ETV Bharat / state

ಬೆಂಬಲ ಬೆಲೆಗಾಗಿ ಪ್ರತಿಭಟನೆ ನಡೆಸಿದ್ದಕ್ಕೆ ಪಶ್ಚಾತಾಪ: ಇಕ್ಕಟ್ಟಿನಲ್ಲಿ ಸಿಲುಕಿದ ಹಾವೇರಿ ಜಿಲ್ಲೆಯ ರೈತರು

ಬೆಂಬಲ ಬೆಲೆಗಾಗಿ ಹಾವೇರಿ ಜಿಲ್ಲೆಯ ರೈತರು ಪ್ರತಿಭಟನೆ ನಡೆಸಿದ್ದಕ್ಕೆ ಈಗ ಶಪಿಸಿಕೊಳ್ಳುವಂತಾಗಿದೆ!

Farmers in Haveri district are in trouble due to support price
ಮೆಕ್ಕೆಜೋಳವನ್ನು ಸ್ಯಾಂಪಲ್ ಪರೀಕ್ಷೆ ಮಾಡುತ್ತಿರುವುದು (ETV Bharat)
author img

By ETV Bharat Karnataka Team

Published : January 5, 2026 at 6:00 PM IST

|

Updated : January 5, 2026 at 6:21 PM IST

4 Min Read
Choose ETV Bharat

ಹಾವೇರಿ: ರಾಜ್ಯ ಸರ್ಕಾರಕ್ಕೆ ಯಾಕಾಗಿಯಾದರೂ ನಾವು ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಸಿ ಅಂತಾ ಪ್ರತಿಭಟನೆಗೆ ನಡೆಸಿದೆವೋ ಅಂತಾ ಜಿಲ್ಲೆಯ ರೈತರು ಪರಿತಪಿಸುವಂತಾಗಿದೆ. ರಾಜ್ಯ ಸರ್ಕಾರಕ್ಕೆ ಮೆಕ್ಕೆಜೋಳವನ್ನು ಪ್ರತಿ ಕ್ವಿಂಟಲ್‌ಗೆ ಕೇಂದ್ರ ನಿಗದಿ ಮಾಡಿರುವ 2,400 ರೂಪಾಯಿ ಕನಿಷ್ಠ ಖರೀದಿ ದರ ಮತ್ತು ರಾಜ್ಯ ಸರ್ಕಾರದಿಂದ ಕ್ವಿಂಟಲ್‌ಗೆ 600 ರೂಪಾಯಿ ಪ್ರೋತ್ಸಾಹ ಧನಕ್ಕಾಗಿ ಜಿಲ್ಲೆ ಸೇರಿದಂತೆ ವಿವಿಧೆಡೆ ರೈತರು ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಕನಿಷ್ಠ ಓರ್ವ ರೈತನಿಂದ ನೂರು ಕ್ವಿಂಟಲ್ ಮೆಕ್ಕೆಜೋಳ ಖರೀದಿಸುವಂತೆಯೂ ಆಗ್ರಹಿಸಿದ್ದರು.

