ಡ್ರಂಕ್ ಅಂಡ್ ಡ್ರೈವ್: ಕಳೆದ 7 ದಿನಗಳಲ್ಲಿ 566 ಪ್ರಕರಣ ದಾಖಲಿಸಿದ ಸಂಚಾರ ಪೊಲೀಸರು
36, 654 ವಿವಿಧ ವಾಹಗಳನ್ನ ತಪಾಸಣೆ ನಡೆಸಲಾಗಿದ್ದು, ಕುಡಿದು ವಾಹನ ಚಲಾಯಿಸುತ್ತಿದ್ದವರು ಸಿಕ್ಕಿಬಿದ್ದಿದ್ದು, ಈ ಸಂಬಂಧ 566 ಪ್ರಕರಣ ದಾಖಲಿಸಲಾಗಿದೆ ಎಂದು ಸಂಚಾರ ಪೊಲೀಸರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Published : August 31, 2026 at 7:41 PM IST
ಬೆಂಗಳೂರು: ಮದ್ಯಪಾನ ಮಾಡಿ ವಾಹನ ಮಾಡಿರುವವರ ವಿರುದ್ದ ವಿಶೇಷ ಕಾರ್ಯಾಚರಣೆ ನಡೆಸಿರುವ ನಗರ ಸಂಚಾರ ಪೊಲೀಸರು ಕಳೆದೊಂದು ವಾರದಿಂದ 566 ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಾನಮತ್ತ ಚಾಲನೆ ಅಪಾಯಕಾರಿ ಎಂದು ಅರಿತಿದ್ದರೂ ವಾಹನ ಸವಾರರು ಹಾಗೂ ಚಾಲಕರು ಮದ್ಯದ ನಶೆ ಹತ್ತಿಸಿಕೊಂಡು ಅಪಪಘಾತಗಳಿಗೆ ಕಾರಣರಾಗುತ್ತಿದ್ದಾರೆ. ಸಂಭವಿಸುವ ಅನಾಹುತ ತಪ್ಪಿಸಲು ಹಾಗೂ ನಿರಂತರ ಜಾಗೃತಿ ಮೂಡಿಸುತ್ತಿದ್ದರೂ ವಾಹನ ಸವಾರರು ಮಾತ್ರ ಡ್ರಂಕ್ ಅಂಡ್ ಡ್ರೈವ್ ಮಾಡುತ್ತಿದ್ದಾರೆ.
ಇಂತಹ ವಾಹನ ಚಾಲಕರನ್ನ ಹತ್ತಿಕ್ಕಲು ಆ.24 ರಿಂದ 30ರವರೆಗೆ ನಗರದ 53 ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. 36, 654 ವಿವಿಧ ವಾಹಗಳನ್ನ ತಪಾಸಣೆ ನಡೆಸಲಾಗಿದ್ದು, ಕುಡಿದು ವಾಹನ ಚಲಾಯಿಸುತ್ತಿದ್ದವರು ಸಿಕ್ಕಿಬಿದ್ದಿದ್ದು, ಈ ಸಂಬಂಧ 566 ಪ್ರಕರಣ ದಾಖಲಿಸಲಾಗಿದೆ ಎಂದು ಸಂಚಾರ ಪೊಲೀಸರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೊದಲ ಬಾರಿಗೆ ಕುಡಿದು ಸಿಕ್ಕಿಬಿದ್ದರೆ 10 ಸಾವಿರ ದಂಡ ಅಥವಾ ಮೋಟಾರು ವಾಹನ ಕಾಯ್ದೆಯಡಿ 3ರಿಂದ 6 ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಮೊದಲ ಅಪರಾಧವೆಸಗಿ 3 ವರ್ಷಗಳ ಒಳಗೆ ಮತ್ತೆ ಸಿಕ್ಕಿಬಿದ್ದರೆ, 15 ಸಾವಿರ ದಂಡ ಅಥವಾ 2 ವರ್ಷಗಳವರೆಗೆ ಜೈಲು ಶಿಕ್ಷೆ ಜೊತೆಚಾಲನಾ ಪರವಾನಗಿ (ಡಿಎಲ್ ) ರದ್ದುಗೊಳಿಸಬಹುದಾಗಿದೆ.
ಪುನಾರವರ್ತಿತ ವಾಹನ ಸವಾರರ ಪರವಾನಗಿ ರದ್ದುಕೋರಿ ಆರ್ಟಿಓ ಅಧಿಕಾರಿಗಳಿಗೆ ಶಿಫಾರಸು ಮಾಡಲಾಗಿದ್ದು, ಈಗಾಗಲೇ ಕೆಲ ಸವಾರರ ಡಿಎಲ್ ಅನ್ನ ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ ಎಂದು ಹಿರಿಯ ಸಂಚಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಿಗದಿತ ಮಿತಿ ಮೀರಿ ವೇಗವಾಗಿ ಚಾಲನೆ ಮಾಡಿರುವವರ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದು ಕಳೆದೊಂದು ವಾರದಲ್ಲಿ 244 ಪ್ರಕರಣ ದಾಖಲಿಸಿ 2.48 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಪಾನಮತ್ತ ಚಾಲನೆ ಹಾಗೂ ವೇಗವಾಗಿ ವಾಹನ ಚಾಲನೆ ಮಾಡುವವರ ವಿರುದ್ಧ ನಿರಂತರವಾಗಿ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು ಎಂದು ಸಂಚಾರ ಪೊಲೀಸರು ಹೇಳಿದ್ದಾರೆ.
ಇದನ್ನು ಓದಿ:
ಮನೆ ಕಟ್ಟಿಸಿಕೊಡುವುದಾಗಿ ನಂಬಿಸಿ ವಂಚನೆ: ಆರೋಪಿಗೆ ರೂ 15.60 ಲಕ್ಷ ದಂಡ ವಿಧಿಸಿದ ಮಂಗಳೂರು ವಿಶೇಷ ನ್ಯಾಯಾಲಯ

