ETV Bharat / state

ಬಿಳಿಚಿನ್ನ ಹತ್ತಿಯಿಂದ ವಿಮುಖರಾಗಿ ರೇಷ್ಮೆಯತ್ತ ಹೆಜ್ಜೆ ಇಡುತ್ತಿರುವ ಹಾವೇರಿ ರೈತ; ಶ್ರೀಕಾಂತ್​ಗೆ ರೇಷ್ಮೆ ಬೆಳೆಯಿಂದ ಅಧಿಕ ಲಾಭ

ಹಾವೇರಿ ಜಿಲ್ಲೆಯ ರೈತರು ಹತ್ತಿಯಿಂದ ವಿಮುಖರಾಗಿ ರೇಷ್ಮೆ ಬೆಳೆಯತ್ತ ಮುಖ ಮಾಡಿದ್ದಾರೆ.

Silk plantation
ರೇಷ್ಮೆ ತೋಟ (ETV Bharat)
author img

By ETV Bharat Karnataka Team

Published : March 3, 2026 at 1:54 PM IST

|

Updated : March 3, 2026 at 4:10 PM IST

3 Min Read
Choose ETV Bharat

ವರದಿ: ಶಿವಕುಮಾರ್​ ಸಿ. ಹೆಚ್​

ಹಾವೇರಿ : ಜಿಲ್ಲೆಯು ಒಂದು ಕಾಲದಲ್ಲಿ ಏಷ್ಯಾ ಖಂಡದಲ್ಲಿಯೇ ಅತಿ ಹೆಚ್ಚು ಹತ್ತಿ ಬೆಳೆಯುವ ಜಿಲ್ಲೆಗಳಲ್ಲಿ ಒಂದಾಗಿತ್ತು. ನಂತರ ಕಾಲ ಬದಲಾದಂತೆ ಹತ್ತಿಯಲ್ಲಿ ಕಾಣಿಸಿಕೊಂಡ ಹಲವು ಸಮಸ್ಯೆಗಳಿಂದ ರೈತರು ಇದರಿಂದ ವಿಮುಖರಾಗಿ ಮೆಕ್ಕೆಜೋಳ ಮತ್ತು ರೇಷ್ಮೆಯತ್ತ ಮುಖಮಾಡಿದ್ದಾರೆ.

ಜಿಲ್ಲೆಯಲ್ಲಿ ಸುಮಾರು 8,500ಕ್ಕೂ ಹೆಚ್ಚು ಎಕರೆ ವಿಸ್ತೀರ್ಣದಲ್ಲಿ ರೇಷ್ಮೆ ಬೆಳೆಯಲಾಗುತ್ತಿದೆ. ದಕ್ಷಿಣ ಕರ್ನಾಟಕದಲ್ಲಿ ರಾಮನಗರ ಅತಿಹೆಚ್ಚು ರೇಷ್ಮೆ ಬೆಳೆದರೆ, ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ರೇಷ್ಮೆ ಬೆಳೆಯುವ ಜಿಲ್ಲೆ ಹಾವೇರಿ. ಇದೀಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ರೇಷ್ಮೆ ಬೆಳೆಯಲು ರೈತರು ಮುಂದಾಗಿದ್ದಾರೆ.

ಯಾವುದೇ ತರಕಾರಿ ಇರಲಿ, ಧಾನ್ಯ ಇರಲಿ, ಇಳುವರಿ ಬರಲು ಕನಿಷ್ಠ 3 ತಿಂಗಳು ಕಾಯಬೇಕು. ಆದರೆ, ರೇಷ್ಮೆಯಲ್ಲಿ ಕೇವಲ ಎರಡು ತಿಂಗಳಲ್ಲಿ ಇಳುವರಿ ಪಡೆಯಬಹುದು. ಹೀಗಾಗಿ ಹಾವೇರಿ ಜಿಲ್ಲೆಯ ರೈತರು ರೇಷ್ಮೆ ಕೃಷಿಯತ್ತ ವಾಲುತ್ತಿದ್ದಾರೆ. ಆದರೆ, ಜಿಲ್ಲೆಯಲ್ಲಿ ರೇಷ್ಮೆ ಬೆಳೆಗಾರರಿಗೆ ಸೂಕ್ತ ಮಾರುಕಟ್ಟೆ ಕೊರತೆ ಕಾಡುತ್ತಿದೆ.