ಆದರೆ, ಹಾವೇರಿ ಜಿಲ್ಲಾಡಳಿತ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದ ರೈತರಿಗೆ ಸರ್ಕಾರ ಮೊದಲು ಸ್ಪಂಧಿಸಿರಲಿಲ್ಲ. ಬಳಿಕ ರಾಜ್ಯಾದ್ಯಂತ ನಡೆದ ಹೋರಾಟದಿಂದ ಕ್ವಿಂಟಲ್ ಮೆಕ್ಕೆಜೋಳಕ್ಕೆ 2,400 ರೂ. ಬೆಂಬಲ ಬೆಲೆ ನಿಗದಿಮಾಡಿತ್ತು. ಅಲ್ಲದೇ ಪ್ರತಿರೈತನಿಂದ 12 ಕ್ವಿಂಟಲ್ ಮೆಕ್ಕೆಜೋಳ ಖರೀದಿಸುವುದಾಗಿಯೂ ತಿಳಿಸಿತ್ತು. ಆದರೆ, ಜಿಲ್ಲೆಯ ರೈತರು ಮಾತ್ರ ತಮ್ಮ ಹೋರಾಟದಿಂದ ಹಿಂದೆ ಸರಿದಿರಲಿಲ್ಲ. ನಂತರ ಸಚಿವರು - ಶಾಸಕರುಗಳ ಮಧ್ಯಸ್ಥಿಕೆಯಲ್ಲಿ ಸಭೆ ನಡೆದು 2,400 ರೂಪಾಯಿ ಬೆಂಬಲ ಬೆಲೆ ಮತ್ತು ಒಬ್ಬ ರೈತನಿಂದ 20 ಕ್ವಿಂಟಲ್ ಮೆಕ್ಕೆಜೋಳ ಖರೀದಿಸುವುದಾಗಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆದರೂ, ತಮ್ಮ ಹೋರಾಟದಿಂದ ಹಿಂದೆ ಸರಿಯದ ರೈತರು ಪ್ರತಿಭಟನೆ ಮುಂದುವರೆಸಿದ್ದರು. ಕೊನೆಗೆ ಪ್ರತಿ ರೈತನಿಂದ 50 ಕ್ವಿಂಟಲ್ ಮೆಕ್ಕೆಜೋಳ ಖರೀದಿಗೆ ಸರ್ಕಾರ ಮುಂದಾದಾಗ ರೈತರು ತಮ್ಮ ಪ್ರತಿಭಟನೆಯನ್ನು ವಾಪಸ್ ಪಡೆದಿದ್ದರು. ಆದರೆ, ಈ ಎಲ್ಲ ಹೋರಾಟ, ಪ್ರತಿಭಟನೆ ತಮಗೆ ಏನೂ ಲಾಭ ತರಲಿಲ್ಲವೆಂದು ರೈತರು ಈಗ ಪಶ್ಚಾತಾಪ ಪಡುವಂತಾಗಿದೆ.

ಅಳಲು ತೋಡಿಕೊಳ್ಳುತ್ತಿರುವ ರೈತರು (ETV Bharat)

