ETV Bharat / state

ದಾವಣಗೆರೆ ಮಾರುಕಟ್ಟೆಗೆ ಶೇಂಗಾ ಆವಕ ಕುಸಿತ: ಬಡವರ ಬಾದಾಮಿಗೆ ಬಂಪರ್‌ ಬೆಲೆ! ಎಣ್ಣೆ ಗಾಣದವರಿಗೂ ತಟ್ಟಿದ ಬೆಲೆ ಏರಿಕೆ ಬಿಸಿ

ದಾವಣಗೆರೆ ಮಾರುಕಟ್ಟೆಗೆ ಆವಕ ಕಡಿಮೆ ಇರುವುದರಿಂದ ಶೇಂಗಾಕ್ಕೆ ಬಂಪರ್‌ ಬೆಲೆ ಇದೆ ಎಂದು ಹೇಳುತ್ತಾರೆ. ಆದರೆ, ಇದು ನಮಗೆ ಬಂಪರ್ ಅಲ್ವೇ ಅಲ್ಲ ಎನ್ನುತ್ತಾರೆ ರೈತ ಮುಖಂಡ ಗುಮ್ಮನೂರು ಬಸವರಾಜ್.

GROUNDNUT CROP
ಶೇಂಗಾ ಬೀಜ (ETV Bharat)
author img

By ETV Bharat Karnataka Team

Published : February 19, 2026 at 2:40 PM IST

|

Updated : February 19, 2026 at 2:58 PM IST

4 Min Read
Choose ETV Bharat

ವಿಶೇಷ ವರದಿ - ನೂರುಲ್ಲಾ ಡಿ

ದಾವಣಗೆರೆ: ಹೃದಯದ ಆರೋಗ್ಯವನ್ನು ಕಾಪಾಡುವ ಬಡವರ ಬಾದಾಮಿ ಶೇಂಗಾ ಬೀಜಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ದುಪ್ಪಟ್ಟಾಗಿದೆ. ದರದಲ್ಲಿ ದಿಢೀರ್ ಏರಿಕೆ ಕಂಡಿರುವುದು ಗ್ರಾಹಕರ ಜೇಬು ಸುಡುತ್ತಿದೆ. ಗೃಹಿಣಿಯರ ಅಡುಗೆ ಮನೆಯಲ್ಲಿ ಅತ್ಯವಶ್ಯಕವಾಗಿ ಬೇಕಾಗಿರುವ ಶೇಂಗಾ ಬೀಜ ಕೊಳ್ಳಲು ಹಿಂದೇಟಾಕುವಂತಾಗಿದೆ. ಮಾರುಕಟ್ಟೆಗಳಲ್ಲಿ ಶೇಂಗಾದ ಅಭಾವ, ರೈತರು ಶೇಂಗಾ ಬಿಟ್ಟು ರಾಗಿ ಬೆಳೆಯುತ್ತಿರುವುದು ದರ ಗಗನಕ್ಕೇರಲು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಪರಿಣಾಮ ಶೇಂಗಾ ಎಣ್ಣೆಯ ದರದಲ್ಲೂ ಹೆಚ್ಚಳವಾಗಿದೆ.

