ಗ್ರಾಹಕರ ಹೆಸರಲ್ಲಿ ಸಾಲ ಪಡೆದು ₹3.11 ಕೋಟಿ ವಂಚನೆ ಆರೋಪ: ಬ್ಯಾಂಕ್ ಮ್ಯಾನೇಜರ್ ವಿರುದ್ಧ ಎಫ್ಐಆರ್
ಬ್ಯಾಂಕ್ ಮ್ಯಾನೇಜರ್‌ವೊಬ್ಬರು ಗ್ರಾಹಕರನ್ನು ನಂಬಿಸಿ ಅವರಿಂದ ಖಾಲಿ ಚೆಕ್ ಮತ್ತು ಒಟಿಪಿಗಳನ್ನು ಪಡೆದು ಚಿನ್ನದ ಮೇಲೆ ಸಾಲ ತೆಗೆದುಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

Published : December 30, 2025 at 11:59 AM IST
ಬೆಂಗಳೂರು: ಗ್ರಾಹಕರ ಹೆಸರಿನಲ್ಲಿ ಸಾಲ ಪಡೆದು 3.11 ಕೋಟಿ ರೂ. ವಂಚಿಸಿದ ಆರೋಪದಡಿ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲ್ಲೇಶ್ವರ 15ನೇ ಕ್ರಾಸ್‌ನಲ್ಲಿರುವ ಕೆನರಾ ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ಎನ್.ರಘು ಎಂಬವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬ್ಯಾಂಕಿನ ಎಜಿಎಂ ಕಭೀಂದರ್ ಕುಮಾರ್ ಎಂಬವರು ಡಿ.12 ರಂದು ದೂರು ನೀಡಿದ್ದರು. ಈ ದೂರು ಆಧರಿಸಿ ಅಕ್ರಮ ನಡೆಸಿದ್ದ ಹಿರಿಯ ವ್ಯವಸ್ಥಾಪಕನ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಹಕರ 41 ಖಾತೆಗಳಿಂದ ಚಿನ್ನವನ್ನು ಇಡದೇ 3,11,54,000 ರೂ. ಸಾಲ ಪಡೆದು ವಂಚಿಸಿರುವುದು ಬೆಳಕಿಗೆ ಬಂದಿದೆ. ಗ್ರಾಹಕರನ್ನು ನಂಬಿಸಿ ಅವರಿಂದ ಖಾಲಿ ಚೆಕ್ಗಳು ಮತ್ತು ಒಟಿಪಿಗಳನ್ನು ಪಡೆದು ಚಿನ್ನದ ಸಾಲ ಪಡೆದಿದ್ದಾರೆ. ವಂಚನೆಗೊಳಗಾದ ವ್ಯಕ್ತಿಯೊಬ್ಬರು ಬ್ಯಾಂಕಿನ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಾಗ ವಿಷಯ ತಿಳಿಯಿತು ಎಂದು ದೂರುದಾರರು ಹೇಳಿದ್ದಾರೆ.
ಬ್ಯಾಂಕಿನ ಗ್ರಾಹಕರೊಬ್ಬರಿಗೆ ಕೆಲ ದಿನಗಳ ಹಿಂದೆ ಗೃಹ ಸಾಲ ಮಂಜೂರಾಗಿತ್ತು. ಅದೇ ವಿಶ್ವಾಸದ ಮೇಲೆ ಬ್ಯಾಂಕ್ ಮ್ಯಾನೇಜರ್ ರಘು ತಮ್ಮ ತಂದೆಗೆ ಹುಷಾರಿಲ್ಲ ಎಂದು ಹೇಳಿ 3 ಲಕ್ಷ ರೂಪಾಯಿ ಖಾಸಗಿ ಸಾಲ ಪಡೆದುಕೊಂಡಿದ್ದರು. ಅದರಲ್ಲಿ 1.30 ಲಕ್ಷ ರೂಪಾಯಿ ವಾಪಸ್ ನೀಡಿದ್ದರು. ಬಾಕಿ ಹಣ ಕೊಡುವುದಾಗಿ ಹೇಳಿ ಕಾಲಹರಣ ಮಾಡುತ್ತಿದ್ದರು. ಕೆಲವು ದಿನಗಳ ನಂತರ ಆರೋಪಿ ಎನ್.