ಪ್ರತಿಭಟನೆ ನಡೆಸಿದಕ್ಕೆ ಪಶ್ಚಾತಾಪ: ರೈತರು ನಡೆಸಿದ ಪ್ರತಿಭಟನೆಗಿಂತ ಮೊದಲು ಮೆಕ್ಕೆಜೋಳಕ್ಕೆ ಕ್ವಿಂಟಲ್‌ಗೆ 1,600 ರೂಪಾಯಿಯಿಂದ 1,800 ರೂಪಾಯಿ ಬೆಲೆ ಇತ್ತು. ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ಮುಂದಾಗುತ್ತಿದ್ದಂತೆ ರೈತರ ಮೆಕ್ಕೆಜೋಳಕ್ಕೆ ಸ್ವಲ್ಪ ಡಿಮ್ಯಾಂಡ್ ಬಂತು. ವರ್ತಕರು 2,000ರವರೆಗೆ ಮೆಕ್ಕೆಜೋಳ ಖರೀದಿಸಲು ಮುಂದಾದರು. ಆದರೆ, ಸರ್ಕಾರ ಕ್ವಿಂಟಲ್‌ಗೆ 2,400 ರೂಪಾಯಿ ನೀಡುವ ಆದೇಶ ಹೊರಡಿಸಿದ್ದರಿಂದ ರೈತರು ಖಾಸಗಿ ವರ್ತಕರಿಗೆ ಮಾರಾಟ ಮಾಡಲಿಲ್ಲ. ಈ ಮಧ್ಯೆ ರಾಜ್ಯ ಸರ್ಕಾರ ರೈತರಿಂದ ಮೆಕ್ಕೆಜೋಳ ಖರೀದಿಸಲು ನೋಂದಣಿ ಆರಂಭಿಸಿತು. ನೋಂದಣಿ ಆರಂಭಿಸುತ್ತಿದ್ದಂತೆ ತಂತ್ರಜ್ಞಾನ ಸಮಸ್ಯೆ ತಲೆದೋರಿತು. ಪ್ರತಿರೈತನಿಂದ ಕೇವಲ 20 ಕ್ವಿಂಟಲ್ ನೋಂದಣಿ ಮಾಡಿಸಿಕೊಳ್ಳಲಾಯಿತು. ನೋಂದಣಿಗೆ ರೈತನಿಂದ ಮೆಕ್ಕೆಜೋಳದ ಸ್ಯಾಂಪಲ್ ಪಡೆಯಿತು. ಆದರೆ, ಸ್ಯಾಂಪಲ್ ಫಲಿತಾಂಶ ಪ್ರಕಟಿಸಲಿಲ್ಲ. ಪರಿಣಾಮ ರೈತರು ಚಾತಕಪಕ್ಷಿಯಂತೆ ಕಾಯುವಂತಾಯಿತು. ಇತ್ತ ಹಾವೇರಿ ಕೆಎಂಎಫ್ ಕಚೇರಿ ಆವರಣದಲ್ಲಿ ನೋಂದಣಿ ಮಾಡಿಸಿದ ರೈತರು, ಧಾರವಾಡ ಮತ್ತು ಶಿಕಾರಿಪುರಕ್ಕೆ ಮೆಕ್ಕೆಜೋಳ ತೆಗೆದುಕೊಂಡು ಹೋಗಬೇಕಾಯಿತು. ಈ ರೀತಿ ಟ್ರ್ಯಾಕ್ಟರ್ ಬಾಡಿಗೆ ಪಡೆದು ಶಿಕಾರಿಪುರ - ಧಾರವಾಡಕ್ಕೆ ಹೋಗಿದ್ದ ರೈತರ ಮೆಕ್ಕೆಜೋಳ ಖರೀದಿಗೆ ವಾರಗಳೇ ಬೇಕಾಯಿತು. ಇತ್ತ ವಾರಗಟ್ಟಲೇ ಟ್ರ್ಯಾಕ್ಟರ್ ಬಾಡಿಗೆ, ಚಾಲಕರ ಕೂಲಿ ಸೇರಿದಂತೆ ವಿವಿಧ ಕಾರಣಗಳಿಗೆ ರೈತರಿಗೆ ಸರ್ಕಾರದ ಬೆಂಬಲ ಬೆಲೆ ಸಿಕ್ಕರೂ ಖರ್ಚಾಗಿ ಹೋಯಿತು. ಇತ್ತ ಸರ್ಕಾರ ಖರೀದಿ ಮಾಡುತ್ತದೆ ಅಂತ ಇಟ್ಟ ಮೆಕ್ಕೆಜೋಳ ತೆನೆಗಳಿಗೆ ಫಂಗಸ್ ಕಾಟ ಶುರುವಾಯಿತು. ಹೀಗಾಗಲೇ ಮೆಕ್ಕೆಜೋಳ ಕಾಳು ಹಾಕಿಸಿಟ್ಟಿದ್ದ ರೈತರ ಮೆಕ್ಕೆಜೋಳಕ್ಕೆ ನುಸಿಕಾಟ ಶುರುವಾಯಿತು. ಪರಿಣಾಮ ಮುಂಗಾರು ಮುಗಿಸಿ ಮೆಕ್ಕೆಜೋಳ ಮಾರಿಬಿಟ್ಟಿದ್ದರೇ ನಮಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ರೈತರು ಇದೀಗ ಪರಿತಪಿಸುತ್ತಿದ್ದಾರೆ.