ಕೆ.ಜಿ ಶೇಂಗಾ ಬೀಜಕ್ಕೆ 180-200 ರೂ. ದರ: ಶೇಂಗಾ ಬೀಜ ಸಗಟು ಹಾಗೂ ಚಿಲ್ಲರೆ ಮಾರಾಟ ದರ ದಿಢೀರ್ ಏರಿಕೆಯಾಗಿದೆ. ಕೆ.ಜಿಗೆ 140 ರೂ. ಇದ್ದ ಸಗಟು ದರ, 180 ರೂ.ಗೆ ಏರಿಕೆ ಕಂಡಿದೆ. ಚಿಲ್ಲರೆ ಮಾರಾಟ ದರ 200 ರೂ. ತಲುಪಿದೆ. ರಾಜ್ಯದಲ್ಲಿ ಶೇಂಗಾ ಬೆಳೆಯುವ ಜಿಲ್ಲೆಗಳಲ್ಲಿ ಸಕಾಲಕ್ಕೆ ಮಳೆ ಆಗದಿರುವುದು ಹಾಗೂ ಬೆಳೆಗೆ ಅಗತ್ಯ ಇಲ್ಲದ ಸಂದರ್ಭದಲ್ಲಿ ವಿಪರೀತ ಮಳೆ ಸುರಿದಿದ್ದರಿಂದ ಶೇ. 50ರಷ್ಟು ಶೇಂಗಾ ಬೆಳೆ ನಷ್ಟವಾಗಿದೆ. ರಾಜ್ಯದಲ್ಲೇ ಅತಿ ಹೆಚ್ಚು ಶೇಂಗಾ ಬೆಳೆಯುವ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಜಗಳೂರು ಮಾರುಕಟ್ಟೆಯಲ್ಲಿ ಕಳೆದ ವರ್ಷ ಈ ವೇಳೆಗೆ 95,000 ಕ್ವಿಂಟಾಲ್ ಶೇಂಗಾ ಮಾರುಕಟ್ಟೆಗೆ ಬಂದಿತ್ತು. ಈ ಬಾರಿ 51 ಸಾವಿರ ಕ್ವಿಂಟಲ್ ಮಾತ್ರ ಶೇಂಗಾ ಮಾರುಕಟ್ಟೆಗೆ‌ ಬಂದಿದೆ. ಕೆಲ ದಿನಗಳ ಹಿಂದೆ ಶೇಂಗಾ ಕಟಾವು ಆರಂಭವಾದಾಗ ದೊಡ್ಡ ಗಾತ್ರದ ಒಂದು ಕೆ.ಜಿ ಶೇಂಗಾ ಬೀಜ ಸಗಟು ದರ 100ರಿಂದ 120 ರೂ. ಇತ್ತು. ವಾರದ ಹಿಂದೆ 130 ರೂ. ಇದೀಗ ಏಕಾಏಕಿ 180-200 ರೂಪಾಯಿಗೆ ತಲುಪಿದೆ. ಚಳ್ಳಕೆರೆ ಮಾರುಕಟ್ಟೆಗೆ 100 ಕ್ವಿಂಟಾಲ್ ಗಿಂತ ಕಡಿಮೆ ಶೇಂಗಾ ಆವಕವಾಗಿದೆ.

ಕಟ್ಟಿಗೆ ಎಣ್ಣೆ ಗಾಣದಲ್ಲಿ ಶೇಂಗಾ ಎಣ್ಣೆ ದರವೂ ಏರಿಕೆ: ಶೇಂಗಾ ಕಾಳಿನ ದರ ಏರಿಕೆ ಆಗುತ್ತಿದ್ದಂತೆ ಎಣ್ಣೆ ಗಾಣದಲ್ಲಿ ತೆಗೆಯುವ ಎಣ್ಣೆ ದರ ಕೂಡ ಗಗನಕ್ಕೇರಿಕೆಯಾಗಿದೆ. 10 ದಿನಗಳ ಹಿಂದೆ 290-300 ರೂಪಾಯಿ ಇದ್ದ ಬೆಲೆ ಲೀಟರ್‌ಗೆ 360 ರೂ‌. ಏರಿಕೆ ಕಂಡಿದೆ. ಗಾಣಗಳಿಗೂ ಶೇಂಗಾ ಪೂರೈಕೆ ತಗ್ಗಿರುವುದರಿಂದ ದರ ಹೆಚ್ಚಾಗುತ್ತಿದೆ. ಇದಲ್ಲದೆ ಬಿತ್ತನೆ ಪ್ರದೇಶ, ಇಳುವರಿ ಕುಸಿತ ಕಂಡಿದ್ದರಿಂದ ಇಷ್ಟೆಲ್ಲ ಸಮಸ್ಯೆ ಆಗಲು ಪ್ರಮುಖ ಕಾರಣ ಎಂದು ರೈತರು ಹೇಳಿಕೊಳ್ಳುತ್ತಿದ್ದಾರೆ.

2018 ಹಾಗೂ 2019ರಲ್ಲಿ ರಾಜ್ಯಾದ್ಯಂತ 5.41 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆಯಲಾಗಿತ್ತು. 2025ರಲ್ಲಿ 3.26 ಲಕ್ಷ ಹೆಕ್ಟೇರ್​ನಲ್ಲಿ ಶೇಂಗಾ ಬಿತ್ತನೆಯಾಗಿದ್ದು, ಬಿತ್ತನೆ ಪ್ರದೇಶದಲ್ಲಿ 2.20 ಲಕ್ಷ ಹೆಕ್ಟೇರ್ ಕುಸಿತವಾಗಿದೆ. ಮಳೆ ಕಣ್ಣಾಮುಚ್ಚಾಲೆಯಿಂದಾಗಿ ಶೇ.45ರಷ್ಟು ಇಳುವರಿ ಕುಸಿತ ‌ಕಂಡಿದೆ. ಈ ಹಿಂದೆ ಶೇಂಗಾ ಬಿತ್ತನೆ ವೇಳೆ ಸರ್ಕಾರವೇ ಕ್ವಿಂಟಾಲ್ ಬಿತ್ತನೆ ಬೀಜಕ್ಕೆ 10,200 ರೂ. ದರ ನಿಗದಿ ಮಾಡಿತ್ತು.

