ETV Bharat / state

ಎಸ್ಐಆರ್ ಪ್ರಕ್ರಿಯೆ ವಿರೋಧಿಸಿ 'ಚುನಾವಣಾ ಆಯೋಗ ಚಲೋ': ಅಂತಿಮ ಪಟ್ಟಿ ಒಪ್ಪದಂತೆ ರಾಜ್ಯ ಸರ್ಕಾರಕ್ಕೆ ನಟ ಪ್ರಕಾಶ್ ರಾಜ್ ಮನವಿ

ಎಸ್ಐಆರ್ ಎನ್ನುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಹಾಳುಮಾಡುವ ಬೃಹತ್ ಷಡ್ಯಂತ್ರ ಹಾಗೂ ಮೋಸ ಎಂದು ನಟ ಪ್ರಕಾಶ್ ರಾಜ್ ವಾಗ್ದಾಳಿ ನಡೆಸಿದ್ದಾರೆ.

Actor Prakash Raj
ನಟ ಪ್ರಕಾಶ್ ರಾಜ್ (ETV Bharat)
author img

By ETV Bharat Karnataka Team

Published : September 1, 2026 at 5:03 PM IST

2 Min Read
Choose ETV Bharat

​ಬೆಂಗಳೂರು: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಹೆಸರಿನಲ್ಲಿ ಕೋಟ್ಯಂತರ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಬಹುಭಾಷಾ ನಟ ಪ್ರಕಾಶ್ ರಾಜ್ ನೇತೃತ್ವದಲ್ಲಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಚುನಾವಣಾ ಆಯೋಗ ಚಲೋ ಬೃಹತ್ ಪ್ರತಿಭಟನೆ ನಡೆಯಿತು.

ವಿವಿಧ ಸಂಘಟನೆಗಳು ಹಾಗೂ ಬಾಧಿತ ಮತದಾರರು ಭಾಗವಹಿಸಿದ್ದ ಈ ಸಮಾವೇಶದಲ್ಲಿ, ಎಲ್ಲರೂ ಒಟ್ಟಾಗಿ ‘ನನ್ನ ಮತ ನನ್ನ ಹಕ್ಕು’ ಎಂದು ಪ್ರತಿಜ್ಞೆ ಸ್ವೀಕರಿಸಿದರು.

ಎಸ್ಐಆರ್ ಪ್ರಕ್ರಿಯೆ ವಿರೋಧಿಸಿ ಚುನಾವಣಾ ಆಯೋಗ ಚಲೋ (ETV Bharat)

​ವೇದಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಪ್ರಕಾಶ್ ರಾಜ್, ಎಸ್ಐಆರ್ ಎನ್ನುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಹಾಳುಮಾಡುವ ಬೃಹತ್ ಷಡ್ಯಂತ್ರ ಹಾಗೂ ಮೋಸ ಎಂದು ಕಟುವಾಗಿ ವಾಗ್ದಾಳಿ ನಡೆಸಿದರು. ಮುಂದಿನ ಚುನಾವಣೆಗೆ ಇನ್ನೂ ಎರಡು ವರ್ಷ ಸಮಯವಿರುವಾಗ, T20 ಮ್ಯಾಚ್‌ನಂತೆ ಆತುರಾತುರವಾಗಿ ಈ ಪ್ರಕ್ರಿಯೆ ನಡೆಸುತ್ತಿರುವ ಉದ್ದೇಶವೇನು ಎಂದು ಪ್ರಶ್ನಿಸಿದರು.

ಮತದಾರರಿಗೆ ಸರಿಯಾದ ಅರಿವು ಮೂಡಿಸದೇ, ಬಿಎಲ್‌ಓ ಸಿಬ್ಬಂದಿಗೆ ಸರಿಯಾದ ತರಬೇತಿ ನೀಡದೇ ಪರಿಶೀಲನೆ ಮುಗಿಸಿರುವುದನ್ನ ಖಂಡಿಸಿದರು. ಈ ದೇಶದಲ್ಲಿ ಬೇರೆ ಮನೆಗೆ ಸ್ಥಳಾಂತರಗೊಳ್ಳುವುದು ಮಹಾಪಾಪವೇ, ಉದ್ಯೋಗಕ್ಕಾಗಿ ಮನೆ ಬದಲಿಸಿದ ಶ್ರಮಿಕರು ಫಾರ್ಮ್-6 ಹಿಡಿದು ನಿಮ್ಮ ಮುಂದೆ ಸಾಲಿನಲ್ಲಿ ನಿಲ್ಲಬೇಕೇ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ವರ್ಷಕ್ಕೆ ಸುಮಾರು 4 ಲಕ್ಷ ಜನ ಮೃತರಾಗುತ್ತಾರೆ. ಆದರೆ ನೀವು 14 ಲಕ್ಷ ಜನ ಸತ್ತಿದ್ದಾರೆ ಎಂದು ತೋರಿಸಿರುವುದು ಹೇಗೆ? ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಪ್ರಶ್ನಿಸಿದ ಅವರು ನಾಗರಿಕರನ್ನ ‘ಆದರ್ಸ್’ ಎಂದು ವರ್ಗೀಕರಿಸಿರುವುದರ ಹಿಂದೆ ದಲಿತರು, ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರನ್ನ ಗುರಿಯಾಗಿಸಿರುವುದು ಕಾಣುತ್ತಿದೆ ಎಂದು ಆರೋಪಿಸಿದರು.

ಅಲ್ಲದೇ ಮತದಾರರ ಪರವಾಗಿ ನಿಲ್ಲಲು ಅಗತ್ಯಬಿದ್ದರೆ ಒಂದೆರಡು ಸಿನಿಮಾಗಳನ್ನ ತೊರೆದು ಬೀದಿಗಿಳಿದು ಹೋರಾಡಲು ಸಿದ್ಧನಿದ್ದೇನೆ, ಸಾಧ್ಯವಾದರೆ ತಡೆಯಿರಿ ಎಂದು ಸವಾಲೆಸೆದರು.

ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಮತ್ತೋರ್ವ ಬಹುಭಾಷಾ ನಟ ಕಿಶೋರ್, ಎಸ್‌ಐಆರ್ ಪ್ರಕ್ರಿಯೆ ನ್ಯಾಯಸಮ್ಮತವಾಗಿ ನಡೆದರೆ ಒಪ್ಪಬಹುದು. ಆದರೆ, ಆಡಳಿತಾತ್ಮಕ ಪ್ರಕ್ರಿಯೆಯಾಗಿರದೇ ನಾಗರಿಕರ ಮೂಲಭೂತ ಮತದಾನದ ಹಕ್ಕನ್ನು ಕಸಿದುಕೊಳ್ಳುವ ವ್ಯವಸ್ಥಿತ ಸಂಚಾಗಿದೆ ಎಂದು ಆರೋಪಿಸಿದರು.