ಇನ್ನು ಕೆಲ ರೈತರ ಮೆಕ್ಕೆಜೋಳದ ರಾಶಿಗಳು ಆಕಸ್ಮಿಕ ಅಗ್ನಿ ಅವಘದಿಂದ ಸುಟ್ಟುಕರಕಲಾದವು. ಇನ್ನೊಂದೆಡೆ ಸರ್ವಿಸ್ ರಸ್ತೆಗಳಲ್ಲಿ ಒಕ್ಕಣಿಕೆ ಮಾಡಲು ಹಾಕಿದ್ದ ಗೋವಿನ ಜೋಳ ಕಾಯುವ ಪರಿಸ್ಥಿತಿ ಸಹ ರೈತರಿಗೆ ಬಂತು. ಒಟ್ಟಿನಲ್ಲಿ ಸರ್ಕಾರದ ಬೆಂಬಲ ಬೆಲೆ ಖರೀದಿ ಬಿಟ್ಟು ನಾವು ಗೋವಿನಜೋಳ ಮಾರಾಟ ಮಾಡಿದ್ದರೆ ಹೆಚ್ಚು ಹಣ ಸಿಗುತ್ತಿತ್ತು ಎನ್ನುವ ಪರಿಸ್ಥಿತಿಯಲ್ಲಿ ರೈತರು ಇದೀಗ ಬಂದಿದ್ದಾರೆ.

ಇಕ್ಕಟ್ಟಿನಲ್ಲಿ ಮೆಕ್ಕೆಜೋಳ ಬೆಳೆಗಾರ: ಇದೀಗ ಜಿಲ್ಲೆಯ ಮೆಕ್ಕೆಜೋಳ ಬೆಳೆಗಾರು ಒಂದು ರೀತಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ಮೊದಲು ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯುವರೆಗೆ ಕಾಯಬೇಕಾಯಿತು. ಬಳಿಕ ಕೇಂದ್ರಗಳನ್ನು ತೆರೆಯಲಾಯಿತು. ಅದಕ್ಕೆ ಕೆಲವು ದಿನಗಳು. ಬಳಿಕ ಮೆಕ್ಕೆಜೋಳ ಸ್ಯಾಂಪಲ್ ಪರೀಕ್ಷೆ ನಡೆಸಲಾಯಿತು. ಇದಕ್ಕೂ ಕೆಲವು ದಿನಗಳು ಬೇಕಾಯಿತು. ಸದ್ಯ ಅದರಲ್ಲಿ ಪಾಸ್ ಆದರೆ ಮಾತ್ರ ಖರೀದಿ ಕೇಂದ್ರದಲ್ಲಿ ಮೆಕ್ಕೆಜೋಳವನ್ನು ಮಾರಾಟ ಮಾಡಬಹುದಾಗಿದೆ. ಅಲ್ಲಿ ಮಾರಾಟ ಮಾಡಿದ ಬಳಿಕ ಸರ್ಕಾರ ರೈತರಿಗೆ ಹಣ ನೀಡುತ್ತದೆ. ಇದು ಹಲವು ದಿನಗಳ ಪ್ರಕ್ರಿಯೆ. ಸುಮ್ಮನೇ ಇದ್ಯಾವುದು ಬೇಡ, ಖಾಸಗಿ ವರ್ತಕರಿಗೆ ಆ ಕ್ಷಣಕ್ಕೆ ಸಿಕ್ಕ ದರಕ್ಕೆ ಮಾರಾಟ ಮಾಡಿ ಕೈತೊಳೆದುಕೊಳ್ಳಬೇಕಿತ್ತು ಎನ್ನುವ ಇಕ್ಕಟ್ಟಿನಲ್ಲಿ ರೈತರು ಸಿಲುಕಿದ್ದಾರೆ. ವಾರಗಟ್ಟಲೆ ಮನೆಬಿಟ್ಟು ಜಿಲ್ಲಾಧಿಕಾರಿ ಕಚೇರಿ ಮುಂದೆ ಹಗಲು ರಾತ್ರಿ ಪ್ರತಿಭಟನೆ ಮಾಡಲಾಯಿತು. ಪ್ರತಿಭಟನೆಗೆ ಜಯ ಸಿಕ್ಕರೂ ಈ ರೀತಿಯಲ್ಲಿ ನಮಗೆ ಹಾನಿಯಾಗುತ್ತಿದೆ. ಒಂದು ಕಡೆ ಮೆಕ್ಕೆಜೋಳ ಹಾಳಾಗುತ್ತಿದೆ. ಮತ್ತೊಂದು ಕಡೆ ರೈತನ ಪರಿಶ್ರಮ ಹಾಳಾಗುತ್ತಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

