ETV Bharat / state

ಭಾರಿ ಮಳೆಯಿಂದ ಉಕ್ಕಡಗಾತ್ರಿ ತೀರದಲ್ಲಿ ಪ್ರವಾಹ ಪರಿಸ್ಥಿತಿ: ಅಂಗಡಿ, ಜವಳಘಟ್ಟ, ಸ್ನಾನಘಟ್ಟ ಮುಳುಗಡೆ

ಭಾರಿ ಮಳೆಯಿಂದ ತುಂಗಭದ್ರಾ ನೀರಿನ ಮಟ್ಟ ಏರಿಕೆಯಾದ ಹಿನ್ನೆಲೆ ಹರಿಹರ ತಾಲೂಕಿನ ಉಕ್ಕಡಗಾತ್ರಿ ದೇವಸ್ಥಾನದ ಸ್ನಾನಘಟ್ಟ ಸಂಪೂರ್ಣ ಮುಳುಗಡೆಗೊಂಡಿದೆ.

HEAVY RAIN IN UKKADAGATRI
ಮೈದುಂಬಿ ಹರಿಯುತ್ತಿರುವ ತುಂಗಾಭದ್ರ ನದಿ (ETV Bharat)
author img

By ETV Bharat Karnataka Team

Published : July 8, 2026 at 1:31 PM IST

2 Min Read
Choose ETV Bharat

ದಾವಣಗೆರೆ: ಕಳೆದ ಎರಡ್ಮೂರು ದಿನಗಳಿಂದ ಚಿಕ್ಕಮಗಳೂರು, ಶಿವಮೊಗ್ಗ ಸೇರಿ ಮಲೆನಾಡು ಭಾಗದಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ ತುಂಗಾಭದ್ರ ನದಿ ಮೈದುಂಬಿ ಹರಿಯುತ್ತಿದೆ. ತುಂಗಾ ಅಣೆಕಟ್ಟೆಯಿಂದ ಅಪಾರ ಪ್ರಮಾಣದ ನೀರು ನದಿಗೆ ಹರಿಬಿಡಲಾಗಿದೆ.

ಪರಿಣಾಮ ಹರಿಹರ ತಾಲೂಕಿನಲ್ಲಿ ಹರಿಯುವ ತುಂಗಾಭದ್ರೆಯಲ್ಲಿ ನೀರಿನಮಟ್ಟ ದಿಢೀರನೇ ಏರಿಕೆ ಕಂಡಿದೆ. ತಾಲೂಕಿನ ಶ್ರೀಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಕ್ಷೇತ್ರದ ಕೂಗಳತೆಯಲ್ಲೇ ಹರಿಯುವ ನದಿ ಭೋರ್ಗರೆಯುತ್ತಿರುವುದರಿಂದ ಇಲ್ಲಿನ ಕೆಲವು ಪ್ರದೇಶ ಮುಳುಗಡೆಯಾಗಿದೆ. ಹಾಗಾಗಿ ನದಿ ಪಾತ್ರದ ಕೆಲ ಭಾಗದಲ್ಲಿ ಯಾರು ಭಕ್ತರು ತೆರಳದಂತೆ ದೇವಸ್ಥಾನದ ಆಡಳಿತ ಮಂಡಳಿ ಸೂಚಿಸಿದೆ. ಇದಲ್ಲದೆ ಉಕ್ಕಡಗಾತ್ರಿಯ ಕರಿಬಸವೇಶ್ವರ ದೇವಸ್ಥಾನದ ಸ್ನಾನಘಟ್ಟ, ಜವಳಘಟ್ಟ ಸೇರಿದಂತೆ ಹೂವು, ಹಣ್ಣು ಕಾಯಿ, ವ್ಯಾಪಾರದ ಅಂಗಡಿಗಳು ಜಲಾವೃತವಾಗಿವೆ. ಶ್ರೀಕ್ಷೇತ್ರಕ್ಕೆ ಬರುವ ಭಕ್ತರನ್ನು ನೀರಿಗೆ ಇಳಿಯದಂತೆ ದೇವಾಲಯದ ಆಡಳಿತ ಮಂಡಳಿ ಕೂಡ ಸೂಚನೆ ‌ನೀಡಿದೆ.

ಭದ್ರಾ ಜಲಾಶಯದ ನೀರನ್ನು ಹೊರ ಬಿಟ್ಟರೆ, ನದಿ ದಂಡೆಯಲ್ಲಿದ್ದ ಗಣೇಶನ ದೇವಾಲಯ ಕೂಡ ಮುಳುಗಡೆಯಾಗಲಿದೆ. ಜೊತೆಗೆ ನದಿಯಲ್ಲಿ ನೀರಿನ ಸೆಳೆತ ಕೂಡ ಹೆಚ್ಚಾಗಲಿದೆ. ಪರಿಣಾಮ ಭಕ್ತರು ಅಲ್ಲಿಗೆ ತೆರಳದಂತೆ ದೇವಾಲಯದ ಕಮಿಟಿಯಿಂದ ಸೂಚನಾ ಫಲಕ ಅಳವಡಿಸಲಿದೆ.

