Bihar Election Results 2025

ETV Bharat / state

ಅಡಿಕೆ ತೋಟಗಳಿಗೆ ನುಗ್ಗಿದ ಜೀವಜಲ; ನೀರಿನಲ್ಲೇ ಅಡಿಕೆ ಕೊಯ್ಲು ಮಾಡಿದ ರೈತ

ಚನ್ನಗಿರಿ ತಾಲೂಕಿನ ಕೊಂಡದಹಳ್ಳಿಯ ಹೊರವಲಯದಲ್ಲಿ ಹರಿಯುವ ಹಳ್ಳಗಳ ನೀರು ಜಮೀನಿಗೆ ನುಗ್ಗಿದ್ದರಿಂದಾಗಿ ರೈತರು ಪರದಾಡುವಂತಾಗಿದೆ.

floodwaters-enter-areca-nut-plantation-in-davanagere
ಅಡಿಕೆ ತೋಟಗಳಿಗೆ ಹಳ್ಳದ ನೀರು ನುಗ್ಗಿರುವಾಗಲೂ ಕೊಯ್ಲು ಮಾಡುತ್ತಿರುವುದು (ETV Bharat)
author img

By ETV Bharat Karnataka Team

Published : October 18, 2025 at 3:41 PM IST

|

Updated : October 18, 2025 at 5:22 PM IST

3 Min Read
Choose ETV Bharat

ದಾವಣಗೆರೆ: ಚನ್ನಗಿರಿ ಹೇಳಿ ಕೇಳಿ ಅಡಿಕೆ ನಾಡು, ಇಲ್ಲಿ ರೈತರು ಹೆಚ್ಚಾಗಿ ಅಡಿಕೆ ಬೆಳೆಯನ್ನೇ ಅವಲಂಬಿಸಿದ್ದಾರೆ. ಚಿನ್ನದ ಬೆಲೆ ಇರುವ ಅಡಿಕೆಗೆ ಮಾರುಕಟ್ಟೆಯಲ್ಲಿ ಡಿಮ್ಯಾಂಡ್ ಇದೆ. ಆದರೆ, ಇದೀಗ ಅಡಿಕೆ ತೋಟಗಳಿಗೆ ಕಂಟಕ ಎದುರಾಗಿದೆ. ಕಷ್ಟ ಪಟ್ಟು ಸಾಲ ಸೋಲ‌ ಮಾಡಿ ಮಗನಂತೆ ಸಾಕಿ ಸಲಹಿದ್ದ ಅಡಿಕೆ ತೋಟಕ್ಕೆ ಹಳ್ಳದ ನೀರು ನುಗ್ಗಿದೆ.

ಜಿಲ್ಲೆಯ ಚನ್ನಗಿರಿ ತಾಲೂಕಿನ ಕೊಂಡದಹಳ್ಳಿಯ ಹೊರವಲಯದಲ್ಲಿ ಹರಿಯುವ ತುಮರಿ ಹಳ್ಳ ಹಾಗೂ ಹಿರೇಹಳ್ಳ ರೈತರ ಬದುಕನ್ನು ಅತಂತ್ರವಾಗಿಸಿದೆ. ನಮ್ಮ ತೋಟಕ್ಕೆ ನೀರು ನುಗ್ಗುತ್ತದೆ ಎಂದು ಇಬ್ಬರು ರೈತರು ಹಳ್ಳ ಹರಿಯುವ ಸ್ಥಳಕ್ಕೆ ಮಣ್ಣಿನಿಂದ ಒಡ್ಡು (ಏರಿ) ನಿರ್ಮಿಸಿಕೊಂಡಿದ್ದಾರೆ. ದುರಂತ ಎಂದರೆ ಸೂಳೆಕೆರೆಯ ನೀರು ಹೆಚ್ಚಾಗಿ ಹಳ್ಳದ ಮೂಲಕ ಹರಿಯಲು ಜಾಗ ಇಲ್ಲದೇ ಸುಮಾರು 125ಕ್ಕೂ ಹೆಚ್ಚು ಎಕರೆ ಅಡಿಕೆ ತೋಟಗಳಿಗೆ ನುಗ್ಗಿರುವುದರಿಂದಾಗಿ ಅವಾಂತರ ಸೃಷ್ಟಿ ಆಗಿದೆ. ಹೀಗಾಗಿ, ಕೊಂಡದಹಳ್ಳಿಯ ರೈತ ಮಹಿಳೆ ಚನ್ನಮ್ಮ ಎಂಬುವರಿಗೆ ಸೇರಿದ ಎರಡು ಎಕರೆ ತೋಟದಲ್ಲಿ ನೀರು ತುಂಬಿಕೊಂಡಿದ್ದು, ಅವರ ಮಗನ ಸಹಕಾರದಿಂದ ನೀರಿನಲ್ಲೇ ಅಡಿಕೆ ಕೊಯ್ಲು‌ ಮಾಡಿದ್ದಾರೆ.

