ETV Bharat / state

ಚಿಕ್ಕಬಳ್ಳಾಪುರ: ಕುರಿಗಳ ಸಾವು ಪ್ರಕರಣ, ಪರಿಹಾರಧನದ ಭರವಸೆ ನೀಡಿದ ಜಿಲ್ಲಾಡಳಿತ

ಮೃತಪಟ್ಟ ಕುರಿಗಳಿಗೆ ತಲಾ ಏಳೂವರೆ ಸಾವಿರ ರೂ.ಯಂತೆ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಭರವಸೆ ನೀಡಿದ್ದಾರೆ.

CHIKKABALLAPUR  MASS SHEEP DEATHS IN CHINTAMANI  ಚಿಂತಾಮಣಿ ಕುರಿಗಳ ಸಾವು  ಜಿಲ್ಲಾಧಿಕಾರಿ ಜಿ ಪ್ರಭು ಭರವಸೆ
ಅಧಿಕಾರಿಗಳಿಂದ ಸಾವನ್ನಪ್ಪಿದ ಕುರಿಗಳ ಪರಿಶೀಲನೆ (ETV Bharat)
author img

By ETV Bharat Karnataka Team

Published : January 4, 2026 at 7:36 PM IST

2 Min Read
Choose ETV Bharat

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಕಾಚಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಕುರಿಗಳಿಗೆ ಸರ್ಕಾರದಿಂದ ತಲಾ ಏಳೂವರೆ ಸಾವಿರ ರೂ.ಯಂತೆ ಪರಿಹಾರಧನ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಭರವಸೆ ನೀಡಿದರು.

ಇಂದು ಕಾಚಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಕುರಿಗಳ ದೊಡ್ಡಿ ಹಾಗೂ ಸತ್ತಿರುವ ಕುರಿಗಳನ್ನು ಅವರು ಪರಿಶೀಲಿಸಿದರು. ನಂತರ ಮಾಲೀಕರೊಂದಿಗೆ ಮಾತನಾಡಿ, ಸರ್ಕಾರದಿಂದ ಪರಿಹಾರ ನೀಡುವುದಾಗಿ ತಿಳಿಸಿದರು.

ಚಿಂತಾಮಣಿ ತಾಲೂಕಿನಲ್ಲಿ ಕುರಿಗಳ ಸಾವು ಪ್ರಕರಣ, ಪರಿಹಾರಧನದ ಭರವಸೆ ನೀಡಿದ ಜಿಲ್ಲಾಡಳಿತ (ETV Bharat)

ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ವೈದ್ಯರೊಂದಿಗೂ ಸಮಾಲೋಚಿಸಿ ಸಾಧ್ಯವಾದಷ್ಟು ಬೇಗ ಸಾವಿಗೆ ಕಾರಣ ಪತ್ತೆ ಮಾಡುವಂತೆ ಸೂಚಿಸಿದರು. ಉಳಿದಿರುವ ಕುರಿಗಳಿಗೆ ಯಾವುದೇ ತೊಂದರೆ ಆಗದಂತೆ ಸೂಕ್ತ ಚಿಕಿತ್ಸೆ ನೀಡಬೇಕೆಂದು ತಿಳಿಸಿದರು.

ಜಾಫರ್‌ ಖಾನ್, ಖುರ್ಷಿದ್ ಮತ್ತು ಮಲ್ಲಿಕ್ ಎಂಬ ಮೂವರು ಸುಮಾರು 200 ಕುರಿಗಳ ಗುಂಪನ್ನು ಬೆಳಗಿನಿಂದ ಸಂಜೆಯವರೆಗೆ ಹೊರಗಡೆ ಮೇಯಿಸಿಕೊಂಡು ಬಂದಿದ್ದಾರೆ. ಸಾಯಂಕಾಲ ಮನೆಗೆ ವಾಪಸ್​ ಬರುವಾಗ ಒಂದೊಂದಾಗಿ ಸುಮಾರು 40–50 ಕುರಿಗಳು ಸತ್ತಿವೆ. ಕೂಡಲೇ ಪಶುವೈದ್ಯಕೀಯ ಇಲಾಖೆಯ ವೈದ್ಯರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ಬಂದು ಉಳಿದ ಎಲ್ಲ ಕುರಿಗಳಿಗೆ ಚುಚ್ಚುಮದ್ದು ನೀಡಿದ್ದರು.

ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಬೆಳೆಗಳಿಗೆ ರಾಸಾಯನಿಕ ಸಿಂಪಡಿಸಿದ್ದ ಹುಲ್ಲು ತಿಂದಿರಬಹುದು ಅಥವಾ ನೀರು ಕುಡಿದಿರಬಹುದು. ಮರಣೋತ್ತರ ಪರೀಕ್ಷೆ ನಡೆಸಿ ಸ್ಯಾಂಪಲ್ ಅನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ ಎಂದು ಪಶುಪಾಲನಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ಪರಿಹಾರಕ್ಕೆ ಪ್ರಯತ್ನ- ಸಚಿವ ಡಾ.ಎಂ.ಸಿ.ಸುಧಾಕರ್‌: ಕುರಿಗಳಿಗೆ ತಲಾ 7,500 ಸಾವಿರ ರೂ.ಯಂತೆ ಪರಿಹಾರ ನೀಡಲಾಗುತ್ತದೆ. ಅವರಿಗೆ ಇನ್ನೂ ಹೆಚ್ಚಿನ ನಷ್ಟವಾಗಿದೆ. ಮುಖ್ಯಮಂತ್ರಿ ಜತೆ ಮಾತನಾಡಿ ಇತರೆ ಯಾವುದಾದರೂ ಮೂಲದಿಂದ ಹೆಚ್ಚಿನ ಪರಿಹಾರ ಕೊಡಿಸಲು ಪ್ರಯತ್ನ ನಡೆಸುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಹೇಳಿದರು.

ಇದನ್ನೂ ಓದಿ: ಚಿಂತಾಮಣಿಯಲ್ಲಿ 60ಕ್ಕೂ ಹೆಚ್ಚು ಕುರಿಗಳ ಅನುಮಾನಾಸ್ಪದ ಸಾವು

ಇಂದೋರ್​ನಲ್ಲಿ 200 ಗಿಳಿಗಳು ಸಾವು: ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಬದ್ವಾ ಪ್ರದೇಶದ ನದಿ ದಂಡೆಯಲ್ಲಿರುವ ಸೇತುವೆಯ ಸಮೀಪ 200 ಗಿಳಿಗಳು ಇತ್ತೀಚಿಗೆ ಸಾವನ್ನಪ್ಪಿದ್ದವು. ಮೊದಲು ಹಕ್ಕಿ ಜ್ವರ ಕಾರಣ ಎಂದು ಶಂಕಿಸಲಾಗಿತ್ತು. ಆದರೆ, ಪಶು ವೈದ್ಯರು ಕಳೇಬರಗಳ ಪರೀಕ್ಷೆ ನಡೆಸಿದ್ದು, ಯಾವುದೇ ಜ್ವರದ ಸುಳಿವು ಕಂಡು ಬಂದಿಲ್ಲ. ಗಿಳಿಗಳಲ್ಲಿ ವಿಷಾಹಾರದ ಲಕ್ಷಣಗಳು ಕಂಡುಬಂದಿತ್ತು. ಜನರು ಸಾಮಾನ್ಯವಾಗಿ ತಿಳಿಯದೆಯೇ ಪಕ್ಷಿಗಳಿಗೆ ಆಹಾರ ನೀಡುತ್ತಾರೆ. ಅದು ಅವುಗಳ ಜೀರ್ಣಾಂಗ ವ್ಯವಸ್ಥೆಗೆ ಮಾರಕವಾಗುತ್ತದೆ. ಸತ್ತ ಪಕ್ಷಿಗಳ ಹೊಟ್ಟೆಯಲ್ಲಿ ಅಕ್ಕಿ ಮತ್ತು ಸಣ್ಣ ಉಂಡೆಗಳು ಕಂಡುಬಂದಿವೆ ಎಂದು ಪಶುವೈದ್ಯಕೀಯ ಅಧಿಕಾರಿ ತಿಳಿಸಿದ್ದರು.

ಇದನ್ನೂ ಓದಿ: ಇಂದೋರ್​: ವಿಷ ಆಹಾರ ಸೇವನೆಯಿಂದ 200 ಗಿಳಿಗಳ ಸಾವು