ದಾವಣಗೆರೆ ಜಿಲ್ಲಾಧಿಕಾರಿ ಮನೆಗೆ ಹುಸಿ ಬಾಂಬ್ ಬೆದರಿಕೆ ಕರೆ: ಮುಂದುವರೆದ ತನಿಖೆ
ಆರೋಪಿಗಳು ಮನೆ ಸ್ಫೋಟ ಮಾಡುವುದಾಗಿ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಬೆದರಿಕೆ ಹಾಕಿದ ಹಿನ್ನೆಲೆ ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ ನಡೆಸಲಾಗಿದೆ.

Published : March 4, 2026 at 5:56 PM IST
ದಾವಣಗೆರೆ: ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಮನೆಗೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆ ತಕ್ಷಣ ಪೊಲೀಸರು ಡಿಸಿ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿರುವ ಕಿಡಿಗೇಡಿಗಳು ಜಿಲ್ಲಾಧಿಕಾರಿ ಮನೆ ಸ್ಫೋಟ ಮಾಡುವುದಾಗಿ ಬಾಂಬ್ ಬೆದರಿಕೆ ಹಾಕಿದ್ದಾರೆ. ಅಲರ್ಟ್ ಆದ ಪೊಲೀಸರು ದಾವಣಗೆರೆ ನಗರದ ರಿಂಗ್ ರೋಡ್ನ ನಿಜಲಿಂಗಪ್ಪ ಬಡಾವಣೆಯಲ್ಲಿ ಇರುವ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸರ್ಕಾರಿ ನಿವಾಸದ ಬಳಿ ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆದಿದೆ.
ಕಳೆದ ಒಂದು ತಿಂಗಳ ಹಿಂದೆ ಜಿಲ್ಲಾಧಿಕಾರಿ ಕಚೇರಿಗೆ ಹಾಗೂ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಬಂದಿತ್ತು. ಇದೀಗ ಮನೆಗೆ ಬಾಂಬ್ ಬೆದರಿಕೆ ಬಂದಿರುವುದು ಆತಂಕ ಸೃಷ್ಟಿಸಿದೆ. ಫೋನ್ ಮಾಡಿದವರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಈ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿರುವ ಬಡಾವಣೆ ಠಾಣೆಯ ಪಿಐ ಗಾಯಿತ್ರಿ ಅವರು, ಇಂದು 112 ERSಗೆ ಬೆದರಿಕೆ ಬಾಂಬ್ ಕರೆ ಬಂದಿತ್ತು. ತಕ್ಷಣ ನಿಜಲಿಂಗಪ್ಪ ಬಡಾವಣೆಯಲ್ಲಿ ಇರುವ ಜಿಲ್ಲಾಧಿಕಾರಿ ಮನೆಗೆ ಆಗಮಿಸಿ ಪರಿಶೀಲನೆ ನಡೆಸಿದ್ದೇವೆ. ಆದರೆ ಇದೊಂದು ಹುಸಿ ಬಾಂಬ್ ಕರೆ ಎಂದು ತಿಳಿದು ಬಂದಿದೆ. ತನಿಖೆ ನಡೆಸುತ್ತೇವೆ" ಎಂದು ಹೇಳಿದರು.
ಇದನ್ನೂ ಓದಿ: ಕಸಬ್ ಮರಣ ದಂಡನೆ ಉಲ್ಲೇಖಿಸಿ ಕೋರಮಂಗಲದ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ಹುಸಿ ಬಾಂಬ್ ಬೆದರಿಕೆ
ಕೋರಮಂಗಲದ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ಹುಸಿ ಬಾಂಬ್ ಬೆದರಿಕೆ: ಮಾರ್ಚ್ 2ರಂದು ಕಸಬ್ ಮರಣ ದಂಡನೆ ಉಲ್ಲೇಖಿಸಿ ಕೋರಮಂಗಲದ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ಹುಸಿ ಬಾಂಬ್ ಬೆದರಿಕೆ ಬಂದಿತ್ತು. ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿತ್ತು. ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸರ ಸುದೀರ್ಘ ಪರಿಶೀಲನೆಯ ಬಳಿಕ ಇದು ಹುಸಿ ಬಾಂಬ್ ಬೆದರಿಕೆ ಎಂದು ಖಚಿತವಾಗಿತ್ತು. ಪಾಸ್‌ಪೋರ್ಟ್ ಕಚೇರಿಯ ಅಧಿಕೃತ ಇ-ಮೇಲ್ಗೆ ತಮಿಳು ಭಾಷೆಯಲ್ಲಿ ಸಂದೇಶ ರವಾನಿಸಲಾಗಿದ್ದು ಅಜ್ಮಲ್ ಕಸಬ್‌ನಿಗೆ ಮರಣ ದಂಡನೆ ವಿಧಿಸಿರುವ ನಿಮ್ಮನ್ನು ನಾವು ಬಿಡುವುದಿಲ್ಲ. ಕೆಲವೇ ಹೊತ್ತಿನಲ್ಲಿ ಕಚೇರಿಯಲ್ಲಿರಿಸಿರುವ ಸ್ಫೋಟಕಗಳು ಸ್ಫೋಟಗೊಳ್ಳಲಿವೆ" ಎಂದು ಬರೆಯಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿದ್ದವು. ಹಾಗೇ 2026ರ ಫ್ರೆಬ್ರವರಿ 16ರಂದು ಧಾರವಾಡ ಹೈಕೋರ್ಟ್ ಪೀಠ, ಮಂಗಳೂರು, ದಾವಣಗೆರೆ, ಹಾವೇರಿ, ಕೊಡಗು, ಮಂಡ್ಯ ಮತ್ತು ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯಗಳಿಗೆ ಇಮೇಲ್ ಬಾಂಬ್ ಬೆದರಿಕೆ ಬಂದಿದ್ದವು. ಪೊಲೀಸರ ಪರಿಶೀಲನೆ ಬಳಿಕ ಇವುಗಳು ಕೂಡ ಹುಸಿ ಬಾಂಬ್ ಕರೆ ಎನ್ನುವುದು ಬಯಲಾಗಿತ್ತು.

