ETV Bharat / state

ಬಿಡದಿ ಟೌನ್‌ಶಿಪ್: ಒಂದಿಂಚು ಭೂಮಿ ಕೊಡಬೇಡಿ, ನಿಮ್ಮೊಂದಿಗೆ ನಾನಿದ್ದೇನೆ- ಹೆಚ್.ಡಿ.ಕುಮಾರಸ್ವಾಮಿ

ಬಿಡದಿ ಟೌನ್ ಶಿಪ್‌ಗೆ ರೈತರು ಹೆದರುವ ಅಗತ್ಯವಿಲ್ಲ‌. ನಿಮ್ಮೊಂದಿಗೆ ನಾನಿದ್ದೇನೆ ಎಂದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (ಸಂಗ್ರಹ ಚಿತ್ರ ETV Bharat)
author img

By ETV Bharat Karnataka Team

Published : November 6, 2025 at 10:07 PM IST

3 Min Read
Choose ETV Bharat

ಮಂಡ್ಯ: ಬಿಡದಿ ಟೌನ್‌ಶಿಪ್‌ ಹೆಸರಿನಲ್ಲಿ ಈ ಸರ್ಕಾರ ರೈತರ ಫಲವತ್ತಾದ ಭೂಮಿಯನ್ನು ಲೂಟಿ ಹೊಡೆಯಲು ಹೊರಟಿದೆ. ಯಾರೂ ಕೂಡ ಒಂದು ಇಂಚು ಭೂಮಿ ಕೊಡಬೇಡಿ. ನೀವು ಯಾರೂ ಹೆದರುವ ಅಗತ್ಯ ಇಲ್ಲ. ಜನರ ಜೊತೆ ನಾನಿದ್ದೇನೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅಭಯ ನೀಡಿದರು.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಬಿಡದಿ ಟೌನ್‌‌ಶಿಪ್‌ಗೆ ರೈತರು ವಿರೋಧ ಮಾಡುತ್ತಿದ್ದಾರೆ. ಕಳೆದ ಎರಡು ತಿಂಗಳಿನಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ರೈತರಿಗೆ ಮಿಡಿಯುವುದು ಬಿಟ್ಟು ಈ ಸರ್ಕಾರ ರಿಯಲ್ ಎಸ್ಟೇಟ್ ಕುಳಗಳಿಗೆ ಮಿಡಿಯುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.

ಬಿಡದಿ ಟೌನ್‌ಶಿಪ್ ಮಾಡುವುದು ಕುಮಾರಸ್ವಾಮಿ ಅವರ ಕಾಲದಲ್ಲಾಗಿರುವ ತೀರ್ಮಾನ ಎಂದು ನನ್ನ ಹೆಸರಿನಲ್ಲಿ ಆಶ್ರಯ ತೆಗೆದುಕೊಳ್ಳಬೇಡಿ. ನನ್ನ ಕಾಲದ ತೀರ್ಮಾನವೇ ಬೇರೆ, ಇವತ್ತಿನ ತೀರ್ಮಾನಗಳೇ ಬೇರೆ. ಅಂದು ಭೂಮಿ ಬೆಲೆ ದೊಡ್ಡ ಮಟ್ಟದಲ್ಲಿರಲಿಲ್ಲ. ಆದರೆ, ಇವತ್ತು ಭೂಮಿಗೆ ಭಾರೀ ಬೆಲೆ ಬಂದಿದೆ ಎಂದರು.

9 ಸಾವಿರ ಎಕರೆ ಭೂಮಿಯನ್ನು ಟೌನ್‌ಶಿಪ್‌ಗೆ ಸ್ವಾಧೀನ ಮಾಡಿಕೊಳ್ಳಲು ಹೊರಟಿದ್ದಾರೆ. ರೈತರು ಇದಕ್ಕೆ ವಿರೋಧ ಇದ್ದಾರೆ. ನಾನು ರೈತರ ಪರ ಇದ್ದೇನೆ ಎಂದು ಸಚಿವರು ಹೇಳಿದರು.