ಹಾವೇರಿಯಲ್ಲಿದ್ದ ಮಾರುಕಟ್ಟೆ ಬಂದಾಗಿದೆ. ರಾಣೆಬೆನ್ನೂರು ಮೆಗಾ ಮಾರುಕಟ್ಟೆಯಲ್ಲಿ ಉದ್ಘಾಟನೆಯಾಗಬೇಕಾದ ಮಾರುಕಟ್ಟೆ ಆರಂಭವಾಗಿಲ್ಲ. ಈ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ರೈತರು ಹೆಚ್ಚಿನ ದರ ಬೇಕಾದರೆ ರಾಮನಗರ ರೇಷ್ಮೆ ಮಾರುಕಟ್ಟೆಗೆ ಹೋಗಬೇಕು. ಇಲ್ಲವೇ, ಹಾವೇರಿ ಜಿಲ್ಲೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುವ ಅನಿವಾರ್ಯತೆ ಇದೆ.

farmers-in-haveri-district-have-moved-away-from-cotton-and-towards-silk-cultivation
ರೇಷ್ಮೆ ಹುಳು (ETV Bharat)

ರಾಸಾಯನಿಕದಿಂದ ಸಾವಯವ ರೇಷ್ಮಯತ್ತ : ಜಿಲ್ಲೆಯ ಬಹುತೇಕ ರೈತರು ರೇಷ್ಮೆ ಬೆಳೆಯಲು ಆರಂಭಿಸಿದ್ದಾರೆ. ಆದರೆ ವರ್ಷ ಕಳೆದಂತೆ ರಾಸಾಯನಿಕ ಕೃಷಿಯಿಂದ ಹಲವು ಸಮಸ್ಯೆಗಳು ಕಾಡಲಾರಂಭಿಸಿದವು. ಸತತ ಹಿಪ್ಪುನೇರಳೆ ಬೆಳೆಯುವುದರಿಂದ ಭೂಮಿ ಜವಳಾಗಲಾರಂಭಿಸಿತು. ಹಿಪ್ಪುನೇರಳೆಗೆ ಸಹ ಹಲವು ಕೀಟಗಳು, ರೋಗಗಳು ಕಾಣಲಾರಂಭಿಸಿದವು. ಇದರಿಂದ ಹಿಪ್ಪು ನೇರಳೆ ಇಳುವರಿ ಕಡಿಮೆಯಾಯಿತು. ಅಲ್ಲದೇ, ಈ ರೀತಿ ಗುಣಮಟ್ಟವಿಲ್ಲದ ಹಿಪ್ಪು ನೇರಳೆಯ ಸೊಪ್ಪನ್ನು ತಿಂದಿದ್ದರಿಂದಾಗಿ ರೇಷ್ಮೆ ಹುಳುಗಳ ಬೆಳವಣಿಗೆಯಲ್ಲಿ ಹಾಗೂ ಅವುಗಳ ಗೂಡು ನಿರ್ಮಾಣದಲ್ಲಿ ಸಹ ಉತ್ತಮ ಇಳುವರಿ ಬರಲಿಲ್ಲ. ಪರಿಣಾಮ ಹಲವು ರೈತರು ತಮ್ಮ ರೇಷ್ಮೆ ಬೆಳೆಯಿಂದ ವಿಮುಖರಾಗಲಾರಂಭಿಸಿದರು.

farmers-in-haveri-district-have-moved-away-from-cotton-and-towards-silk-cultivation
ರೇಷ್ಮೆ ಬೆಳೆ (ETV Bharat)

