ETV Bharat / state

ಮದ್ದೂರಿನಲ್ಲಿ ಫುಟ್‌ಪಾತ್​ ಒತ್ತುವರಿ ತೆರವುಗೊಳಿಸಿದ ನಗರಸಭಾ ಅಧಿಕಾರಿಗಳು

ಫುಟ್​ಪಾತ್​ ಮೇಲೆ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿರುವ ಬೀದಿಬದಿ ವ್ಯಾಪಾರಿಗಳಿಗೆ ಶೆಡ್ ತೆರವುಗೊಳಿಸುವಂತೆ ಸೂಚಿಸಿದರೂ ಎಚ್ಚೆತ್ತುಕೊಳ್ಳದ ಕಾರಣ ಇಂದು ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

FOOTPATH ENCROACHMENT DRIVE IN MANDYA'S MADDUR BY MUNICIPAL OFFICIALS
ಮದ್ದೂರಿನಲ್ಲಿ ನಗರಸಭಾ ಅಧಿಕಾರಿಗಳಿಂದ ಫುಟ್‌ಪಾತ್​ ಒತ್ತುವರಿ ತೆರವು (ETV Bharat)
author img

By ETV Bharat Karnataka Team

Published : January 8, 2026 at 5:28 PM IST

2 Min Read
Choose ETV Bharat

ಮಂಡ್ಯ: ಮದ್ದೂರು ನಗರದ ಪೇಟೆ ಬೀದಿ ರಸ್ತೆಯ ಕೊಲ್ಲಿ ವೃತ್ತದಿಂದ ಪ್ರವಾಸಿ ಮಂದಿರದ ವೃತ್ತದವರೆಗೆ ಫುಟ್​ಪಾತ್​​ ಒತ್ತುವರಿ ತೆರವು ಕಾರ್ಯಾಚರಣೆ ಇಂದು ನಡೆಯಿತು.

ನಗರಸಭೆ, ಲೋಕೋಪಯೋಗಿ ಹಾಗೂ ಮದ್ದೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನವೀನ್ ಅವರ ನೇತೃತ್ವದಲ್ಲಿ ಅಂಗಡಿ ಮುಂಗಟ್ಟುಗಳ ಸರಕು, ತಗಡಿನ ಶೀಟ್ ಮತ್ತು ಇತರೆ ವಸ್ತುಗಳನ್ನು ಫುಟ್‌ಪಾತ್ ಮೇಲೆ ಹಾಕಿದ್ದನ್ನು ತೆರವುಗೊಳಿಸಲಾಯಿತು.

ನಗರಸಭಾ ಪೌರಾಯುಕ್ತರಾದ ರಾಧಿಕಾ ಅವರು ಮಾತನಾಡಿ, "ಮದ್ದೂರು ನಗರದ ಪೇಟೆ ಬೀದಿ ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ ಮಾಡುವುದು, ಬಹುತೇಕ ಅಂಗಡಿಯವರು ತಮ್ಮ ಅಂಗಡಿಗಳ ಸರಕನ್ನು ಫುಟ್​ಪಾತ್ ಒತ್ತುವರಿ ಮಾಡಿಕೊಂಡು ಹಾಕುವುದರಿಂದ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಸಂಚಾರ ಮಾಡುವುದು ಕಷ್ಟವಾಗುತ್ತಿದೆ ಎಂದು ನಗರಸಭೆಗೆ ಈ ಬಗ್ಗೆ ನಾಗರಿಕರು ಹಲವು ಬಾರಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲ ಸಿಬ್ಬಂದಿಯೊಂದಿಗೆ ತೆರವು ಕಾರ್ಯಾಚರಣೆ ಮಾಡಲಾಗಿದೆ. ಪಾದಚಾರಿ ಮಾರ್ಗದಲ್ಲಿ ಯಾವುದೇ ನಾಮಫಲಕ, ಅಂಗಡಿ ಸರಕುಗಳನ್ನಿಡದೆ ವಾಹನಗಳು ಹಾಗೂ ಪಾದಚಾರಿಗಳು ಸುಗಮವಾಗಿ ಸಂಚರಿಸಲು ಅಂಗಡಿ ಮಾಲೀಕರು ಸಾರ್ವಜನಿಕರು ಸಹಕರಿಸಬೇಕು" ಎಂದು ಮನವಿ ಮಾಡಿದರು.