ಕನಕಪುರದಲ್ಲಿ ಒಣಭೂಮಿ ಇದ್ರೆ ಅಲ್ಲಿ ಟೌನ್‌ಶಿಪ್ ಮಾಡಲಿ: ಹಿಂದೆ ಕನಕಪುರದಲ್ಲಿ ಹಾಲಿನ ಡೇರಿ ಮಾಡುವಾಗ ರೈತರಿಗೆ ಎಷ್ಟು ದುಡ್ಡು ಕೊಟ್ಟಿರಿ? ನಿಮ್ಮ ಪಟಾಲಂಗೆ ಎಷ್ಟು ಪರಿಹಾರ ಕೊಟ್ಟಿರಿ? ಅಲ್ಲೆಲ್ಲೂ ಒಣ ಬೇಸಾಯದ ಭೂಮಿ ಇದೆ ಅಂತ ನಿಮ್ಮ ಅಧಿಕಾರಿಗಳೇ ಹೇಳುತ್ತಿದ್ದಾರೆ. ಆ ಭೂಮಿಯನ್ನೇ ವಶಕ್ಕೆ ತೆಗೆದುಕೊಂಡು ಟೌನ್‌ಶಿಪ್ ಮಾಡಬಹುದಲ್ಲವೇ? ರಾಜ್ಯದಲ್ಲಿ ಬೇರೆ ಬೇರೆ ಇಂತಹ ಒಣಭೂಮಿ ಬೇಕಾದಷ್ಟಿದೆ. ಅಲ್ಲೆಲ್ಲ ಮಾಡುವುದು ಬಿಟ್ಟು ಬಿಡದಿಯ ಮೇಲೆಯೇ ಯಾಕೆ ಬಿದ್ದಿದ್ದೀರಿ? ಎಂದು ಪ್ರಶ್ನಿಸಿದರು.

ನಿಮ್ಮ ಉದ್ದೇಶ ಬಿಡದಿಯ ಜನರನ್ನು ಉದ್ಧಾರ ಮಾಡುವುದಲ್ಲ, ನಿಮ್ಮನ್ನು ನೀವು ಉದ್ಧಾರ ಮಾಡಿಕೊಳ್ಳಲು ಈ ಯೋಜನೆ ರೂಪಿಸಿದ್ದೀರಿ. ಭೂಮಿ ಸ್ವಾಧೀನ ಮಾಡಿಕೊಂಡು ಪರಿಹಾರ ಕೊಡಲಿಕ್ಕೆ ನಿಮ್ಮಲ್ಲಿ ದುಡ್ಡಿಲ್ಲ. ಒಣ ಭೂಮಿ ಇರುವ ಕಡೆ ಟೌನ್‌‌ಶಿಪ್ ಮಾಡಿ. ಯಾರು ಬೇಡ ಅಂತಾರೆ. ಕೃಷಿಗೆ ಉತ್ತಮವಾದ ವಾತಾವರಣವಿರುವ ಕಡೆ ರೈತರನ್ನು ಒಕ್ಕಲೆಬ್ಬಿಸಬೇಡಿ ಎಂದರು.

ಕಬ್ಬಿನ ದರ ನಿಗದಿಗೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿರುವುದಕ್ಕೆ ಹೆಚ್‌ಡಿಕೆ ಕಳವಳ ವ್ಯಕ್ತಪಡಿಸಿ, ನಾನು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಇವತ್ತು ದರ ನಿಗದಿ ಕೇಳ್ತಿದ್ದಾರೆ ಅಷ್ಟೇ. ಇದ್ದಾಗ ಕಬ್ಬು ಮಾರಾಟ ಮಾಡಲು ಆಗದ ಪರಿಸ್ಥಿತಿ ಇತ್ತು. ನಾನೇ ಅಂದು ಹಳ್ಳಿಗಳಿಗೆ ಭೇಟಿ ಕೊಟ್ಟಾಗ ಕಬ್ಬು ಒಣಗಿದ್ದನ್ನು ಕಂಡೆ. ಆ ಸಂದರ್ಭದಲ್ಲಿ ₹25 ಸಾವಿರ ಕೋಟಿ ಸಾಲ ಮನ್ನಾ, ಕಬ್ಬು ಮಾರಾಟವಾಗದಿದ್ರೆ ₹25 ಸಾವಿರ ಸಹಾಯಧನ ಕೊಟ್ಟೆ. ಕಬ್ಬು ಬೆಳೆಗಾರರಿಗೆ ಒಟ್ಟು ₹250 ಕೋಟಿ ಕೊಟ್ಟೆ. ರೈತರನ್ನು ವಿಧಾನಸೌಧಕ್ಕೆ ಕರೆಸಿ ಮಾತುಕತೆ ನಡೆಸಿದ್ದೆ ಎಂದು ತಿಳಿಸಿದರು.