ಕೊಂಡದಹಳ್ಳಿ ರೈತ ಮಹಿಳೆ ಚನ್ನಮ್ಮ ಹಾಗೂ ರೈತ ಆದರ್ಶ ಅವರು ಮಾತನಾಡಿದ್ದಾರೆ (ETV Bharat)

125 - 150 ಎಕರೆ ಅಡಿಕೆ ತೋಟಗಳಿಗೆ ನುಗ್ಗಿದ ನೀರು, ರೈತ ಹೈರಾಣು : ಜಿಲ್ಲೆಯ ಚನ್ನಗಿರಿ ತಾಲೂಕಿನ ಕಾಕನೂರು ಬಳಿಯ ಕೊಂಡದಹಳ್ಳಿಯ ಬಳಿ ಹರಿಯುತ್ತ ಅದೆಷ್ಟೋ ರೈತರಿಗೆ ಆಸರೆಯಾಗಿದ್ದ ತುಮರಿ ಹಳ್ಳ, ಹಿರೇಹಳ್ಳಗಳು ರೈತನ ವಿರುದ್ಧ ಮುನಿಸಿಕೊಂಡಿವೆ.

floodwaters-enter-areca-nut-plantation-in-davanagere
ಅಡಿಕೆ ತೋಟಕ್ಕೆ ನೀರು ನುಗ್ಗಿರುವುದು (ETV Bharat)

ಸೂಳೆಕೆರೆ ಹಿನ್ನೀರಿನ ತಟದಲ್ಲಿ ಹರಿಯುವ ಹಳ್ಳಗಳಿಗೆ ಕೆಲ ರೈತರು ತೋಟಗಳಲ್ಲಿ ಅವೈಜ್ಞಾನಿಕವಾಗಿ ಒಡ್ಡು ಅಥವಾ ಬದುಗಳನ್ನು ನಿರ್ಮಿಸಿಕೊಂಡ ಪರಿಣಾಮ ಕೊಂಡದಹಳ್ಳಿಯ ಅಂದಾಜು 125-150 ಎಕರೆಯಲ್ಲಿ ಬೆಳೆಯಲಾಗಿರುವ ಅಡಿಕೆ ತೋಟ, ತೆಂಗಿನ ತೋಟ, ಮೆಕ್ಕೆಜೋಳದ ಬೆಳೆ ಜಲಾವೃತಗೊಂಡು ರೈತರನ್ನು ಕಂಗಲಾಗಿಸಿದೆ.

ಮಳೆಗಾಲದಲ್ಲಿ ಈ ಹಿರೇಹಳ್ಳ ಹಾಗೂ ತುಮರಿ ಹಳ್ಳಗಳು ಉಕ್ಕಿ ಹರಿಯುತ್ತವೆ. ಈ ಎರಡು ಹಳ್ಳಗಳು ಶಾಂತಿ ಸಾಗರ (ಸೂಳೆಕೆರೆ)ಕ್ಕೆ ಸೇರುವ ಮುನ್ನ ಸಾವಿರಾರು ಎಕರೆ ತೋಟ, ಜಮೀನುಗಳನ್ನು ಹಾದು ಹೋಗುತ್ತವೆ. ಏರಿ ಕಟ್ಟಿಕೊಂಡ ರೈತರ ಒಂದು ಚಿಕ್ಕ ತಪ್ಪಿಗೆ ಅದೆಷ್ಟೋ ರೈತರ ಜಮೀನುಗಳಿಗೆ ನೀರು ನುಗ್ಗಿದೆ. ಕೆಲ ಅಡಿಕೆ, ತೆಂಗಿನ ತೋಟಗಳಲ್ಲಿ 5- 6 ಅಡಿ ನೀರು ನಿಂತಿರುವುದರಿಂದಾಗಿ ಅಡಿಕೆ ಉದುರುವ ಭಯ ರೈತರಲ್ಲಿ ಮನೆ ಮಾಡಿದೆ. ಅಡಿಕೆ ತೋಟಗಳ ಪರಿಸ್ಥಿತಿ ಹೀಗಾದರೆ ಮೆಕ್ಕೆಜೋಳದ ಬೆಳೆಗಳಂತೂ ಮುಳುಗಿ ಹೋಗಿದ್ದು, ರೈತರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

floodwaters-enter-areca-nut-plantation-in-davanagere
ಕೊಯ್ಲು ಮಾಡಿದ ಅಡಿಕೆಯನ್ನು ತೆಪ್ಪದ ಮೂಲಕ ಸಾಗಿಸುತ್ತಿರುವುದು (ETV Bharat)

