ETV Bharat / state

ಕಡಬದ ಯುವಕ ಐರ್ಲೆಂಡ್‌ನಲ್ಲಿ ಸಾವು; 15 ದಿನ ಕಳೆದರೂ ಮೃತದೇಹ ತರಲಾಗದೆ ಕುಟುಂಬ ಕಂಗಾಲು

ಐರ್ಲೆಂಡ್‌ ರಾಜಧಾನಿ ಡಬ್ಲಿನ್ ನಗರದ ಫಿಂಗ್ಲಾಸ್‌ನ ಚಾರ್ಲ್ಸ್‌ಟೌನ್ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ಫೆಬ್ರವರಿ 17ರಂದು ಸಾಂಜೋ ಸುನಿಲ್ ಎಂಬ ಕಡಬದ ಯುವಕ ಶವವಾಗಿ ಪತ್ತೆಯಾಗಿದ್ದರು.

Sanjo Sunil
ಸಾಂಜೋ ಸುನಿಲ್ (ETV Bharat)
author img

By ETV Bharat Karnataka Team

Published : March 4, 2026 at 10:33 AM IST

1 Min Read
Choose ETV Bharat

ಕಡಬ(ದಕ್ಷಿಣ ಕನ್ನಡ): ಐರ್ಲೆಂಡ್‌ನ ಡಬ್ಲಿನ್​ನಲ್ಲಿ ಮೃತಪಟ್ಟ ಸಾಂಜೋ ಸುನಿಲ್ ಅವರ ಮೃತದೇಹವನ್ನು ಹುಟ್ಟೂರಾದ ಕಡಬಕ್ಕೆ ತರಲು ಅಗತ್ಯ ಕಾನೂನು ಪ್ರಕ್ರಿಯೆಗಳು ಬಹುತೇಕ ಪೂರ್ಣಗೊಂಡಿವೆ. ಆದರೆ ಯುದ್ಧ ಸನ್ನಿವೇಶ ಎದುರಾಗಿ 15 ದಿನ ಕಳೆದರೂ ಮೃತದೇಹವನ್ನು ನೋಡಲಾಗದೆ ಕುಟುಂಬದವರು ಕಂಗಾಲಾಗಿದ್ದಾರೆ.

ವಿದೇಶದಲ್ಲಿ ಮಗನನ್ನು ಕಳೆದುಕೊಂಡ ನೋವಿನ ನಡುವೆ, ಕೊನೆಯ ಮುಖ ನೋಡಲಾಗದ ಭೀತಿಯೂ ಕುಟುಂಬದವರನ್ನು ಕಾಡುತ್ತಿದೆ. ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರು ಸಂಬಂಧಿತ ಐರಿಶ್ ಅಧಿಕಾರಿಗಳು ಹಾಗೂ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಮೃತದೇಹವನ್ನು ಶೀಘ್ರವಾಗಿ ಭಾರತಕ್ಕೆ ತರಲು ಸಕ್ರಿಯವಾಗಿ ಪ್ರಯತ್ನಿಸುತ್ತಿದ್ದಾರೆ.

ಮೃತದೇಹ ಶನಿವಾರ ಹುಟ್ಟೂರು ತಲುಪುವ ನಿರೀಕ್ಷೆ: ಮಗನ ಪಾರ್ಥಿವ ಶರೀರವನ್ನು ಶೀಘ್ರವಾಗಿ ಹುಟ್ಟೂರಿಗೆ ತಂದು ಅಂತಿಮ ವಿಧಿವಿಧಾನಗಳನ್ನು ನಡೆಸಲು ಕುಟುಂಬ ಹಪಹಪಿಸುತ್ತಿದೆ. ಇದೇ ಶುಕ್ರವಾರ ಮೃತದೇಹವನ್ನು ತರುವ ಸಲುವಾಗಿ ಕಾರ್ಗೋ ವಿಮಾನ ಬುಕ್ ಆಗಿದ್ದು, ಪ್ರಯಾಣದ ನಡುವೆ ಯುದ್ಧ ಸನ್ನಿವೇಶ ಎದುರಾಗದೇ ಇದ್ದರೆ ಮೃತದೇಹ ಶನಿವಾರ ಕಡಬದ ವಿಮಲಗಿರಿ ತಲುಪಲಿದೆ. ವಿಮಲಗಿರಿ ಸಂತ ಮರಿಯಮ್ಮನವರ ದೇವಾಲಯದ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಲಿದ್ದೇವೆ ಎಂದು ಕುಟುಂಬಸ್ಥರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಡಬ್ಲಿನ್‌ನ ಫಿಂಗ್ಲಾಸ್ ಪ್ರದೇಶದಲ್ಲಿನ ಮಲಂಕರ ಕ್ಯಾಥೋಲಿಕ್ ಬಾಪಲ್​ನಲ್ಲಿ ಸಾಂಜೋ ಸುನಿಲ್ ಅಂತಿಮ ದರ್ಶನಕ್ಕೆ ನಿನ್ನೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ನೆಲೆಸಿರುವ ಭಾರತೀಯ ಸಮುದಾಯದವರು ಅಂತಿಮ ನಮನ ಸಲ್ಲಿಸಿದ್ದರು.

ಘಟನೆಯ ಹಿನ್ನೆಲೆ: ಸಾಂಜೋ ಸುನಿಲ್ ಅವರು ಐರ್ಲೆಂಡ್‌ನ ರಾಜಧಾನಿ ಡಬ್ಲಿನ್ ನಗರದ ಫಿಂಗ್ಲಾಸ್‌ನ ಚಾರ್ಲ್ಸ್‌ಟೌನ್ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ಫೆಬ್ರವರಿ 17ರಂದು ಶವವಾಗಿ ಪತ್ತೆಯಾಗಿದ್ದರು. ಡಬ್ಲಿನ್‌ನಲ್ಲಿ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿರುವ ಪತ್ನಿ ಲಿಶ್ಮಾ ಫಿಲಿಪ್ ಅವರೊಂದಿಗೆ ಅವಲಂಬಿತ (Dependent) ವೀಸಾದಡಿ ಅಲ್ಲಿಗೆ ತೆರಳಿದ್ದರು. ದಂಪತಿ ಸುಮಾರು ಒಂದು ವರ್ಷದ ಹಿಂದೆ ವಿವಾಹವಾಗಿದ್ದು, ಇದಕ್ಕೂ ಮುನ್ನ ಸಾಂಜೋ ಸುನಿಲ್ ಇಸ್ರೇಲ್​ನಲ್ಲಿ ವಾಸವಾಗಿದ್ದರು.

ಆತ್ಮಹತ್ಯೆ ಶಂಕೆ, ಐರಿಶ್ ಪೊಲೀಸರಿಂದ ತನಿಖೆ: ಐರ್ಲೆಂಡ್‌ ಪೊಲೀಸರು ಘಟನೆಯ ತನಿಖೆ ಆರಂಭಿಸಿದ್ದಾರೆ. ತನಿಖೆ ಪೂರ್ಣಗೊಂಡ ನಂತರವೇ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಇದನ್ನೂ ಓದಿ: ದಕ್ಷಿಣ ಕನ್ನಡ: ಓಮನ್‌ನಲ್ಲಿ ಸೋಮೇಶ್ವರದ ಯುವಕ ಆತ್ಮಹತ್ಯೆ