ಮಾನ್ಯ ಹತ್ಯೆ ಪ್ರಕರಣ ಮಹತ್ವದ ಸಾಕ್ಷಿ ಲಭ್ಯ, 60 ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಕೆ: ಡಿಜಿಪಿ ರಾಮಚಂದ್ರ ರಾವ್
ಮಾನ್ಯ ಹತ್ಯೆ ಪ್ರಕರಣ ಜಾರ್ಜ್ ಶೀಟ್ನ್ನು 60 ದಿನಗಳಲ್ಲಿ ಸಲ್ಲಿಕೆ ಮಾಡಲಾಗುತ್ತದೆ. ಸಮಗ್ರ ತನಿಖೆ ನಡೆಸಿ ಆರೋಪಿಗಳಿಗೆ ಆದಷ್ಟು ಬೇಗ ಶಿಕ್ಷೆ ಕೊಡಿಸುವ ಪ್ರಯತ್ನ ಮಾಡುತ್ತೇವೆ ಎಂಬ ಭರವಸೆಯನ್ನು ಡಿಜಿಪಿ ನೀಡಿದ್ದಾರೆ.

Published : January 3, 2026 at 7:52 PM IST
ಹುಬ್ಬಳ್ಳಿ: "ಮಾನ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನೇ ಸ್ವತಃ ಇನಾಂವೀರಾಪುರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ ಮತ್ತು ಕುಟುಂಬಸ್ಥರ ಜೊತೆಗೆ ಮಾತನಾಡಿದ್ದೇನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಳ್ಳೆಯ ಸಾಕ್ಷಿಗಳು ಲಭ್ಯವಾಗಿದೆ" ಎಂದು ಡಿಸಿಆರ್‌ಇ ಡಿಜಿಪಿ ರಾಮಚಂದ್ರ ರಾವ್ ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, "ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವೇಕಾನಂದ ದೊಡ್ಡಮನಿ ಮನೆಯ ಸಿಸಿ ಕ್ಯಾಮರಾಗಳ ರಿಕವರಿ ಮಾಡಲಾಗಿದೆ. ಒಟ್ಟು 14 ಜನರ ಮೇಲೆ ಹೆಸರು ಸಮೇತ ದೂರು ದಾಖಲಾಗಿದೆ. ಅದರಲ್ಲಿ ಈಗಾಗಲೇ 8 ಜನರನ್ನು ಬಂಧಿಸಲಾಗಿದೆ. ಇದರಲ್ಲಿ ಓರ್ವ ಬಾಲಾಪರಾಧಿ ಇದ್ದಾನೆ. ತನಿಖೆ ನಡೆಸಲಾಗುತ್ತಿದೆ. ಉಳಿದವರಲ್ಲಿ ಐವರು ಮಹಿಳೆಯರ ಮೇಲೂ ಕೇಸ್ ದಾಖಲಾಗಿದ್ದು, ಅನಿವಾರ್ಯ ಬಿದ್ದರೆ ಅವರನ್ನು ಬಂಧಿಸಲಾಗುವದು. ಮಾನ್ಯಳ ಪತಿ ವಿವೇಕಾನಂದ ಅವರ ಕುಟುಂಬಸ್ಥರ ಹೇಳಿಕೆ ಪಡೆಯಲಾಗಿದೆ. 60 ದಿನಗಳಲ್ಲಿ ಜಾರ್ಜ್ ಶಿಟ್ ಸಲ್ಲಿಕೆ ಮಾಡಲಾಗುತ್ತದೆ. ಸಮಗ್ರ ತನಿಖೆ ನಡೆಸಿ ಆರೋಪಿಗಳಿಗೆ ಆದಷ್ಟು ಬೇಗ ಶಿಕ್ಷೆ ಕೊಡಿಸುವ ಪ್ರಯತ್ನ ಮಾಡುತ್ತೇವೆ" ಎಂದರು.
"ರಾಜ್ಯದಲ್ಲಿ 33 ಡಿಸಿಆರ್‌ಇ ಪೊಲೀಸ್ ಠಾಣೆಗಳಿದ್ದು, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ ಇತ್ತೀಚಿಗೆ ದೂರುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಶಿಕ್ಷೆ ಕೊಡಿಸುವುದರಲ್ಲಿ ವಿಳಂಬವಾಗುತ್ತಿರುವದು ಸತ್ಯ. ಆದಷ್ಟು ನಾವು ಕೂಡ ಆರೋಪಿಗಳಿಗೆ ಶಿಕ್ಷೆ ಕೊಡಿಸಬೇಕು ಎಂಬ ದೃಷ್ಟಿಯಿಂದ 60 ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸುತ್ತೇವೆ. ಆದರೆ ವಿಚಾರಣೆ ಐದಾರು ವರ್ಷ ನಡೆಯುವುದರಿಂದ ಸಮರ್ಪಕವಾದ ಶಿಕ್ಷೆಯಾಗುತ್ತಿಲ್ಲ".
"ಇನಾಂವೀರಾಪುರ ಗ್ರಾಮದಲ್ಲಿ ನಡೆದಿರುವ ದೌರ್ಜನ್ಯ ಪ್ರಕರಣ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಶಾಂತಿ, ಸುವ್ಯವಸ್ಥೆ ಮತ್ತು ಸೌಹಾರ್ದತೆ ಕಾಪಾಡಲು ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ. ಇನಾಂವೀರಾಪುರ ಗ್ರಾಮದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಸೂಕ್ತ ತನಿಖೆ ಕೈಗೊಳ್ಳಲಾಗುತ್ತಿದೆ" ಎಂದು ತಿಳಿಸಿದರು.
