ಬಳ್ಳಾರಿ ವಲಯ ನೂತನ ಐಜಿಯಾಗಿ ಡಾ.ಹರ್ಷ ಪಿ.ಎಸ್ ಅಧಿಕಾರ ಸ್ವೀಕಾರ
ಬಳ್ಳಾರಿ ವಲಯದ ನೂತನ ಐಜಿಯಾಗಿ ಡಾ.ಹರ್ಷ ಪಿ.ಎಸ್ ಅಧಿಕಾರ ವಹಿಸಿಕೊಂಡರು.

Published : January 7, 2026 at 7:10 PM IST
ಬಳ್ಳಾರಿ: ಸರ್ಕಾರದ ಆದೇಶದಂತೆ ನಾನು ಈ ದಿನ ಐಜಿಯಾಗಿ ಸೇವೆಗೆ ವರದಿ ಮಾಡಿಕೊಂಡಿದ್ದೇನೆ. ಬಳ್ಳಾರಿ ವಲಯದಲ್ಲಿ ನಾಲ್ಕು ಜಿಲ್ಲೆಗಳಿವೆ. ಈಗ ತಾನೇ ನಾನು ವರದಿ ಮಾಡಿಕೊಂಡಿದ್ದೇನೆ. ಬಳ್ಳಾರಿ ಜಿಲ್ಲೆಯ ಅಧಿಕಾರಿಗಳೊಂದಿಗೆ ಸಭೆ ಮಾಡ್ತೇನೆ ಎಂದು ಬಳ್ಳಾರಿ ವಲಯದ ನೂತನ ಐಜಿ ಡಾ.ಹರ್ಷ ಪಿ.ಎಸ್ ತಿಳಿಸಿದರು.
ಅಧಿಕಾರ ವಹಿಸಿಕೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಲವಾರು ಘಟನೆಗಳು ನಡೆದಿರುವ ಹಿನ್ನೆಲೆ ಕಾನೂನು ಬದ್ಧವಾದ, ನಿಷ್ಪಕ್ಷಪಾತವಾದ ಭದ್ರ ಬುನಾದಿ ಏರ್ಪಡಿಸವ ಕುರಿತು ಸೂಚನೆ ನೀಡಿದ್ದೇನೆ. ಹಿರಿಯ ಅಧಿಕಾರಿಗಳು ಹಾಗೂ ಸರ್ಕಾರ ನೀಡಿದ ಸೂಚನೆ ಮೇರೆಗೆ ಕೆಲಸ ಮಾಡ್ತೇವೆ. ನಮ್ಮಲ್ಲಿ ಒಳ್ಳೆ ಅಧಿಕಾರಿಗಳು ಇದ್ದಾರೆ, ಕೆಲಸ ಮಾಡ್ತಾರೆ ಎಂದರು.
ನಾನು ಮಾಹಿತಿ ಪಡೆದು ಪ್ರಕರಣಗಳ ಕುರಿತು ಕ್ರಮ ಕೈಗೊಳ್ಳುವೆ. ಕಟ್ಟು ನಿಟ್ಟಾಗಿ ನಿಷ್ಪಕ್ಷಪಾತವಾಗಿ ಕಾನೂನು ಬದ್ಧವಾಗಿ ಕೆಲಸ ಮಾಡ್ತೇವೆ. ಬಳ್ಳಾರಿ ಸೇರಿದಂತೆ ವಲಯದ ಎಲ್ಲಾ ಜಿಲ್ಲೆಗಳು ಶಾಂತಿ ಪ್ರಿಯ ಜಿಲ್ಲೆಗಳು. ನಮ್ಮ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಾನೂನು ಸುವ್ಯವಸ್ಥೆ, ಅಪರಾಧಗಳ ವಿಚಾರವಾಗಿ ಕ್ರಮ ತೆಗೆದುಕೊಳ್ಳುತ್ತೇವೆ. ನಾನು ಭೌತಿಕವಾಗಿ ಸ್ಥಳ ಪರಿಶೀಲನೆ ಮಾಡ್ತೇನೆ. ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತೇನೆ. ಹೊಸ ಎಸ್ಪಿ ಅವರೂ ಕೂಡ ಇಂದು ವರದಿ ಮಾಡಿಕೊಳ್ಳುತ್ತಾರೆ. ಇಬ್ಬರೂ ಸ್ಥಳ ಪರಿಶೀಲನೆ ಮಾಡ್ತೇವೆ ಎಂದ ತಿಳಿಸಿದರು.
