ಧಾರವಾಡ ಕೆಐಎಡಿಬಿ ಕಚೇರಿ ಸ್ಥಳಾಂತರಿಸಿ ಸರ್ಕಾರದ ಆದೇಶ: ರೈತರ ವಿರೋಧ
ಧಾರವಾಡ ಕೆಐಎಡಿಬಿ ಕಚೇರಿ ಸ್ಥಳಾಂತರ ವಿರೋಧಿಸಿ ರೈತರು ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.

Published : March 1, 2026 at 5:25 PM IST
ಧಾರವಾಡ: ಇಲ್ಲಿನ ಕೆಐಎಡಿಬಿ ಕಚೇರಿ ಸ್ಥಳಾಂತರ ವಿರೋಧಿಸಿ ರೈತರು ಕಚೇರಿ ಮುಂಭಾಗದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.
ನವಲೂರು ಬಳಿಯಿರುವ ಕೆಐಎಡಿಬಿ ಕಚೇರಿಯನ್ನು ದಾವಣಗೆರೆಗೆ ಶಿಫ್ಟ್ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಕಚೇರಿ ಸ್ಥಳಾಂತರ ವಿರೋಧಿಸಿ ರೈತರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ಹಾಗೂ ಅಧಿಕಾರಿಗಳು ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದೀಗ ಪೊಲೀಸರನ್ನು ಬಳಸಿಕೊಂಡು ಕಚೇರಿ ಸ್ಥಳಾಂತರಕ್ಕೆ ಪೊಲೀಸರು ಯತ್ನಿಸಿದ್ದಾರೆ. ಇಲ್ಲಿಯೇ ಕಚೇರಿ ಉಳಿಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕಚೇರಿ ಬಾಗಿಲ ಬಳಿಯಲ್ಲಿ ಕುಳಿತಿರುವ ರೈತರಿಗೆ ಕನ್ನಡ ಪರ ಸಂಘಟನೆಗಳು ಹಾಗೂ ದಲಿತಪರ ಸಂಘಟನೆಗಳು ಸಾಥ್ ನೀಡಿದ್ದಾರೆ. ಒಳಗಡೆ ಕಚೇರಿ ಸಿಬ್ಬಂದಿಗಳು ತಮ್ಮ ಕರ್ತವ್ಯ ಮಾಡುತ್ತಿದ್ದು, ಫೈಲ್ ಪ್ಯಾಕಿಂಗ್ ಮಾಡುತ್ತಿದ್ದಾರೆ. ಇನ್ನೂ ಕಚೇರಿಯ ಸಿಬ್ಬಂದಿಗಳನ್ನು ಸಹ ಪ್ರತಿಭಟನಾಕಾರರು ಒಳಗಡೆ ಬಿಡುತ್ತಿಲ್ಲ.
ಈ ಕುರಿತು ವಿಶೇಷ ಭೂಸ್ವಾಧೀನಾಧಿಕಾರಿ ಕವಿತಾ ಮಾತನಾಡಿ, ಸರ್ಕಾರದ ಆದೇಶವನ್ನು ನಾವು ಪಾಲನೆ ಮಾಡುತ್ತಿದ್ದೇವೆ. ಕೆಲ ದಿನಗಳ ಹಿಂದೆ ಧಾರವಾಡದ ಕಚೇರಿಯನ್ನು ಬೆಳಗಾವಿಗೆ ಶಿಫ್ಟ್ ಮಾಡಲು ಸರ್ಕಾರ ಆದೇಶ ಮಾಡಿದೆ. ಧಾರವಾಡದ ಎಲ್.ಎಲ್.ಒ ಕಚೇರಿಗೆ ಏಳು ಜಿಲ್ಲೆಗಳು ಬರುತ್ತವೆ. ಧಾರವಾಡದ ಕಚೇರಿಯನ್ನು ದಾವಣಗೆರೆಗೆ ಶಿಫ್ಟ್ ಮಾಡಬೇಕು. ಉಳಿದ ಜಿಲ್ಲೆಗಳನ್ನು ಬೆಳಗಾವಿಗೆ ಶಿಫ್ಟ್ ಮಾಡುತ್ತಿದ್ದೇವೆ. ಸರ್ಕಾರದ ಆದೇಶದ ಪ್ರಕಾರ ನಾವು ಕಚೇರಿಯನ್ನು ಸ್ಥಳಾಂತರ ಮಾಡುತ್ತಿದ್ದೇವೆ ಎಂದರು.
ನಾವು ಸರ್ಕಾರಿ ಅಧಿಕಾರಿಯಾಗಿ ಸರ್ಕಾರದ ಆದೇಶ ಪಾಲನೆ ಮಾಡಬೇಕಾಗುತ್ತದೆ. ಹೀಗಾಗಿ ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ. ಕಚೇರಿ ಸ್ಥಳಾಂತರಕ್ಕೆ ಕಾರಣ ಸರ್ಕಾರದ ಆದೇಶದಲ್ಲಿದೆ. ನಾನು ಬಂದು ಐದು ತಿಂಗಳಾಗಿದೆ. ಆದ್ರೆ ಪ್ರಸ್ತಾವನೆ ಎರಡು ವರ್ಷದ ಹಿಂದೆಯೇ ಆಗಿದೆ. ಸರ್ಕಾರದ ಆದೇಶವನ್ನು ನಾನು ಪ್ರಶ್ನೆ ಮಾಡಲು ಬರುವುದಿಲ್ಲ, ಹೀಗಾಗಿ ನಾನು ನನ್ನ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
ಮತ್ತೊಂದೆಡೆ, ಕೊಪ್ಪಳ ಜಿಲ್ಲೆಯ ಬಸಾಪೂರ ಸಮೀಪ ನಡೆಯುತ್ತಿರುವ ಸ್ಟೀಲ್ ಕಾರ್ಖಾನೆ ವಿಸ್ತರಣೆ ವಿರೋಧಿಸಿ ಕೊಪ್ಪಳ ಹಾಗೂ ಭಾಗ್ಯನಗರದಲ್ಲಿ ಕಳೆದ ಮಂಗಳವಾರ ಸ್ವಯಂಪ್ರೇರಿತ ಬಂದ್‌ಗೆ ಕರೆ ನೀಡಲಾಗಿತ್ತು. ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಕರೆ ನೀಡಿದ್ದ ಬಂದ್‌ಗೆ ಬಹುತೇಕ ಬೆಂಬಲ ವ್ಯಕ್ತವಾಗಿತ್ತು. ಅಂದು ಮುಂಜಾನೆ 6 ಗಂಟೆಯಿಂದಲೇ ನಗರದಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು. ಕಾರ್ಖಾನೆಗಳ ಹೊಗೆಯಿಂದ ಬೆಳೆ, ಆರೋಗ್ಯ ಮತ್ತು ಪರಿಸರಕ್ಕೆ ಹಾನಿಯಾಗುತ್ತಿದೆ ಎಂದು ಆರೋಪಿಸಿ ರೈತರು ಎತ್ತಿನ ಗಾಡಿ, ಟ್ರ್ಯಾಕ್ಟರ್‌ಗಳೊಂದಿಗೆ ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ಕೆಲವರು ಆಕ್ಸಿಜನ್ ಮಾಸ್ಕ್ ಧರಿಸಿ, ಮಹಿಳೆಯರು ತೊಟ್ಟಿಲು ಸಮೇತ ಭಾಗವಹಿಸಿ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದರು.
ಇವುಗಳನ್ನೂ ಓದಿ:

