ETV Bharat / state

ಐಪಿಎಲ್ 2026 ಫೈನಲ್: ಸತತ ಎರಡನೇ ಬಾರಿಗೆ ಕಪ್ ಗೆದ್ದ RCB; ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮವೋ ಸಂಭ್ರಮ!

ಆರ್​ಸಿಬಿ ಸತತ ಎರಡನೇ ಬಾರಿಗೆ ಕಪ್ ಗೆದ್ದಿರುವುದರಿಂದಾಗಿ ರಾಜ್ಯಾದ್ಯಂತ ಅಭಿಮಾನಿಗಳು ಸಂಭ್ರಮಪಟ್ಟಿದ್ದಾರೆ.

RCB winning celebration
ಆರ್​ಸಿಬಿ ಅಭಿಮಾನಿಗಳು ಸಂಭ್ರಮಿಸುತ್ತಿರುವುದು (ETV Bharat)
author img

By ETV Bharat Karnataka Team

Published : June 1, 2026 at 8:19 AM IST

|

Updated : June 1, 2026 at 9:27 AM IST

4 Min Read
Choose ETV Bharat

ಬಳ್ಳಾರಿ/ಬೆಂಗಳೂರು/ಧಾರವಾಡ/ಹಾವೇರಿ/ ಶಿವಮೊಗ್ಗ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ, ಚಾಂಪಿಯನ್ ಪಟ್ಟ ಅಲಂಕರಿಸುತ್ತಿದ್ದಂತೆಯೇ ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಬೌಲರ್‌ಗಳು ಆರಂಭದಿಂದಲೇ ಮೇಲುಗೈ ಸಾಧಿಸಿ, ಗುಜರಾತ್ ತಂಡವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದರು. ಗುಜರಾತ್ ಟೈಟನ್ಸ್ 20 ಓವರ್‌ಗಳಲ್ಲಿ 155 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡಿತು. ಆರ್‌ಸಿಬಿ ಬೌಲರ್‌ಗಳ ಶಿಸ್ತುಬದ್ಧ ದಾಳಿಯಿಂದ ಗುಜರಾತ್ ಬ್ಯಾಟರ್‌ಗಳು ದೊಡ್ಡ ಮೊತ್ತ ಕಲೆಹಾಕಲು ವಿಫಲರಾದರು.

ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದ ಸುದ್ದಿ ಹೊರಬಿದ್ದ ಕೂಡಲೇ ಬಳ್ಳಾರಿ ನಗರದ ಪ್ರಮುಖ ವೃತ್ತಗಳು, ಗಡಿಗಿ ಚನ್ನಪ್ಪ ಸರ್ಕಲ್, ಮೋತಿ ಸರ್ಕಲ್, ಬೆಂಗಳೂರು ರಸ್ತೆ, ಮೋಕಾ ರಸ್ತೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅಭಿಮಾನಿಗಳು ರಸ್ತೆಗಿಳಿದು ಸಂಭ್ರಮಾಚರಣೆ ನಡೆಸಿದರು. ಪಟಾಕಿ ಸಿಡಿಸಿ, ತಂಡದ ಧ್ವಜಗಳನ್ನು ಹಿಡಿದು ಯುವಕರು ವಿಜಯೋತ್ಸವ ಆಚರಿಸಿದರು.

ಅಭಿಮಾನಿಗಳು ‘ಈ ಸಲ ಕಪ್ ನಮ್ಮದು’ ಎಂಬ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ಹಲವರು ಬೈಕ್ ರ‍್ಯಾಲಿ ನಡೆಸಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಕೆಲವೆಡೆ ಸಿಹಿ ಹಂಚಿ ಪರಸ್ಪರ ಶುಭಾಶಯ ಕೋರಿದರು. ವಿಶೇಷವಾಗಿ ಆರ್‌ಸಿಬಿಯ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಿ ಕೇಕ್ ಕತ್ತರಿಸಿ ವಿಜಯೋತ್ಸವ ಆಚರಿಸಿದರು. ಯುವಕರು ತಂಡದ ಜರ್ಸಿ ಧರಿಸಿ ಕುಣಿದು ಕುಪ್ಪಳಿಸಿದ ದೃಶ್ಯಗಳು ಎಲ್ಲೆಡೆ ಕಂಡುಬಂದವು.

ನಗರದ ಹಲವೆಡೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಸಂಭ್ರಮಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಯಿತು. ವಿಜಯೋತ್ಸವದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲೂ ಆರ್‌ಸಿಬಿ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂತು.

fans-across-the-state-are-celebrating-as-rcb-wins-the-cup-for-the-second-consecutive-time
ಆರ್​ಸಿಬಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು (ETV Bharat)

ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ತಂಡದ ಗೆಲುವು ಬಳ್ಳಾರಿ ಜಿಲ್ಲೆಯ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬದ ವಾತಾವರಣವನ್ನು ಸೃಷ್ಟಿಸಿದ್ದು, ರಾತ್ರಿ ತಡರಾತ್ರಿಯವರೆಗೂ ಸಂಭ್ರಮಾಚರಣೆ ಮುಂದುವರಿಯಿತು.