ಸಂವಿಧಾನ ನೀಡಿರುವ ಸಮಾನತೆ ಮತ್ತು ಹಕ್ಕುಗಳನ್ನ ಕಿತ್ತುಕೊಂಡು ಆರ್‌ಎಸ್ಎಸ್, ಮನುವಾದಿ ಮನಸ್ಥಿತಿಯ ವ್ಯವಸ್ಥೆಯನ್ನ ಮತ್ತೆ ತರಲು ಹವಣಿಸಲಾಗುತ್ತಿದೆ. ಚುನಾವಣೆ ಆಯೋಗದ ಆಯುಕ್ತರ ಆಯ್ಕೆ ಸಮಿತಿಯಿಂದ ಮುಖ್ಯ ನ್ಯಾಯಮೂರ್ತಿಗಳನ್ನು ಹೊರಗಿಟ್ಟಿರುವುದು ಸ್ವಾಯತ್ತ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕುಸಿಯುವಂತೆ ಮಾಡಿದೆ. ಈ ರೀತಿಯಾಗಿ ಮತದಾರರ ಪಟ್ಟಿಯಿಂದ ಬಡವರು ಹಾಗೂ ಅಲ್ಪಸಂಖ್ಯಾತರ ಹೆಸರುಗಳನ್ನ ತೆಗೆದು ಹಾಕುವುದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿದೆ. ಪ್ರತಿಯೊಬ್ಬ ನಾಗರಿಕನೂ ತನ್ನ ಮತದಾನದ ಹಕ್ಕನ್ನ ರಕ್ಷಿಸಿಕೊಳ್ಳಲು ಜಾಗೃತರಾಗಬೇಕು ಮತ್ತು ಮಾನವೀಯ ಮೌಲ್ಯಗಳನ್ನು ಹಾಗೂ ಸಂವಿಧಾನದ ರಕ್ಷಣೆಯನ್ನು ಎತ್ತಿಹಿಡಿಯಲು ಮುಂದೆ ಬರಬೇಕು ಎಂದರು.

​ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಚಿವ ರಾಮಲಿಂಗಾರೆಡ್ಡಿ ಅವರಲ್ಲಿ ಪ್ರಕಾಶ್ ರಾಜ್ ಪ್ರಮುಖ ಮನವಿಗಳನ್ನು ಸಲ್ಲಿಸಿದರು. ಸಾರ್ವಜನಿಕರ ಪ್ರಶ್ನೆಗಳ ಪತ್ರವನ್ನು ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅವರಿಗೆ ತಲುಪಿಸಬೇಕು, ರಾಜ್ಯ ಸರ್ಕಾರ ಈ ಸಂದರ್ಭದಲ್ಲಿ ಅಸಹಾಯಕವಾಗಿ ನಿಲ್ಲದೇ ಜನರ ಪರವಾಗಿ ದೃಢ ನಿರ್ಧಾರ ತಳೆಯಬೇಕು ಮತ್ತು ಈ ಲೋಪಭರಿತ ಎಸ್ಐಆರ್ ಅಂತಿಮ ಪಟ್ಟಿಯನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಬಾರದು ಎಂದು ಒತ್ತಾಯಿಸಿದರು.

​ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಕೇಂದ್ರ ಸರ್ಕಾರವು ಚುನಾವಣಾ ಆಯೋಗ ಮತ್ತು ತನಿಖಾ ಸಂಸ್ಥೆಗಳನ್ನ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಎಸ್ಐಆರ್ ಪ್ರಕ್ರಿಯೆಯಿಂದ ಪಶ್ಚಿಮ ಬಂಗಾಳ ಮತ್ತಿತರ ರಾಜ್ಯಗಳಲ್ಲಿ ಆಗಿರುವ ವಿದ್ಯಮಾನಗಳ ಅರಿವು ತಮಗಿದೆ. ದೇಶದ ಯುವ ಜನತೆಗೂ ಇದು ಅರಿವಿಗೆ ಬರುತ್ತಿರುವುದರಿಂದ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಪ್ರತಿಭಟನಾಕಾರರ ಎಲ್ಲಾ ಬೇಡಿಕೆಗಳನ್ನ ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ತಲುಪಿಸುವುದಾಗಿ ಭರವಸೆ ನೀಡಿದರು.

ನಂತರ ರಾಜ್ಯ ಚುನಾವಣಾ ಆಯೋಗಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾ ನಿರತರನ್ನ ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು.

ಇದನ್ನೂ ಓದಿ: ಕಾರವಾರ: ನೋ ಮ್ಯಾಪಿಂಗ್, ತಾರ್ಕಿಕ ವ್ಯತ್ಯಾಸ ಕಂಡುಬಂದ 65,330 ಮತದಾರರಿಗೆ ನೋಟಿಸ್ ಜಾರಿ