ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನ: ಹೂವುಗಳಲ್ಲಿ ಅರಳಿದ ವಿಧಾನ ಸೌಧ, ಕೈ ಬೀಸಿ ಕರೆಯುತ್ತಿದೆ ಹಂಪಿಯ ಕಲ್ಲಿನ ರಥ
ದಾವಣಗೆರೆ ಜಿಲ್ಲೆಯ ಗಾಜಿನ ಮನೆಯಲ್ಲಿ ವಿಧಾನ ಸೌಧ, ಹಂಪಿಯ ಕಲ್ಲಿನ ರಥ ಅರಳಿವೆ.

Published : February 28, 2026 at 1:38 PM IST
|Updated : February 28, 2026 at 2:40 PM IST
ದಾವಣಗೆರೆ: ಜಿಲ್ಲೆಯ ಗಾಜಿನ ಮನೆಯಲ್ಲಿ ತೋಟಗಾರಿಕೆ ಇಲಾಖೆಯಿಂದ ಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಹೂವಿನಲ್ಲಿ ವಿಧಾನ ಸೌಧ, ಹಂಪಿಯ ಕಲ್ಲಿನ ರಥ ಅರಳಿದೆ. ಇದನ್ನು ಸಂಸದೆ ಪ್ರಭಾ ಮಲ್ಲಿಕಾರ್ಜುನ್, ಡಿಸಿ ಗಂಗಾಧರಸ್ವಾಮಿ ಉದ್ಘಾಟನೆ ಮಾಡಿದ್ದಾರೆ.
ಅದರಲ್ಲಿ ವಿವಿಧ ಬಗೆಯ ಹೂವಿನ ಗಿಡಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದು, ಹೂವುಗಳಿಂದ ಕಲಾಕೃತಿಗಳನ್ನು ನಿರ್ಮಾಣ ಮಾಡಿ ಪ್ರದರ್ಶನಕ್ಕೆ ಇಡಲಾಗಿತ್ತು. ಈ ಸಂದರ್ಭದಲ್ಲಿ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಹಾಗೂ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕನಿಗೆ ಗೌರವವನ್ನು ಸೂಚಿಸಲಾಗಿತ್ತು. ಜನರು ಇಲ್ಲಿ ಗ್ಲಾಸ್ ಹೌಸ್ ನೋಡುವುದರ ಜೊತೆಗೆ ಸುಂದರವಾದ ಪ್ಲವರ್ ಶೋ ನೋಡಿಕೊಂಡು ಹೋಗುವುದಕ್ಕೆ ಅನುಕೂಲವಾಗಿದೆ. ಮಾರ್ಚ್ 1ರವರೆಗೆ ನಿತ್ಯ ಬೆಳಗ್ಗೆ 10 ರಿಂದ ರಾತ್ರಿ 9 ರವರೆಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಪುಷ್ಪ ಪ್ರದರ್ಶನದಲ್ಲಿ ಮುಖ್ಯ ಆಕರ್ಷಣೆ ಎಂದರೆ ವಿಧಾನಸೌಧ ಹಾಗೂ ಹಂಪಿಯ ಕಲ್ಲಿನ ರಥ. ಗಾಜಿನ ಮನೆಯ ಮಧ್ಯ ಭಾಗದಲ್ಲಿ 4 ಲಕ್ಷಕ್ಕೂ ಅಧಿಕ ಪುಷ್ಪಗಳಿಂದ ವಿಧಾನಸೌಧದ ಮಾದರಿ ಸಿದ್ಧಪಡಿಸಲಾಗಿದೆ. 42 ಅಡಿ ಉದ್ದ, 14 ಅಡಿ ಅಗಲ ಹಾಗೂ 18 ಅಡಿ ಎತ್ತರದ ಈ ಕಲಾಕೃತಿ ನಿರ್ಮಾಣ ಆಗಿದೆ. ಇದಕ್ಕೆ ಹಳದಿ, ಬಿಳಿ ಹಾಗೂ ನೇರಳೆ ಬಣ್ಣದ ಸೇವಂತಿ ಹೂಗಳನ್ನು ಮಾತ್ರ ಬಳಸಲಾಗಿದೆ.

