ETV Bharat / state

ಉಡುಪಿ: ಕರಾವಳಿಯಾದ್ಯಂತ ಇಂದು ಸಮುದ್ರಸ್ನಾನ - ಏನು ಇವತ್ತಿನ ವಿಶೇಷ?

ಕರಾವಳಿಯಲ್ಲಿ ಎಳ್ಳು ಅಮಾವಾಸ್ಯೆ ಎಂದರೆ ಶುಭದಿನ. ಹೀಗಾಗಿ, ಇಂದು ಬೆಳಗ್ಗೆಯಿಂದಲೇ ಲಕ್ಷಾಂತರ ಮಂದಿ ಮಲ್ಪೆಯಲ್ಲಿ ಸಮುದ್ರ ಸ್ನಾನ ಮಾಡಿದರು.

ellamavasya-celebrated-in-udupi-today-in-a-traditional-manner
ಸಮುದ್ರಸ್ನಾನಕ್ಕೆ ತೆರಳಿರುವ ಜನರು (ETV Bharat)
author img

By ETV Bharat Karnataka Team

Published : December 19, 2025 at 4:47 PM IST

|

Updated : December 19, 2025 at 5:05 PM IST

2 Min Read
Choose ETV Bharat

ಉಡುಪಿ : ಕರಾವಳಿ ಜಿಲ್ಲೆ ಉಡುಪಿಯಲ್ಲಿಂದು ಎಳ್ಳಮಾವಾಸ್ಯೆಯನ್ನು ಸಂಪ್ರದಾಯಬದ್ಧವಾಗಿ ಆಚರಿಸಲಾಯಿತು. ಎಳ್ಳಮಾವಾಸ್ಯೆಯಂದು ಪಿತೃಗಳಿಗೆ ಪಿಂಡ ಬಿಡುವುದು ಸಂಪ್ರದಾಯ. ಜೊತೆಗೆ ಇಂದು ಸಮುದ್ರ ಸ್ನಾನ ಮಾಡಿದರೆ ಸಕಲ ಚರ್ಮರೋಗ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಜನರದ್ದು.

ಕರಾವಳಿಯಲ್ಲಿ ಎಳ್ಳು ಅಮಾವಾಸ್ಯೆ ಎಂದರೆ ಶುಭದಿನ. ಈ ದಿನದಂದು ಸಮುದ್ರ ಸ್ನಾನ ಮಾಡುವುದು ಸಂಪ್ರದಾಯ. ಈ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಲಕ್ಷಾಂತರ ಮಂದಿ ಮಲ್ಪೆಯಲ್ಲಿ ಸಮುದ್ರ ಸ್ನಾನ ಮಾಡಿದರು. ಪಿತೃಗಳಿಗೆ ಎಳ್ಳು ಅಮಾವಾಸ್ಯೆಯಂದು ಪಿಂಡಪ್ರದಾನ ಮಾಡಿದರೆ ಅವರ ಆತ್ಮ ಸದ್ಗತಿಯನ್ನು ಪಡೆಯುತ್ತದೆ, ಆತ್ಮಕ್ಕೆ ಪುಣ್ಯಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.

ಎಳ್ಳು ಅಮಾವಾಸ್ಯೆಯ ಕುರಿತು ರಮೇಶ್ ಭಟ್​ ಮಾಹಿತಿ ನೀಡಿದರು (ETV Bharat)

ಎಳ್ಳು ಅಮಾವಾಸ್ಯೆಯಂದು ಸಮುದ್ರದ ನೀರಿನಲ್ಲಿ ಉಪ್ಪಿನಾಂಶ ಹೇರಳವಾಗಿರುತ್ತದೆ. ಈ ದಿವಸ ಸಮುದ್ರ ಸ್ನಾನ ಮಾಡಿದರೆ ಚರ್ಮ ಮುಂತಾದ ದೇಹದ ಮೇಲ್ಭಾಗದ ರೋಗಗಳು ನಾಶವಾಗುತ್ತದೆ ಎಂಬುದು ಈಗಾಗಲೇ ದೃಢಪಟ್ಟಿದೆ. ಅದರಲ್ಲೂ ಎಳ್ಳು ಅಮಾವಾಸ್ಯೆಯಂದು ಸಮುದ್ರದ ನೀರಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರುತ್ತದೆ ಎಂಬ ನಂಬಿಕೆಯಿದೆ. ಇದೇ ಉದ್ದೇಶದಿಂದ ಮಲ್ಪೆ ಕಡಲಿನಲ್ಲಿ ಲಕ್ಷಾಂತರ ಮಂದಿ ದಿನಪೂರ್ತಿ ಪವಿತ್ರಸ್ನಾನ ಮಾಡಿದರು.

ಉಡುಪಿ ನಗರ ಮಾತ್ರವಲ್ಲದೇ, ಜಿಲ್ಲೆಯ ಮೂಲೆ ಮೂಲೆಗಳಿಂದಲೂ ಜನರು ಬಂದಿದ್ದರು. ಜನರ ಅನುಕೂಲಕ್ಕೆ ಎಂದೇ ನೂರಾರು ವೈದಿಕರು ಹಾಜರಿದ್ದು, ಪಿಂಡಪ್ರದಾನದ ಸಂಪ್ರದಾಯಗಳನ್ನು ನಡೆಸಿಕೊಟ್ಟರು. ಪಿಂಡಪ್ರದಾನ ಮಾಡಿದ ಬಳಿಕ ಸಮುದ್ರದಲ್ಲಿ ಅರ್ಗ್ಯ ಬಿಟ್ಟು ಸ್ನಾನ ಮಾಡಿ, ಅಲ್ಲೇ ಪಕ್ಕದಲ್ಲಿರುವ ಒಡಬಾಂಡೇಶ್ವರ ದೇವಸ್ಥಾನಕ್ಕೆ ಹೋಗುವುದು ಸಂಪ್ರದಾಯ.

pindapradhana
ಪಿಂಡಪ್ರದಾನ ಕಾರ್ಯದಲ್ಲಿ ನಿರತರಾಗಿರುವುದು (ETV Bharat)

ತುಳುವರು ಬಲರಾಮ ದೇವರ ದರ್ಶನ ಕೈಗೊಂಡ ಬಳಿಕ ಸಾಕ್ಷಿಗಳನ್ನು ಮುಟ್ಟಿ ಎಳ್ಳು ಅಮಾವಾವಾಸ್ಯೆಯ ಆಚರಣೆಯನ್ನು ಮಾಡುತ್ತಾ ಬಂದಿದ್ದಾರೆ. ಕೇವಲ ಮಲ್ಪೆ ಕಡಲ ತೀರ ಮಾತ್ರವಲ್ಲದೇ, ಉಡುಪಿ ಜಿಲ್ಲೆಯ ಬಹುತೇಕ ಕಡಲ ತೀರ ಪ್ರದೇಶಗಳಲ್ಲಿ ಇಂದು ಲಕ್ಷಾಂತರ ಜನ ಸಮುದ್ರ ಸ್ನಾನ ಕೈಗೊಂಡಿದ್ದಾರೆ.

ಈ ಕುರಿತು ಅರ್ಚಕ ರಮೇಶ್ ಭಟ್ ಅವರು ಮಾತನಾಡಿದ್ದು, ''ಎಳ್ಳು ಅಮಾವಾಸ್ಯೆಯಂದು ತಿಲ ಹೋಮವನ್ನು ಮಾಡುತ್ತಾರೆ. ತಿಲದಲ್ಲಿ ಹೋಮ ಮಾಡಿದರೆ ಇಹ ಜನ್ಮದಲ್ಲಿ ಮಾಡಿರುವ ಎಲ್ಲ ಪಾಪ ಪರಿಹಾರ ಆಗುತ್ತದೆ. ಈ ರೀತಿ ಪಾಪ ಪರಿಹಾರವಾದರೆ ನಾನು ಮೋಕ್ಷವನ್ನು ಅನುಗ್ರಹ ಮಾಡಿಕೊಡುತ್ತೇನೆ ಎಂದು ವಿಷ್ಣುದೇವರು ಹೇಳಿದ್ದಾರೆ. ಅದೇ ರೀತಿ ಇವತ್ತು ಮೋಕ್ಷ ನಾರಾಯಣದ ಪ್ರೀತ್ಯರ್ಥವಾಗಿ ಅಷ್ಟಾಕ್ಷರಿ ಮಂತ್ರದಿಂದ ಅಥವಾ ಪ್ರೇತಕ್ಕೆ ಮೋಕ್ಷ ಪ್ರಾಪ್ತಿಯಾಗುವ ವಿಶೇಷ ಮಂತ್ರಗಳಿಂದ ತಿಲಹೋಮಾದಿ ಕಾರ್ಯಕ್ರಮಗಳು ಭರದಿಂದ ಸಾಗುತ್ತಿದೆ. ಅದೇ ರೀತಿಯಲ್ಲಿ ಭಕ್ತರೂ ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ತೀರ್ಥ ಸ್ನಾನ, ದೇವತಾ ಸ್ನಾನ ಇತ್ಯಾದಿಗಳನ್ನೆಲ್ಲ ಶ್ರದ್ಧಾ ಭಕ್ತಿಯಿಂದ ಮಾಡಿ ಅವರವರ ಪಿತೃಗಳಿಗೆ ಮೋಕ್ಷವನ್ನು ಕೊಡುವಂತಹ ಕೆಲಸವನ್ನು ಕೂಡಾ ಇವತ್ತಿನ ದಿವಸ ಮಾಡುತ್ತಿದ್ದಾರೆ'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಉತ್ತರಕನ್ನಡ: ದೇವಸ್ಥಾನಗಳಿಗೆ ಡಿಸಿಎಂ ಡಿಕೆಶಿ ಭೇಟಿ; ವಿಶೇಷ ಪೂಜೆ

Last Updated : December 19, 2025 at 5:05 PM IST