ETV Bharat / state

ಮಹಿಳೆಯರೇ ನಡೆಸುವ 'ಅಕ್ಕ ಕೆಫೆ' ಮೈಸೂರಿನಲ್ಲಿ ಆರಂಭ: ಊಟೋಪಹಾರಕ್ಕೆ ಹೀಗಿದೆ ರೇಟು

ಮೈಸೂರು ನಗರದ ಜಿಲ್ಲಾ ಪಂಚಾಯತ್ ಕಚೇರಿ ಹಿಂಭಾಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ಮಂಗಳವಾರ 'ಅಕ್ಕ ಕೆಫೆ'ಗೆ ಚಾಲನೆ ನೀಡಿದರು.

Akka Cafe In Mysuru
ಅಕ್ಕ ಕೆಫೆಯಲ್ಲಿ ಉಪಹಾರ ಸೇವಿಸುತ್ತಿರುವ ಗ್ರಾಹಕರು (ETV Bharat)
author img

By ETV Bharat Karnataka Team

Published : March 4, 2026 at 11:13 AM IST

|

Updated : March 4, 2026 at 11:32 AM IST

2 Min Read
Choose ETV Bharat

ಮೈಸೂರು: ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಉದ್ದೇಶದಿಂದ ರಾಜ್ಯ ಸರ್ಕಾರ ರೂಪಿಸಿರುವ 'ಅಕ್ಕ ಕೆಫೆ' ಮೈಸೂರು ನಗರದಲ್ಲಿ ಕಾರ್ಯಾರಂಭಿಸಿದ್ದು, ಇದನ್ನು ಗ್ರಾಮೀಣ ಮಹಿಳೆಯರೇ ಮುನ್ನಡೆಸುತ್ತಿರುವುದು ವಿಶೇಷ.

ಕಳೆದ ಬಜೆಟ್​ನಲ್ಲಿ ರಾಜ್ಯ ಸರ್ಕಾರ ಮಹಿಳೆಯರೇ ನಡೆಸುವ 'ಅಕ್ಕ ಕೆಫೆ' ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಘೋಷಿಸಿತ್ತು. ಅದರಂತೆ ರಾಜ್ಯದಲ್ಲಿ 50ಕ್ಕೂ ಹೆಚ್ಚು ಅಕ್ಕ ಕೆಫೆಗಳನ್ನು ಆರಂಭಿಸುವ ಯೋಜನೆ ಇದೆ. ಇದರ ಭಾಗವಾಗಿ ಮೈಸೂರು ನಗರದಲ್ಲಿ ಮೊದಲ ಅಕ್ಕ ಕೆಫೆ ಶುರುವಾಗಿದೆ.

  • ಈ ಕೆಫೆ ನಡೆಸಲು ನಗರದ ಹೊರ ವಲಯದ ನಾಗವಾಳ ಗ್ರಾಮದ ಮಹಿಳಾ ಸಂಘದ ಐವರು ಮಹಿಳೆಯರು ಆಯ್ಕೆಯಾಗಿದ್ದು, ಸ್ವಸಹಾಯ ಸಂಘದಿಂದ 2 ಲಕ್ಷ ರೂ. ಸಾಲ ಪಡೆದು ಕೆಫೆ ನಡೆಸುತ್ತಿದ್ದಾರೆ.
  • ಕೆಫೆ ಕಟ್ಟಡವನ್ನು ರಾಷ್ಟ್ರೀಯ ಗ್ರಾಮೀಣ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆ ಅಡಿ 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.
  • ಬೆಳಗಿನ ಉಪಹಾರಕ್ಕೆ ಉಪ್ಪಿಟ್ಟು, ಕೇಸರಿಬಾತ್, ಮಧ್ಯಾಹ್ನ ರಾಗಿ ಮುದ್ದೆ, ಪಲ್ಯ, ಅನ್ನ-ಸಾಂಬಾರ್ ಸೇರಿದಂತೆ ಇತರ ಊಟ, ಉಪಹಾರ ಸಿಗಲಿದೆ.

"ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿ ಅಕ್ಕ ಕೆಫೆ ಆರಂಭಿಸಲಾಗುತ್ತಿದೆ. ಈ ಕಟ್ಟಡಗಳನ್ನು 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಕೆಫೆಯನ್ನು ನಾಗವಾಳದ ಶ್ರೀ ಗಂಗಾ ಸ್ತ್ರೀ ಶಕ್ತಿ ಸಂಘದ ಐವರು ಮಹಿಳೆಯರು ನಡೆಸುತ್ತಿದ್ದು, ಸದ್ಯದಲ್ಲೇ ತಾಲೂಕು ಕೇಂದ್ರದಲ್ಲೂ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ" ಎಂದು ಎನ್​​​​ಆರ್​ಎಂಎಲ್​ನ ಅಧಿಕಾರಿ ಬಸವರಾಜು ಮಾಹಿತಿ ನೀಡಿದರು.

