ETV Bharat / state

ಚಿಕ್ಕಮಗಳೂರು: ಕಾಡಾನೆಗಳನ್ನು ಪತ್ತೆಹಚ್ಚಲು ಫೀಲ್ಡಿಗಿಳಿದ ಡಾಗ್ ಸ್ಕ್ವಾಡ್; ರೈತರ ಪ್ರಾಣ ಕಾಪಾಡುತ್ತಿವೆ ಎರಡು ಶ್ವಾನಗಳು

ಸಾರ್ವಜನಿಕರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುವ ಕಾಡಾನೆಗಳನ್ನು ಪತ್ತೆಹಚ್ಚಲು ಅರಣ್ಯ ಇಲಾಖೆ ಹೊಸ ಹೆಜ್ಜೆಯನ್ನು ಇಡಲು ಪ್ರಾರಂಭಿಸಿದ್ದು, ಶ್ವಾನಗಳನ್ನು ಬಳಕೆ ಮಾಡಿಕೊಳ್ಳುತ್ತಿದೆ.

dog-squad-enters-the-field-to-track-wild-elephants
ಕಾಡಾನೆಗಳನ್ನು ಪತ್ತೆ ಹಚ್ಚಲು ಫೀಲ್ಡ್​ಗೆ ಇಳಿದ ಶ್ವಾನಪಡೆ (ETV Bharat)
author img

By ETV Bharat Karnataka Team

Published : February 26, 2026 at 1:35 PM IST

2 Min Read
Choose ETV Bharat

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ದಟ್ಟ ಅರಣ್ಯ ಮತ್ತು ಕಾಫಿ ತೋಟಗಳ ನಡುವೆ ಅಡಗಿ ನಿಂತು ರೈತರು ಹಾಗೂ ಕೂಲಿ ಕಾರ್ಮಿಕರ ಮೇಲೆ ದಾಳಿ ಮಾಡುವ ಒಂಟಿ ಸಲಗಗಳನ್ನು ಪತ್ತೆ ಹಚ್ಚುವುದು ಅರಣ್ಯ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಹೀಗಾಗಿ, ಡ್ರೋನ್ ಕ್ಯಾಮರಾಗಳನ್ನು ಬಳಸಲಾಗಿತ್ತು. ಇದಕ್ಕೂ ಕಾಣದಿದ್ದಾಗ ಕೊನೆಯ ಉಪಾಯವಾಗಿ ಶ್ವಾನ ಪಡೆಯನ್ನು ಫೀಲ್ಡಿಗಿಳಿಸಿದ್ದಾರೆ.

ಶ್ರೀಗಂಧದ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಪತ್ತೆಹಚ್ಚಲು ತರಬೇತಿ ನೀಡಲು ತಂದಿದ್ದ ಎರಡು ಶ್ವಾನಗಳು ಈಗ ಆನೆ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿದೆ. ಅರಣ್ಯ ಇಲಾಖೆಯಲ್ಲಿ ಅತ್ಯಂತ ಹೆಸರು ವಾಸಿಯಾಗಿರುವ ರೋಸಿ ಮತ್ತು ಸಿಂಧು ಎರಡು ನಾಯಿಗಳು ಕಾಡಾನೆ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿದ್ದು, ಇವು ಅರಣ್ಯ ಇಲಾಖೆಯ ಹೆಮ್ಮೆಯ ಟ್ರ್ಯಾಕರ್ ಡಾಗ್ಸ್ ಆಗಿವೆ.

ಕಾಡಾನೆಗಳನ್ನು ಪತ್ತೆಹಚ್ಚಲು ಫೀಲ್ಡಿಗಿಳಿದ ಡಾಗ್ ಸ್ಕ್ವಾಡ್ (ETV Bharat)

ಎರಡು ವರ್ಷದ ಈ ಹೆಣ್ಣು ಶ್ವಾನಗಳು ಈಗ ಕಾಡಾನೆಗಳ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿದ್ದು, ಕಾಡಾನೆಗಳು ಹತ್ತಿರವಾಗುತ್ತಿದ್ದಂತೆ ಎಂತಹ ಒಂಟಿ ಸಲಗ ಅಥವಾ ಹಿಂಡಿನಿಂದ ಬೇರ್ಪಟ್ಟ ಆನೆಗಳಾಗಲಿ, ಇವುಗಳು ನೀರು ಕುಡಿದಂತೆ ಸುಗಮವಾಗಿ ಪತ್ತೆ ಹಚ್ಚುತ್ತವೆ.

