ETV Bharat / state

ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ: 7 ಅಂಗಡಿಗಳು ಸುಟ್ಟು ಭಸ್ಮ

ಅಗ್ನಿ ಅವಘಡದಲ್ಲಿ 3ಕ್ಕೂ ಹೆಚ್ಚು ಸಿಲಿಂಡರ್ ಸ್ಪೋಟಗೊಂಡು ಮತ್ತಷ್ಟು ಬೆಂಕಿ ತೀವ್ರತೆ ಹೆಚ್ಚಾಗಿ ಆತಂಕ ಸೃಷ್ಟಿಸಿತ್ತು.

Fire at Biligirirangana Hill
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ (ETV Bharat)
author img

By ETV Bharat Karnataka Team

Published : January 9, 2026 at 7:27 AM IST

2 Min Read
Choose ETV Bharat

ಚಾಮರಾಜನಗರ: ಪ್ರಸಿದ್ಧ ಯಾತ್ರಾಸ್ಥಳವಾದ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ ಉಂಟಾಗಿ 7 ಅಂಗಡಿಗಳು ಸುಟ್ಟು ಭಸ್ಮ ಆಗಿರುವ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.

ಬಿಳಿಗಿರಿರಂಗನಾಥ ಬೆಟ್ಟದ ಬಸ್ ನಿಲ್ದಾಣದ ಬಳಿಯಿದ್ದ ಹೊಟೇಲ್ ಹಾಗೂ ಅಂಗಡಿಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಥವಾ ಕಿಡಿಗೇಡಿಗಳ ಕೃತ್ಯವೋ ಎಂಬುದು ಇನ್ನೂ ತಿಳಿದುಬಂದಿಲ್ಲ. ಒಂದು ಅಂಗಡಿಯಿಂದ ಮತ್ತೊಂದು ಅಂಗಡಿಗೆ ಬೆಂಕಿ ವ್ಯಾಪಿಸಿ ಧಗಧಗಿಸಿದ್ದು, ಅಗ್ನಿ ಅವಘಡದಲ್ಲಿ 3ಕ್ಕೂ ಹೆಚ್ಚು ಸಿಲಿಂಡರ್ ಸ್ಪೋಟಗೊಂಡು ಮತ್ತಷ್ಟು ಬೆಂಕಿ ತೀವ್ರತೆ ಹೆಚ್ಚಾಗಿ ಆತಂಕ ಸೃಷ್ಟಿಸಿತ್ತು.

ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ (ETV Bharat)

ಪ್ರತಿದಿನ ಸಂಜೆಯ ಬಳಿಕ ಚೆಕ್ ಪೋಸ್ಟ್ ಬಂದಾಗುವ ಹಿನ್ನೆಲೆ ಅಂಗಡಿ, ಹೊಟೇಲ್​ನಲ್ಲಿ ಯಾರೂ ಇರಲಿಲ್ಲ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಆದರೆ, ಲಕ್ಷಾಂತರ ರೂ‌. ಮೌಲ್ಯದ ವಸ್ತುಗಳು ಬೂದಿಯಾಗಿದೆ.

ಸತತ ಒಂದೂವರೆ ತಾಸು ಕಾರ್ಯಾಚರಣೆ ನಡೆಸಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಯಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಗ್ನಿ ಅವಘಡ ನಡೆದಿದೆ‌.

ಸಿಂಧನೂರಲ್ಲಿ ಬೆಂಕಿ ಅವಘಡ: ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲೂ ಗುರುವಾರ ತಡರಾತ್ರಿ ಶಾರ್ಟ್​ ಸರ್ಕ್ಯೂಟ್​ನಿಂದಾಗಿ ಬೆಂಕಿ ಹೊತ್ತಿ 7 ಅಂಗಡಿಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.

ಸಿಂಧನೂರು ಪಟ್ಟಣದ ಕನಕದಾಸ ವೃತ್ತದ ಬಳಿ ಆರನೇ ವಾರ್ಡ್​ನಲ್ಲಿ ಬರುವ ದೆಹಲಿ ಬಜಾರ್, ಮೊಬೈಲ್ ಅಂಗಡಿ, ಬಟ್ಟೆ ಅಂಗಡಿ, ಚಿಕ್ಕನ್ ಶಾಪ್‌, ಜನರಲ್ ಸ್ಟೋರ್, ಹಗ್ಗ ಮಾರಾಟ ಕೇಂದ್ರ ಸೇರಿದಂತೆ ಒಟ್ಟು 7 ಅಂಗಡಿಗಳು ಭಸ್ಮವಾಗಿವೆ. ಪ್ರಾಥಮಿಕವಾಗಿ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಹತ್ತಿಕೊಂಡಿದೆ ಎಂದು ತಿಳಿದು ಬಂದಿದೆ. ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಅಂಗಡಿಗಳಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಭಸ್ಮವಾಗಿವೆ. ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಹಾಸಪಟ್ಟರು.

ಒಂದರ ನಂತರ ಒಂದರಂತೆ ಏಳು ಅಂಗಡಿಗಳಿದ್ದು, ಒಂದು ಅಂಗಡಿಯಿಂದ ಮತ್ತೊಂದಕ್ಕೆ ಬೆಂಕಿ ಹರಡಿದೆ. ಪೊಲೀಸ್ ತನಿಖೆಯಿಂದ ಘಟನೆಗೆ ನಿಖರ‌ ಕಾರಣ ತಿಳಿದು ಬರಲಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ ಲಕ್ಷಾಂತರ ರೂ. ಮೌಲ್ಯದ ವಸ್ತುಗಳಿಗೆ ಹಾನಿ‌ ಸಂಭವಿಸಿದೆ.

ಸಿಂಧನೂರು ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಘಟನೆ ಬಗ್ಗೆ ಅಂಗಡಿ ಮಾಲೀಕರು ದೂರು ನೀಡಿದ ಆಧಾರದಲ್ಲಿ ತನಿಖೆ ನಡೆಸಲಾಗುತ್ತಿದೆ. ಈ ಅಂಗಡಿಗಳು ಎಲ್ಲ ಟಿನ್ ಶೆಡ್‌ನಲ್ಲಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲವೆಂದು ಪೊಲೀ‌ಸರು ತಿಳಿಸಿದ್ದಾರೆ.

ಇದನ್ನೂ ಓದಿ: ONGC ತೈಲ ಬಾವಿಯಲ್ಲಿ ಬೆಂಕಿ: ಎರಡನೇ ದಿನವೂ ಭಾರೀ ಸ್ಫೋಟ, ಬೆಂಕಿ ನಂದಿಸಲು ದೆಹಲಿ - ಮುಂಬೈನಿಂದ ತಂಡಗಳ ರವಾನೆ