Fall In Supply Of Groundnuts To Davanagere Market
ಶೇಂಗಾ ಬೀಜ (ETV Bharat)

"ಈ ಬಾರಿ ಇಳುವರಿ ಕುಸಿತವಾದ್ದರಿಂದ ಚಳ್ಳಕೆರೆಯ ಎಣ್ಣೆ ಉತ್ಪಾದನೆ ಕಾರ್ಖಾನೆಯವರು ಗುಜರಾತಿನಿಂದ ಸಾವಿರಾರು ಟನ್ ಶೇಂಗಾ ತರಿಸಿದ್ದರು. ಸಾಗಣೆ ವೆಚ್ಚ ಹೆಚ್ಚಾಗುವ ಕಾರಣ ಗುಜರಾತ್ ಶೇಂಗಾ ಬರುವುದು ನಿಂತಿದೆ. ಸ್ಥಳೀಯವಾಗಿಯೂ ರೈತರ ಬಳಿ ಶೇಂಗಾ ಇಲ್ಲ. ಕೆಲ ದಿನಗಳ ಹಿಂದೆ ಹಿರಿಯೂರು ಮಾರುಕಟ್ಟೆಯಲ್ಲಿ 200 ಕ್ವಿಂಟಾಲ್ ಶೇಂಗಾ ಆವಕವಾಗಿದೆ. ಮುಂದಿನ ವಾರದಲ್ಲಿ ಆಂಧ್ರಪ್ರದೇಶದ ನೀರಾವರಿ ಪ್ರದೇಶದಲ್ಲಿ ಬೆಳೆದ ಶೇಂಗಾ ರಾಜ್ಯದ ಮಾರುಕಟ್ಟೆ ಪ್ರವೇಶಿಸಲಿದ್ದು, ಅಲ್ಲಿಯವರೆಗೆ ಬೆಲೆ ಏರಿಕೆ ಹೀಗೆ ಮುಂದುವರಿಯಲಿದೆ" ಎನ್ನುತ್ತಾರೆ ಚಳ್ಳಕೆರೆ ರೈತ ಲೋಕೆಶ್.

ಇದು ನಮಗೆ ಬಂಪರ್ ಅಲ್ವೇ ಅಲ್ಲ! ರೈತ ಮುಖಂಡ ಗುಮ್ಮನೂರು ಬಸವರಾಜ್ ಈಟಿವಿ ಭಾರತದೊಂದಿಗೆ ಮಾತನಾಡಿ "ರೈತರು ಬೆಳೆದ ಶೇಂಗಾ ಒಳ್ಳೆಯ ಇಳುವರಿ ಇದ್ದು, ದರ ಕೂಡ ಹೆಚ್ಚಿದೆ ಎಂದು ಮಾರುಕಟ್ಟೆಯಲ್ಲಿ ಅವರಿವರು ಹೇಳುತ್ತಿದ್ದಾರೆ. ಆದರೆ, ಇದು ನಮಗೆ ಬಂಪರ್ ಅಲ್ವೇ ಅಲ್ಲ. ಕಾರಣ ನಾವು ಮಳೆಗಾಲದಲ್ಲಿ ಶೇಂಗಾ ಬಿತ್ತಿದರೆ ಎಕರೆಗೆ 15-16 ಕ್ವಿಂಟಲ್​ ಬರುತ್ತದೆ. ಅದೇ ಬೇಸಿಗೆಯಲ್ಲಿ ಬಿತ್ತಿದರೆ ಎಕರೆಗೆ 5-6 ಕ್ವಿಂಟಲ್ ಬರುತ್ತದೆ. ಅದಕ್ಕೂ ಇದಕ್ಕೂ ಹೋಲಿಸಿದರೆ ಇಳುವರಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಕಡಿಮೆ ಆಗಿರುತ್ತದೆ. ಹಾಗಾಗಿ ಈಗ ದರ ಏರಿಕೆ ಆಗಿರುವುದು ಸಾಲದು. ಒಂದು ಕ್ವಿಂಟಲ್ ಶೇಂಗಾಗೆ 25 ಸಾವಿರ ದರ ಸಿಗಬೇಕು. ಆಗಾ ಮಾತ್ರ ರೈತರಿಗೆ ಅನುಕೂಲವಾಗಬಹುದು" ಎಂದರು.