ಆನೆಗಳಿರುವ ನಿಖರ ಜಾಗವನ್ನು ಪತ್ತೆ ಹಚ್ಚುತ್ತಿವೆ: ಚಿಕ್ಕಮಗಳೂರು ತಾಲೂಕಿನ ಮತ್ತಾವರ ಗ್ರಾಮದಂತಹ ಪ್ರದೇಶಗಳಲ್ಲಿನ ಅರಣ್ಯ ಮತ್ತು ಕಾಫಿ ತೋಟಗಳಲ್ಲಿ ರೋಸಿ ಮತ್ತು ಸಿಂಧು ತಮ್ಮ ಅಪ್ರತಿಮ ವಾಸನೆ ಶಕ್ತಿಯ ಮೂಲಕ ಆನೆಗಳಿರುವ ನಿಖರ ಜಾಗವನ್ನು ಪತ್ತೆ ಹಚ್ಚುತ್ತಿವೆ. ಆನೆಗಳ ಮೂತ್ರದ ವಾಸನೆ ಮತ್ತು ಹೆಜ್ಜೆ ಗುರುತುಗಳನ್ನು ಆಧರಿಸಿ, ಆನೆಗಳು ಅರ್ಧದಿಂದ ಒಂದು ಕಿಲೋಮೀಟರ್ ದೂರದಲ್ಲಿರುವಾಗಲೇ ಅವುಗಳ ಸುಳಿವನ್ನು ತಮ್ಮ ಜೊತೆಯಲ್ಲಿರುವ ಸಿಬ್ಬಂದಿಗೆ ನೀಡುತ್ತಿವೆ.

dog-squad-enters-the-field-to-track-wild-elephants
ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆಗೆ ಇಳಿದ ಶ್ವಾನಗಳು (ETV Bharat)

ಈ ಎರಡು ಶ್ವಾನಗಳಿಗೆ ಬಂಡೀಪುರದಲ್ಲಿ ವಿಶೇಷ ತರಬೇತಿ ನೀಡಲಾಗಿದೆ. ಈ ಎರಡು ನಾಯಿಗಳು ತಮ್ಮ ಚಾಣಾಕ್ಷತನ ಮತ್ತು ಶಿಸ್ತಿಗೆ ಪ್ರಸಿದ್ಧಿಯಾಗಿದ್ದು, ಇದೇ ಕಾರಣಕ್ಕೆ ಕಾಡಾನೆಗಳ ಚಲನವಲನ ಪತ್ತೆ ಹಚ್ಚುವ ಜವಾಬ್ದಾರಿಯನ್ನು ಇವುಗಳಿಗೆ ನೀಡಲಾಗಿದೆ. ಮತ್ತಾವರ ಅರಣ್ಯ ಪ್ರದೇಶದಲ್ಲಿ ಅಡಗಿದ್ದ ಮೂರು ಕಾಡಾನೆಗಳನ್ನು ಪತ್ತೆ ಹಚ್ಚಲು ಈ ಶ್ವಾನಗಳು ನೀಡಿದ ಮಾಹಿತಿ ಅರಣ್ಯ ಸಿಬ್ಬಂದಿಗೆ ದೊಡ್ಡ ಮಟ್ಟದ ಸಹಕಾರ ನೀಡಿದೆ.

ಕಾಡಾನೆ ದಾಳಿಯಿಂದಾಗಿ ಜನಸಾಮಾನ್ಯರು ಪ್ರಾಣ ಕಳೆದುಕೊಳ್ಳುತ್ತಿರುವುದು ನಿರಂತರವಾಗಿ ನಡೆಯುತ್ತಿದೆ. ಇದರಿಂದಾಗಿ ಕಾಡಂಚಿನ ಗ್ರಾಮಸ್ಥರು ತೋಟಕ್ಕೆ ಹೋಗಲು ಭಯಪಡುತ್ತಿದ್ದರು. ಆದರೆ ಈಗ ರೋಸಿ ಮತ್ತು ಸಿಂಧು ಎಂಬ ಶ್ವಾನಗಳ ಸಹಾಯದಿಂದ ಆನೆಗಳು ಎಲ್ಲಿವೆ ಎಂಬುದು ಮುಂಚಿತವಾಗಿಯೇ ತಿಳಿಯುತ್ತಿದೆ. ಇದರಿಂದ ಸಾರ್ವಜನಿಕರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲು ಮತ್ತು ಆನೆಗಳನ್ನು ಕಾಡಿಗಟ್ಟಲು ಸಾಧ್ಯವಾಗುತ್ತಿದೆ. ಈ ಎರಡು ನಾಯಿಗಳು ರೈತರಿಗೆ ಮತ್ತು ಅರಣ್ಯ ಇಲಾಖೆಗೆ ಹೊಸ ಭರವಸೆಯಾಗಿವೆ.

Forest seen on drone camera
ಡ್ರೋನ್ ಕ್ಯಾಮರಾದಲ್ಲಿ ಕಂಡುಬಂದ ಅರಣ್ಯ (ETV Bharat)

ಗ್ರಾಮಸ್ಥರು ಎಚ್ಚರಿಕೆಯಿಂದಿರುವಂತೆ ಅರಣ್ಯ ಇಲಾಖೆ ಪ್ರಕಟಣೆ: ಮಲೆನಾಡು ಭಾಗದ ಜನರನ್ನು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಕಾಡಾನೆಗಳು ಬಿಟ್ಟುಬಿಡದೆ ಜೀವ ಹಿಂಡಲು ಪ್ರಾರಂಭಿಸಿವೆ. ಜಿಲ್ಲೆಯ ಎನ್​ಆರ್ ಪುರ ತಾಲೂಕಿನ ಬಾಳೆಹೊನ್ನೂರಿನ ಸುತ್ತಮುತ್ತ ಹಾಗೂ ಬಿಳಗೊಳ, ಕಡವಂತಿ, ಬಾಸಪುರ, ಹ್ಯಾರಂಬಿ, ಪುರ, ಹುಣಸೆಹಳ್ಳಿ, ಬೆರಣಗೋಡು ಸುತ್ತಮುತ್ತ ಸಂಚರಿಸುತ್ತಿವೆ. ಹೀಗಾಗಿ, ಸುತ್ತಮುತ್ತಲಿನ ಗ್ರಾಮಸ್ಥರು, ವಾಹನ ಸವಾರರು ಎಚ್ಚರಿಕೆಯಿಂದ ಇರುವಂತೆ ಬಾಳೆಹೊನ್ನೂರಿನ ಅರಣ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ.

ಚಿಕ್ಕಮಗಳೂರು ತಾಲೂಕಿನಲ್ಲಿ ಅಂಡವಾನಿ, ಎಲೆಕಲ್, ಬಿಳುಕೊಪ್ಪ, ಕುಂಬ್ರುಮನೆ, ಸೊಪ್ಪಿನಕಾಡು, ಬನ್ನೂರು, ಕುಂಬರಗೋಡು, ಶೆಟ್ಟರಪಾಲು, ಸುತ್ತಮುತ್ತ ಕಾಡಾನೆಗಳು ಸಂಚರಿಸುತ್ತಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಚಿಕ್ಕಮಗಳೂರು ಇಟಿಎಫ್ ಹಾಗೂ ಅರಣ್ಯ ಇಲಾಖೆ ಮನವಿ ಮಾಡಿದೆ.

ಇದನ್ನೂ ಓದಿ : ದಾಂಡೇಲಿಯಲ್ಲಿ ಬಸ್​ ತಡೆದು ನಿಲ್ಲಿಸಿದ ಗಜರಾಜ: ವಿಡಿಯೋ ವೈರಲ್! - WILD ELEPHANT STOPS BUSES