ದೆಹಲಿಯಂತೆ ಬೆಂಗಳೂರು ಸಹ ಮತ್ತೊಂದು ಗ್ಯಾಸ್ ಛೇಂಬರ್ ಆಗದಂತೆ ಕ್ರಮ: ಸಚಿವ ಈಶ್ವರ ಖಂಡ್ರೆ
ಬೆಂಗಳೂರಿನ ವಾಯು ಗುಣಮಟ್ಟ, ಮಾಲಿನ್ಯ ಕುರಿತಂತೆ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಸೇರಿದಂತೆ ಇತರ ಅಧಿಕಾರಿಗಳ ಜೊತೆ ಪರಿಸರ ಇಲಾಖೆ ಸಚಿವರು ಸಭೆ ನಡೆಸಿದರು.

Published : February 26, 2026 at 5:12 PM IST
ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಂತೆ ಬೆಂಗಳೂರು ಸಹ ಮತ್ತೊಂದು ಗ್ಯಾಸ್ ಛೇಂಬರ್ ಆಗದಂತೆ ಕ್ರಮ ವಹಿಸಲು ಶೀಘ್ರವೇ ನಗರದ ಎಲ್ಲ 28 ಶಾಸಕರೊಂದಿಗೆ ಸಭೆ ನಡೆಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಅವರ ಕೋರಿಕೆಯ ಮೇರೆಗೆ ಅವರೊಂದಿಗೆ ಇಂದು ಉನ್ನತಾಧಿಕಾರಿಗಳ ಸಭೆ ನಡೆಸಿದ ಸಚಿವರು, ಬೆಂಗಳೂರು ನಗರದಲ್ಲಿ ವಾಯು ಮಾಲಿನ್ಯ, ಜಲ ಮಾಲಿನ್ಯ ಮತ್ತು ಶಬ್ಧ ಮಾಲಿನ್ಯ ಹೆಚ್ಚಾಗುತ್ತಿದ್ದು, ಇದರ ನಿಯಂತ್ರಣಕ್ಕೆ ಪಕ್ಷಾತೀತವಾಗಿ ಎಲ್ಲ ಜನಪ್ರತಿನಿಧಿಗಳ ಸಹಕಾರದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಸುರೇಶ್ ಕುಮಾರ್ ವಿಷಯ ಪ್ರಸ್ತಾಪಿಸಿ, ಬೆಂಗಳೂರು ನಗರದಲ್ಲಿ ರಸ್ತೆಯಲ್ಲಿನ ಧೂಳಿನಿಂದಾಗಿ ವಾಯು ಗುಣಮಟ್ಟ ಕ್ಷೀಣಿಸುತ್ತಿದ್ದು, ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ವೈದ್ಯರು ಬೆಂಗಳೂರು ಹೊರವಲಯಕ್ಕೆ ಹೋಗುವಂತೆ ಸಲಹೆ ನೀಡುತ್ತಿದ್ದಾರೆ. ವಾಯು ಗುಣಮಟ್ಟ ಕಾಪಾಡಲು ತುರ್ತು ಕ್ರಮ ಕೈಗೊಳ್ಳಬೇಕು ಎಂದರು.
ಸ್ಥಳೀಯ ಸಂಸ್ಥೆಗೆ ನೋಟಿಸ್ ನೀಡಲು ಸೂಚನೆ: ಇದಕ್ಕೆ ಸ್ಪಂದಿಸಿದ ಪರಿಸರ ಸಚಿವರು, ಈಗಾಗಲೇ ಬೆಂಗಳೂರಿನ 11 ಸ್ಥಳಗಳಲ್ಲಿ ಸ್ಥಾಪಿತ ಮತ್ತು 13 ಸಂಚಾರಿ ಘಟಕಗಳ ಮೂಲಕ ವಾಯು ಗುಣಮಟ್ಟ ಸೂಚ್ಯಂಕದ ಮೌಲ್ಯಮಾಪನ ಮಾಡಲಾಗುತ್ತಿದೆ ಎಂಬ ಮಾಹಿತಿ ನೀಡಬೇಕು. ವಾಯು ಗುಣಮಟ್ಟ ಸೂಚ್ಯಂಕ ಮೌಲ್ಯವು 100 ದಾಟಿದರೆ ಸಂಬಂಧಿತ ಸ್ಥಳೀಯ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿ, ನಿಗದಿತ ಕಾಲಮಿತಿಯಲ್ಲಿ ನಿಯಂತ್ರಿಸಲು ಸೂಚಿಸಬೇಕು. ಕ್ರಮ ವಹಿಸದಿದ್ದರೆ ನಿಯಮಾನುಸಾರ ಮೊಕದ್ದಮೆ ದಾಖಲಿಸಿ ಎಂದು ಸೂಚನೆ ನೀಡಿದರು.
ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿ, ಶೀಘ್ರವೇ ಅವರ ಅಧ್ಯಕ್ಷತೆಯಲ್ಲೇ ಬೆಂಗಳೂರು ನಗರದ ಎಲ್ಲ ಜನಪ್ರತಿನಿಧಿಗಳ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಖಂಡ್ರೆ ತಿಳಿಸಿದರು.
ಕೆಲವೇ ದಶಕಗಳ ಹಿಂದೆ ನಿವೃತ್ತರ ಸ್ವರ್ಗ, ಹವಾನಿಯಂತ್ರಿತ ನಗರ ಎಂದು ಖ್ಯಾತಿ ಪಡೆದಿದ್ದು, ಉದ್ಯಾನ ನಗರಿ ಬೆಂಗಳೂರಿನಲ್ಲೂ ಇಂದು ಬಿಸಿಲ ಬೇಗೆ ಹೆಚ್ಚುತ್ತಿದೆ. ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆ ಇದಕ್ಕೆ ಕಾರಣವಾಗಿದ್ದರೂ, ನಗರದ ಹಸಿರು ಹೊದಿಕೆ ಹೆಚ್ಚಿಸಿ ನಗರದ ವಾಯು ಗುಣಮಟ್ಟ ರಕ್ಷಿಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಏಕ ಬಳಕೆ ಪ್ಲಾಸ್ಟಿಕ್, ಜನಜಾಗೃತಿಯೊಂದೇ ಮಾರ್ಗ: ಏಕ ಬಳಕೆ ಪ್ಲಾಸ್ಟಿಕ್ ತ್ಯಾಜ್ಯ ಸಮಸ್ಯೆ ಬೆಂಗಳೂರಿನಲ್ಲಿ ವಿಪರೀತವಾಗಿದೆ. ಇದರ ನಿಯಂತ್ರಣಕ್ಕೆ ಸ್ಥಳೀಯ ಸಂಸ್ಥೆಗಳು ಹಾಗೂ ಇನ್ನಿತರ ಇಲಾಖೆಗಳ ಸಹಯೋಗದಲ್ಲಿ ಜಾಗೃತ ದಳ ರಚಿಸಿ ಕ್ರಮ ವಹಿಸಿ ಎಂದು ಸಚಿವರು ಸೂಚಿಸಿದರು.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಎಷ್ಟು ತ್ಯಾಜ್ಯ ಶುದ್ಧೀಕರಣ ಘಟಕಗಳಿವೆ. ಅವುಗಳ ಪೈಕಿ ಎಷ್ಟು ಕಾರ್ಯ ನಿರ್ವಹಿಸುತ್ತಿವೆ? ಅವುಗಳ ಸ್ಥಾಪಿತ ಸಾಮರ್ಥ್ಯ ಎಷ್ಟು? ಮತ್ತು ಪ್ರಸ್ತುತ ಎಷ್ಟು ಎಂಎಲ್ಡಿ ದ್ರವ ತ್ಯಾಜ್ಯ ಸಂಸ್ಕರಣೆ ಆಗುತ್ತಿದೆ? ಎಷ್ಟು ಎಂಎಲ್ಡಿ ನೀರು ಸಂಸ್ಕರಣೆ ಆಗದೆ ಜಲ ಮೂಲ ಸೇರುತ್ತಿದೆ? ಎಂಬ ಬಗ್ಗೆ ಪರಿಸರ ಇಲಾಖೆಯಿಂದ ಖುದ್ದು ಪರಿಶೀಲನೆ ನಡೆಸಿ, 1 ತಿಂಗಳೊಳಗೆ ವರದಿ ಸಲ್ಲಿಸುವಂತೆ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಇದನ್ನೂ ಓದಿ: ಬಡ ಮಕ್ಕಳ ಗುಣಮಟ್ಟ ಶಿಕ್ಷಣಕ್ಕಾಗಿ ಕೆಪಿಎಸ್ ಬದಲಿಗೆ ಮ್ಯಾಗ್ನೇಟ್ ಶಾಲೆ: ಸಚಿವ ಕೃಷ್ಣ ಬೈರೇಗೌಡ

