ಬೆಂಗಳೂರು: ಕಾಲೇಜು ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಪ್ರಕರಣ, ಐವರು ಸೆರೆ
ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.

Published : March 1, 2026 at 2:01 PM IST
ಬೆಂಗಳೂರು: ಮಾದಕ ಮಾತ್ರೆ ನೀಡಿ ಕಾಲೇಜು ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಐವರು ಆರೋಪಿಗಳನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
19 ವರ್ಷದ ಯುವತಿ ನೀಡಿದ್ದ ದೂರಿನನ್ವಯ ತನಿಖೆ ಕೈಗೊಂಡಿದ್ದ ಪೊಲೀಸರು ಡಿಕ್ಸನ್ ಸ್ಯಾಂಟ್ರಾ (21), ನಿಖಿಲ್ (34) ಹಾಗೂ ಕೃತ್ಯಕ್ಕೆ ಸಹಕರಿಸಿದ ಆರೋಪದಡಿ ಶ್ರವಣ್ (21), ಅನಿರುದ್ಧ್ (33) ಹಾಗೂ ಮೋಹಿತ್ ಜೈನ್ (23) ಎಂಬಾತನನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ತಮಿಳುನಾಡಿನ ಯುವತಿ ಬೆಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಇವರಿಗೆ ಇನ್‌ಸ್ಟಾಗ್ರಾಂ ಮೂಲಕ ಪಶ್ಚಿಮ ಬಂಗಾಳದ ಡಿಕ್ಸನ್ ಎಂಬವನ ಪರಿಚಯವಾಗಿತ್ತು. ಸಂತ್ರಸ್ತೆ ದೂರಿನಲ್ಲಿ, ಪ್ರೀತಿಸುತ್ತಿರುವುದಾಗಿ ಹೇಳಿದ್ದ ಡಿಕ್ಸನ್, ಫೆಬ್ರವರಿ 14ರಂದು ಆಕೆಯನ್ನು ಜಕ್ಕೂರಿನಲ್ಲಿರುವ ವಿಲ್ಲಾವೊಂದಕ್ಕೆ ಆಹ್ವಾನಿಸಿದ್ದ. ಅದರಂತೆ ಸಂತ್ರಸ್ತೆ ಹಾಗೂ ಆಕೆಯ ಸ್ನೇಹಿತೆ ವಿಲ್ಲಾಗೆ ಹೋಗಿದ್ದರು. ಈ ವೇಳೆ ಡಿಕ್ಸನ್ ಹಾಗೂ ನಿಖಿಲ್ ಬಲವಂತವಾಗಿ ಮಾತ್ರೆಯೊಂದನ್ನು ತಿನ್ನಿಸಿದ್ದರು. ಕೆಲ ಸಮಯದ ಬಳಿಕ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ತನ್ನ ಮೇಲೆ ಡಿಕ್ಸನ್ ಹಾಗೂ ನಿಖಿಲ್ ಅತ್ಯಾಚಾರವೆಸಗಿದ್ದಾರೆ. ಬಳಿಕ ನಡೆದ ಘಟನೆಯ ಕುರಿತು ಯಾರಿಗೂ ಹೇಳದಂತೆ ಜೀವ ಬೆದರಿಕೆ ಹಾಕಿದರು. ನಾನು ನಡೆದಿರುವ ಘಟನೆಯಿಂದ ಆಘಾತಕ್ಕೊಳಗಾಗಿ, ನಂತರ ಸಹೋದರನ ಸೂಚನೆಯಂತೆ ದೂರು ನೀಡಿರುವುದಾಗಿ ತಿಳಿಸಿದ್ದರು.
ಹಣಕ್ಕೆ ಬೇಡಿಕೆ ಆರೋಪ, ಯುವತಿಯ ವಿರುದ್ಧವೂ ಪ್ರಕರಣ: ಯುವತಿಯೇ ಸುಳ್ಳು ಆರೋಪ ಮಾಡುತ್ತಿದ್ದು, ಖಾಸಗಿ ವಾಹಿನಿಯ ಸಿಬ್ಬಂದಿಯ ಹೆಸರಿನಲ್ಲಿ ಕರೆ ಮಾಡಿಸಿ ಬೆದರಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದಾಳೆ ಎಂದು ನಿಖಿಲ್ ಆರೋಪಿಸಿದ್ದ.
ಯುವತಿಯ ದೂರಿಗೂ ಮೊದಲೇ ಮಲ್ಲೇಶ್ವರಂ ಠಾಣೆಗೆ ದೂರು ನೀಡಿದ್ದ ನಿಖಿಲ್, ಫೆ.14ರಂದು ಪಾರ್ಟಿಗೆ ಬಂದಿದ್ದ ಯುವತಿ ತಾನೇ ತೀರಾ ಸಲುಗೆಯಿಂದ ವರ್ತಿಸುತ್ತಿದ್ದಳು. ಅದೇ ದಿನ ಆಕೆಯನ್ನು ಸುರಕ್ಷಿತವಾಗಿ ರಾಜಾಜಿನಗರದ ವಾರಿಯರ್ ಬೇಕರಿ ಬಳಿ ಡ್ರಾಪ್ ಮಾಡಿದ್ದೆ. ಆ ನಂತರ ಆಕೆ ಇನ್‌ಸ್ಟಾಗ್ರಾಂ ವಿಡಿಯೋ ಮೂಲಕ ಸುಳ್ಳು ಆರೋಪ ಮಾಡಿದ್ದಾಳೆ. ನಂತರ ಖಾಸಗಿ ವಾಹಿನಿಯ ಪ್ರತಿನಿಧಿಯ ಹೆಸರಿನಲ್ಲಿ ಇಮ್ರಾನ್ ಎಂಬಾತ ಕರೆ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಎಂದು ದೂರು ನೀಡಿದ್ದನು.
ಶಿಕ್ಷಕನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಗಂಗಾವತಿ ಕೋರ್ಟ್ ತೀರ್ಪು: ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ ಮತ್ತು 6 ಲಕ್ಷ ರೂ ದಂಡ ವಿಧಿಸಿ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ.
ಸಿಂಧನೂರು ತಾಲೂಕಿನ ಸಿಂಗಾಪುರದ ಸರ್ಕಾರಿ ಶಾಲೆಯ ಶಿಕ್ಷಕನಾಗಿದ್ದ ಮೂಲತಃ ಧಾರವಾಡ ಜಿಲ್ಲೆಯ ಮೊಹಮ್ಮದ್ ಅಜರುದ್ದೀನ್ ಅಬ್ದುಲ್ ಹಮ್ಮಿದ್ ಶಿಕ್ಷೆಗೊಳಗಾದವ. ಕಾರಟಗಿ ಪಟ್ಟಣದಲ್ಲಿನ ತನ್ನ ಬಾಡಿಗೆ ಮನೆಯಲ್ಲಿ 2022ರ ಜೂನ್ 30ರಂದು ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ ಅಪರಾಧಿಯಾಗಿದ್ದನು.
ಇದನ್ನೂ ಓದಿ: ಮಹಿಳೆ ಮೇಲೆ ಅತ್ಯಾಚಾರ: ಶಿಕ್ಷಕನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಗಂಗಾವತಿ ಕೋರ್ಟ್ ತೀರ್ಪು