ಈ ಮಧ್ಯೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಇಚ್ಚಂಗಿ ಗ್ರಾಮದ ರೈತ ಶ್ರೀಕಾಂತ ಕಳಸದ ರಾಸಾಯನಿಕ ರೇಷ್ಮೆ ಕೃಷಿಯಿಂದ ಸಾವಯವ ರೇಷ್ಮೆ ಕೃಷಿಯತ್ತ ಮುಖ ಮಾಡಿದರು. ಒಂದು ಟೈಮಲ್ಲಿ ರೇಷ್ಮೆ ತೋಟ ಹಾಳು ಮಾಡಿ ಬೇರೆ ಬಿತ್ತನೆ ಮಾಡಲು ಹೊರಟಿದ್ದ ಶ್ರೀಕಾಂತ್​ಗೆ ಸಾವಯವ ಪದ್ದತಿ ಕೈ ಹಿಡಿಯಿತು. ರೇಷ್ಮೆ ಬೆಳೆಗೆ ತಿಪ್ಪೆಗೊಬ್ಬರ, ಕೋಳಿಗೊಬ್ಬರ ಸೇರಿದಂತೆ ಸಾವಯವ ಗೊಬ್ಬರ ನೀಡಿದ್ದರಿಂದ ಹಿಪ್ಪುನೇರಳೆ ಗಿಡಗಳು 10 ಅಡಿಯವರೆಗೆ ಹಸಿರುಹೊತ್ತು ನಿಂತವು. ಪರಿಣಾಮ ಗುಣಮಟ್ಟದ ಹಿಪ್ಪು ನೇರಳೆ ತಿಂದ ರೇಷ್ಮೆಹುಳುಗಳು ಅಧಿಕ ಇಳುವರಿ ನೀಡಿದವು. ಅಧಿಕ ಇಳುವರಿ ಸಂದರ್ಭದಲ್ಲಿ ಅಧಿಕ ಬೆಲೆ ಸಿಕ್ಕಿದ್ದರಿಂದ ಶ್ರೀಕಾಂತ್​ಗೆ ಹೆಚ್ಚಿನ ಲಾಭವೂ ಆಯಿತು. ಇವರ ಯಶೋಗಾಥೆ ಕೇಳಿದ ರೈತರು ಶ್ರೀಕಾಂತ್ ಅವರ ತೋಟಕ್ಕೆ ಬಂದು ಹಿಪ್ಪು ನೇರಳೆ ಸೊಪ್ಪು ಬೆಳೆಯುವ ಪದ್ದತಿಯ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

farmers-in-haveri-district-have-moved-away-from-cotton-and-towards-silk-cultivation
ಶ್ರೀಕಾಂತ್ ಅವರ ತೋಟಕ್ಕೆ ರೈತರು ಬಂದು ಮಾಹಿತಿ ಪಡೆಯುತ್ತಿರುವುದು (ETV Bharat)

ಸಾವಯವ ಕೃಷಿಯ ಲಾಭಗಳು? : ಈ ಕುರಿತು ರೈತ ಶ್ರೀಕಾಂತ್ ಮಾತನಾಡಿದ್ದು, 'ಸಾವಯವ ಕೃಷಿ ಪದ್ದತಿಯಲ್ಲಿ ಹಿಪ್ಪುನೇರಳೆ ಬೆಳೆದರೆ ಜಮೀನು ಜವಳು ಹಿಡಿಯುವುದಿಲ್ಲ. ಭೂಮಿ ಫಲವತ್ತತೆ ನಿರಂತರ ಇರುವುದರಿಂದ ಹಿಪ್ಪುನೇರಳೆ ಗಿಡಗಳು ಅತ್ಯಧಿಕ ಪ್ರಮಾಣದಲ್ಲಿ ಬೆಳೆಯುತ್ತವೆ. ಹಿಪ್ಪುನೇರಳೆ ಗಿಡಗಳಿಗೆ ಕೋಳಿಗೊಬ್ಬರ, ತಿಪ್ಪೇಗೊಬ್ಬರ ಮತ್ತು ಕುರಿಗೊಬ್ಬರ ನೀಡಿದರೆ, ಅವುಗಳಿಗೆ ಯಾವುದೇ ರೋಗಗಳು ಬರುವುದಿಲ್ಲ. ಇಲ್ಲದಿದ್ದರೆ ಕ್ರಿಮಿಕೀಟಗಳು, ರಸಹೀರುವ ಕೀಟಗಳು, ಹಿಪ್ಪುನೇರಳೆ ಎಲೆಗಳನ್ನು ತಿಂದು ಹಾಕುತ್ತವೆ. ಇದೇ ಸೊಪ್ಪು ರೇಷ್ಮೆಹುಳುಗಳಿಗೆ ಹಾಕಿದರೆ ಅವುಗಳ ಬೆಳವಣಿಗೆಯಲ್ಲಿ ಸಹ ಕುಂಠಿತವಾಗುತ್ತದೆ. ಸಾವಯವ ಕೃಷಿ ಪದ್ದತಿಯಲ್ಲಿ ಹೊಸದಾಗಿ ಸಿಲಿಕಾನ್ ಅಂಶ ಇರುವ ಸಾವಯವ ಗೊಬ್ಬರಗಳು ಸಿಗುತ್ತಿದ್ದು, ಇದು ರಾಜ್ಯದಲ್ಲಿ ಹೊಸ ಕಲ್ಪನೆಯಾಗಿದೆ. ಈ ರೀತಿಯ ಗೊಬ್ಬರ ಬೆಳೆಗಳಿಗೆ ಸಿಕ್ಕರೆ ಉತ್ತಮ ಹಿಪ್ಪುನೇರಳೆ ಬೆಳೆಯುತ್ತದೆ. ಅಲ್ಲದೇ, ಎಲೆಯಲ್ಲಿ ಅಧಿಕ ರಸ ಸಿಗುವ ಕಾರಣ ರೇಷ್ಮೆಹುಳುಗಳು ಈ ಎಲೆಯನ್ನು ತಿಂದು ಉತ್ತಮ ಗುಣಮಟ್ಟದ ಗೂಡು ಕಟ್ಟುತ್ತವೆ. ರಾಸಾಯನಿಕ ಗೊಬ್ಬರದಿಂದ ಅಡ್ಡಪರಿಣಾಮಗಳಾಗುತ್ತವೆ. ಅಲ್ಲದೇ, ಅಧಿಕ ಖರ್ಚು. ಆದರೆ, ಸಾವಯವ ಪದ್ದತಿಯಲ್ಲಿ ಯಾವುದೇ ಅಡ್ಡಪರಿಣಾಮಗಳಿಲ್ಲ. ಅಲ್ಲದೇ, ಖರ್ಚು ಕಡಿಮೆ' ಎಂದಿದ್ದಾರೆ.

