ಸವಾರಳೊಂದಿಗೆ ಅಸಭ್ಯ ವರ್ತನೆ ಆರೋಪ: ಇ - ಟ್ಯಾಕ್ಸಿ ಚಾಲಕನ ಬಂಧನ
ಸವಾರಳೊಂದಿಗೆ ಅಸಭ್ಯ ವರ್ತನೆ ತೋರಿದ ಆರೋಪದಡಿ ಇ - ಟ್ಯಾಕ್ಸಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

Published : January 10, 2026 at 4:19 PM IST
ಬೆಂಗಳೂರು: ಸಹ ಸವಾರಳೊಂದಿಗೆ ಅಸಭ್ಯ ವರ್ತನೆ ಪ್ರದರ್ಶಿಸಿ ಬೆದರಿಕೆ ಹಾಕಿದ್ದ ಆರೋಪದಡಿ ಬೈಕ್ ಟ್ಯಾಕ್ಸಿ ಚಾಲಕನನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಕಂಪನಿಯ ವ್ಯವಸ್ಥಾಪಕಿ ಆಗಿರುವ 29 ವರ್ಷದ ಮಹಿಳೆಯೊಬ್ಬರು ನೀಡಿರುವ ದೂರಿನನ್ವಯ ವಿವೇಕ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಠಾಣಾ ಪೊಲೀಸರು ತಿಳಿಸಿದ್ದಾರೆ.
ಮಾನ್ಯತಾ ಟೆಕ್ ಪಾರ್ಕ್‌ನಲ್ಲಿನ ಖಾಸಗಿ ಕಂಪನಿ ವ್ಯವಸ್ಥಾಪಕಿಯಾಗಿರುವ ದೂರುದಾರೆ, ಜನವರಿ 7ರಂದು ಸಂಚಾರ ದಟ್ಟಣೆ ಹೆಚ್ಚಿದೆ ಎಂದು ನಾಗರಭಾವಿಯಿಂದ ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದರು. ಈ ವೇಳೆ, ದೂರುದಾರೆಯನ್ನು ಪಿಕ್ ಮಾಡಿದ್ದ ಆರೋಪಿ ವಿವೇಕ್, ಮಾರ್ಗಮಧ್ಯೆ ಉದ್ದೇಶಪೂರ್ವಕವಾಗಿ ಹಿಂದೆ ಬಾಗುತ್ತ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಲಾರಂಭಿಸಿದ್ದ. ದೂರುದಾರ ಮಹಿಳೆ ಈತನ ವರ್ತನೆಯನ್ನು ಪ್ರಶ್ನಿಸಿದಾಗ ಏಕವಚನದಲ್ಲಿ ಮಾತನಾಡುತ್ತಾ ಬೆದರಿಕೆ ಹಾಕಲಾರಂಭಿಸಿದ್ದ. ಮಹಿಳೆ ಕೂಗಿಕೊಂಡಾಗ ಬೈಕ್ ನಿಲ್ಲಿಸಿದ್ದ ಆರೋಪಿ, ಆಕೆಯನ್ನ ಅಸಭ್ಯವಾಗಿ ಸ್ಪರ್ಶಿಸುತ್ತ ಹಣ ಪಾವತಿಸುವಂತೆ ಬೆದರಿಕೆ ಹಾಕಿದ್ದ. ತಕ್ಷಣ ಆ ಮಹಿಳೆ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದರು. ಅಷ್ಟರಲ್ಲೇ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದ. ನೊಂದ ಮಹಿಳೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ತನಿಖೆ ಕೈಗೊಂಡ ಪೊಲೀಸರು, ಆರೋಪಿ ವಿವೇಕ್‌ನನ್ನು ಪತ್ತೆಹಚ್ಚಿ ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಇದನ್ನು ಓದಿ: ಬೆಳಗಾವಿ: ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ
ಇಂದಿರಾ ನಗರದಲ್ಲಿ ಅಪಘಾತ, ರಸ್ತೆ ಪಕ್ಕದಲ್ಲಿ ನಿಂತಿದ್ದವರು ಜಸ್ಟ್ ಪಾರು: ಕಾರು ಚಾಲಕನ ನಿರ್ಲಕ್ಷ್ಯತನದಿಂದ ಭಾರಿ ಅಪಘಾತ ಸಂಭವಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಗುರುವಾರ ರಾತ್ರಿ 11:34ರ ಸುಮಾರಿಗೆ ಇಂದಿರಾ ನಗರದ 100 ಫೀಟ್ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ. ಅಡ್ಡ ರಸ್ತೆಯಿಂದ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದ ಚಾಲಕನೊಬ್ಬ, ಎಡ ಭಾಗಕ್ಕೆ ತಿರುವು ಪಡೆಯುವ ಬದಲು ರಸ್ತೆ ವಿಭಜಕದತ್ತ ನುಗ್ಗಿಸಿದ್ದ. ನಿಯಂತ್ರಣ ತಪ್ಪಿದ ಕಾರು, ವಿಭಜಕದ ಮೇಲೆ ಹತ್ತಿ ರಸ್ತೆಯ ಮತ್ತೊಂದು ಬದಿಗೆ ಹಾರಿ ಬಂದು ಹೋಟೆಲ್ ಕಟ್ಟಡಕ್ಕೆ ಡಿಕ್ಕಿಯಾಗಿದೆ. ಊಟ ಮಾಡಿಕೊಂಡು ಹೋಟೆಲ್ ಮುಂದೆ ನಿಂತಿದ್ದ ಸ್ನೇಹಿತರ ಗುಂಪು ತಕ್ಷಣ ಎಚ್ಚೆತ್ತು ಪಕ್ಕಕ್ಕೆ ಸರಿದಿದ್ದರಿಂದ ಭಾರಿ ಅವಘಡವೊಂದು ತಪ್ಪಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಚಾಲಕ ಮದ್ಯಪಾನ ಮಾಡಿದ್ದರಿಂದ ಅಪಘಾತ ಸಂಭವಿಸಿದೆ ಎಂಬ ಶಂಕೆ ವ್ಯಕ್ತಪಡಿಸಿಲಾಗಿದ್ದು, ಜೀವನ್ ಭೀಮಾನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಡೆಲಿವರಿ ಬಾಯ್ನಿಂದ ಮಹಿಳೆಯರಿಗೆ ಅಸಭ್ಯ ಸಂದೇಶ ರವಾನೆ: ಹುಬ್ಬಳ್ಳಿಯಲ್ಲಿ ಆರೋಪಿ ಬಂಧನ
ದಾವಣಗೆರೆಯಲ್ಲಿ ಖಾಸಗಿ ಶಾಲೆ ಬಸ್ ಅಪಘಾತ: ಪ್ರತ್ಯೇಕ ಘಟನೆಯಲ್ಲಿ ಖಾಸಗಿ ಶಾಲೆಯ ಬಸ್ ಅಪಘಾತ ಆಗಿದ್ದು, ಭಾರೀ ಅನಾಹುತ ತಪ್ಪಿದೆ. ದಾವಣಗೆರೆ ನಗರದ ಲೋಕಿಕೆರೆ ಬ್ರಿಡ್ಜ್ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈ ಅಪಘಾತ ನಡೆದಿದೆ. ಶನಿವಾರ ಆಗಿದ್ದರಿಂದ ಮಕ್ಕಳನ್ನು ಮನೆಗೆ ಬಿಡಲು ತೆರಳುವ ವೇಳೆ ಈ ಅವಘಡ ಸಂಭವಿಸಿದೆ. ಚಾಲಕನ ಅಜಾಗರೂಕತೆಯಿಂದ ಈ ಘಟನೆ ನಡೆದಿದ್ದು, ಬಸ್ ಸರ್ವಿಸ್ ರಸ್ತೆಯಿಂದ ಕೆಳಗಿಳಿದಿದೆ. ತಕ್ಷಣ ಬಸ್ನಲ್ಲಿದ್ದ 25 ಮಕ್ಕಳನ್ನು ಸ್ಥಳೀಯರು ಕಾಪಾಡಿದ್ದಾರೆ. ಬಸ್ ಪಲ್ಟಿಯಾಗಿದ್ದರೆ ದೊಡ್ಡ ಅನಾಹುತ ಸಂಭವಿಸುತಿತ್ತು. ಸರ್ವಿಸ್ ರಸ್ತೆಯ ಕಂದಕಕ್ಕೆ ಬಸ್ ಇಳಿದಿರುವುದು ದೃಶ್ಯ ಎದೆ ನಡುಗಿಸುವಂತೆ ಇತ್ತು. ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸುರಕ್ಷಿತವಾಗಿ ಮನೆಗೆ ಸೇರಿಸಲಾಗಿದೆ. ಬಸ್ ಅಪಘಾತದ ಸ್ಥಳಕ್ಕೆ ಆಗಮಿಸಿದ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಘಟನೆ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

