ಸಿಂಧನೂರಲ್ಲಿ ಬೆಂಕಿ ಅವಘಡ: ಸುಟ್ಟು ಕರಕಲಾದ 7 ಅಂಗಡಿಗಳು
ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ ಲಕ್ಷಾಂತರ ರೂ. ಮೌಲ್ಯದ ವಸ್ತುಗಳಿಗೆ ಹಾನಿ ಸಂಭವಿಸಿದೆ.

Published : January 9, 2026 at 11:52 AM IST
ರಾಯಚೂರು: ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಹೊತ್ತಿಕೊಂಡು 7 ಅಂಗಡಿಗಳು ಹೊತ್ತಿ ಉರಿದಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಸಿಂಧನೂರು ಪಟ್ಟಣದ ಕನಕದಾಸ ವೃತ್ತದ ಬಳಿ ಬರುವ 7 ಅಂಗಡಿಗಳಿಗೆ ಬೆಂಕಿ ಹತ್ತಿಕೊಂಡು ಅಂಗಡಿಗಳು ಭಸ್ಮವಾಗಿವೆ. ಆರನೇೆ ವಾರ್ಡ್ನಲ್ಲಿ ಬರುವ ದೆಹಲಿ ಬಜಾರ್, ಮೊಬೈಲ್ ಅಂಗಡಿ, ಬಟ್ಟೆ ಅಂಗಡಿ, ಚಿಕ್ಕನ್ ಶಾಪ್, ಜನರಲ್ ಸ್ಟೋರ್, ಹಗ್ಗ ಮಾರಾಟ ಕೇಂದ್ರ ಸೇರಿದಂತೆ ಒಟ್ಟು 7 ಅಂಗಡಿಗಳಿಗೆ ಬೆಂಕಿ ಹತ್ತಿದೆ. ಪ್ರಾಥಮಿಕವಾಗಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹತ್ತಿಕೊಂಡಿದೆ ಎಂದು ತಿಳಿದು ಬಂದಿದೆ.
ವಿಚಾರ ತಿಳಿಸಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಹಾಸಪಟ್ಟು, ನಸುಕಿನ ಜಾವದವರೆಗೆ ಬೆಂಕಿ ನಂದಿಸಲಾಗಿದೆ. ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಅಂಗಡಿಗಳಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಭಸ್ಮವಾಗಿವೆ.
ಒಂದರ ನಂತರ ಒಂದರಂತೆ ಏಳು ಅಂಗಡಿಗಳಿದ್ದು, ಒಂದು ಅಂಗಡಿಯಿಂದ ಮತ್ತೊಂದಕ್ಕೆ ಬೆಂಕಿ ಹರಡಿದೆ. ಬೇರೆ ಯಾವುದೇ ಅನಾಹುತ ಆಗದಂತೆ ಎಚ್ಚರವಹಿಸಿ ಬೆಂಕಿ ನಂದಿಸಲಾಗಿದೆ. ಅಲ್ಲದೆ ಭಾರೀ ದುರಂತ ತಪ್ಪಿದೆ. ಸದ್ಯ ಬೆಂಕಿಯಿಂದ ಆದ ನಷ್ಟದ ಪ್ರಮಾಣ ದೊರೆತಿಲ್ಲ. ಪೊಲೀಸ್ ತನಿಖೆಯಿಂದ ಘಟನೆಗೆ ನಿಖರ ಕಾರಣ ತಿಳಿದು ಬರಲಿದೆ. ಈ ಅಂಗಡಿಗಳು ಟಿನ್‌ಶೆಡ್‌ಗಳಿಂದ ಹಾಕಲಾಗಿತ್ತು. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ ಲಕ್ಷಾಂತರ ರೂ. ಮೌಲ್ಯದ ವಸ್ತುಗಳಿಗೆ ಹಾನಿ ಸಂಭವಿಸಿದೆ. ನಷ್ಟ ಪರಿಹಾರ ನೀಡುವಂತೆ ಅಂಗಡಿ ಮಾಲೀಕರು ಮನವಿ ಮಾಡಿಕೊಂಡಿದ್ದಾರೆ.
ಸಿಂಧನೂರು ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ನಿನ್ನೆ ತಡರಾತ್ರಿ ಘಟನೆ ನಡೆದಿದ್ದು, ಮೊದಲಿಗೆ ಒಂದು ಅಂಗಡಿಗೆ ಬೆಂಕಿ ಹತ್ತಿ ಬಳಿಕ ಒಂದರಿಂದ ಒಂದು ಅಂಗಡಿಗೆ ಬೆಂಕಿ ಹೊತ್ತಿಕೊಂಡಿದೆ. ಘಟನೆ ಬಗ್ಗೆ ಅಂಗಡಿ ಮಾಲೀಕರು ದೂರು ನೀಡಿದ ಆಧಾರದಲ್ಲಿ ತನಿಖೆ ನಡೆಸಲಾಗುತ್ತಿದೆ. ಈ ಅಂಗಡಿಗಳು ಎಲ್ಲ ಟಿನ್ ಶೆಡ್‌ನಲ್ಲಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.
ಬಿಳಿಗಿರಿರಂಗನ ಬೆಡ್ಡದಲ್ಲಿ ಬೆಂಕಿ ಅವಘಡ: ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ ಉಂಟಾಗಿ 7 ಅಂಗಡಿಗಳು ಸುಟ್ಟು ಭಸ್ಮ ಆಗಿರುವ ಘಟನೆ ಶುಕ್ರವಾರ ಬೆಳಗ್ಗಿನ ಜಾವ ನಡೆದಿದೆ.
ಬಿಳಿಗಿರಿರಂಗನಾಥ ಬೆಟ್ಟದ ಬಸ್ ನಿಲ್ದಾಣದ ಬಳಿಯಿದ್ದ ಹೊಟೇಲ್ ಹಾಗೂ ಅಂಗಡಿಗಳು ಸುಟ್ಟು ಕರಕಲಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಥವಾ ಕಿಡಿಗೇಡಿಗಳ ಕೃತ್ಯವೋ ಎಂಬುದು ಇನ್ನೂ ತಿಳಿದುಬಂದಿಲ್ಲ. ಒಂದು ಅಂಗಡಿಯಿಂದ ಮತ್ತೊಂದು ಅಂಗಡಿಗೆ ಬೆಂಕಿ ವ್ಯಾಪಿಸಿತ್ತು.
ಪ್ರತಿದಿನ ಸಂಜೆಯ ಬಳಿಕ ಚೆಕ್ ಪೋಸ್ಟ್ ಬಂದಾಗುವ ಹಿನ್ನೆಲೆ ಅಂಗಡಿ, ಹೊಟೇಲ್ನಲ್ಲಿ ಯಾರೂ ಇರಲಿಲ್ಲ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಆದರೆ, ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೂದಿಯಾಗಿದೆ.
ಇದನ್ನೂ ಓದಿ: ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ: 7 ಅಂಗಡಿಗಳು ಸುಟ್ಟು ಭಸ್ಮ