ಸ್ವತಂತ್ರ ಸರ್ಕಾರ ಇಲ್ಲದ ವೇಳೆಯೂ ರೈತರ ಉಳಿವಿಗಾಗಿ ಶ್ರಮಿಸಿದ್ದೇನೆ. 136 ಸೀಟಿನ ಸ್ವತಂತ್ರ ಸರ್ಕಾರ, ಇವರಿಗೇನಾಗಿದೆ ದರಿದ್ರ? ರೈತರನ್ನು 7 ದಿನದಿಂದ ರಸ್ತೆಯಲ್ಲಿ ಮಲಗಿಸಬೇಕಿತ್ತಾ? ರೈತರ ಬಗ್ಗೆ ಕಾಳಜಿ ಇದ್ದಿದ್ದರೆ ಸರ್ಕಾರ ಈ ರೀತಿ ಮಾಡುತ್ತಿರಲಿಲ್ಲ. ನಿನ್ನೆಯ ದಿನ ಆ ಭಾಗದಲ್ಲೇ ಸಿಎಂ ಪ್ರವಾಸ ಮಾಡಿದರೂ ಸ್ಥಳಕ್ಕೆ ಹೋಗಿ ರೈತರ ಕಷ್ಟ ಕೇಳಲಿಲ್ಲ. ಶಾಸಕ ಮೇಟಿ ಅವರ ಅಂತಿಮ ದರ್ಶನಕ್ಕೆ ಹೋದವರು ಅಲ್ಲೇ ಪಕ್ಕದಲ್ಲೇ ನಡೆಯುತ್ತಿದ್ದ ಪ್ರತಿಭಟನೆ ಜಾಗಕ್ಕೆ ಹೋಗಬಹುದಿತ್ತಲ್ವಾ? ಅಹಿಂದಾ ಹೆಸರಲ್ಲಿ ದೊಡ್ಡ ರ‌್ಯಾಲಿ ಮಾಡುವೆ ಎನ್ನುತ್ತಾರೆ. ಅದೆಲ್ಲಾ ಯಾವ ಪುರುಷಾರ್ಥಕ್ಕೆ? ಎಂದು ಪ್ರಶ್ನಿಸಿದರು. ರೈತರು ಬೆಲೆ ನಿಗದಿ ಕೇಳಿದರೆ ನಮ್ಮದಲ್ಲ ಕೇಂದ್ರ ಸರ್ಕಾರ ಹಣ ಕೊಡಬೇಕು ಎನ್ನುತ್ತಾರೆ. ಸಾಲ ಮನ್ನಾ ಮಾಡುವಾಗ ನಾನೇನು ಕೇಂದ್ರ ಸರ್ಕಾರದ ಬಳಿಗೆ ಹೋಗಿದ್ನಾ? ಎಲ್ಲದಕ್ಕೂ ರಾಜಕೀಯ ಬೆರೆಸುವ ಆರೋಪವನ್ನು ನಮ್ಮ‌ ಮೇಲೆ ಮಾಡ್ತಾರೆ. ಹಾಗಾಗಿ ನಾನು ಪ್ರತಿಭಟನಾ ಸ್ಥಳಕ್ಕೆ ಹೋಗಿಲ್ಲ. ಆದರೂ ನಾವು ರೈತರ ಪರವೇ ಇದ್ದೇವೆ. ಸರ್ಕಾರದ ನಿರ್ಧಾರ ನೋಡಿ ಮುಂದಿನ ತೀರ್ಮಾನ ಮಾಡುತ್ತೇವೆ. ರೈತರ ಬದುಕಿನ ಜೊತೆ ಕಾಂಗ್ರೆಸ್ ಸರ್ಕಾರ ಚೆಲ್ಲಾಟ ಆಡುತ್ತಿದೆ ಎಂದು ಹೆಚ್ಡಿಕೆ ಹರಿಹಾಯ್ದರು.

ಇದನ್ನೂ ಓದಿ: ಬಿಡದಿ ಟೌನ್​ಶಿಪ್ ನಿರ್ಮಾಣಕ್ಕೆ ಭೂಸ್ವಾಧೀನ ಕೈಬಿಡಲು ಸಾಧ್ಯವಿಲ್ಲ: ಡಿ.ಕೆ.ಶಿವಕುಮಾರ್