ETV Bharat / state

ಕಾಂಗ್ರೆಸ್ ಪಕ್ಷದ ನೂತನ ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದೊಂದಿಗೆ ಡಿ.ಕೆ.ಶಿವಕುಮಾರ್ ಆಯ್ಕೆ

ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷದ ನೂತನ ಶಾಸಕಾಂಗ ಪಕ್ಷದ ನಾಯಕರಾಗಿ ಡಿ.ಕೆ.ಶಿವಕುಮಾರ್​ ಆಯ್ಕೆ ಆಗಿದ್ದಾರೆ.

CONGRESS LEGISLATURE PARTY MEETING
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯಲ್ಲಿ ನೂತನ ಆಯ್ಕೆ ನಡೆಯಿತು. (ETV Bharat)
author img

By ETV Bharat Karnataka Team

Published : May 30, 2026 at 5:28 PM IST

2 Min Read
Choose ETV Bharat

ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಡಿ.ಕೆ.ಶಿವಕುಮಾರ್ ಅವರು ಸರ್ವಾನುಮತದಿಂದ ಆಯ್ಕೆ ಆಗಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯಲ್ಲಿ ನೂತನ ಆಯ್ಕೆ ನಡೆಯಿತು. ಹೊಸ ಶಾಸಕಾಂಗ ಪಕ್ಷದ ನಾಯಕರಾಗಿ ಡಿ ಕೆ ಶಿವಕುಮಾರ್ ಅವರ ಹೆಸರನ್ನು ಸಿಎಂ ಸಿದ್ದರಾಮಯ್ಯ ಅವರು ಸೂಚಿಸಿದರು. ಡಾ. ಜಿ ಪರಮೇಶ್ವರ್ ಅವರು ಅನುಮೋದಿಸಿದರು. ಇದನ್ನು ಸಭೆಯು ಒಕ್ಕೊರಲಿನಿಂದ ಬೆಂಬಲಿಸಿತು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಡಿ.ಕೆ.ಶಿವಕುಮಾರ್​ ಆಯ್ಕೆಯಾಗಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಘೋಷಿಸಿದರು. ಇದಕ್ಕೂ ಮೊದಲು ಸಭೆಯ ಆರಂಭದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕನ ಆಯ್ಕೆ ಪ್ರಕ್ರಿಯೆಯು ಸಿಎಂ ಸಿದ್ದರಾಮಯ್ಯ ಅವರ ಪ್ರಸ್ತಾವನೆಯೊಂದಿಗೆ ನಡೆಯಲಿದೆ ಎಂದು ಎಐಸಿಸಿ ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಪ್ರಕಟಿಸಿ, ಚಾಲನೆ ನೀಡಿದರು.

DK Shivakumar elected as new Congress Legislature Party leader
ಡಿಕೆ ಶಿವಕುಮಾರ್ (ETV Bharat)

ಶಾಸಕಾಂಗ ಪಕ್ಷದ ನೂತನ ನಾಯಕನ ಆಯ್ಕೆ ವಿಚಾರವನ್ನು ಎಐಸಿಸಿ ವಿವೇಚನೆಗೆ ಬಿಡಲಾಗಿದೆ ಎಂಬ ಒಂದು ಸಾಲಿನ ನಿರ್ಣಯವನ್ನು ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದರು. ಪರಮೇಶ್ವರ್ ಅವರು ಅನುಮೋದಿಸಿದರು. ಬಳಿಕ ಎಲ್ಲ ಶಾಸಕರು ಕೈ ಎತ್ತುವ ಮೂಲಕ ಇದನ್ನು ಬೆಂಬಲಿಸಿದರು. ನಂತರ 10 ನಿಮಿಷಗಳ ವಿರಾಮ ನೀಡಲಾಗಿದೆ ಎಂದು ಸುರ್ಜೆವಾಲ ಹೇಳಿದರು. ಸಿಎಂ ಸಿದ್ದರಾಮಯ್ಯ, ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ ಅವರು ಸಿಎಂ ಕೊಠಡಿಗೆ ತೆರಳಿದರು. ಅಲ್ಲಿಂದ ಸಮ್ಮೇಳನ ಸಭಾಂಗಣಕ್ಕೆ ಮೂವರು ವಾಪಸ್​ ಬಂದ ನಂತರ ಶಾಸಕಾಂಗ ಪಕ್ಷದ ನೂತನ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿತು.

DK Shivakumar elected as new Congress Legislature Party leader
ಸಿದ್ದರಾಮಯ್ಯ ಹಾಗೂ ಕೆಸಿ ವೇಣುಗೋಪಾಲ್ (ETV Bharat)

ನಂತರ ನೂತನ ನಾಯಕ ಡಿ.ಕೆ.ಶಿವಕುಮಾರ್ ಅವರು ನಿರ್ಗಮಿತ ನಾಯಕ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಅವಧಿಯ ಸೇವೆಯನ್ನು ಕೊಂಡಾಡುವ ನಿರ್ಣಯ ಮಂಡಿಸಿ, ಸಭೆಯ ಬೆಂಬಲ ಕೋರಿದರು. ಸಭೆ ಒಕ್ಕೋರಲಿನಿಂದ ಬೆಂಬಲಿಸಿತು.