ಸದ್ಯಕ್ಕೆ ನದಿಯ ನೀರಿನ ಹರಿವು ತಕ್ಕಮಟ್ಟಿಗೆ ಇದೆ. ಒಂದು ವೇಳೆ ನದಿ ಉಕ್ಕಿ ಹರಿದರೆ ಹರಿಹರ ತಾಲೂಕಿನ ನಂದಿಗುಡಿ ಕಡೆಯಿಂದ ಉಕ್ಕಡಗಾತ್ರಿಗೆ ಸಂಪರ್ಕಿಸುವ ರಸ್ತೆ ಹಾಗೂ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಬಹುದು. ಜೊತೆಗೆ ಭದ್ರಾ ಅಣೆಕಟ್ಟೆಯ ನೀರು ಹರಿಸಿದರೂ ಕೂಡ ಫತ್ತೇಪುರ್ ಮತ್ತು ಉಕ್ಕಡಗಾತ್ರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಸೇತುವೆ ಕೂಡ ನೀರಿನಿಂದ ಜಲಾವೃತವಾಗಬಹುದು ಎನ್ನಲಾಗುತ್ತಿದೆ. ಒಂದು ವೇಳೆ ಹೀಗೆ ಆದಲ್ಲಿ ಉಕ್ಕಡಗಾತ್ರಿ ಶ್ರೀಕ್ಷೇತ್ರಕ್ಕೆ ಬರುವ ಭಕ್ತರು ಸುತ್ತುಹಾಕಿಕೊಂಡು ಬರುವ ಪರಿಸ್ಥಿತಿ ನಿರ್ಮಾಣ ಆಗಬಹುದು.

ತುಂಗಾಭದ್ರ ನದಿ ಮೈದುಂಬಿ ಹರಿಯುತ್ತಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಹರಿಹರ ತಾಲೂಕಿನ ಫತೇಪುರ್, ಉಕ್ಕಡಗಾತ್ರಿ, ತಿಮ್ಮನಹಳ್ಳಿ, ಮಲ್ಲಪುರ, ವಿವಿಧ ಗ್ರಾಮದ ರೈತರು ವಿವಿಧ ಬೆಳೆ ಹಾಕಿದ್ದು, ನದಿಗೆ ನೀರು ಬಂದಿರುವುದರಿಂದ ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಮಳೆ ಅಬ್ಬರಕ್ಕೆ ಧರೆಗುರುಳುತ್ತಿವೆ ಮರಗಳು: ವಿವಿಧೆಡೆ ಅಂಗನವಾಡಿ, ಶಾಲೆಗೆ ಇಂದು ರಜೆ ಘೋಷಣೆ

ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ನದಿಗಳು ಹಾಗೂ ಜಲಪಾತಗಳು ಕೂಡ ಮೈದುಂಬಿ ಹರಿಯುತ್ತಿವೆ. ಮೂಡಿಗೆರೆ ಮತ್ತು ಶೃಂಗೇರಿ ತಾಲೂಕಿನ ಹಲವೆಡೆ ಮಳೆಯ ತೀವ್ರತೆ ಹೆಚ್ಚಾಗಿದ್ದು, ನದಿ ತೀರದ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ, ಶೃಂಗೇರಿ ಹಾಗೂ ಚಿಕ್ಕಮಗಳೂರು ತಾಲೂಕಿನ ಆರು ಹೋಬಳಿಗಳ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಬುಧವಾರ ರಜೆ ಘೋಷಿಸಿ ಆದೇಶ ಹೊರಡಿಸಿದೆ. ಮೂಡಿಗೆರೆ ತಾಲೂಕಿನ ಕೂಡಿಗೆ ಗ್ರಾಮದಲ್ಲಿರುವ ಪ್ರಸಿದ್ಧ ತ್ರಿವೇಣಿ ಸಂಗಮದಲ್ಲಿ ನೀರಿನ ಹರಿವು ಗಣನೀಯವಾಗಿ ಹೆಚ್ಚಿದೆ. ಹೇಮಾವತಿ, ಜಪಾವತಿ ಹಾಗೂ ಗುಪ್ತಗಾಮಿನಿ ನದಿಗಳ ಸಂಗಮ ಸ್ಥಳವಾದ ಕೂಡಿಗೆಯಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿದ್ದು, ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳಲು ಜನರು ಆಗಮಿಸುತ್ತಿದ್ದಾರೆ.

ಇದನ್ನೂ ಓದಿ: ಭಾರಿ ಮಳೆ: ಇಂದು ದಕ್ಷಿಣ ಕನ್ನಡ ಜಿಲ್ಲಾದ್ಯಂತ, ಶಿವಮೊಗ್ಗದ 3 ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಭಾರತೀಯ ಹವಾಮಾನ ಇಲಾಖೆ ಮತ್ತು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ತುರ್ತು ಕ್ರಮಗಳನ್ನು ಕೈಗೊಂಡಿದ್ದು, ಜುಲೈ 8 (ಬುಧವಾರ) ರಂದು ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದೆ.

ಅಲ್ಲದೆ, ಶಿವಮೊಗ್ಗ ಜಿಲ್ಲೆಯಲ್ಲಿಯೂ ಬುಧವಾರ ಸಾಗರ, ಹೊಸನಗರ ಹಾಗೂ ತೀರ್ಥಹಳ್ಳಿ‌ ಶಾಲಾ‌-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಸಾಗರ ತಹಶೀಲ್ದಾರ್ ಪ್ರತಿಭಾ ಅವರು ತಾಲೂಕಿನಲ್ಲಿ‌ ಮಳೆ ಮುಂದುವರೆಯುವುದರಿಂದ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.