farmers-in-haveri-district-have-moved-away-from-cotton-and-towards-silk-cultivation
ರೇಷ್ಮೆ ಹುಳು ಸಾಕಾಣಿಕೆ (ETV Bharat)

ಸಾವಯವ ತಜ್ಞ ಗಂಗಾಧರ ಮಾತನಾಡಿದ್ದು, 'ಹಾವೇರಿ ಜಿಲ್ಲೆ ಅನೇಕ ಬೆಳೆಗಳಲ್ಲಿ ವಿಶೇಷತೆಗಳನ್ನು ಹೊಂದಿದೆ. ಈ ಹಿಂದೆ ಬೀಟಿ ಕಾಟನ್, ಗ್ರೀನ್ ಚಿಲ್ಲಿಯನ್ನು ಉತ್ತಮವಾಗಿ ಬೆಳೆದು ಭದ್ರರಾಗಿ ವಿಶ್ವದಾದ್ಯಂತ ಹೆಸರು ಮಾಡಿತ್ತು. ಇದೀಗ ಉತ್ತರ ಕರ್ನಾಟದ ಜಿಲ್ಲೆಯಲ್ಲಿ ಅತಿ ಹೆಚ್ಚು ರೇಷ್ಮೆ ಬೆಳೆಯುತ್ತಿದೆ. 8,500 ಹೆಕ್ಟೇರ್ ನಮ್ಮ ಜಿಲ್ಲೆಯಲ್ಲಿದೆ. ಅನೇಕ ಕುಟುಂಬಗಳು ಇದರ ಮೇಲೆ ಅವಲಂಬನೆಯಾಗಿವೆ. ಈ ಬೆಳೆಯಿಂದ ರೈತರಿಗೆ ಲಕ್ಷವಲ್ಲ, ಕೋಟಿಗಟ್ಟಲೆ ಆದಾಯ ಗಳಿಸುವುದಕ್ಕೆ ಸಾಧ್ಯವಾಗುತ್ತಿದೆ. ರೈತ ಶ್ರೀಕಾಂತ್ ಅವರು ಕೀಟಮುಕ್ತ, ರೋಗಮುಕ್ತ ಹಾಗೂ ಹಚ್ಚ ಹಸಿರಿನ ತೋಟವನ್ನು ಬೆಳೆದಿದ್ದಾರೆ. ಒಂದನೇ ಕಟಾವಿಗೆ ಉತ್ತಮ ಗುಣಮಟ್ಟದ ಇಳುವರಿ ಹಾಗೂ 1,10,000 ಕ್ಕೂ ಅಧಿಕ ಆದಾಯವನ್ನು ಗಳಿಸಿದ್ದಾರೆ' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಬಜೆಟ್‌ನಲ್ಲಿ ಕರಾವಳಿ ಪ್ರವಾಸೋದ್ಯಮಕ್ಕೆ ಬೇಕಿದೆ ಬೆಂಬಲ: ಬೀಚ್ ಟೂರಿಸಂ, ಟೆಂಪಲ್ ಟೂರಿಸಂಗೆ ಬಲ ಬರುವ ನಿರೀಕ್ಷೆ

Last Updated : March 3, 2026 at 4:10 PM IST