ಬಿಡದಿ ಟೌನ್ಶಿಪ್ ವಿರೋಧಿಸಿ ರೈತರಿಂದ ರಕ್ತ ಚಳವಳಿ ಆರಂಭ: ಪ್ರತಿಭಟನೆಗೆ ಸಂತೋಷ ಹೆಗ್ಡೆ ಸಾಥ್
ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಬಿಡದಿ ಪ್ರತಿಭಟನಾ ಸ್ಥಳದಲ್ಲೇ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

Published : July 9, 2026 at 4:19 PM IST
ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆ ಬಿಡದಿ ಟೌನ್ಶಿಪ್ ವಿರೋಧಿಸಿ ರೈತರಿಂದ ರಕ್ತ ಚಳವಳಿ ಆರಂಭಗೊಂಡಿದೆ. ರಕ್ತ ಕೊಡ್ತೀವಿ, ಭೂಮಿ ಕೊಡಲ್ಲ ಎಂದು ಹೋರಾಟ ಆರಂಭಿಸಿದ್ದಾರೆ. ಟೌನ್ಶಿಪ್ ಮ್ಯಾಪ್ ಮೇಲೆ ರಕ್ತದ ಹನಿ ಸುರಿಸಿ ವಿಭಿನ್ನ ಹೋರಾಟ ಆರಂಭಿಸಿದ್ದಾರೆ.
ಬಿಡದಿಯ ಟೌನ್ಶಿಪ್ ಹೋರಾಟ ದಿನದಿಂದ ದಿನಕ್ಕೆ ವಿಕೋಪಕ್ಕೆ ತೆರಳುತ್ತಿದೆ. ಭೈರಮಂಗಲ ಗ್ರಾಮದಲ್ಲಿ ಯೋಜನೆ ವಿರೋಧಿಸಿ ರೈತರ ಪ್ರತಿಭಟನೆ ನಡೆಸಿದ್ದಾರೆ. ಬೈರಮಂಗಲ ಗ್ರಾಮದಲ್ಲಿ ರಕ್ತ ಚಳವಳಿ ಆರಂಭಗೊಂಡಿದ್ದು, ರಕ್ತ ಕೊಡ್ತೀವಿ, ಭೂಮಿ ಕೊಡಲ್ಲ ಎಂದು ಹೋರಾಟ ಆರಂಭಿಸಿದ್ದಾರೆ. ಟೌನ್ ಶಿಪ್ ಮ್ಯಾಪ್ ಮೇಲೆ ರಕ್ತದ ಹನಿ ಹಾಕಿದ್ದಾರೆ. ಮಹಿಳೆಯರು, ರೈತರಿಂದ ರಕ್ತದ ಹನಿ ಸುರಿಸಿ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಸರ್ಕಾರ ಟೌನ್ ಶಿಪ್ ಯೋಜನೆ ಕೈಬಿಡಬೇಕು. ಇಲ್ಲವಾದಲ್ಲಿ ಇಂದು ರಕ್ತ ಕೊಟ್ಟಿದ್ದೇವೆ, ಮುಂದೆ ಪ್ರಾಣ ಕೊಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಗೆ ಸಂತೋಷ ಹೆಗ್ಡೆ ಸಾಥ್: ಬಿಡದಿ ಪ್ರತಿಭಟನಾ ಸ್ಥಳದಲ್ಲೇ ಸರ್ಕಾರಕ್ಕೆ ಪತ್ರ ಬರೆದ ಸಂತೋಷ್ ಹೆಗ್ಡೆ ಅವರು ರೈತರಿಗೆ ಸಾಥ್ ಕೊಟ್ಟಿದ್ದಾರೆ. ಬಿಡದಿ ಟೌನ್ ಶಿಪ್ಗೆ ಬಲವಂತವಾಗಿ ಭೂಸ್ವಾಧೀನ ಮಾಡದಂತೆ ಮನವಿ ಪತ್ರ ಸಲ್ಲಿಸಲಾಗಿದ್ದು, ಅಭಿವೃದ್ಧಿ ಹೆಸರಲ್ಲಿ ರೈತರ ಹಕ್ಕುಗಳಿಗೆ ಧಕ್ಕೆ ಮಾಡಬೇಡಿ. ರೈತರ ಅಭಿಪ್ರಾಯ ಕಡೆಗಣಿಸಿ ಬಲವಂತ ಭೂಸ್ವಾಧೀನ ಮಾಡದಂತೆ ಪ್ರತಿಭಟನಾ ಸ್ಥಳದಲ್ಲೇ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಲಾಯಿತು.
