ಡಿಸಿಸಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷನಿಗೆ ಹಲ್ಲೆ ಆರೋಪ: ಶಾಸಕ ಲಕ್ಷ್ಮಣ್ ಸವದಿ, ಪುತ್ರನ ವಿರುದ್ಧ FIR
ಡಿಸಿಸಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷನ ಮೇಲೆ ಹಲ್ಲೆ ಮಾಡಿರುವ ಆರೋಪದಡಿ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಮತ್ತು ಅವರ ಪುತ್ರನ ವಿರುದ್ಧ ಎಫ್ಐಆರ್ ದಾಖಲಾಗಿದೆ.

Published : January 5, 2026 at 10:28 AM IST
ಚಿಕ್ಕೋಡಿ: ಬೆಳಗಾವಿ ಕೇಂದ್ರ ಸಹಕಾರಿ ಬ್ಯಾಂಕ್ (ಡಿಸಿಸಿ ಬ್ಯಾಂಕ್) ನೌಕರರ ಸಂಘದ ಅಧ್ಯಕ್ಷ ನಿಂಗರಾಜ ಕರೆಣ್ಣವರ್ ಎಂಬವರ ಮೇಲೆ ಹಲ್ಲೆ ಆರೋಪ ಸಂಬಂಧಿಸಿದಂತೆ ಅಥಣಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಹಲ್ಲೆಗೊಳಗಾದ ನಿಂಗರಾಜ ಕರೆಣ್ಣವರ ಬೆಳಗಾವಿಯ ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆಯಿಂದಲೇ ಅಥಣಿ ಪೊಲೀಸರಿಗೆ ದೂರು ನೀಡಿದ್ದಾರೆ. ಹೀಗಾಗಿ ಶಾಸಕ ಸವದಿ, ಪುತ್ರ ಚಿದಾನಂದ ಸೇರಿದಂತೆ ಒಟ್ಟು 8 ಜನರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
"ನನ್ನನ್ನು ಲಕ್ಷ್ಮಣ್ ಸವದಿ ಅವರು ಮನೆಗೆ ಕರೆಯಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದರು. ಲಕ್ಷ್ಮಣ ಸವದಿ ಅವರೇ ಕಪಾಳಕ್ಕೆ ಹೊಡೆದರು. ಪುತ್ರ ಚಿದಾನಂದ ಸವದಿ ಬಲವಾಗಿ ಸೊಂಟಕ್ಕೆ ಒದ್ದರು. ಬಳಿಕ ಕುಸಿದು ನೆಲಕ್ಕೆ ಬಿದ್ದ ನನ್ನ ಮೇಲೆ 7ರಿಂದ 8 ಜನರು ಹಲ್ಲೆ ನಡೆಸಿದರು" ಎಂದು ನಿಂಗರಾಜ ಕರೆಣ್ಣವರ ಆರೋಪಿಸಿದ್ದಾರೆ.
ಅಕ್ರಮ ತಂಡ ಸೇರಿ ಹಲ್ಲೆ, ಮಾರಣಾಂತಿಕ ಹಲ್ಲೆ, ಜೀವ ಬೆದರಿಕೆ, ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಕುರಿತಂತೆ ಬಿಎನ್ಎಸ್ ಕಾಯ್ದೆಯ 189(2), 191(2), 115(2), 351(2), 352 (2), 190 ಕಲಂ ಅಡಿ ಪ್ರಕರಣ ದಾಖಲಿಸಲಾಗಿದೆ.
ಮತ್ತೊಂಡೆಡೆ ಲಕ್ಷಣ ಸವದಿ ಬೆಂಬಲಿಗ ಶ್ರೀಕಾಂತ್ ಆಲಗೂರ ಅವರು, ನಿಂಗರಾಜ ಕರೆಣ್ಣವರ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಶಾಸಕ ಸವದಿ ಅವರ ಮನೆ ಮುಂದೆ ನಿಂತಿದ್ದಾಗ ನನ್ನ ಮೇಲೆ ಹಲ್ಲೆ ಮಾಡಿದರು. ಸವದಿ ಅವರಿಗೆ ಯಾಕೆ ಬೈಯುತ್ತೀರಿ ಎಂದು ಪ್ರಶ್ನಿಸಿದ್ದಕ್ಕೆ, ಏಕಾಏಕಿ ಹಲ್ಲೆ ಮಾಡಿದರು. ಜತೆಗೆ, ಅವಾಚ್ಯ ಪದ ಬಳಸಿ ಜೀವ ಬೆದರಿಕೆ ಹಾಕಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಶಾಸಕ ಲಕ್ಷ್ಮಣ್ ಸವದಿ ಹೇಳಿದ್ದೇನು?: "ಜಿಲ್ಲಾ ಮಧ್ಯವರ್ತಿಗಳ ನೌಕರರು ಸಂಘದಲ್ಲಿ ಸಮಸ್ಯೆ ಇದೆ ಎಂದು ನನ್ನೊಂದಿಗೆ ಚರ್ಚಿಸಲು ನಮ್ಮ ಮನೆಗೆ ನಿಂಗರಾಜ ಕರೆಣ್ಣವರ್ ಕಳೆದ ಶನಿವಾರ ಮುಂಜಾನೆ ಬಂದಿದ್ದರು. ನಮ್ಮ ಸಂಘದಲ್ಲಿ ಕೆಲವು ಸಮಸ್ಯೆಗಳಿವೆ, ಅಧ್ಯಕ್ಷರು ನಮಗೆ ಹಣ ಕೊಡಬೇಕೆಂದು ಕೇಳುತ್ತಿದ್ದಾರೆ ಎಂದು ಹೇಳಿದ್ದರು. ಇದಕ್ಕೆ ನಾನು, "ನಮ್ಮ ಬಳಿ ಇದನ್ನು ಚರ್ಚೆ ಮಾಡಬೇಡಿ" ಎಂದೆ. ನೀವು ಹೊರಗಡೆ ಹೋಗಿ ಚರ್ಚೆ ಮಾಡಿ, ಇದು ನಿಮ್ಮ ಸಮಸ್ಯೆ ನೀವೇ ಬಗೆಹರಿಸಿಕೊಳ್ಳುವಂತೆ ತಿಳಿಸಿದ್ದೆ.
