ಬಿರುಗಾಳಿಗೆ ಐದು ವಿದ್ಯುತ್ ಕಂಬಗಳು ನೆಲಸಮ; ದ್ವಿಚಕ್ರ ವಾಹನ ಸುಟ್ಟು ಭಸ್ಮ
ಬಿರುಗಾಳಿಗೆ ಐದು ವಿದ್ಯುತ್ ಕಂಬಗಳು ನೆಲಸಮಗೊಂಡಿದ್ದು, ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಟಿವಿಎಸ್ ಜುಪಿಟರ್ ದ್ವಿಚಕ್ರ ವಾಹನಕ್ಕೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಭಸ್ಮವಾಗಿದೆ.

Published : July 3, 2026 at 7:40 PM IST
ಬಳ್ಳಾರಿ: ನಗರದ ಕೆಎಂಎಫ್ ಸಮೀಪದ ಬುಡಾ (BUDA - ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ) ಪಾರ್ಕ್ ಬಳಿ ಶುಕ್ರವಾರ ಬೀಸಿದ ಬಿರುಗಾಳಿಗೆ ನಾಲ್ಕರಿಂದ ಐದು ವಿದ್ಯುತ್ ಕಂಬಗಳು ನೆಲಕ್ಕುರುಳಿದ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಭಾರಿ ಗಾಳಿಯ ರಭಸಕ್ಕೆ ಮರಗಳ ಕೊಂಬೆಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದರಿಂದ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಘಟನೆಯಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟಿವಿಎಸ್ ಜುಪಿಟರ್ ದ್ವಿಚಕ್ರ ವಾಹನಕ್ಕೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟುಹೋಗಿದೆ. ಯಾವುದೇ ಪ್ರಾಣಹಾನಿ ಸಂಭವಿಸದಿರುವುದು ಸಮಾಧಾನಕರ ಸಂಗತಿಯಾಗಿದೆ ಎಂದು ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ 35ನೇ ವಾರ್ಡ್ ಸದಸ್ಯ ಮಿಂಚು ಸೀನಾ ಎಂಬುವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿದ್ಯುತ್ ಇಲಾಖೆ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಉರುಳಿದ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವುದು, ವಿದ್ಯುತ್ ಸಂಪರ್ಕವನ್ನು ಸುರಕ್ಷಿತವಾಗಿ ಮರುಸ್ಥಾಪಿಸುವುದು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಮರಗಳ ಕೊಂಬೆಗಳನ್ನು ಮುಂಚಿತವಾಗಿ ಕತ್ತರಿಸುವ ಕಾರ್ಯ ವಿಳಂಬವಾದ ಕಾರಣ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬಳ್ಳಾರಿಯಲ್ಲಿ ವರುಣನ ಅಬ್ಬರ: ಧರೆಗುರುಳಿದ ಬೃಹತ್ ಮರ, ವಾಹನಗಳು ಜಖಂ!
ನಗರದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಹೊಸ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿದ್ದ ಬೃಹತ್ ಮರವೊಂದು ಬೇರು ಸಮೇತ ಧರೆಗುರುಳಿತ್ತು. ಈ ವೇಳೆ, ಮರದ ಕೆಳಗೆ ನಿಲ್ಲಿಸಲಾಗಿದ್ದ ಆಟೋ ಹಾಗೂ ಹಲವು ಬೈಕ್‌ಗಳು ಜಖಂಗೊಂಡಿದ್ದವು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ. ಘಟನೆಯಿಂದಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಹದ್ದಿನಗುಂಡು ರಸ್ತೆ, ವೆಂಕಟೇಶ್ವರ ನಗರ, ಸತ್ಯನಾರಾಯಣಪೇಟೆ, ಗೊಲ್ಲನರಸಪ್ಪ ಕಾಲೋನಿ, ಗಾಂಧಿನಗರ, ಕೌಲ್ ಬಜಾರ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಹಾಗೂ ರಸ್ತೆಗಳಲ್ಲಿಯೂ ಗಿಡಮರಗಳು ಉರುಳಿ ಬಿದ್ದಿದ್ದವು. ಹೊಸ ಡಿಸಿ ಕಚೇರಿ ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮರದ ಕೊಂಬೆಗಳು ಹಾಗೂ ದಿಮ್ಮಿಗಳನ್ನು ತೆರವುಗೊಳಿಸಿದ್ದರು. ಸಂಗಮ್ ಸರ್ಕಲ್ ಬಳಿ ಇರುವ ಗ್ರೀನ್ ಮ್ಯಾಟ್ ಕೂಡ ಭಾರಿ ಮಳೆ ಗಾಳಿಗೆ ಧರೆಗುರುಳಿತ್ತು. ಅಲ್ಲಿ ಕೂಡ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ.

