ಅಂಜದೀವ್ ದ್ವೀಪದ ಬಳಿ ಮೀನುಗಾರಿಕಾ ಬೋಟ್ ಮುಳುಗಡೆ: 25 ಮೀನುಗಾರರ ರಕ್ಷಣೆ
ಬೋಟ್ ಹಾಗೂ ಮೀನುಗಾರಿಕಾ ಪರಿಕರಗಳು ಹಾನಿಗೊಳಗಾಗಿದ್ದು, ಸುಮಾರು 70 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

Published : August 30, 2026 at 9:41 PM IST
ಕಾರವಾರ: ಅರಬ್ಬೀ ಸಮುದ್ರದ ಅಂಜದೀವ್ ದ್ವೀಪದ ಸಮೀಪ ಭಾನುವಾರ ಮೀನುಗಾರಿಕಾ ಬೋಟ್‌ವೊಂದು ಅವಘಡಕ್ಕೀಡಾಗಿದ್ದು, ಅದೃಷ್ಟವಶಾತ್ ಬೋಟ್‌ನಲ್ಲಿದ್ದ 25 ಮಂದಿ ಮೀನುಗಾರರು ಅಪಾಯದಿಂದ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.
ಬೆಳಾಂಬರ ಮೂಲದ ನೀಲಕಂಠ ಖಾರ್ವಿ ಅವರಿಗೆ ಸೇರಿದ ಶ್ರೀ ಮಾತಾ ಹೆಸರಿನ ಮೀನುಗಾರಿಕಾ ಬೋಟ್ ಸಮುದ್ರದಲ್ಲಿ ಇದ್ದಕ್ಕಿದ್ದಂತೆ ಮುಳುಗಲಾರಂಭಿಸಿತು. ಈ ವೇಳೆ ಬೋಟ್‌ನಲ್ಲಿದ್ದ 25 ಮೀನುಗಾರರು ಅಪಾಯಕ್ಕೆ ಸಿಲುಕಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಸಮೀಪದಲ್ಲಿದ್ದ ಐದು ಮೀನುಗಾರಿಕಾ ಬೋಟ್‌ಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಎಲ್ಲ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಇನ್ನೊಂದೆಡೆ, ಮುಳುಗಡೆಯಾಗುತ್ತಿದ್ದ ಶ್ರೀ ಮಾತಾ ಬೋಟ್ ಉಳಿಸಿಕೊಳ್ಳಲು ಇತರೆ ಬೋಟ್‌ಗಳ ಸಹಾಯದಿಂದ ಹಗ್ಗ ಕಟ್ಟಿ ರಕ್ಷಿಸುವ ಪ್ರಯತ್ನವೂ ಸಾಗಿದೆ. ಈ ಘಟನೆಯಿಂದಾಗಿ ಬೋಟ್ ಹಾಗೂ ಮೀನುಗಾರಿಕಾ ಪರಿಕರಗಳು ಹಾನಿಗೊಳಗಾಗಿದ್ದು, ಸುಮಾರು 70 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಬೋಟ್ ಮುಳುಗಡೆಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.
ಸ್ಥಳೀಯರ ಮಾಹಿತಿ ಪ್ರಕಾರ, ಬೋಟ್ ಮಾಲೀಕ ನೀಲಕಂಠ ಖಾರ್ವಿ ಅವರಿಗೆ ಇದು ಮೂರನೇ ಆಘಾತವಾಗಿದೆ. ಈ ಹಿಂದೆ ಅವರ ಮೊದಲ ಬೋಟ್ ಅವಘಡಕ್ಕೀಡಾಗಿ ಹಾನಿಗೊಳಗಾಗಿತ್ತು. ಆ ಬಳಿಕ ಖರೀದಿಸಿದ್ದ ಎರಡನೇ ಬೋಟ್ ಕೂಡ ದುರಂತಕ್ಕೀಡಾಗಿತ್ತು. ಇದೀಗ ಅವರ ಮೂರನೇ ಬೋಟ್ ಕೂಡ ಸಮುದ್ರಪಾಲಾಗಿರುವುದು ಈ ಕುಟುಂಬವನ್ನು ತೀವ್ರ ಆರ್ಥಿಕ ಸಂಕಷ್ಟಕ್ಕೆ ತಳ್ಳಿದೆ.