ಸಭೆಯಲ್ಲಿ ಕೈಗೊಂಡ ನಿರ್ಣಯ: ಕರ್ನಾಟಕದ ಜನತೆಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ನೀಡಿರುವ ವಿಶಿಷ್ಟ ಸೇವೆಯನ್ನು ಸ್ಮರಿಸಿ, ಕಾಂಗ್ರೆಸ್ ಶಾಸಕಾಂಗ ಪಕ್ಷವು ಸಿದ್ದರಾಮಯ್ಯ ಅವರಿಗೆ ಹೃತೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತದೆ.

DK Shivakumar elected as new Congress Legislature Party leader
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯಲ್ಲಿ ಹಾಜರಿದ್ದ ಶಾಸಕರು ಹಾಗೂ ಮುಖಂಡರು. (ETV Bharat)

ಅವರು 2013-2018 ಮತ್ತು 2023-2026 ರವರೆಗೆ ಮುಖ್ಯಮಂತ್ರಿಯಾಗಿ ಹಾಗೂ ಎರಡು ಅವಧಿಗಳಲ್ಲಿ ಪ್ರತಿಪಕ್ಷದ ನಾಯಕರಾಗಿ ಸಲ್ಲಿಸಿದ ಸೇವೆಯನ್ನು ಜನತೆ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಯಾವಾಗಲೂ ಅಪಾರ ಪ್ರೀತಿ ಹಾಗೂ ಹೆಮ್ಮೆಯಿಂದ ಸ್ಮರಿಸುತ್ತಾರೆ. ಸಾಮಾಜಿಕ ನ್ಯಾಯದ ಮೇಲಿನ ಅವರ ಸಮರ್ಪಣಾ ಭಾವ, ಆಡಳಿತಾತ್ಮಕ ಸಾಮರ್ಥ್ಯ, ಪಕ್ಷದ ಸಿದ್ಧಾಂತಕ್ಕೆ ಅವರ ಬದ್ಧತೆ ಮತ್ತು ಪಕ್ಷದ ನಾಯಕತ್ವದಲ್ಲಿನ ಅವರ ಸಂಪೂರ್ಣ ನಂಬಿಕೆಯು ಪ್ರತಿಯೊಬ್ಬ ಕಾಂಗ್ರೆಸ್ಸಿಗನೂ ಅನುಕರಿಸಬೇಕಾದ ಮಾದರಿಯಾಗಿದೆ.

DK Shivakumar elected as new Congress Legislature Party leader
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯಲ್ಲಿ ಹಾಜರಿದ್ದ ಶಾಸಕರು ಹಾಗೂ ಮುಖಂಡರು. (ETV Bharat)

ಕಾಂಗ್ರೆಸ್‌ ಪಕ್ಷ ಮತ್ತು ಸರ್ಕಾರವು ಯಾವಾಗಲೂ ಇದೇ ಆದರ್ಶಗಳ ಹಾದಿಯಲ್ಲಿ ಮುನ್ನಡೆಯುತ್ತದೆ. ನಾವು ಅವರಿಗೆ ನಮ್ಮ ಹೃದಯದಾಳದಿಂದ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಕರ್ನಾಟಕದ ಜನತೆಯ ಸೇವೆ ಮಾಡಲು, ಪ್ರತಿಯೊಂದು ವಲಯದಲ್ಲೂ ಪರಿವರ್ತನಾತ್ಮಕ ಅಭಿವೃದ್ಧಿಯನ್ನು ತರಲು ಮತ್ತು ಕನ್ನಡಿಗರ ಜೀವನದಲ್ಲಿ ಬದಲಾವಣೆ ತರಲು ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ಈ ಪಯಣದಲ್ಲಿ ಅವರ ನಿರಂತರ ಪಾಲ್ಗೊಳ್ಳುವಿಕೆ ಮತ್ತು ಮಾರ್ಗದರ್ಶನವನ್ನು ನಾವು ಸದಾ ಬಯಸುತ್ತೇವೆ ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು.

ಶಾಸಕಾಂಗ ಸಭೆಗೆ ಗೈರಾದ ಶಾಸಕರು:

  • ಯು.ಟಿ ಖಾದರ್ - ಸ್ಪೀಕರ್ (ಬರುವಂತಿಲ್ಲ)
  • ರಾಜು ಕಾಗೆ‌ (ಅನಾರೋಗ್ಯ)
  • ಕೆ.ವೆಂಕಟೇಶ್ (ತಂದೆಯವರ ಸಾವಿನ ಕಾರಣದಿಂದ)
  • ರಹೀಂ‌ಖಾನ್ (ಹಜ್ ಯಾತ್ರೆ)
  • ಜಿ.ಟಿ.ಪಾಟೀಲ್ (ಅನಿವಾರ್ಯ ಕಾರಣ)

ಇದನ್ನೂ ಓದಿ: ಹಿರಿತನ ಆಧಾರದ ಮೇಲೆ ಸಚಿವ ಸ್ಥಾನ ನೀಡುವಂತೆ ಕೇಳಿದ್ದೇನೆ: ರಾಮಲಿಂಗಾರೆಡ್ಡಿ