ನೀರಿನಲ್ಲೇ ಅಡಿಕೆ ಕೊಯ್ಲು, ರೈತ ಮಹಿಳೆ ಕಣ್ಣೀರು : ಈ ಬಗ್ಗೆ ಕೊಂಡದಹಳ್ಳಿ ರೈತ ಮಹಿಳೆ ಚನ್ನಮ್ಮ ಅವರು ಈಟಿವಿ ಭಾರತ್​​ಗೆ ಪ್ರತಿಕ್ರಿಯಿಸಿದ್ದು, 'ಈ ನೀರಿನಿಂದಾಗಿ ಬಹಳ ಕಷ್ಟ ಆಗುತ್ತಿದೆ. ಹಳ್ಳಗಳಿಂದ ನಮ್ಮ ತೋಟ ಮುಳುಗಿ ಹೋಗುತ್ತಿದೆ. ನೀರಿನಲ್ಲಿ ಅಡಿಕೆ ಕಾಯಿಗಳು ಉದುರುತ್ತಿದೆ. ಸಾಲ ಸೋಲ ಮಾಡಿ ತೋಟ ಮಾಡಿದ್ದೇವೆ. ಹಳ್ಳದಲ್ಲಿ ನೀರು ಹೋಗ್ತಿಲ್ಲ, ನೀರು ಹರಿಯುವ ಸ್ಥಳದಲ್ಲಿ ಕೆಲ ರೈತರು ಏರಿ (ಬದು) ನಿರ್ಮಿಸಿದ ಪರಿಣಾಮ ಆ ನೀರು ತೋಟಕ್ಕೆ ನುಗ್ಗುತ್ತಿದೆ. ಅಡಿಕೆ ಮರಗಳು ಕೊಳೆತು ಹೋಗುವ ಪರಿಸ್ಥಿತಿ ದಟ್ಟವಾಗಿದೆ. ನೀರು ತೋಟಕ್ಕೆ ತುಂಬಿಕೊಳ್ಳುತ್ತಿದೆ. ತುಮರಿ ಹಳ್ಳ, ಹಿರೇ ಹಳ್ಳಗಳಿಂದ ಅಡ್ಡ ಕಟ್ಟಿರುವ ಒಡ್ಡುಗಳು ತೆಗೆಸಿದರೆ ಮಾತ್ರ ಸರಿ ಹೋಗಲಿದೆ. ಹಿರೇ ಹಳ್ಳದ ನೀರು ಕಡಿಮೆ ಬರಲಿದೆ. ತುಮರಿ ಹಳ್ಳದ ನೀರು ತೋಟಕ್ಕೆ ನುಗ್ಗುತ್ತಿದೆ. ಇದರಿಂದ ತುಂಬಾ ಕಷ್ಟದಲ್ಲಿದ್ದೇವೆ. ಇಬ್ಬರು ರೈತರು ಸೇರಿ ಒಡ್ಡು (ಏರಿ) ನಿರ್ಮಿಸಿಕೊಂಡಿದ್ದಾರೆ. ಹೀಗಾಗಿ, ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೇ ತೋಟಗಳಿಗೆ ನುಗ್ಗುತ್ತಿದೆ. ನಮ್ಮದು ಎರಡು ಎಕರೆ ತೋಟ, ಮೊಳಕೆ ಹಾಕಿ ತೋಟ ಮಾಡಿಕೊಂಡಿದ್ದೇನೆ, ಯಾವಾಗ ಇಬ್ಬರು ರೈತರು ಒಡ್ಡು (ಏರಿ) ನಿರ್ಮಿಸಿಕೊಂಡರೋ ಅಂದಿನಿಂದ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದೇವೆ. ಪ್ರತಿ ವರ್ಷ ಇದೇ ಕಷ್ಟ, ಏರಿ ತೆಗೆಸಿದರೆ ಸರಿ ಹೋಗಲಿದೆ. ಮೆಕ್ಕೆಜೋಳ, ಅಡಿಕೆ, ತೆಂಗಿನ ತೋಟಗಳಲ್ಲಿ ನೀರು ನಿಂತಿವೆ. ನೀರಿನಲ್ಲಿ ಅಡಿಕೆ ಕೊಯ್ಲು ಮಾಡಿದ್ದೇವೆ. ನೀರು ನಿಂತಿರುವ ಕಾರಣ ಅಡಿಕೆ ನೀರಿನಲ್ಲಿ ಉದುರುತ್ತಿದೆ. ತೋಟದಲ್ಲಿ ನೀರು ನಿಂತಿರುವ ಕಾರಣ ಕೂಲಿಕಾರರು ಬರ್ತಿಲ್ಲ, ಅಡಿಕೆ ಗಿಡಗಳ ಬೇರು ಕೊಳೆತು ಹೋಗುತ್ತಿದೆ. ‌ನಾವು ಎಷ್ಟೆಂದು ನೀರು ಹೊರಹಾಕಬಹುದು' ಎಂದು ಅಳಲು ತೋಡಿಕೊಂಡಿದ್ದಾರೆ.