ಗೌರವ ವಂದನೆ ಸಲ್ಲಿಸುವ ಮೂಲಕ ನೂತನ ಐಜಿಪಿಯನ್ನು ಸಿಬ್ಬಂದಿ ಬರ ಮಾಡಿಕೊಂಡರು. ನೂತನ ಐಜಿಪಿ ಜೊತೆ ಬಳ್ಳಾರಿ ಇನ್ಚಾರ್ಜ್ ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರ್ ಇದ್ದರು.
ಡಿಐಜಿಪಿ ಎತ್ತಂಗಡಿ: ಬ್ಯಾನರ್ ಕಟ್ಟುವ ವಿಚಾರಕ್ಕೆ ಶಾಸಕರಾದ ಭರತ್ ರೆಡ್ಡಿ ಹಾಗೂ ಜನಾರ್ದನ ರೆಡ್ಡಿ ಬೆಂಬಲಿಗರ ನಡುವಿನ ಗಲಾಟೆ ಪ್ರಕರಣದಲ್ಲಿ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪವನ್ ನೆಜ್ಜೂರು ಅಮಾನತಿನ ಬಳಿಕ ಮತ್ತೋರ್ವ ಅಧಿಕಾರಿಯ ಎತ್ತಂಗಡಿಯಾಗಿದೆ. ಬಳ್ಳಾರಿ ವಲಯದ ಡಿಐಜಿಪಿ ವರ್ತಿಕಾ ಕಟಿಯಾರ್ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಡಿಐಜಿಪಿ ವರ್ತಿಕಾ ಕಟಿಯಾರ್ ಅವರನ್ನು ನಾಗರಿಕ ಹಕ್ಕುಗಳು ಮತ್ತು ಜಾರಿ ವಿಭಾಗಕ್ಕೆ ವರ್ಗಾವಣೆಗೊಳಿಸಲಾಗಿದ್ದು, ಬಳ್ಳಾರಿ ವಲಯದ ನೂತನ ಐಜಿಪಿಯಾಗಿ ಡಾ. ಪಿಎಸ್ ಹರ್ಷ ಅವರನ್ನು ನೇಮಕ ಮಾಡಲಾಗಿದೆ. ಪವನ್ ನೆಜ್ಜೂರು ಅವರ ಅಮಾನತಿನಿಂದ ತೆರವಾಗಿದ್ದ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಾನಕ್ಕೆ ಡಾ. ಸುಮನ್ ಡಿ. ಪೆನ್ನೆಕರ್ ಅವರನ್ನು ನೇಮಕಗೊಳಿಸಿ ಸರ್ಕಾರ ಆದೇಶಿಸಿದೆ.
ಜನಾರ್ದನ ರೆಡ್ಡಿ ಅವರ ಮನೆ ಮುಂದೆ ಬ್ಯಾನರ್ ಕಟ್ಟುವ ವಿಚಾರವಾಗಿ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಎಂಬುವವರು ಗುಂಡೇಟಿಗೆ ಬಲಿಯಾಗಿದ್ದರು. ಸ್ಥಳದಲ್ಲಿ ಪರಿಸ್ಥಿತಿ ನಿಭಾಯಿಸುವಲ್ಲಿ ಪೊಲೀಸರು ವಿಫಲವಾಗಿದ್ದಾರೆ ಎಂದು ಡಿಐಜಿಪಿ ವರ್ತಿಕಾ ಕಟಿಯಾರ್ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ, ಬಳ್ಳಾರಿ ಜಿಲ್ಲೆಯ ಎಸ್ಪಿ ಆಗಿದ್ದ ಪವನ್ ನೆಜ್ಜೂರು ಅವರನ್ನು ಅಮಾನತುಗೊಳಿಸಿ ಆದೇಶಿಸಿತ್ತು. ಜಿಲ್ಲೆಯ ಎಸ್ಪಿ ಆಗಿ ಅಧಿಕಾರ ಸ್ವೀಕರಿಸಿದ ಒಂದೇ ದಿನದಲ್ಲಿ ನೆಜ್ಜೂರು ಅವರು ಅಮಾನತಾಗಿದ್ದರು.
ಇವುಗಳನ್ನೂ ಓದಿ:

