ETV Bharat / state

ಕೋರ್ಟ್​ನಲ್ಲಿ ಬಾಂಬ್ ಇಟ್ಟಿರುವುದಾಗಿ ಬೆಳಗಾವಿ ನ್ಯಾಯಾಧೀಶರಿಗೆ ಇ-ಮೇಲ್: ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳದಿಂದ‌ ಪರಿಶೀಲನೆ

ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿ ಬಾಂಬ್ ಇಟ್ಟಿರುವುದಾಗಿ ನ್ಯಾಯಾಧೀಶರಿಗೆ ಇ-ಮೇಲ್ ಬಂದಿರುವ ಘಟನೆ ನಡೆದಿದೆ.

email-to-belagavi-judge-claiming-bomb-planted-in-court
ಬಾಂಬ್ ನಿಷ್ಕ್ರೀಯ ದಳದಿಂದ ಕೋರ್ಟ್​ ಆವರಣದಲ್ಲಿ ಪರಿಶೀಲನೆ ನಡೆಸಲಾಯಿತು (ETV Bharat)
author img

By ETV Bharat Karnataka Team

Published : March 3, 2026 at 7:15 PM IST

2 Min Read
Choose ETV Bharat

ಬೆಳಗಾವಿ: ಹೋಳಿ ಹಬ್ಬದ ದಿನವೇ ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿ ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಬಂದಿರುವ ಘಟನೆ ನಡೆದಿದೆ. ಘಟನೆಯಿಂದ ನ್ಯಾಯಾಲಯದ ಆವರಣದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಮಂಗಳವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಪ್ರಿನ್ಸಿಪಲ್ ಡಿಸ್ಟ್ರಿಕ್ಟ್ ಜಡ್ಜ್ (ಪಿಡಿಜೆ) ಅವರ ಇ-ಮೇಲ್​ಗೆ ಅನಾಮಧೇಯ ವ್ಯಕ್ತಿಯಿಂದ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಸಂದೇಶ ಬಂದಿತ್ತು. ಇ-ಮೇಲ್ ಬಂದ ತಕ್ಷಣವೇ ಕೋರ್ಟ್ ಆವರಣದಲ್ಲಿ ಫುಲ್ ಅಲರ್ಟ್ ಘೋಷಿಸಲಾಯಿತು.

ಕೋರ್ಟ್ ಆವರಣದಲ್ಲಿ ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ ನಡೆಸಲಾಯಿತು (ETV Bharat)

ತಕ್ಷಣವೇ ಬೆಳಗಾವಿ ಜಿಲ್ಲಾ ನ್ಯಾಯಾಲಯದ ಆವರಣಕ್ಕೆ ದೌಡಾಯಿಸಿದ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ತಂಡಗಳು ಪರಿಶೀಲನೆ ನಡೆಸಿದವು. ನ್ಯಾಯಾಲಯದ ಮೂಲೆ ಮೂಲೆಯಲ್ಲೂ ಪರೀಕ್ಷೆ ನಡೆಸಲಾಯಿತು. ಡಿಸಿಪಿ‌ ನಾರಾಯಣ ಬರಮನಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸೂಕ್ತ ಭದ್ರತೆ ಕೈಗೊಂಡರು.

ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಕೋರ್ಟ್ ಕಲಾಪಗಳನ್ನು ತಾತ್ಕಾಲಿಕವಾಗಿ ಕೆಲ ಗಂಟೆ ಬಂದ್ ಮಾಡಲಾಗಿತ್ತು. ಕೋರ್ಟ್ ಸಿಬ್ಬಂದಿ ಮತ್ತು ವಕೀಲರು ಆತಂಕದಿಂದ ಹೊರಗೆ ಓಡಿ ಬಂದರು. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಇ-ಮೇಲ್ ಮೂಲ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಈ ಕುರಿತು ಈಟಿವಿ ಭಾರತ ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಅವರನ್ನು ಸಂಪರ್ಕಿಸಿದಾಗ ಅವರು ಪ್ರತಿಕ್ರಿಯಿಸಿದ್ದು, 'ಇದೊಂದು ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಆಗಿದೆ. ಪರಿಶೀಲನೆ ವೇಳೆ ನ್ಯಾಯಾಲಯದ ಆವರಣದಲ್ಲಿ ಯಾವುದೇ ಸಂಶಯಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಇ-ಮೇಲ್ ಯಾರು ಮಾಡಿದ್ದಾರೆ ಎಂಬುದನ್ನು ಶೀಘ್ರವೇ ಪತ್ತೆ ಹಚ್ಚಲಾಗುವುದು. ಯಾರೂ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ' ಎಂದು ತಿಳಿಸಿದರು.

ಉಳ್ಳಾಲ ಮಸೀದಿ ಬಳಿ ಬಾಂಬ್ ಬ್ಲಾಸ್ಟ್ ಬೆದರಿಕೆ ಸಂದೇಶ (ದಕ್ಷಿಣ ಕನ್ನಡ) : ಸಾಮಾಜಿಕ ಜಾಲತಾಣದಲ್ಲಿ ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟ ಮಾಡುವುದಾಗಿ ಬೆದರಿಕೆ ಹಾಕಿದ ಕಾಮೆಂಟ್ ಹಿನ್ನೆಲೆಯಲ್ಲಿ ನಿನ್ನೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಲಾಗಿದ್ದ ಫೋಟೋಗೆ ಬಂದ ಕಾಮೆಂಟ್ ಬಾಕ್ಸ್‌ನಲ್ಲಿ ಬೆಂಬಲ ನೀಡಿ ಮಸೀದಿ ಹತ್ರ ಬಾಂಬ್ ಬ್ಲಾಸ್ಟ್ ಮಾಡ್ತೀನಿ ಎಂಬ ಬರಹ ಪೋಸ್ಟ್ ಮಾಡಲಾಗಿತ್ತು. ಈ ಕಾಮೆಂಟ್ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ವಿಷಯ ಪೊಲೀಸರ ಗಮನಕ್ಕೆ ಬಂದ ಬಳಿಕ ತಕ್ಷಣ ಕ್ರಮ ಕೈಗೊಳ್ಳಲಾಗಿತ್ತು.

ಈ ಕುರಿತು ಉಳ್ಳಾಲ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲಾಗುತ್ತದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದರು.

'ಸಾಮಾಜಿಕ ಜಾಲತಾಣದಲ್ಲಿ ಮಾಡಲಾದ ಈ ರೀತಿಯ ಕಾಮೆಂಟ್ ಸ್ಪಷ್ಟವಾಗಿ ಅಪರಾಧವಾಗಿದೆ. ಪ್ರಕರಣ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತಿದೆ. ಆರೋಪಿಯನ್ನು ಬಂಧಿಸಲಾಗುತ್ತದೆ. ಅಪರಾಧ ಮಾಡಿದವರ ವಿರುದ್ಧವೇ ಕ್ರಮ ಕೈಗೊಳ್ಳಲಾಗುತ್ತದೆ. ಪ್ರಕರಣದ ತನಿಖೆ ಮುಂದುವರೆದಿದ್ದು, ಆರೋಪಿಯನ್ನು ಶೀಘ್ರ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದು ಪೊಲೀಸರು ತಿಳಿಸಿದ್ದರು.

ಇದನ್ನೂ ಓದಿ : ಉಳ್ಳಾಲ ಮಸೀದಿ ಬಳಿ ಬಾಂಬ್ ಬ್ಲಾಸ್ಟ್ ಬೆದರಿಕೆ ಸಂದೇಶ: ಎಫ್‌ಐಆರ್ ದಾಖಲು