ETV Bharat / state

ಕೈಕೊಟ್ಟ ಮುಂಗಾರು ಮಳೆ ; ಬಳ್ಳಾರಿ ರೈತರಲ್ಲಿ ಹೆಚ್ಚಿದ ಆತಂಕ

ಬಳ್ಳಾರಿ ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

farmers
ಜಮೀನಿನಲ್ಲಿ ರೈತರು (ETV Bharat)
author img

By ETV Bharat Karnataka Team

Published : July 4, 2026 at 8:21 PM IST

2 Min Read
Choose ETV Bharat

ಬಳ್ಳಾರಿ : ಜಿಲ್ಲೆಯಾದ್ಯಂತ ಮುಂಗಾರು ಮಳೆ ಸಮರ್ಪಕವಾಗಿ ಆಗದ ಪರಿಣಾಮ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದು, ಮಳೆಯಾಶ್ರಿತ ಭೂಮಿ ಹೊಂದಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಮೀನು ಹಸನು ಮಾಡಿ, ಕೊಟ್ಟಿಗೆ ಗೊಬ್ಬರ ಬೆರೆಸಿ, ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿರುವ ರೈತರು ಮಳೆಯ ನಿರೀಕ್ಷೆಯಲ್ಲಿ ಮುಗಿಲಿನತ್ತ ದೃಷ್ಟಿ ನೆಟ್ಟಿದ್ದಾರೆ. ಇನ್ನೊಂದೆಡೆ, ತುಂಗಭದ್ರಾ ಜಲಾಶಯಕ್ಕೆ ಸಮರ್ಪಕ ಒಳಹರಿವು ಇಲ್ಲದಿರುವುದು ನೀರಾವರಿ ಪ್ರದೇಶದ ರೈತರಲ್ಲೂ ಆತಂಕ ಮೂಡಿಸಿದೆ. ಭತ್ತ, ಮೆಣಸಿನಕಾಯಿ, ಹತ್ತಿ ಹಾಗೂ ಮೆಕ್ಕೆಜೋಳ ಬೆಳೆಗಳ ಭವಿಷ್ಯದ ಬಗ್ಗೆ ರೈತರು ಚಿಂತಿತರಾಗಿದ್ದಾರೆ.

‘ಕಳೆದ ವರ್ಷ ಇದೇ ವೇಳೆಗೆ ಹೊಲದಲ್ಲಿ ಮೊಣಕಾಲು ಎತ್ತರಕ್ಕೆ ಬೆಳೆ ಬೆಳೆದಿತ್ತು. ಈ ಬಾರಿ ಸಕಾಲಕ್ಕೆ ಮಳೆಯಾಗದೆ ಹೊಲ ಸಿದ್ಧಪಡಿಸಿ ಕಾಯುವಂತಾಗಿದೆ. ಅಶ್ವಿನಿ, ಕೃತಿಕಾ ಹಾಗೂ ಭರಣಿ ಮಳೆ ಕೈಕೊಟ್ಟಿದ್ದು, ಮೃಗಶಿರ ಹಾಗೂ ಆರಿದ್ರಾ ಮಳೆಗಳ ಮೇಲೆಯೇ ಭರವಸೆ ಇಟ್ಟಿದ್ದೇವೆ’ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ಅವರ ಪ್ರತಿಕ್ರಿಯೆ (ETV Bharat)

ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ಮಾತನಾಡಿ, 'ಮಳೆ ಕೊರತೆಯಿಂದ ರೈತರು ಆತಂಕಕ್ಕೆ ಒಳಗಾಗದೆ ಕೃಷಿ ವಿಜ್ಞಾನಿಗಳು ಶಿಫಾರಸು ಮಾಡಿರುವ ಪರ್ಯಾಯ ಬೆಳೆ ಪದ್ಧತಿಯನ್ನು ಅನುಸರಿಸುವಂತೆ' ಮನವಿ ಮಾಡಿದ್ದಾರೆ.

ಬಿತ್ತನೆಗೆ ಹಿನ್ನಡೆ : ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ 599 ಮಿ. ಮೀ. ಆಗಿದ್ದು, ಜೂನ್ ಅಂತ್ಯದ ವೇಳೆಗೆ 146.1 ಮಿ.ಮೀ. ವಾಡಿಕೆ ಮಳೆಗೆ ಎದುರಾಗಿ 140.7 ಮಿ. ಮೀ. (ಶೇ.97) ಮಳೆಯಾಗಿದೆ. ಆದರೆ, ಮಳೆ ದಿನಗಳ ಸಂಖ್ಯೆ ಕಡಿಮೆ, ಮಳೆಯ ಅಸಮ ಹಂಚಿಕೆ ಹಾಗೂ ದೀರ್ಘ ವಿರಾಮದಿಂದಾಗಿ ಜಿಲ್ಲೆಯಾದ್ಯಂತ ಕೇವಲ ಶೇ.24ರಷ್ಟು ಮಾತ್ರ ಬಿತ್ತನೆ ನಡೆದಿದೆ.

ಸಂಡೂರು ತಾಲೂಕಿನಲ್ಲಿ 221.6 ಮಿ. ಮೀ. ವಾಡಿಕೆ ಮಳೆಗೆ ಎದುರಾಗಿ ಕೇವಲ 88 ಮಿ.ಮೀ. ಮಳೆಯಾಗಿದ್ದು, ಶೇ. 60ರಷ್ಟು ಮಳೆ ಕೊರತೆ ದಾಖಲಾಗಿದೆ. ಉಳಿದ ತಾಲೂಕುಗಳಲ್ಲಿಯೂ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.