Fall In Supply Of Groundnuts To Davanagere Market
ಶೇಂಗಾ ಬೀಜ (ETV Bharat)

ಶೇಂಗಾ ಬಿಟ್ಟು ರಾಗಿ ಬೆಳೆಗೆ ಒತ್ತು: ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರಸ್ತಾಪಿಸಿದ ಬಸವರಾಜ್, "ದುಬಾರಿ ಬೀಜ, ದುಬಾರಿ ಗೊಬ್ಬರ, ದುಬಾರಿ ಔಷಧಿ, ಕಟಾವು, ಕೂಲಿ ಸೇರಿದಂತೆ ಸಾಕಷ್ಟು ಖರ್ಚು ಮಾಡಬೇಕು. ಎಲ್ಲೆಡೆ ಈ ಬಾರಿ ಕಡಿಮೆ ಶೇಂಗಾ ಬೆಳೆಯಲಾಗಿದೆ. ಚಿತ್ರದುರ್ಗ ಮಾರುಕಟ್ಟೆಯಲ್ಲಿ ಉತ್ತಮ ಶೇಂಗಾ ಕ್ವಿಂಟಲ್​ಗೆ 10-12 ಸಾವಿರ ತನಕ ‌ಇದೆ. ಸ್ವಲ್ಪ ಗುಣಮಟ್ಟ ಕಡಿಮೆ ಇರುವ ಶೇಂಗಾ 6-8 ಸಾವಿರ ದರ ಇದೆ. ಜಗಳೂರು ತಾಲೂಕಿನಲ್ಲಿ ಶೇಂಗಾವನ್ನು ಅಧಿಕವಾಗಿ ಬೆಳೆಯಲಾಗುತ್ತಿತ್ತು. ಇತ್ತೀಚೆಗೆ ರಾಗಿ ಬೆಳೆ ಕಡೆ ಮುಖ ಮಾಡಿದ್ದಾರೆ. ರಾಗಿಗೆ 3,000 ಸಾವಿರದಿಂದ 3,500 ದರ ಇರಲಿದೆ. ಅದಕ್ಕೆ ರಾಗಿ ಹೆಚ್ಚಾಗಿ ಬೆಳೆಯುತ್ತಿದ್ದಾರೆ" ಎಂದರು.

ಮಾರುಕಟ್ಟೆಯಲ್ಲಿ ಹೆಚ್ಚಿನ‌ ಬೆಲೆಗೆ ಮಾರಾಟ: ಈ ಬಾರಿ ಶೇಂಗಾ ಪ್ರಮಾಣ ಕಡಿಮೆ ಆಗಿದೆ. ನೂರರಲ್ಲಿ ಶೇ. 40 ರಿಂದ 50ರಷ್ಟು ಶೇಂಗಾ ಹಾಕಿರಬಹುದು. ಮಳೆಗಾಲದಲ್ಲಿ ಈ ಮೊದಲೇ ಹೇಳಿದಂತೆ ಎಕರೆಗೆ 16-18 ಕ್ವಿಂಟಲ್ ಫಸಲು ತೆಗೆಯಬಹುದು. ಬೇಸಿಗೆ ಕಾಲದಲ್ಲಿ 5-6 ಕ್ವಿಂಟಲ್ ಬಂದರೇ ಹೆಚ್ಚು. ಹಾಗಾಗಿ ಒಂದು ಕ್ವಿಂಟಲ್​ಗೆ 8-10 ಕೊಟ್ಟರೂ ಅದು ಲಾಭವಲ್ಲ. ಆ ಹಣ ನಮ್ಮ ಕೂಲಿಗೂ ಸಾಕಾಗುವುದಿಲ್ಲ. ಅಲ್ಲಿ-ಇಲ್ಲಿ ದಿನನಿತ್ಯ ರೈತರಿಗೆ ಮೋಸ ನಡೆಯುತ್ತಲೇ ಇದೆ. ಕೆಲವರು ರೈತರಿಂದ ಕಡಿಮೆ‌ ದರಕ್ಕೆ ಶೇಂಗಾ ಖರೀದಿ ಮಾಡಿ ಮಾರುಕಟ್ಟೆಯಲ್ಲಿ ಹೆಚ್ಚಿನ‌ ದರಕ್ಕೆ‌ ಮಾರಾಟ ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಶೇಂಗಾ ಬೀಜ 200 ರೂಪಾಯಿ ತಲುಪಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ರೈತರ‌ ಬಳಿ ಕಡಿಮೆ ಬೆಲೆಗೆ ಖರೀದಿ‌ಸಿ ಮಿಲ್ಲಿಗೆ ಕೊಟ್ಟು ಹೆಚ್ಚು ಹಣ ಮಾಡಿಕೊಳ್ಳುತ್ತಾರೆ. ರೈತರೇ ನೇರವಾಗಿ ಮಿಲ್ಲಿಗೆ ಹೋದರೆ ತೆಗೆದುಕೊಳ್ಳುವುದಿಲ್ಲ. ಇದು ದಲ್ಲಾಳಿಗಳಿಗೆ ಆಗುತ್ತಿರುವ ಲಾಭವೇ ಹೊರತು, ರೈತರಿಗೆ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ‌