ಆರ್​​ಸಿಬಿ ಅಭಿಮಾನಿಗಳಿಗೆ ಬಿಸಿ ಮುಟ್ಟಿಸಿದ ಪೊಲೀಸರು (ಶಿವಮೊಗ್ಗ) : ರಾಯಲ್ ಚಾಲೆಂಜರ್ಸ್ ಬೆಂಗಳೂರು ಪುರುಷರ ಕ್ರಿಕೆಟ್ ತಂಡ ಐಪಿಎಲ್​ನ 19ನೇ ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್ ವಿರುದ್ದ ಗೆದ್ದು ಈ ಸಲನೂ ಕಪ್ ನಮ್ದೆ ಎಂದು ಬಿಗಿದೆ. ಆರ್​ಸಿಬಿ ಗೆಲುವು ಸಾಧಿಸುತ್ತಿದ್ದಂತೆಯೇ ಶಿವಮೊಗ್ಗ ನಗರದ ದುರ್ಗಿಗುಡಿ, ಟಿ. ಶೀನಪ್ಪ‌ ಶೆಟ್ಟಿ ವೃತ್ತದಲ್ಲಿ ಅಭಿಮಾನಿಗಳು ಆರ್​ಸಿಬಿ ವಿಜಯೋತ್ಸವನ್ನು ಸಂಭ್ರಮಿಸಿದರು. ಈ ವೇಳೆ ಆರ್​​ಸಿಬಿ ಅಭಿಮಾನಿಗಳಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ‌.

ದುರ್ಗಿಗುಡಿಯಲ್ಲಿ ಯುವಕರು ಪಟಾಕಿ ಹೊಡೆದು ಸಂಭ್ರ‌ಮಿಸುವಾಗ, ಏಕಾಏಕಿ ಯುವಕನೋರ್ವ ಜೋರಾಗಿ ಬೈಕ್​ನಲ್ಲಿ ಬಂದು ಸ್ಕಿಡ್ ಆಗಿ ಸಂಭ್ರಮಿಸುವವರ ಮೇಲೆಯೇ ಬಿದ್ದಿದ್ದಾನೆ. ಈ ವೇಳೆ ಯುವಕರು ಆತನ ಬೈಕ್ ಅನ್ನು ಮೇಲಕ್ಕೆ ಎತ್ತಿ, ಈ ರೀತಿ ಜೋರಾಗಿ ಬೈಕ್​ನಲ್ಲಿ ಬರಬಾರದು ಎಂದು ಸಲಹೆ ನೀಡಿದರು.

ಅತ್ತ ಮಲ್ಲಿಕಾರ್ಜುನ ಚಿತ್ರಮಂದಿರ ಮುಂಭಾಗ ಯುವಕರು ವಿರಾಟ್ ಕೊಹ್ಲಿ ಅವರ ಟೀ ಶರ್ಟ್ ಇಟ್ಟುಕೊಂಡು ಡ್ಯಾನ್ಸ್ ಮಾಡುತ್ತಿದ್ದರು. ಜೋರಾಗಿ ಪಟಾಕಿ ಸಿಡಿಸಿ ಸಂಭ್ರಮಿಸುವಾಗ ದೊಡ್ಡಪೇಟೆ ಪೊಲೀಸರು ಮಧ್ಯ ಪ್ರವೇಶ ಮಾಡಿದರು.‌ ಈ ವೇಳೆಗಾಗಲೇ ಆರ್​​ಸಿಬಿ ಅಭಿಮಾನಿಗಳು ಟಿ. ಶೀನಪ್ಪ‌ ವೃತ್ತದಲ್ಲಿ ಜಮಾವಣೆಗೊಂಡಿದ್ದರು. ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ನಂತರ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕಾರ್ಯಪ್ಪ ಆಗಮಿಸಿದರು. ಜನರಿಗೆ ಮನೆಗೆ ಹೋಗುವಂತೆ ಮನವಿ ಮಾಡಿಕೊಂಡರು. ಆದರೂ, ಅಭಿಮಾನಿಗಳು ಕದಲದೆ ಅಲ್ಲಿಯೇ ನಿಂತಿದ್ದರು.

