ETV Bharat / state

'ಗೃಹಲಕ್ಷ್ಮಿ'ಗೆ 3 ವರ್ಷ: ಗುಲಾಬಿ ಬಣ್ಣದಲ್ಲಿ ಕಂಗೊಳಿಸಿದ ವಿಧಾನಸೌಧ, ಹಂಪಿ, ಮೈಸೂರು ಅರಮನೆ ಸೇರಿ ಪ್ರಸಿದ್ಧ ಸ್ಮಾರಕಗಳು

ಗೃಹಲಕ್ಷ್ಮೀ ಯೋಜನೆಗೆ ಮೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ವಿಶೇಷ ವಿದ್ಯುತ್ ದೀಪಾಲಂಕಾರವನ್ನು ಆಯೋಜಿಸಿದೆ.

famous-monuments-including-vidhana-soudha-decorated-in-pink-on-the-occasion-of-third-anniversary-of-the-gruhalakshmi-scheme
ಗುಲಾಬಿ ಬಣ್ಣದಲ್ಲಿ ವಿಧಾನಸೌಧ ಹಾಗೂ ಹಂಪಿಯ ಕಲ್ಲಿನ ರಥ (ETV Bharat)
author img

By ETV Bharat Karnataka Team

Published : August 31, 2026 at 7:55 AM IST

1 Min Read
Choose ETV Bharat

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ 'ಗೃಹಲಕ್ಷ್ಮಿ'ಗೆ ಮೂರು ವರ್ಷಗಳ ಸಂಭ್ರಮ ಪ್ರಯುಕ್ತ ರಾಜ್ಯದ ಪ್ರಸಿದ್ಧ ಸ್ಮಾರಕಗಳು ಭಾನುವಾರ ರಾತ್ರಿ ಗುಲಾಬಿ ಬಣ್ಣದಲ್ಲಿ ಆಕರ್ಷಕವಾಗಿ ಕಂಗೊಳಿಸಿದವು.

ಗೃಹಲಕ್ಷ್ಮಿ ಯೋಜನೆಗೆ ಮೂರು ವರ್ಷ ಪೂರ್ಣಗೊಂಡ ಸಂಭ್ರಮದ ಸವಿನೆನಪಿಗಾಗಿ ಬೆಂಗಳೂರಿನ ವಿಧಾನಸೌಧ, ಬೆಳಗಾವಿಯ ಸುವರ್ಣಸೌಧ, ಮೈಸೂರು ಅರಮನೆ, ಚಿತ್ರದುರ್ಗದ ಕಲ್ಲಿನಕೋಟೆ, ಹಂಪಿಯ ಕಲ್ಲಿನರಥ, ಮಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಹಾಗೂ ಬೆಳಗಾವಿ ಕಿತ್ತೂರು ಚೆನ್ನಮ್ಮ ವೃತ್ತಗಳು ಸಂಜೆ 6ರಿಂದ ರಾತ್ರಿ 10ರವರೆಗೆ ಗುಲಾಬಿ ಬಣ್ಣದ ದೀಪಾಲಂಕಾರದ ಬೆಳಕಿನಲ್ಲಿ ಜನರನ್ನು ಆಕರ್ಷಿಸಿದವು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ವಿಶೇಷವಾದ ಈ ವಿದ್ಯುತ್ ದೀಪಾಲಂಕಾರವನ್ನು ಆಯೋಜಿಸಿದೆ ಮುಖ್ಯಮಂತ್ರಿಗಳ ಸಚಿವಾಲಯ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಗೃಹಲಕ್ಷ್ಮೀ ಯೋಜನೆಯನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ 2023ರ ಆಗಸ್ಟ್ 30ರಂದು ಜಾರಿಗೆ ತಂದಿತ್ತು.

ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2,000 ರೂ. ನೀಡುವ ಮೂಲಕ ಮಹಿಳೆಯರು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಗೃಹಲಕ್ಷ್ಮಿ ಯೋಜನೆ ನೆರವಾಗಿದೆ. ಗೃಹಲಕ್ಷ್ಮೀ ಯೋಜನೆ ಮೂರು ವರ್ಷಗಳನ್ನು ಪೂರೈಸುತ್ತಿರುವ ಈ ಸುಸಂದರ್ಭದಲ್ಲಿ ಮಹಿಳೆಯರ ಹೆಮ್ಮೆಯ ಸಂಕೇತವೆಂದು ಗುರುತಿಸಿರುವ ಗುಲಾಬಿ(PINK) ಬಣ್ಣದ ಬೆಳಕಿನ ವ್ಯವಸ್ಥೆಯನ್ನು ಮಾಡಲಾಗಿದೆ.

famous-monuments-including-vidhana-soudha-decorated-in-pink-on-the-occasion-of-third-anniversary-of-the-gruhalakshmi-scheme
ಗುಲಾಬಿ ಬಣ್ಣದಲ್ಲಿ ಹಂಪಿಯ ಕಲ್ಲಿನ ರಥ (ETV Bharat)

ಇದುವರೆಗೂ ಈ ಯೋಜನೆ ಅಡಿ 1.20 ಕೋಟಿಗೂ ಹೆಚ್ಚು ಫಲಾನುಭವಿಗಳ ಖಾತೆಗೆ 76,500 ಕೋಟಿ ರೂಪಾಯಿಗೂ ಹೆಚ್ಚು ಹಣ ಪಾವತಿಸಲಾಗಿದೆ ಮುಖ್ಯಮಂತ್ರಿಗಳ ಸಚಿವಾಲಯವು ಗೃಹಲಕ್ಷ್ಮಿ ಯೋಜನೆ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಿದೆ.

ಮಹಿಳೆಯರ ಹೆಮ್ಮೆಯ ಪ್ರತೀಕವಾಗಿ ಪರಿಗಣಿಸಲಾಗುವ ಗುಲಾಬಿ ಬಣ್ಣದ ಬೆಳಕು, ಗೃಹಲಕ್ಷ್ಮೀ ಯೋಜನೆಯ ಆಶಯವನ್ನು ಬಿಂಬಿಸುವಂತಿತ್ತು. ರಾತ್ರಿ ವೇಳೆ ಬೆಳಕಿನಿಂದ ಸಿಂಗಾರಗೊಂಡ ಸ್ಮಾರಕಗಳು ಸಾರ್ವಜನಿಕರನ್ನು ಆಕರ್ಷಿಸಿದವು.

famous-monuments-including-vidhana-soudha-decorated-in-pink-on-the-occasion-of-third-anniversary-of-the-gruhalakshmi-scheme
ಗುಲಾಬಿ ಬಣ್ಣದಲ್ಲಿ ಸ್ಮಾರಕ (ETV Bharat)

ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಆವರಣದಲ್ಲಿರುವ ಐತಿಹಾಸಿಕ ಕಲ್ಲಿನ ರಥವೂ ಗುಲಾಬಿ ಬಣ್ಣದ ದೀಪದ ಬೆಳಕಿನಲ್ಲಿ ಕಂಗೊಳಿಸಿತು. ಹಂಪಿಗೆ ಭೇಟಿ ನೀಡಿದ್ದ ಪ್ರವಾಸಿಗರು, ಸಾರ್ವಜನಿಕರು ಹಾಗೂ ಸ್ಥಳೀಯರ ಗಮನ ಸೆಳೆಯಿತು. ಐತಿಹಾಸಿಕ ಸ್ಮಾರಕದ ಮೇಲೆ ಬಿದ್ದ ಗುಲಾಬಿ ಬೆಳಕು ಕಲ್ಲಿನ ರಥದ ವಾಸ್ತುಶಿಲ್ಪದ ಸೊಬಗನ್ನು ಮತ್ತಷ್ಟು ಹೆಚ್ಚಿಸಿತು.

famous-monuments-including-vidhana-soudha-decorated-in-pink-on-the-occasion-of-third-anniversary-of-the-gruhalakshmi-scheme
ಬೆಳಗಾವಿಯ ಸುವರ್ಣಸೌಧ (ETV Bharat)

ಇದನ್ನೂ ಓದಿ: ಬೆಂಗಳೂರಿನ ಪ್ರಮುಖ ಫ್ಲೈಓವರ್‌ಗಳಲ್ಲಿ ಕೆಲ ವಾಹನಗಳ ಸಂಚಾರ ಸಂಪೂರ್ಣ ನಿಷೇಧ