Fall In Supply Of Groundnuts To Davanagere Market
ಶೇಂಗಾ ಬೀಜ (ETV Bharat)

ಅಡುಗೆ ಎಣ್ಣೆ ಬೆಲೆ ಹೆಚ್ಚಳ: ಗಾಣದ ಮಾಲೀಕ ಮಂಜುನಾಥ್ ಮಾತನಾಡಿ "ಈ ಬಾರಿಯ ಅತಿವೃಷ್ಠಿ ಮಳೆಯು ಶೇಂಗಾ ಬೆಳೆ ಮೇಲೆ ಪರಿಣಾಮ ಬೀರಿದೆ. ನಿರಂತರ ಮಳೆ ಸುರಿದ ಪರಿಣಾಮ ಮಾರುಕಟ್ಟೆಗೆ ನಿರೀಕ್ಷೆಗೆ ತಕ್ಕಂತೆ ಶೇಂಗಾ ಫಸಲು ಬಂದಿಲ್ಲ. ಹಾಗಾಗಿ ಸಾಕಾಷ್ಟು ಪ್ರಮಾಣದ ಕೊರತೆ ಆಗಿದೆ. ಇದರಿಂದ ಶೇಂಗಾ ದರ 200 ತಲುಪಿತ್ತು. ಇದೀಗ ಸ್ವಲ್ಪ ಕಡಿಮೆ ಆಗಿದೆ ಎನ್ನುತ್ತಿದ್ದಾರೆ. ಆದರೂ, ಈ ಹಿಂದೆ ಇದ್ದ 100-120 ದರಕ್ಕೆ ಬಂದಿಲ್ಲ. ಹಾಗಾಗಿ ನಾವು ಕೂಡ ಶೇಂಗಾ ಕಾಳಿನ ಎಣ್ಣೆಯ ದರವನ್ನು ಏರಿಕೆ ಮಾಡಿದ್ದೇವೆ. ಮೊದಲಿಗೆ ಶೇಂಗಾ ಕಾಳು 120-140ಕ್ಕೆ ಸಿಗುತ್ತಿತ್ತು. ಹಾಗಾಗಿ ಶೇಂಗಾ ಎಣ್ಣೆಯನ್ನು ಈ ಹಿಂದೆ 190ಕ್ಕೆ ಒಂದು ಲೀಟರ್ ಮಾರಾಟ ಮಾಡುತ್ತಿದ್ದೆವು. ಇದೀಗ 320ಕ್ಕೆ ಒಂದು ಲೀಟರ್ ಎಣ್ಣೆ ಆಗಿದೆ. ನಾವು ಚಳ್ಳಕೆರೆ, ಚಿತ್ರದುರ್ಗ ಭಾಗದಿಂದ ಶೇಂಗಾ ಕಾಳು ತರಿಸಿಕೊಳ್ಳುತ್ತೇವೆ. ಹೊಸ ಕಾಳು ಬರಬೇಕಿದೆ. ಅತ್ಯುತ್ತಮ ಗುಣಮಟ್ಟದ ಕಾಳು ಬಳಕೆ‌ ಮಾಡುವುದರಿಂದ ಗ್ರಾಹಕರು ಸ್ಪಂದಿಸುತ್ತಾರೆ" ಎಂದರು.

ಇದನ್ನೂ ಓದಿ: ಅಬ್ಬಾ ಕೆ.ಜಿಗೆ ₹600! ದಾಖಲೆ ಬೆಲೆ ತಲುಪಿದ ತೆಂಗಿನೆಣ್ಣೆ: ಇಷ್ಟೊಂದು ದುಬಾರಿಯಾಗಲು ಕಾರಣವಾದ ಅಂಶಗಳಿವು

Last Updated : February 19, 2026 at 2:58 PM IST