ಬೆಳಗಾವಿಯಲ್ಲಿ ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮ : ಕಿಂಗ್ ಕೊಹ್ಲಿ ಸಿಕ್ಸ್ ಹೊಡೆಯುವ ಮೂಲಕ ಆರ್ ಸಿಬಿ ತಂಡವು ಐಪಿಎಲ್​ನಲ್ಲಿ ಎರಡನೇ ಬಾರಿ ಚಾಂಪಿಯನ್ ಆಗುತ್ತಿದ್ದಂತೆ, ಬೆಳಗಾವಿಯಲ್ಲಿ ಅಭಿಮಾನಿಗಳು ಅದ್ಧೂರಿ ವಿಜಯೋತ್ಸವ ಆಚರಿಸಿದರು. ಅದರಲ್ಲೂ ಸತತ ಎರಡು ಬಾರಿ ಕಪ್ ಗೆದ್ದಿದ್ದಕ್ಕೆ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

ಬೆಳಗಾವಿ ನಗರದಲ್ಲಿ ಸಾರ್ವಜನಿಕ ಸಂಭ್ರಮಾಚರಣೆಗೆ ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಅವರು ನಿರ್ಬಂಧ ವಿಧಿಸಿದ್ದರು. ಆದರೂ, ಆರ್​​ಸಿಬಿ ಅಭಿಮಾನಿಗಳು ನಿಯಮ ಮೀರಿ ವಿಜಯೋತ್ಸವ ಮಾಡಿದರು. ನಗರದ ಹೃದಯಭಾಗ ರಾಣಿ ಚನ್ನಮ್ಮ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಆರ್​ಸಿಬಿಯನ್ಸ್ ಗೆಲುವನ್ನು ಸಂಭ್ರಮಿಸಿದರು. ಅದೇ ರೀತಿ ಆರ್​​ಪಿಡಿ ವೃತ್ತ ಸೇರಿ ನಗರದ ಹಲವು ಕಡೆಯೂ ಇದೇ ರೀತಿ ವಾತಾವರಣ ಕಂಡುಬಂದಿತ್ತು.

ಕೈಯಲ್ಲಿ ಕನ್ನಡದ ಬಾವುಟ, ಆರ್​ಸಿಬಿ ಧ್ವಜ ಹಿಡಿದು ಕುಣಿದು ಕುಪ್ಪಳಿಸಿದರು. ಆಕಾಶದೆತ್ತೆರಕ್ಕೆ ಪಟಾಕಿ ಸಿಡಿಸಿ, ಸಂತಸ ಪಟ್ಟರು. ಆರ್​​ಸಿಬಿ ಗೆಲ್ಲಿಸಿದ ವಿರಾಟ್ ಕೊಹ್ಲಿ ಪರ ಘೋಷಣೆಗಳು ಮೊಳಗಿದವು. ಈ ವೇಳೆ ಒಬ್ಬ ಅಭಿಮಾನಿ ಕರ್ನಾಟಕ ರತ್ನ ದಿ. ಡಾ. ಪುನೀತ್ ರಾಜ್​ಕುಮಾರ್ ಅವರ ಭಾವಚಿತ್ರ ಹಿಡಿದು ಸಂಭ್ರಮಿಸಿದ್ದು ಗಮನ ಸೆಳೆಯಿತು.

ಚನ್ನಮ್ಮ ವೃತ್ತಕ್ಕೆ ಆಗಮಿಸಿದ ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿ ಅವಲೋಕಿಸಿದರು. ಒಂದಷ್ಟು ಸಮಯ ವಿಜಯೋತ್ಸವಕ್ಕೆ ಅನುವು ಮಾಡಿಕೊಟ್ಟರು. ನಂತರ ಮಧ್ಯರಾತ್ರಿ 12.30 ಆದರೂ ಜನರ ಸಂಭ್ರಮಾಚರಣೆ ಮುಂದುವರಿದಿತ್ತು. ಹೀಗಾಗಿ, ಪೊಲೀಸರು ಎಲ್ಲರನ್ನೂ ಅಲ್ಲಿಂದ ತೆರಳುವಂತೆ ಹೇಳಿದರು.

ಜಿಲ್ಲೆಯ ವಿವಿಧ ನಗರ, ಪಟ್ಟಣ, ಗ್ರಾಮಗಳಲ್ಲೂ ಭರ್ಜರಿ ವಿಜಯೋತ್ಸವ ಆಚರಿಸಲಾಯಿತು. ವಿವಿದೆಡೆ ಎಲ್ಇಡಿ ಪರದೆಯಲ್ಲಿ ಅಭಿಮಾನಿಗಳು ಪಂದ್ಯವನ್ನು ಕಣ್ತುಂಬಿಕೊಂಡರು.