ಮಾತಿನ ಚಕಮಕಿ: ಫುಟ್​ಪಾತ್​ ಮೇಲೆ ಅನಧಿಕೃತವಾಗಿ ಶೆಡ್​ ನಿರ್ಮಿಸಿ ವ್ಯಾಪಾರ ನಡೆಸುತ್ತಿರುವ ಬೀದಿ ಬದಿ ವ್ಯಾಪಾರಿಗಳಿಗೆ ಶೆಡ್ ತೆರವುಗೊಳಿಸುವಂತೆ ನಗರಸಭೆ ವತಿಯಿಂದ ಹಲವು ಬಾರಿ ಸೂಚಿಸಲಾಗಿತ್ತು‌. ಆದರೆ ವ್ಯಾಪಾರಿಗಳು ಮಾತ್ರ ಕ್ಯಾರೆನ್ನದೆ ವ್ಯಾಪಾರ ಮುಂದುವರೆಸಿದ್ದರು. ಗುರುವಾರ ಬೆಳಗ್ಗೆ ನಗರಸಭಾ ಅಧಿಕಾರಿಗಳು ತೆರವು ಕಾರ್ಯಾಚರಣೆಗೆ ಮುಂದಾಗುತ್ತಿದ್ದಂತೆ ಆತಂಕಗೊಂಡ ವ್ಯಾಪಾರಿಗಳು ನಗರಸಭಾ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದರು. ಬಳಿಕ ನಾವೇ ಅಂಗಡಿ ತೆರವು ಮಾಡುತ್ತೇವೆ. ಸಮಯಾವಕಾಶ ನೀಡುವಂತೆ ಮನವಿ ಮಾಡಿದರು.

ಆದರೆ, ಯಾವುದೇ ಮನವಿಗೂ ಮನ್ನಣೆ ನೀಡದ ಅಧಿಕಾರಿಗಳು ಅಂಗಡಿಗಳಲ್ಲಿದ್ದ ವಸ್ತುಗಳನ್ನು ತೆರವುಗೊಳಿಸಿ ಜೆಸಿಬಿ ಮೂಲಕ ಶೆಡ್, ತಗಡಿನ ಶೀಟ್ ಹಾಗೂ ಬೋರ್ಡ್​ಗಳನ್ನು ತೆರವುಗೊಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಹೊರಮಾವು ಅಗರದಲ್ಲಿ ಅನಧಿಕೃತ ಕಟ್ಟಡಗಳ ತೆರವಿಗೆ ಆದೇಶ

ಬೆಂಗಳೂರಿನ ಕೆ.ಆರ್.​ಪುರಂ ಕ್ಷೇತ್ರದ ಹೊರಮಾವು ಅಗರದಲ್ಲಿಯೂ ಇಂದು ಅನಧಿಕೃತ ಕಟ್ಟಡಗಳ ತೆರವಿಗೆ ಜಂಟಿ ಆಯುಕ್ತೆ ಆದೇಶ ನೀಡಿದ್ದಾರೆ. ಕೆ.ಆರ್.​ಪುರಂ ಕ್ಷೇತ್ರದ ಹೊರಮಾವು ಅಗರ ವಸತಿ ಪ್ರದೇಶದ ಒಟ್ಟು 2 ಎಕರೆ 5 ಗುಂಟೆ ಜಾಗದಲ್ಲಿ ನಿರ್ಮಾಣಗೊಂಡ ಮನೆಗಳಿಗೆ ನೋಟಿಸ್​ ನೀಡಲಾಗಿದೆ. ಕಳೆದ ನವೆಂಬರ್ ತಿಂಗಳಲ್ಲೇ ಕೆಲಸ ನಿಲ್ಲಿಸಲು ಆದೇಶ ನೀಡಲಾಗಿತ್ತು. ಇವತ್ತು ನೋಟಿಸ್ ನೀಡಲಾಗಿದೆ. ಅದನ್ನು ಅಲ್ಲಿನ ನಿವಾಸಿಗಳು ನಿರಾಕರಿಸಿದ್ದಾರೆ. ಆದ್ದರಿಂದ ವಿದ್ಯುತ್ ಹಾಗೂ ಮೂಲಭೂತ ಸೌಕರ್ಯಗಳನ್ನು ಕಡಿತಗೊಳಿಸಲಾಗುತ್ತಿದೆ ಎಂದು ಆಯುಕ್ತೆ ಸುಧಾ ತಿಳಿಸಿದರು.