ಒಂದೇ ಕುಟುಂಬದ ಬೋಟ್‌ಗಳು ಪದೇಪದೇ ಅವಘಡಕ್ಕೆ ಸಿಲುಕಿ ಭಾರಿ ನಷ್ಟ ಅನುಭವಿಸುತ್ತಿರುವುದು ಸ್ಥಳೀಯ ಮೀನುಗಾರ ಸಮುದಾಯದಲ್ಲಿ ಆತಂಕ ಮೂಡಿಸಿದೆ. ರಾಜ್ಯ ಸರ್ಕಾರ ತಕ್ಷಣವೇ ಈ ಘಟನೆಯತ್ತ ಗಮನಹರಿಸಿ, ಸಂಕಷ್ಟದಲ್ಲಿರುವ ಮೀನುಗಾರ ಕುಟುಂಬಕ್ಕೆ ಸೂಕ್ತ ಪರಿಹಾರ ಧನ ನೀಡಬೇಕು ಎಂದು ಸ್ಥಳೀಯ ಮೀನುಗಾರರು ಆಗ್ರಹಿಸಿದ್ದಾರೆ.
ಮೀನುಗಾರಿಕೆಗೆ ತೆರಳಿದ ಯುವಕ ಸಾವು: ಇನ್ನು ಕಾರವಾರ ತೀರದ ಸಮುದ್ರದಲ್ಲಿರುವ ಲೈಟ್‌ಹೌಸ್ ಬಳಿ ಮೀನುಗಾರಿಕೆಗೆ ತೆರಳಿದ ಯುವ ಮೀನುಗಾರನೊಬ್ಬ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದು ಪ್ರಾಣ ಕಳೆದುಕೊಂಡ ಘಟನೆ ಶನಿವಾರ ನಡೆದಿದೆ.
ಕುಮಟಾ ತಾಲೂಕಿನ ಸಸಿಹಿತ್ಲು ಗ್ರಾಮದ ವೆಂಕಟೇಶ ವೆಂಕಪ್ಪ ಹರಿಕಂತ್ರ (32) ಮೃತಪಟ್ಟವರು. ಬೋಟ್‌ನಲ್ಲಿ ಮೀನುಗಾರಿಕೆಯಲ್ಲಿ ತೊಡಗಿಕೊಂಡಿದ್ದರು. ಈ ವೇಳೆ ಮೀನು ಬಲೆ ಎಳೆಯುವಾಗ ಆಕಸ್ಮಿಕವಾಗಿ ವೆಂಕಟೇಶ ಸಮುದ್ರಕ್ಕೆ ಬಿದ್ದಿದ್ದಾರೆ. ಸಮುದ್ರಕ್ಕೆ ಬಿದ್ದ ವೆಂಕಟೇಶ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಬೋಟ್‌ನಲ್ಲಿದ್ದ ಇತರ ಮೀನುಗಾರರು ಬಳಿಕ ಅವರ ಮೃತದೇಹವನ್ನು ಕಾರವಾರದ ಬೈತಖೋಲ್ ಧಕ್ಕೆಗೆ ತಂದಿದ್ದು, ಘಟನೆ ಕುರಿತು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.
ಮೃತದೇಹವನ್ನು ಕಾರವಾರ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ತಮ್ಮ ಸಹೋದರನ ಸಾವಿನ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ಮೃತರ ಸಹೋದರ ರತ್ನಾಕರ ವೆಂಕಪ್ಪ ಹರಿಕಂತ್ರ ಕಾರವಾರ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಉಡುಪಿ: ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ: 27 ಮೀನುಗಾರರ ರಕ್ಷಣೆ - ವಿಡಿಯೋ