Akka Cafe In Mysuru
ಅಕ್ಕ ಕೆಫೆ (ETV Bharat)

"ನಾವು ಶ್ರೀ ಶಕ್ತಿ ಸ್ವಸಹಾಯ ಸಂಘಕ್ಕೆ ಸೇರಿದ್ದೆವು. ಅದರಲ್ಲಿ ಸಂಜೀವಿನಿ ಒಕ್ಕೂಟ ಅಂತಿದೆ. ಅದರಿಂದ ಜಿಲ್ಲಾ ಪಂಚಾಯತಿಯಿಂದ ಹೀಗೊಂದು ಮಾಹಿತಿ ಗೊತ್ತಾಯಿತು. ಆರಂಭದಲ್ಲಿ ನಾವು ಒಪ್ಪಿಕೊಂಡಿರಲಿಲ್ಲ. ಆದರೆ, ನಂತರ ಅಧಿಕಾರಿಗಳು ಭರವಸೆ ಕೊಟ್ಟಿದ್ದರಿಂದ ಒಪ್ಪಿಕೊಂಡೆವು. ಮಾಡಿ, ನಿಮ್ಮ ಕೈಯಲ್ಲಿ ಆಗುತ್ತೆ ಎಂದು ಧೈರ್ಯ ತುಂಬಿದರು. ಇಂತಹ ಉದ್ಯಮಗಳಿಂದ ಮಹಿಳೆಯರು ಕೂಡ ಸ್ವಾವಲಂಬಿಗಳಾಗಬಹುದು ಎಂದು ತಿಳಿ ಹೇಳಿದರು. ಆದ್ದರಿಂದ ನಾವು ಈ ಸಾಹಸಕ್ಕೆ ಕೈ ಹಾಕಿದೆವು. ನಾವಿಲ್ಲಿ ಐವರು ಮಹಿಳೆಯರಿದ್ದು ಚಪಾತಿ, ಮುದ್ದೆ ಉಪ್ಪ್ಸಾರು, ಅನ್ನ ಸೇರಿದಂತೆ ಇತ್ಯಾದಿ ನಮಗೆ ಏನು ಸಾಧ್ಯವಾಗುತ್ತದೆಯೋ ಅವುಗಳನ್ನು ಮಾಡುತ್ತೇವೆ" ಎಂದು ಕೆಫೆ ಮುನ್ನಡೆಸುವ ಪುಷ್ಪಲತಾ ಮಾಹಿತಿ ನೀಡಿದರು.

Akka Cafe In Mysuru
ಅಕ್ಕ ಕೆಫೆ (ETV Bharat)

"ಬಂಡವಾಳವನ್ನು ಸಂಜೀವಿನಿ ಒಕ್ಕೂಟದಿಂದ 2 ಲಕ್ಷ ರೂ ಕೊಟ್ಟರೆ, ಪಂಚಾಯಿತಿಯಿಂದ ಮನೆ ಕಟ್ಟಿಕೊಟ್ಟಿದ್ದಾರೆ. 2 ಲಕ್ಷ ರೂ.ಯನ್ನು 10 ತಿಂಗಳು ಕಟ್ಟಬೇಕಾಗಿತ್ತು. ಆದರೆ, ಸಂಜೀವಿನಿ ಒಕ್ಕೂಟದಿಂದ ಮಾತನಾಡಿ 15 ತಿಂಗಳು ಕಟ್ಟುವ ತರ ಮಾಡಿಕೊಟ್ಟಿದ್ದಾರೆ. ಈ ಹಿಂದೆ ನಾವು ಸಂಜೀವಿನಿ ಒಕ್ಕೂಟದಲ್ಲಿಯೇ ಬೇರೆ ಬೇರೆ ಕೆಲಸ ಮಾಡುತ್ತಿದ್ದೆವು. ಈಗ ಎಲ್ಲರನ್ನೂ ಒಟ್ಟುಗೂಡಿಸಿ ಈ ಕೆಲಸವನ್ನು ಮಾಡುತ್ತಿದ್ದೇವೆ. ಇದೊಂದು ರೀತಿ ಅನುಕೂಲ. ನಾವೂ ಕೂಡ ಏನಾದರು ಸಾಧಿಸಬೇಕೆಂಬ ಹಠದಿಂದ ಇದನ್ನು ಮಾಡುತ್ತಿದ್ದೇವೆ" ಎಂದು ಅವರು ಹೇಳಿದರು.

Akka Cafe In Mysuru
ಅಕ್ಕ ಕೆಫೆಗೆ ಚಾಲನೆ (ETV Bharat)

ಅಕ್ಕ ಕೆಫೆ ದರ ಪಟ್ಟಿ:

Akka Cafe In Mysuru
ಅಕ್ಕ ಕೆಫೆಗೆ ಚಾಲನೆ (ETV Bharat)

1. ಉಪ್ಪಿಟ್ಟು 1 ಪ್ಲೇಟ್​ - 30 ರೂ.

2. ಮುದ್ದೆ ಸಾರು - 30 ರೂ.

3. ಕೇಸರಿಬಾತ್ - 30 ರೂ.

4. ಬಾತ್ - 40 ರೂ.

5. ಚಿತ್ರಾನ್ನ - 40 ರೂ.

6. ಉಪ್ಪಿಟ್ಟು + ಕೇಸರಿಬಾತ್ - 40 ರೂ.

7. ಕಾಫಿ + ಟೀ - 10 ರೂ.

8. ಬಜ್ಜಿ 4ಕ್ಕೆ - 20 ರೂ.

ಇದನ್ನೂ ಓದಿ: ಮಾ.6 ರಂದು ರಾಜ್ಯ ಬಜೆಟ್ ಮಂಡನೆ: ಸಿಎಂ ತವರು ಜಿಲ್ಲೆಯ ನಿರೀಕ್ಷೆಗಳು ಹೀಗಿವೆ

Last Updated : March 4, 2026 at 11:32 AM IST