸ್ ಬಂದಿದ್ದಾರೆ. ಅವರು ಏನು ರಿಪೋರ್ಟ್​ ಕೊಡುತ್ತಾರೆ ನೋಡೋಣ" ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, "ಸದ್ಯಕ್ಕೆ ಹುಲ್ಲು ತಿನ್ನುವಂತಹ ಪ್ರಾಣಿಗಳಿದ್ದರೆ ಅದಕ್ಕೆ ಈ ರೋಗ ಹರಡಬಹುದು ಎಂದು ಹೇಳಿದ್ದಾರೆ, ವೈದ್ಯರು ಬೇರೆಯದಕ್ಕೆ ಬರಲ್ಲ ಅಂತ ಹೇಳಿದ್ದಾರೆ, ರಿಪೋರ್ಟ್ ಬರಲಿ ನಂತರ ಮಾತನಾಡುತ್ತೇನೆ" ಎಂದಿದ್ದಾರೆ.

ಇದನ್ನೂ ಓದಿ: ಮೂಕ ಪ್ರಾಣಿಗಳ ಸಾವಿಗೆ ಕಾರಣ ಆದವರ ವಿರುದ್ಧ ಕ್ರಮ ನಿಶ್ಚಿತ: ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