ರಾಮನಗರ: ಖೋಟಾ ನೋಟು ತಯಾರಿಕಾ ಜಾಲ ಪತ್ತೆ, ಏಳು ಆರೋಪಿಗಳ ಬಂಧನ
ರಾಮನಗರದಲ್ಲಿ ಖೋಟಾ ನೋಟು ತಯಾರಿಕಾ ಜಾಲ ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನ ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ಧಾರೆ.

Published : September 1, 2026 at 7:49 AM IST
ರಾಮನಗರ: ಇಲ್ಲಿನ ಜೀಗೇನಹಳ್ಳಿ ಬಡಾವಣೆಯ ನಿರ್ಮಾಣ ಹಂತದ ಮನೆಯೊಂದರಲ್ಲಿ ಖೋಟಾ ನೋಟು ತಯಾರಿಸುತ್ತಿರುವ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಏಳು ಆರೋಪಿಗಳನ್ನು ಬಂಧಿಸಿರುವ ಘಟನೆ ನಡೆದಿದೆ.
ರಾಮನಗರದ ಐಜೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿಲಾಲ್ ಲೇಔಟ್ ಪಕ್ಕದಲ್ಲಿರುವ ನೂತನ ಬಡಾವಣೆಯಲ್ಲಿ ನಿರ್ಮಾಣ ಹಂತದ ಮನೆಯಲ್ಲಿ ಖೋಟಾ ನೋಟುಗಳನ್ನು ತಯಾರಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ತಯಾರಿಕಾ ಹಂತದಲ್ಲಿರುವ ನಕಲಿ ನೋಟುಗಳಿಗೆ ಸಂಬಂಧಿಸಿದ ಪೇಪರ್ ಬಂಡಲ್ಗಳು ಹಾಗೂ ನೋಟು ತಯಾರಿಕೆಗೆ ಬಳಸುತ್ತಿದ್ದ ರಾಸಾಯನಿಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ದೂರು ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಖೋಟಾ ನೋಟ್ ತಯಾರಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಸಂತೋಷ್, ಸಂಪತ್, ಗೋವಿಂದರಾಜ್, ರೇಣುಕಾರಾಜ್, ರಾಜೇಶ್, ಶಿವರಾಜ್ ಮತ್ತು ಸತೀಶ್ ಎಂಬುವರನ್ನು ಬಂಧಿಸಲಾಗಿದೆ. ಇವರು ಹೊರ ರಾಜ್ಯದವರ ಕೈವಾಡದಿಂದ ಈ ನಕಲಿ ನೋಟುಗಳ ದಂಧೆ ನಡೆಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ತನಿಖೆ ಪ್ರಗತಿಯಲ್ಲಿ ಇದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಎಸ್ಪಿ ರೋಹನ್ ಜಗದೀಶ್ ತಿಳಿಸಿದ್ದಾರೆ.
ಇದನ್ನೂ ಓದಿ: ರಾಮನಗರ: ನಕಲಿ ಔಷಧಿಗಳಿಗೆ ಬಹುರಾಷ್ಟ್ರೀಯ ಕಂಪನಿಗಳ ಲೇಬಲ್ ಅಂಟಿಸಿ ಮಾರಾಟ; SIT ತನಿಖೆಗೆ ಚಿಂತನೆ- ಸಚಿವ ಖಾದರ್