floodwaters-enter-areca-nut-plantation-in-davanagere
ಅಡಿಕೆ ಕೊಯ್ಲಿನಲ್ಲಿ ರೈತರು ತೊಡಗಿರುವುದು (ETV Bharat)

ತೋಟದಲ್ಲಿ ನೀರು ಕಂಡು ಕೊಯ್ಲಿಗೆ ಬರ್ತಿಲ್ಲ ಕೂಲಿಕಾರರು : ರೈತ ಆದರ್ಶ ಅವರು ಮಾತನಾಡಿ, '3 ವರ್ಷದಿಂದ ಸಮಸ್ಯೆ ಇದ್ದಿಲ್ಲ, ನೀರು ಹೋಗುವ ಜಾಗಕ್ಕೆ ಕೆಲ ರೈತರು ಅಡ್ಡ ಒಡ್ಡು (ಏರಿ) ನಿರ್ಮಿಸಿದ್ದರಿಂದಾಗಿ ಈ ಸಮಸ್ಯೆ ಆಗ್ತಿದೆ. ನೂರಾರು ಎಕರೆಯಲ್ಲಿ ನೀರು ನಿಂತಿದೆ. ಒಡ್ಡು ತೆಗೆಸಿ ಬಿಟ್ಟರೆ ಸಮಸ್ಯೆನೇ ಇರಲ್ಲ. ನಮಗೆ ಅನ್ಯಾಯ ಆಗ್ತಿದೆ. ನಮಗೆ ಜೀವನನೇ ಬೇಡ ಎನ್ನಿಸಿದೆ. ಅವರಿಗೆ ಕೇಳಿದ್ರೆ ನಮ್ಮ ಜಮೀನಿನಲ್ಲಿ ಮಣ್ಣು ಏರಿಸಿಕೊಂಡಿದ್ದೇವೆ ಎನ್ನುತ್ತಿದ್ದಾರೆ. ನೂರಾರು ಎಕರೆ ಈ ರೀತಿ ಆಗಿದೆ. ಹಾವು, ಚೇಳು ಇರುತ್ತವೆ ಎಂದು ಕೂಲಿಕಾರರು ಬರ್ತಿಲ್ಲ. 1000 ರೂಪಾಯಿ ಕೂಲಿ ಕೊಟ್ರು ಕೂಲಿಕಾರರು ಬರ್ತಿಲ್ಲ. ಆ ಒಡ್ಡು ತೆಗೆದು ಹಾಕುವಂತೆ ಮನವಿ ಮಾಡಿದ್ದೇವೆ. ನೀರಿನಲ್ಲೇ ಅಡಿಕೆ ಕೊಯ್ಲು ಮಾಡಿದ್ದೇವೆ. ಮುಂದೆ ನೀರು ಹೋಗುವಂತೆ ಮಾಡಿಕೊಟ್ಟರೆ ಸಾಕು' ಎಂದು ಮನವಿ ಮಾಡಿಕೊಂಡಿದ್ದಾರೆ.

floodwaters-enter-areca-nut-plantation-in-davanagere
ಅಡಿಕೆ ತೋಟಕ್ಕೆ ಹಳ್ಳದ ನೀರು ನುಗ್ಗಿರುವುದು (ETV Bharat)

ಇದನ್ನೂ ಓದಿ : ಅಡಿಕೆಗೆ ಬಂತು ಚಿನ್ನದ ಬೆಲೆ: ಕ್ವಿಂಟಾಲ್​ಗೆ 1 ಲಕ್ಷ ರೂ., 10 ವರ್ಷಗಳಲ್ಲಿಯೇ ಗರಿಷ್ಠ ದರ ದಾಖಲು

Last Updated : October 18, 2025 at 5:22 PM IST