ರಘು ನನಗೆ ಹಣದ ಅವಶ್ಯಕತೆ ಇದೆ. ನನ್ನ ತಾಯಿಯ ಚಿನ್ನವನ್ನು ನಿಮ್ಮ ಖಾತೆಯಲ್ಲಿ ಇಟ್ಟು ಚಿನ್ನದ ಸಾಲ ಪಡೆದುಕೊಳ್ಳುತ್ತೇನೆ. ಆ ಸಾಲವನ್ನು ನಾನೇ ತೀರಿಸಿಕೊಳ್ಳುತ್ತೇನೆ. ಸಾಲ ಪಡೆಯಲು ಬ್ಯಾಂಕ್ ನಿಯಮಗಳ ಪ್ರಕಾರ ಖಾಲಿ ಚೆಕ್, ಮೊಬೈಲ್ ನಂಬರ್‌ಗೆ ಬರುವ ಒಟಿಪಿ ನೀಡುವಂತೆ ಮನವೊಲಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗೃಹ ಸಾಲ ಪಡೆಯಲು ಸಹಾಯ ಮಾಡಿದ್ದಕ್ಕೆ ಪ್ರತಿಯಾಗಿ ಚಿನ್ನದ ಸಾಲಕ್ಕೆ ಗ್ರಾಹಕರೊಬ್ಬರು ಸಹಾಯ ಮಾಡಿದ್ದರು. ತನ್ನ ತಾಯಿ ಹೆಸರಿನಲ್ಲಿದ್ದ ಖಾಲಿ ಚೆಕ್ ಮತ್ತು ಮತ್ತು ತಾಯಿಯ ಮೊಬೈಲ್‌ಗೆ ಬಂದ ಒಟಿಪಿಯನ್ನು ವ್ಯವಸ್ಥಾಪಕರಿಗೆ ನೀಡಿದ್ದಾರೆ. ಅದನ್ನು ಬಳಸಿಕೊಂಡು ರಘು ಅವರೊಬ್ಬರ ಖಾತೆಯಿಂದಲೇ 32 ಲಕ್ಷ ರೂಪಾಯಿಗಳ ಚಿನ್ನದ ಸಾಲ ಪಡೆದುಕೊಂಡಿದ್ದಾರೆ. ಆದರೆ, ಚಿನ್ನವನ್ನು ಬ್ಯಾಂಕ್‌ನಲ್ಲಿ ಇಟ್ಟಿಲ್ಲ. ಬ್ಯಾಂಕ್ಗಳಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಚಿನ್ನದ ಸಾಲಗಳ ಮರು ಮೌಲ್ಯಮಾಪನ ನಡೆಯುವ ಸಂದರ್ಭದಲ್ಲಿ ಆಡಿಟ್ ಅಧಿಕಾರಿಗಳು ಚಿನ್ನದ ಮೇಲೆ ಸಾಲ ಪಡೆದ ರೀತಿಯಲ್ಲಿ ಬ್ಯಾಂಕ್ ಲಾಕರ್‌ನಲ್ಲಿ ಚಿನ್ನ ಇಲ್ಲದಿರುವುದು ಪತ್ತೆಯಾಗಿದೆ. ಲೆಕ್ಕ ಪರಿಶೋಧಕರು ಗ್ರಾಹಕರುಗಳಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಬಹಳಷ್ಟು ಮಂದಿ ಗ್ರಾಹಕರಿಗೆ ತಾವು ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ನೇಮಗೌಡ ಮಾತನಾಡಿ, "41 ಮಂದಿ ಗ್ರಾಹಕರ ಹೆಸರಿನಲ್ಲಿ ಗೋಲ್ಡ್ ಲೋನ್ ಪಡೆದು 3.11 ಕೋಟಿ ರೂ. ವಂಚಿಸಿದ ಆರೋಪದಡಿ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆರೋಪಿ ನಾಪತ್ತೆಯಾಗಿದ್ದು, ಆತನನ್ನು ಬಂಧಿಸಿದ ಬಳಿಕ ಹೆಚ್ಚಿನ ಮಾಹಿತಿ ಸಿಗಲಿದೆ" ಎಂದರು.
ಇದನ್ನೂ ಓದಿ: ಕ್ರಿಪ್ಟೋ ಕರೆನ್ಸಿ ಹೂಡಿಕೆ ಹೆಸರಲ್ಲಿ ವಂಚನೆ: ಕರ್ನಾಟಕ, ದೆಹಲಿ, ಮಹಾರಾಷ್ಟ್ರದ ವಿವಿಧೆಡೆ ED ಶೋಧ