ಪುಷ್ಪಗಳು ಬಾಡದಿರುವಂತೆ ನೀರು ಚುಮುಕಿಸುವ ವಿಶೇಷ ವ್ಯವಸ್ಥೆ ಮಾಡಲಾಗಿದೆ. ವಿಧಾನಸೌಧದ ಹಿಂದೆ ಹಂಪಿ ಕಲ್ಲಿನ ರಥವನ್ನು ನಿರ್ಮಾಣ ಮಾಡಿದ್ದು, 10 ಅಡಿ ಉದ್ದ, 10 ಅಡಿ ಅಗಲ ಮತ್ತು 12 ಅಡಿ ಎತ್ತರದ ಕಲಾಕೃತಿ ರಚಿಸಿ ಕಾಮಿನಿ ಎಲೆಗಳಿಂದ ಅಲಂಕರಿಸಲಾಗಿದೆ.
50,000 ಸೇವಂತಿ, 10,000 ಇತರ ಹೂವುಗಳಲ್ಲಿ ಹಂಪಿ ಕಲ್ಲಿನ ರಥ ಅರಳಿದೆ. ಅಲ್ಲದೇ, ಫಲಪುಷ್ಪ ಪ್ರದರ್ಶನದಲ್ಲಿ ಸಿರಿಧಾನ್ಯಗಳನ್ನು ಬಳಸಿ ನಗರ ದೇವತೆ ದುಗ್ಗಮ್ಮನ ಚಿತ್ರವನ್ನು ರಚಿಸಿರುವುದು ಆಕರ್ಷಕವಾಗಿದೆ. ಜೋಳ, ಹಾರಕ, ಸಾಮೆ, ರಾಗಿ, ನವಣೆ, ಕೊರಲು, ಸಜ್ಜೆ, ಬರಗು, ಊದಲು ನವ ಸಿರಿಧಾನ್ಯಗಳನ್ನು ಬಳಸಿ ದೇವಿ ಚಿತ್ರ ನಿರ್ಮಿಸಲಾಗಿದೆ. ಅಲ್ಲದೇ ಐ ಲವ್ ದಾವಣಗೆರೆ ಕಲಾಕೃತಿ ಸಾರ್ವಜನಿಕರನ್ನು ಆಕರ್ಷಿಸುತ್ತಿತ್ತು. ಇದನ್ನು ಬೆಂಗಳೂರು ಮೂಲದ ವಿ. ದಿನೇಶ್ ಅವರ ‘ದಿನಿ–ಸಿನಿ ಕ್ರಿಯೇಷನ್ಸ್’ ಸಂಸ್ಥೆ ನಿರ್ಮಿಸಿರುವುದು ವಿಶೇಷ.
ಇದಲ್ಲದೇ, ಸುತ್ತ ಈರುಳ್ಳಿ, ಕ್ಯಾರೆಟ್, ಮೆಣಸು, ಟೊಮೆಟೊ, ಬೀನ್ಸ್, ಆಲೂಗಡ್ಡೆ, ಸಾಂಬರ ಸೌತೆ ಸೇರಿ ಹಲವು ಬಗೆಯ ತರಕಾರಿಗಳ ಚಿತ್ತಾರ ವಿಧಾನಸೌಧದ ಬಳಿ ಕಣ್ಮನ ಸೆಳೆಯುತ್ತಿದೆ. ಇದನ್ನು ವೀಕ್ಷಿಸಲು ಮಕ್ಕಳಿಗೆ, ದೊಡ್ಡವರಿಗೆ ಟಿಕೆಟ್ ವ್ಯವಸ್ಥೆ ಮಾಡಲಾಗಿದ್ದು, ಪ್ರವಾಸಿಗರು ತಂಡೋಪತಂಡವಾಗಿ ಗ್ಲಾಸ್ ಹೌಸ್ಗೆ ಧಾವಿಸಿ ಫಲಪುಷ್ಪ ಪ್ರದರ್ಶನ ಕಣ್ತುಂಬಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ : ಹಾವೇರಿ: ಅದ್ಧೂರಿಯಾಗಿ ನಡೆದ ಶಿಶುನಾಳ ಶರೀಫರ ರಥೋತ್ಸವ