POLICE
ಪೊಲೀಸರು ಗಸ್ತು ತಿರುಗುತ್ತಿರುವುದು (ETV Bharat)

ಹಾವೇರಿಯಲ್ಲಿ ಕುಣಿದು ಕುಪ್ಪಳಿಸಿದ ಆರ್​ಸಿಬಿ ಅಭಿಮಾನಿಗಳು : ಆರ್​ಸಿಬಿ ತಂಡವು ಐಪಿಎಲ್​ನಲ್ಲಿ ಎರಡನೇ ಬಾರಿ ಚಾಂಪಿಯನ್ ಆಗುತ್ತಿದ್ದಂತೆ ಹಾವೇರಿಯಲ್ಲಿ ಅಭಿಮಾನಿಗಳು ಡಿಜೆ ಸಾಂಗ್​ಗೆ ಕುಣಿದು ಕುಪ್ಪಳಿಸಿದರು. ಮಕ್ಕಳು, ಯುವಕರು, ವಯಸ್ಕರು ಎಲ್​ಇಡಿ ಪರದೆಯಲ್ಲಿ ಪಂದ್ಯವನ್ನು ವೀಕ್ಷಿಸಿ ಸಂಭ್ರಮಿಸಿದರು. ಈ ವೇಳೆ ಅಭಿಮಾನಿಯೊಬ್ಬರು ಆರ್​ಸಿಬಿ ಧ್ವಜವನ್ನು ಕೈಯಲ್ಲಿ ಹಿಡಿದು ಕುಣಿದರು. ನಗರದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಧಾರವಾಡದಲ್ಲಿ ಐಪಿಎಲ್ ಕಪ್ ಪ್ರತಿಕೃತಿಯೊಂದಿಗೆ ಸಂಭ್ರಮಿಸಿದ ಫ್ಯಾನ್ಸ್ : ಸತತ ಎರಡನೇ ಬಾರಿಗೆ ಆರ್​ಸಿಬಿ ಐಪಿಎಲ್ ಕಪ್ ಗೆಲ್ಲುತ್ತಿದ್ದಂತೆ ನಗರದಲ್ಲಿ ಅಭಿಮಾನಿಗಳು ಐಪಿಎಲ್ ಕಪ್​ನ ಪ್ರತಿಕೃತಿಯೊಂದಿಗೆ ಸಂಭ್ರಮಿಸಿದರು. ಕೆಲ ಅಭಿಮಾನಿಗಳು ಎಲ್​ಇಡಿ ಪರದೆಯಲ್ಲಿನ ದೃಶ್ಯವನ್ನು ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದರು.

ಬೆಂಗಳೂರಿನಲ್ಲಿಯೂ ಆರ್​ಸಿಬಿ ಫ್ಯಾನ್ಸ್​ಗಳಿಗೆ ಇನ್ನಿಲ್ಲದ ಸಂತಸ : ಆರ್​ಸಿಬಿ ಸತತ ಎರಡನೇ ಬಾರಿಗೆ ಐಪಿಎಲ್ ಕಪ್ ಗೆದ್ದಿರುವುದರಿಂದಾಗಿ ಫ್ಯಾನ್ಸ್​ಗಳು ಸಂತಸ ವ್ಯಕ್ತಪಡಿಸಿದರು. ಆಟೋದಲ್ಲಿ ಮನೆಗೆ ತೆರಳುತ್ತಿದ್ದ ಮಕ್ಕಳು 'ಆರ್​ಸಿಬಿ, ಆರ್​ಸಿಬಿ' ಎಂದು ಕೂಗುತ್ತಾ ಸಂಭ್ರಮಿಸಿದರು.

ಹುಬ್ಬಳ್ಳಿಯಲ್ಲಿ ತಡರಾತ್ರಿ ಸಂಭ್ರಮ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಆರ್​ಸಿಬಿ ಅಭಿಮಾನಿಗಳು ತಡರಾತ್ರಿ ವಿಜಯೋತ್ಸವ ಮಾಡಿದರು. ನಗರದ ಚನ್ನಮ್ಮ ವೃತ್ತದಲ್ಲಿ ಜಮಾವಣೆಗೊಂಡ ಸಾವಿರಾರು ಕ್ರೀಡಾಭಿಮಾನಿಗಳು ಪಟಾಕಿ‌ ಸಿಡಿಸಿ, ಸಿಹಿ‌ಹಂಚಿ ಸಂಭ್ರಮಿಸಿದರು. ನಗರದ ಬೀದಿ ಬೀದಿಗಳಲ್ಲೂ ಸಂಭ್ರಮಾಚರಣೆಗಳು ಕಂಡುಬಂದವು. ಬಡಾವಣೆಗಳಲ್ಲಿ ಅಭಿಮಾನಿಗಳು ಪಟಾಕಿ‌ ಸಿಡಿಸಿ ಸಂಭ್ರಮಿಸಿದರು.

ಇದನ್ನೂ ಓದಿ : ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ: ಅಭಿನಂದನೆ ಸಲ್ಲಿಸಿದ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ

Last Updated : June 1, 2026 at 9:27 AM IST