ETV Bharat / state

ನಿರ್ದೇಶಕನ ಅಪಹರಿಸಿ ಸುಲಿಗೆ ಆರೋಪ: ನಟಿ ಸೇರಿದಂತೆ 11 ಜನರ ಬಂಧನ

ಹಣಕಾಸು ವಿಚಾರಕ್ಕೆ ನಿರ್ದೇಶಕನನ್ನು ಅಪಹರಿಸಿ ಸುಲಿಗೆ ಮಾಡಿದ ಪ್ರಕರಣ ಸಂಬಂಧ ನಟಿ ಸೇರಿ 11 ಜನರನ್ನು ಪೊಲೀಸರು ಬಂಧಿಸಿದ್ದಾರೆ.

BENGALURU  ACTRESS ARREST  ನಿರ್ದೇಶಕನ ಅಪಹರಿಸಿ ಸುಲಿಗೆ  ನಟಿ ಬಂಧನ FILM DIRECTOR KIDNAP CASE
ನಿರ್ದೇಶಕ ಅನೀಶ್ (ETV Bharat)
author img

By ETV Bharat Karnataka Team

Published : February 27, 2026 at 7:35 AM IST

2 Min Read
Choose ETV Bharat

ಬೆಂಗಳೂರು:‌ ಸಿನಿಮಾ ನಿರ್ದೇಶಕರೊಬ್ಬರನ್ನು ಅಪಹರಿಸಿ, ಹಲ್ಲೆ ಮಾಡಿ ಚಿನ್ನಾಭರಣ ಹಾಗೂ ಹಣ ದೋಚಿರುವ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ನಟಿ ಸೇರಿದಂತೆ 11 ಆರೋಪಿಗಳನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

ಮುಂಬೈಗೆ ಸ್ಥಳಾಂತಗೊಂಡಿದ್ದ ಯುವ ನಿರ್ದೇಶಕ ಅನೀಶ್ ಎಂಬುವವರನ್ನ ಅಪಹರಿಸಿದ ಆರೋಪದಡಿ‌ ನಟಿ ಐಶ್ವರ್ಯಾ, ಆಶೀರ್ವಾದ್ ಸೇರಿದಂತೆ 11 ಮಂದಿಯನ್ನ ಬಂಧಿಸಲಾಗಿದೆ.

