ಸಾರ್ವಜನಿಕ ಧೂಮಪಾನ ಪ್ರಶ್ನಿಸಿದ್ದಕ್ಕೆ ವ್ಯಕ್ತಿಯ ಕೊಲೆ: 8 ಮಂದಿಗೆ ಜೀವಾವಧಿ ಶಿಕ್ಷೆ
ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಿದ್ದ ಪ್ರಕರಣದಲ್ಲಿ 8 ಮಂದಿ ಅಪರಾಧಿಗಳಿಗೆ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.

Published : August 29, 2026 at 1:01 PM IST
ಬೆಂಗಳೂರು: ಸಾರ್ವಜನಿಕವಾಗಿ ಧೂಮಪಾನ ಮಾಡುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ವ್ಯಕ್ತಿಯೊಬ್ಬರನ್ನು ಭೀಕರವಾಗಿ ಹತ್ಯೆಗೈದಿದ್ದ ಪ್ರಕರಣದಲ್ಲಿ 8 ಮಂದಿ ಅಪರಾಧಿಗಳಿಗೆ ಬೆಂಗಳೂರಿನ 58ನೇ ಹೆಚ್ಚುವರಿ ಸಿಟಿ ಸಿವಿಲ್ ಹಾಗೂ ಸೆಷನ್ಸ್ ನ್ಯಾಯಾಲಯ ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಿದೆ.
ವಿವೇಕನಗರದ ನಿವಾಸಿಗಳಾದ ಜೆರಾಲ್ಡ್ ಆರೋಗ್ಯರಾಜ್, ಜೇಮ್ಸ್ ಕುಮಾರ್, ವೆಂಕಟೇಶ್, ವಿಜಯ್, ಕಿರಣ್, ವಿಕ್ರಮ್, ವಿನೋದ್ ಕುಮಾರ್ ಹಾಗೂ ವಿಜಯ್ ಎಂಬವರು ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳು. 2017ರ ಅಕ್ಟೋಬರ್ 1ರಂದು ಶಾಂತಿನಗರದ ಬಿ ಸ್ಟ್ರೀಟ್‌ನಲ್ಲಿ ಹರೀಶ್ (32) ಎಂಬವರ ಹತ್ಯೆ ನಡೆದಿತ್ತು.
ಪ್ರಕರಣದ ಹಿನ್ನೆಲೆ: ಮನೆಯ ಹೊರಗೆ ನಿಂತಿದ್ದ ಹರೀಶ್, ಆರೋಪಿಗಳು ಸಾರ್ವಜನಿಕವಾಗಿ ಧೂಮಪಾನ ಮಾಡುತ್ತಿರುವುದನ್ನು ಗಮನಿಸಿ, ಅವರನ್ನು ಪ್ರಶ್ನಿಸಿದ್ದರು. ಧೂಮಪಾನ ಮಾಡುವುದನ್ನು ನಿಲ್ಲಿಸಿ ಸ್ಥಳದಿಂದ ಹೋಗದಿದ್ದರೆ ಪೊಲೀಸರಿಗೆ ದೂರು ನೀಡುವುದಾಗಿ ಹರೀಶ್ ಎಚ್ಚರಿಸಿದಾಗ ಕೆರಳಿದ್ದ ಆರೋಪಿಗಳು ಸ್ಥಳದಿಂದ ತೆರಳಿದ್ದರು.
ಆದರೆ ರಾತ್ರಿ 12:30ರ ಸುಮಾರಿಗೆ ಆರೋಪಿಗಳು ಲಾಂಗ್ ಹಾಗೂ ಇತರ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ತಮ್ಮ ಇತರ ಸಹಚರರೊಂದಿಗೆ ಹರೀಶ್ ಅವರ ಮನೆ ಬಳಿ ಮರಳಿ ಬಂದಿದ್ದರು. ಈ ವೇಳೆ, ತಮ್ಮ ಮೂವರು ಸ್ನೇಹಿತರೊಂದಿಗೆ ನಿಂತಿದ್ದ ಹರೀಶ್ ಮೇಲೆ ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು. ಗಲಾಟೆ ಕೇಳಿ ಹೊರಬಂದ ಹರೀಶ್ ಅವರ ತಾಯಿ ಮತ್ತು ಪತ್ನಿಯ ಕಣ್ಣೆದುರೇ ಈ ಭೀಕರ ಹತ್ಯೆ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಆಶೋಕನಗರ ಠಾಣೆ ಪೊಲೀಸರು ಪ್ರತ್ಯಕ್ಷದರ್ಶಿಗಳಾಗಿದ್ದ ಮೃತನ ತಾಯಿ, ಪತ್ನಿ ಹಾಗೂ ಮೂವರು ಸ್ನೇಹಿತರ ಹೇಳಿಕೆ ಆಧರಿಸಿ ಚಾರ್ಜ್ಶೀಟ್ ಸಲ್ಲಿಸಿದ್ದರು.
ನಂತರ ಬಂಧನವಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಆರೋಪಿಗಳನ್ನು ತಹಶೀಲ್ದಾರ್ ಸಮ್ಮುಖದಲ್ಲಿ ಮೂರು ಬಾರಿ ಗುರುತಿನ ಪರೇಡ್ ನಡೆಸಲಾಗಿತ್ತು. ಪರೇಡ್ ಸಮಯದಲ್ಲಿಯೂ ಐದೂ ಸಾಕ್ಷಿಗಳು ಎಲ್ಲ ಆರೋಪಿಗಳನ್ನೂ ಯಾವುದೇ ಗೊಂದಲವಿಲ್ಲದೆ ನಿಖರವಾಗಿ ಗುರುತಿಸಿದ್ದರು. ಪ್ರಾಸಿಕ್ಯೂಷನ್ ಮಂಡಿಸಿದ ಈ ಬಲವಾದ ಸಾಕ್ಷ್ಯಗಳ ಆಧಾರದ ಮೇಲೆ ನ್ಯಾಯಾಲಯ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ: ಮಂಗಳೂರು:ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ವಾರೆಂಟ್ ಆರೋಪಿಗಳ ಬಂಧನ