ಈ ವೇಳೆ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮಾತನಾಡಿ, "ನನಗೆ ಆರೋಗ್ಯ ಸಮಸ್ಯೆ, ವೈದ್ಯರು ಮನೆಯಿಂದ ಹೊರ ಹೋಗದಂತೆ ಸೂಚನೆ ನೀಡಿದ್ದರು. ಆದರೆ, ರೈತರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡುತ್ತಿರುವುದು ನೋವು ತಂದಿದೆ. ವ್ಯವಸಾಯ ಇಲ್ಲದೇ ಅಭಿವೃದ್ಧಿ ಸಾಧ್ಯವಿಲ್ಲ. ಯಾವುದೇ ಎಐ ಬಂದರೂ ಕೃಷಿ ಮಾಡದಿದ್ದರೆ ಹೊಟ್ಟೆ ತುಂಬಲ್ಲ. ಕೃಷಿ ಕ್ಷೀಣವಾದರೆ ಭವಿಷ್ಯದಲ್ಲಿ ಕೆಟ್ಟ ಪರಿಸ್ಥಿತಿ ಬರುತ್ತದೆ" ಎಂದರು.
"ಪಟ್ಟಣದಲ್ಲಿರುವ ಕೆರೆಗಳ ಮುಚ್ಚಿ ಬಿಲ್ಡಿಂಗ್ ಕಟ್ಟುತ್ತಿದ್ದಾರೆ. ಇಂತಹ ನಿರ್ಧಾರ ತೆಗೆದುಕೊಳ್ಳುವಾಗ ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ನಾವಿದ್ದರೆ ಅಭಿವೃದ್ಧಿ, ನಾವಿರಬೇಕು ಅಂದರೆ ಕೃಷಿ ಉಳಿಯಬೇಕು. ಇದು ಸರ್ಕಾರಕ್ಕೆ ನನ್ನ ಕಳಕಳಿಯ ಮನವಿ ಮಾಡಲಾಗಿದೆ. ಇಲ್ಲಿರುವ ಮರಗಳಿಗೆ ಸರ್ಕಾರ 40 ಸಾವಿರ ಬೆಲೆ ಕಟ್ಟಲಾಗಿದೆ. ಆದರೆ, ಆ ಮರ ಬೆಳೆಸಲು ಎಷ್ಟು ವರ್ಷ ಕಾಯಬೇಕು.? ಇಂತಹ ಒಂದು ಸಿಂಪಲ್ ವಿಚಾರವನ್ನು ಸರ್ಕಾರ ಯೋಚನೆ ಮಾಡಿಲ್ವಾ.? ಆಡಳಿತ ಅಂದ್ರೆ ಏನು, ರೈತರ ಕಷ್ಟ ಅರ್ಥ ಆಗದಿದ್ರೆ ಆಡಳಿತ ಹೇಗೆ ಮಾಡುತ್ತೀರಿ. ರೈತರಿಂದ ವ್ಯವಸಾಯ ಕಸಿದು ಬೇರೆ ಕೆಲಸ ಕೊಡುವುದು ಎಷ್ಟು ಸರಿ.? ಇಂತಹವರನ್ನು ನಾವು ಏಕೆ ಆಯ್ಕೆ ಮಾಡಬೇಕು" ಎಂದು ಹೇಳಿದರು.

"ನಾನು ಇರುವಷ್ಟು ದಿನ ರೈತರ ಜೊತೆ ಇರುತ್ತೇನೆ, ಹೋರಾಟಕ್ಕೆ ಕೈಜೋಡಿಸುತ್ತೇನೆ. ಮೊದಲು ರೈತರನ್ನು ರಕ್ಷಣೆ ಮಾಡಿ. ನಂತರ ಅಭಿವೃದ್ಧಿ ಹೆಸರಲ್ಲಿ ಕೃಷಿ ಜಮೀನು ಹಾಳು ಮಾಡಬೇಡಿ" ಎಂದು ಸಂತೋಷ್ ಹೆಗಡೆ ಸರಕಾರಕ್ಕೆ ತಾಕೀತು ಮಾಡಿದರು.
ಇದನ್ನೂ ಓದಿ: 'ಚರ್ಚೆಗೆ ಬನ್ನಿ ಅಂತ ನಾನು ಕರೆದರೆ, ನನ್ನನ್ನೇ ಬಿಡದಿಗೆ ಬನ್ನಿ ಅಂತಾರೆ': ಕುಮಾರಸ್ವಾಮಿಗೆ ಸಿಎಂ ಡಿಕೆಶಿ ತಿರುಗೇಟು