ಈ ಹಿಂದೆ 'ಭರವಸೆಯೇ ಜೀವನ' ಸೇರಿದಂತೆ ಕೆಲ ಕಿರುಚಿತ್ರಗಳನ್ನು ನಿರ್ದೇಶಿಸಿದ್ದ ಅನೀಶ್, ಇತ್ತೀಚೆಗೆ 'ಜೀವನದ ಭಾಷೆ' ಎಂಬ ಹೊಸ ಚಲನಚಿತ್ರವನ್ನು ನಿರ್ದೇಶಿಸಲು ಮುಂದಾಗಿದ್ದರು. ಆದರೆ, ಕೆಲ ಕಾರಣಗಳಿಂದಾಗಿ ಆ ಸಿನಿಮಾ ನಿಲ್ಲಿಸಿ ಮುಂಬೈಗೆ ಸ್ಥಳಾಂತರಗೊಂಡಿದ್ದರು. ಈ ನಡುವೆ ಅನೀಶ್ ಅವರು ತಮ್ಮ ಕಾರನ್ನು ಮಾರಾಟ ಮಾಡುವ ಉದ್ದೇಶದಿಂದ ಪರಿಚಯವಿದ್ದ ನಟಿ ಐಶ್ವರ್ಯಾಗೆ ಮಾಹಿತಿ ನೀಡಿದ್ದರು. ದುನಿಯಾ ವಿಜಯ್‌ ನಿರ್ದೇಶನದ ಭೀಮಾ ಸಿನಿಮಾದಲ್ಲಿ ನಟಿಸಿದ್ದ ಐಶ್ವರ್ಯಾ, ಅನೀಶ್ ಅವರಿಗೆ ಪರಿಚಿತಳಾಗಿದ್ದರು. ಇದೇ ಮಾಹಿತಿಯನ್ನು ಬಳಸಿಕೊಂಡ ಆರೋಪಿಗಳು, ಐಶ್ವರ್ಯಾ ಮೂಲಕ ಅನೀಶ್ ಅವರನ್ನು ಸಂಪರ್ಕಿಸಿದ್ದರು. ಕಾರು ಖರೀದಿ ಮಾಡುವ ನೆಪದಲ್ಲಿ ಕರೆ ಮಾಡಿ, ನಟಿಯ ಮೂಲಕವೇ ಅನೀಶ್ ಅವರನ್ನು ಮುಂಬೈನಿಂದ ಬೆಂಗಳೂರಿಗೆ ಕರೆಸಿಕೊಳ್ಳಲಾಗಿತ್ತು. ಬಳಿಕ ಆಡುಗೋಡಿ ಠಾಣೆ ವ್ಯಾಪ್ತಿಯಿಂದ‌ ಅನೀಶ್ ಅವರನ್ನ ಆರೋಪಿಗಳು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿದ್ದರು. ನಂತರ ಅವರನ್ನು ಬ್ಯಾಡರಹಳ್ಳಿಯಲ್ಲಿರುವ ಮನೆಯೊಂದರಲ್ಲಿ ಇರಿಸಿ, ಕ್ರಿಕೆಟ್ ಸ್ಟಂಪ್ ಹಾಗೂ ಹಾಕಿ ಸ್ಟಿಕ್ ಬಳಸಿ ಹಲ್ಲೆ ನಡೆಸಿ, ಅನೀಶ್ ಅವರ ಬಳಿ ಇದ್ದ ಚಿನ್ನಾಭರಣ ಹಾಗೂ ನಗದು ಹಣವನ್ನು ಕಿತ್ತುಕೊಂಡು ಮಧುಗಿರಿ ಸಮೀಪ ಬಿಟ್ಟು ಪರಾರಿಯಾಗಿದ್ದರು. ಪ್ರಮುಖ ಆರೋಪಿ ಹಾಗೂ ಆಶೀರ್ವಾದ್ ನಡುವೆ ಹಿಂದೆ ಸುಮಾರು 5 ಲಕ್ಷ ರೂಪಾಯಿ ಹಣದ ವಿಚಾರವಾಗಿ ಜಗಳವಾಗಿತ್ತು. ಅದೇ ಕಾರಣಕ್ಕೆ ಈ ಕೃತ್ಯ ಎಸಗಿರುವುದು ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಆಗ್ನೇಯ ವಿಭಾಗದ ಡಿಸಿಪಿ ಸುಜೀತಾ ಸಲ್ಮಾನ್, "ಫೆಬ್ರವರಿ 11ರಂದು ಆಸ್ಪತ್ರೆಗೆ ಎಂಎಲ್‌ಸಿ ವರದಿ ಬಂದಿತ್ತು. ಅನೀಶ್ ಕೈ, ಕಾಲು ಸೇರಿದಂತೆ ದೇಹದ ಹಲವೆಡೆ ಗಾಯಗಳಾಗಿದ್ದವು. ಅವರ ಮಾಹಿತಿಯನ್ವಯ‌ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು. ಆರೋಪಿಗಳು ಎಲ್ಲರೂ ಸಂತ್ರಸ್ತನಿಗೆ ಪರಿಚಯದವರೇ ಆಗಿದ್ದಾರೆ. ಹಣಕಾಸಿನ ವಿಚಾರದಲ್ಲಿಯೇ ಗಲಾಟೆ ನಡೆದಿದೆ. ಬಂಧಿತ ಯುವತಿ, ಸಂತ್ರಸ್ತನನ್ನು ಕರೆಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಆಸ್ತಿಗಾಗಿ ಪತಿ ಕೊಲೆ ಮಾಡಿಸಿದ ಪತ್ನಿ! ಪುತ್ರ ಸೇರಿ ನಾಲ್ವರ ಬಂಧನ: ಕೊಲೆ ಕೇಸ್ ಬೇಧಿಸಿದ ಕಿತ್ತೂರು ಪೊಲೀಸರು