"ಹೊರ ಹೋಗುತ್ತಿದ್ದಂತೆ ನಮ್ಮ ಕಾರ್ಯಕರ್ತ ಶ್ರೀಕಾಂತ್ ಆಲಗೂರ ನೀವು ಈ ವಿಚಾರವನ್ನು ನಮ್ಮ ಶಾಸಕರ ಬಳಿಗೆ ಯಾಕೆ ತಂದಿದ್ದೀರಿ ಪ್ರಶ್ನೆ ಮಾಡಿದ್ದ. ಅದಕ್ಕೆ ಅವರು ಅವಾಚ್ಯ ಪದಗಳಿಂದ ನಿಂದಿಸಿದ್ದರು. ಜಾತಿ ನಿಂದನೆ ಕೂಡ ಮಾಡಿದ್ದರು. ಆಗ ನೂಕಾಟ ನಡೆಯಿತು. ನೀವು ಜಗಳ ಮಾಡೋದಾದರೆ ನಮ್ಮ ಮನೆಯಿಂದ ನಡೆಯಿರಿ ಎಂದು ಹೇಳಿದ್ದೆ".
"ಯಾರೋ ರಾಜಕೀಯ ಮುಖಂಡರು ಇವರಿಗೆ ಏನೋ ಹೇಳಿ ಕಳುಹಿಸಿದ್ದಾರೆ. ಅದಕ್ಕೆ ನಮ್ಮ ಮನೆಯ ಬಳಿ ಬಂದು ದಾಂದಲೆ ನಡೆಸಿದ್ದಾರೆ. ರಾಜಕಾರಣದಲ್ಲಿ ಇದೆಲ್ಲ ಸ್ವಾಭಾವಿಕ ಅಲ್ಲವೇ?. ಎರಡೂವರೆ ವರ್ಷ ಕಳೆದಿದೆ, ಇನ್ನೂ ಅರ್ಧ ಅವಧಿಯ ಹಂತದಲ್ಲಿ ಈ ರೀತಿ ನಡೆಯುವುದೆಲ್ಲ ಸ್ವಾಭಾವಿಕ. ಇಂಥ ಆರೋಪಗಳನ್ನು ನಾನು ಎದುರಿಸುತ್ತೇನೆ. ಇದರ ಹಿಂದೆ ಸಂಚು ರೂಪಿಸಲಾಗಿದೆ. ತನಿಖೆಯ ನಂತರ ಎಲ್ಲವೂ ಹೊರಬರುತ್ತದೆ" ಇತ್ತೀಚಿಗೆ ಶಾಸಕ ಲಕ್ಷ್ಮಣ್ ಸವದಿ ಹೇಳಿದ್ದರು.
ಸವದಿ ಅಭಿಮಾನಿಗಳಿಂದ ಇಂದು ಅಥಣಿ ಬಂದ್ಗೆ ಕರೆ: ಲಕ್ಷ್ಮಣ್ ಸವದಿ ಅವರ ವಿರುದ್ಧದ ದೊಡ್ಡ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಸವದಿ ಅಭಿಮಾನಿಗಳು ಇಂದು ಅಥಣಿ ಪಟ್ಟಣ ಬಂದ್ ಕರೆ ನೀಡಿದ್ದಾರೆ.
ಇದನ್ನೂ ಓದಿ: ಇದನ್ನೂ ಓದಿ: ಓಂ ಶಕ್ತಿ ಮಾಲಾಧಾರಿಗಳ ಮೇಲೆ ಯುವಕರ ಗುಂಪಿನಿಂದ ಕಲ್ಲು ತೂರಾಟ ಆರೋಪ

