ಕಸಬ್ ಮರಣ ದಂಡನೆ ಉಲ್ಲೇಖಿಸಿ ಕೋರಮಂಗಲದ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ಹುಸಿ ಬಾಂಬ್ ಬೆದರಿಕೆ
ಕೋರಮಂಗಲದ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ಹುಸಿ ಬಾಂಬ್ ಬೆದರಿಕೆ ಬಂದಿದ್ದು, ಕೆಲಹೊತ್ತು ದೈನಂದಿನ ಪ್ರಕ್ರಿಯೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು.

Published : March 2, 2026 at 2:02 PM IST
ಬೆಂಗಳೂರು: ನಗರದಲ್ಲಿ ಹುಸಿ ಬಾಂಬ್ ಬೆದರಿಕೆ ಪ್ರಕರಣಗಳ ಸರಣಿ ಮುಂದುವರೆದಿದೆ. ಕೋರಮಂಗಲದ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ಇಂದು ಕಿಡಿಗೇಡಿಗಳು ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದು, ಕೆಲಕಾಲ ಭಾರಿ ಆತಂಕದ ವಾತಾವರಣಕ್ಕೆ ಕಾರಣವಾಗಿತ್ತು.
ಆದರೆ, ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸರ ಸುದೀರ್ಘ ಪರಿಶೀಲನೆಯ ನಂತರ ಇದೊಂದು ಹುಸಿ ಬಾಂಬ್ ಬೆದರಿಕೆ ಎಂಬುದು ಖಚಿತವಾಗಿದೆ. ಪಾಸ್‌ಪೋರ್ಟ್ ಕಚೇರಿಯ ಅಧಿಕೃತ ಇ-ಮೇಲ್ಗೆ ತಮಿಳು ಭಾಷೆಯಲ್ಲಿ ಸಂದೇಶ ರವಾನಿಸಲಾಗಿದ್ದು "ಅಜ್ಮಲ್ ಕಸಬ್‌ನಿಗೆ ಮರಣ ದಂಡನೆ ವಿಧಿಸಿರುವ ನಿಮ್ಮನ್ನು ನಾವು ಬಿಡುವುದಿಲ್ಲ. ಕೆಲವೇ ಹೊತ್ತಿನಲ್ಲಿ ಕಚೇರಿಯಲ್ಲಿರಿಸಿರುವ ಸ್ಫೋಟಕಗಳು ಸ್ಫೋಟಗೊಳ್ಳಲಿವೆ" ಎಂದು ಬರೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿಷಯ ತಿಳಿಯುತ್ತಿದ್ದಂತೆಯೇ ಕೋರಮಂಗಲ ಠಾಣೆ ಪೊಲೀಸರು, ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳ ಮತ್ತು ಶ್ವಾನ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಕಚೇರಿಯ ಸಿಬ್ಬಂದಿ ಮತ್ತು ಸಾರ್ವಜನಿಕರನ್ನು ತಕ್ಷಣವೇ ಹೊರಗೆ ಕಳುಹಿಸಿ ತಪಾಸಣೆ ನಡೆಸಿದ್ದಾರೆ. ದೈನಂದಿನ ಪಾಸ್‌ಪೋರ್ಟ್ ವಿತರಣಾ ಕಾರ್ಯವನ್ನು ಕೆಲಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಸುದೀರ್ಘವಾದ ತಪಾಸಣೆಯ ಬಳಿಕ ಕಟ್ಟಡದಲ್ಲಿ ಯಾವುದೇ ಸ್ಫೋಟಕ ವಸ್ತುಗಳಿಲ್ಲ, ಇದೊಂದು ಹುಸಿ ಸಂದೇಶ ಎಂದು ಪೊಲೀಸರು ತಿಳಿಸಿದ್ದು, ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಭದ್ರತೆ ಖಚಿತಪಡಿಸಿಕೊಂಡು ಒಬ್ಬೊಬ್ಬರನ್ನೇ ಕಚೇರಿಯೊಳಗೆ ಬಿಡಲಾಗುತ್ತಿದ್ದು, ಸ್ಥಗಿತಗೊಂಡಿದ್ದ ಪಾಸ್‌ಪೋರ್ಟ್ ಪ್ರಕ್ರಿಯೆಗಳು ಪುನಃ ಆರಂಭವಾಗಿವೆ.ಇ-ಮೇಲ್ ಎಲ್ಲಿಂದ ಬಂದಿದೆ, ಹಿಂದಿರುವ ಉದ್ದೇಶವೇನು? ಎಂಬ ಬಗ್ಗೆ ಸೈಬರ್ ಕ್ರೈಂ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಹೊಸ ಪ್ರಿಯಕರನೊಂದಿಗೆ ಸೇರಿ ಮಾಜಿ ಪ್ರಿಯಕರನ ಕೊಂದ ಕಿರುತೆರೆ ನಟಿ! ಮೂವರು ಸೆರೆ
ಕಳೆದ ಫ್ರೆಬ್ರವರಿ 16ರಂದು ಧಾರವಾಡ ಹೈಕೋರ್ಟ್ ಪೀಠ, ಮಂಗಳೂರು, ದಾವಣಗೆರೆ, ಹಾವೇರಿ, ಕೊಡಗು, ಮಂಡ್ಯ ಮತ್ತು ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯಗಳಿಗೆ ಇಮೇಲ್ ಬಾಂಬ್ ಬೆದರಿಕೆ ಬಂದಿದ್ದವು. ಪೊಲೀಸರು ತಕ್ಷಣವೇ ಪರಿಶೀಲನೆ ನಡೆಸಿ ಇವುಗಳು ಹುಸಿ ಬಾಂಬ್ ಕರೆ ಎನ್ನುವುದನ್ನು ಖಚಿತ ಪಡಿಸಿದ್ದರು.
ಧಾರವಾಡ ಹೈಕೋರ್ಟ್ ಪೀಠಕ್ಕೆ ಎರಡೆರಡು ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದವು. ಪೊಲೀಸರ ತನಿಖೆಯ ಬಳಿಕ ಇದೀಗ ಅದು ಸುಳ್ಳು ಬಾಂಬ್ ಬೆದರಿಕೆ ಎನ್ನುವುದನ್ನು ಪತ್ತೆ ಹಚ್ಚಿದ್ದರು. ಈ ಮೂಲಕ ಅಲ್ಲಿ ಉಂಟಾಗಿದ್ದ ಭೀತಿಗೆ ತೆರೆ ಎಳೆದಿದ್ದರು. ಕೋರ್ಟ್ ಆವರಣ, ಕಟ್ಟಡವನ್ನು ಸಂಪೂರ್ಣವಾಗಿ ಪರಿಶೀಲಿಸಿದ ಪೊಲೀಸರು, ಯಾವುದೇ ವಸ್ತುಗಳು ಪತ್ತೆಯಗದ ಹಿನ್ನೆಲೆ ಮತ್ತೆ ಕೋರ್ಟ್ ಕಲಾಪಕ್ಕೆ ಅನುವು ಮಾಡಿಕೊಟ್ಟಿದ್ರು.