Crops
ರೈತರು ಬೆಳೆದಿರುವ ಬೆಳೆ (ETV Bharat)

ಪರ್ಯಾಯ ಬೆಳೆಗಳಿಗೆ ಸಲಹೆ : ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಪ್ರಸಕ್ತ ವರ್ಷ ‘ಎಲ್ ನಿನೋ’ ಪರಿಣಾಮದಿಂದ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರೈತರು ಪರ್ಯಾಯ ಬೆಳೆಗಳತ್ತ ಗಮನಹರಿಸುವಂತೆ ಕೃಷಿ ಇಲಾಖೆ ಸೂಚಿಸಿದೆ.

ಜುಲೈ ಮೂರನೇ ಅಥವಾ ನಾಲ್ಕನೇ ವಾರದಲ್ಲಿ ಮಳೆಯಾದರೆ ತೊಗರಿ, ಶೇಂಗಾ, ಸಜ್ಜೆ, ಸೂರ್ಯಕಾಂತಿ, ನವಣೆ ಹಾಗೂ ಮೆಕ್ಕೆಜೋಳ ಬೆಳೆಯಬಹುದು. ಆಗಸ್ಟ್ ಮೊದಲ ವಾರದಲ್ಲಿ ಮಳೆಯಾದರೆ ತೊಗರಿ, ಶೇಂಗಾ, ಸಜ್ಜೆ, ಸೂರ್ಯಕಾಂತಿ, ನವಣೆ ಮತ್ತು ರಾಗಿ ಬೆಳೆಯಲು ಶಿಫಾರಸು ಮಾಡಲಾಗಿದೆ.

ತೊಗರಿ ಮತ್ತು ಶೇಂಗಾವನ್ನು 3:1 ಅನುಪಾತದಲ್ಲಿ ಅಂತರಬೆಳೆಯಾಗಿ ಬೆಳೆಯುವುದು ಸೂಕ್ತ ಎಂದು ಕೃಷಿ ವಿಜ್ಞಾನಿಗಳು ಸಲಹೆ ನೀಡಿದ್ದು, ಹವಾಮಾನದ ವೈಪರೀತ್ಯವನ್ನು ಎದುರಿಸಲು ರೈತರು ಪರ್ಯಾಯ ಬೆಳೆ ಪದ್ಧತಿಯನ್ನು ಅನುಸರಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ಮನವಿ ಮಾಡಿದ್ದಾರೆ.

lAND
ರೈತರ ಜಮೀನು (ETV Bharat)

ವಾಡಿಕೆ ಮಳೆಯಾಗಿದೆ ; ಆದ್ರೆ ನಿರೀಕ್ಷಿತ ಮಳೆ ಬಂದಿಲ್ಲ : ಕಳೆದ ವರ್ಷ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ದುರಸ್ತಿ ಹಿನ್ನೆಲೆ ಎರಡನೇ ಬೆಳೆಗೆ ನೀರು ಸಿಕ್ಕಿರಲಿಲ್ಲ. ಇದೀಗ ಗೇಟ್ ದುರಸ್ತಿಯಾಗಿದ್ರೂ ಮಲೆನಾಡಿನಲ್ಲೇ ಮಳೆಯಾಗದ ಕಾರಣ ಜಲಾಶಯ ಖಾಲಿ ಖಾಲಿಯಾಗಿದೆ.

ಇದು ಬಳ್ಳಾರಿ ಜಿಲ್ಲೆಯ ರೈತರ ವಾಸ್ತವದ ಸ್ಥಿತಿಯಾಗಿದೆ. ಈಗಾಗಲೇ ಮುಂಗಾರು ಮಳೆ ನಂಬಿಕೊಂಡು ಕುಳಿತ ರೈತರ ಸೂರ್ಯಕಾಂತಿ, ಮೆಣಸಿನಕಾಯಿ ಸಸಿಗಳು ನೀರಿಲ್ಲದ ಕಾರಣ ಒಣಗುತ್ತಿವೆ. ಅದರಲ್ಲೂ ತುಂಗಭದ್ರಾ ಜಲಾಶಯದಲ್ಲಿ ನೀರಿಲ್ಲ. ಹೀಗಾಗಿ, ಮೊದಲ ಬೆಳೆಗೆ ನೀರು ಬಿಡಲ್ಲ ಎಂದಿರೋ ಮಾತು ರೈತರಿಗೆ ಬರಸಿಡಿಲು ಬಡಿದಂತಾಗಿದೆ.

Tungabhadra Reservoir
ತುಂಗಭದ್ರಾ ಜಲಾಶಯ (ETV Bharat)

ತುಂಗಭದ್ರಾ ಜಲಾಶಯದ ನೀರನ್ನು ನಂಬಿದ ಬಳ್ಳಾರಿ, ರಾಯಚೂರು, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಯ ರೈತರು ಈ ಬಾರಿ ತೀವ್ರ ಸಂಕಷ್ಟದಲ್ಲಿದ್ದಾರೆ.

ಇದನ್ನೂ ಓದಿ : ಬೆಳೆಗಳಿಗೆ ಜೀವಕಳೆ‌ ತಂದ ಮಳೆರಾಯ: ಬೆಳಗಾವಿ ಜಿಲ್ಲೆಯ ರೈತರ ಮೊಗದಲ್ಲಿ ಸಂತಸ, ಗೋಕಾಕ್ ಫಾಲ್ಸ್​ನಲ್ಲಿ ಜಲವೈಭವ ಶುರು