ಅತಿಹೆಚ್ಚು ಮೆಕ್ಕೆಜೋಳ ಬೆಳೆಯುವ ಜಿಲ್ಲೆ ಹಾವೇರಿ: ಹಾವೇರಿ ದೇಶದಲ್ಲಿ ಅತಿಹೆಚ್ಚು ಮೆಕ್ಕೆಜೋಳ ಬೆಳೆಯುವ ಜಿಲ್ಲೆಗಳಲ್ಲಿ ಒಂದು. ಇಲ್ಲಿ ಸುಮಾರು 12 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನ ರೈತರು ಕಳೆದ ಮುಂಗಾರಿನಲ್ಲಿ ಬೆಳೆದಿದ್ದಾರೆ. ಸರ್ಕಾರ ಕನಿಷ್ಠ ದರದಲ್ಲಿ ನಾಲ್ಕು ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಬೇಕೆಂದು ರೈತರು ದುಂಬಾಲು ಬಿದ್ದಿದ್ದಾರೆ. ಆದರೆ, ಸರ್ಕಾರ ರಾಜ್ಯದಲ್ಲಿಯೇ ಸುಮಾರು 10 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸುವ ಭರವಸೆ ನೀಡಿದೆ. ಆದರೆ, ಭರವಸೆ ಆದೇಶವಾದರೂ ಖರೀದಿ ಮಾತ್ರ ನಡೆಯುತ್ತಿಲ್ಲ. ನಾವು ಪ್ರತಿಭಟನೆ ನಡೆಸುವುದು ಬಿಟ್ಟು ಸುಮ್ಮನೆ ಖಾಸಗಿಯವರೆಗೆ ಮೆಕ್ಕೆಜೋಳ ಮಾರಾಟ ಮಾಡಿದ್ದರೆ ಆರಾಮಾಗಿ ಇರುತ್ತಿದ್ದೆವು ಎಂದು ಶಪಿಸಿಕೊಳ್ಳುವಂತಾಗಿದೆ. ಸರ್ಕಾರ ಈಗಲಾದರೂ ಆದೇಶದಂತೆ ಆದಷ್ಟು ಬೇಗ ರೈತರ ಮೆಕ್ಕೆಜೋಳವನ್ನ ಬೆಂಬಲ ಬೆಲೆಯಲ್ಲಿ ಖರೀದಿಸಬೇಕು. ಪ್ರತಿ ತಾಲೂಕಿಗೆ ಒಂದು ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಬೇಕು. ಖರೀದಿಸುತ್ತಿದ್ದಂತೆ ರೈತರ ಖಾತೆಗೆ ಹಣ ಹಾಕಬೇಕು. ಆವಾಗ ಮಾತ್ರ ರೈತರು ಮೆಕ್ಕೆಜೋಳದ ಬೆಂಬಲ ಬೆಲೆಗೆ ಹೋರಾಟ ಮಾಡಿದ್ದಕ್ಕೆ ಸಾರ್ಥಕವಾಗುತ್ತದೆ ಎನ್ನುವ ಅಭಿಪ್ರಾಯವನ್ನ ರೈತರು ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಮೆಕ್ಕೆಜೋಳ ಖರೀದಿ ಕೇಂದ್ರ ಹುಡುಕಿ ಹುಡುಕಿ ಸುಸ್ತಾದ ರೈತರು; ಎಪಿಎಂಸಿಯಲ್ಲಿ ಖರೀದಿ ಕೇಂದ್ರವೇ ಕಾಣೆ

Last Updated : January 5, 2026 at 6:21 PM IST