"ಸಿಸಿಟಿವಿ ಮುಖ್ಯ ಸಾಕ್ಷಿಯಾಗಿದೆ. ಅದನ್ನು ವಶಕ್ಕೆ ಪಡೆಯಲಾಗಿದೆ. ಮುಂದಿನ ತನಿಖೆಗಾಗಿ ಎಫ್ಎಸ್ಎಲ್ಗೆ ರವಾನಿಸಲಾಗಿರುತ್ತದೆ. ದೌರ್ಜನ್ಯ ಪ್ರಕರಣದಲ್ಲಿ 60 ದಿನಗಳೊಳಗೆ ಚಾರ್ಜ್ ಶೀಟ್ ನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಈ ಪ್ರಕರಣಕ್ಕೆ ಡಿಜಿಟಲ್ ಸಾಕ್ಷ್ಯಾಧಾರಗಳು ಬಹಳ ಮುಖ್ಯವಾಗಿವೆ. ವಿಶೇಷ ವಕೀಲರನ್ನು ನೇಮಕ ಮಾಡಲಾಗುವುದು. ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಕಂದಾಯ ಇಲಾಖೆಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. ನೊಂದವರಿಗೆ ನ್ಯಾಯ ಒದಗಿಸಲಾಗುವುದು" ಎಂದು ಭರವಸೆ ನೀಡಿದರು.
"ವಿವೇಕಾನಂದ ದೊಡ್ಡಮನಿ ಅವರ ತಾಯಿ ರೇಣವ್ವ ದೊಡ್ಡಮನಿ ಅವರು ಹುಬ್ಬಳ್ಳಿಯ ವಿವೇಕಾನಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಸದ್ಯದಲ್ಲಿಯೇ ಗುಣಮುಖರಾಗುತ್ತಾರೆ. ಗ್ರಾಮೀಣ ಭಾಗದಲ್ಲಿ ಪೊಲೀಸ್ ಬೀಟ್ ವ್ಯವಸ್ಥೆ ಇದೆ. ತನಿಖೆ ಸರಿ ದಾರಿಯಲ್ಲಿ ನಡೆಯಲಿದೆ. ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮುಂದುವರೆಯುತ್ತೆ. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಕ್ರಮಗಳನ್ನು ಕೈಗೊಳ್ಳಲಾಗಿದೆ" ಎಂದರು.
"ಪ್ರತಿ ವರ್ಷ 2,300 ರಿಂದ 2,500 ದೌರ್ಜನ್ಯ ಕೇಸ್ಗಳು ರಾಜ್ಯದಲ್ಲಿ ನಡೆಯುತ್ತವೆ. 2024ಕ್ಕೆ ಹೋಲಿಸಿದರೆ 2025ರಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿವೆ. ದೌರ್ಜನ್ಯ ನಡೆಸಿದವರ ಮೇಲೆ ಶೋಷಿತರು, ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ಕೊಡಬಹುದು. ಡಿಎಸ್ಪಿ ರ‍್ಯಾಂಕ್ ಹೊಂದಿದವರು ಡಿಸಿಆರ್‌ಇ ತನಿಖಾಧಿಕಾರಿ ಆಗಬೇಕು" ಎಂದು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಮಾತನಾಡಿ, "ಇನಾಂವೀರಾಪುರ ಗ್ರಾಮದಲ್ಲಿ ದೌರ್ಜನ್ಯ ಪ್ರಕರಣ ನಡೆದ ನಂತರದಲ್ಲಿ ಪೊಲೀಸ್ ಇಲಾಖೆಯಿಂದ ಅಗತ್ಯ ರಕ್ಷಣೆ ಕಾರ್ಯವನ್ನು ನಿರ್ವಹಿಸಲಾಗಿದೆ. ಈ ಪ್ರಕರಣದಲ್ಲಿ ಅಮಾನತು ಮಾಡಲಾಗಿರುವ ಪೇದೆಗಳನ್ನು ತನಿಖೆ ಮಾಡಿ, ಕ್ರಮಗಳನ್ನು ಕೈಗೊಳ್ಳಲಾಗುವುದು" ಎಂದರು.
"ಇನಾಂವೀರಾಪುರ ಪ್ರಕರಣದ ಎರಡು ಕುಟುಂಬಗಳ ನಡುವೆ ಪದೇ ಪದೇ ಜಗಳಗಳು ಆಗುತ್ತಿದ್ದವು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮವಹಿಸಲಾಗುವುದು. ಈಗಾಗಲೇ ಇನಾಂವೀರಾಪುರ ಗ್ರಾಮದಲ್ಲಿ ಶಾಂತಿ ಸಭೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಹ ಶಾಂತಿ ಸಭೆಗಳನ್ನು ಏರ್ಪಡಿಸಲಾಗುತ್ತದೆ" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ದಲಿತ, ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಾಗಿದೆ: ಗೋವಿಂದ ಕಾರಜೋಳ
ಇದನ್ನೂ ಓದಿ: ಮರ್ಯಾದೆ ಹೆಸರಿನಲ್ಲಿ ದೌರ್ಜನ್ಯ ತಡೆಯಲು ಪ್ರತ್ಯೇಕ ಮಸೂದೆ ಜಾರಿಗೆ ತರುವ ಅವಶ್ಯಕತೆ ಇಲ್ಲ: ಸಂಸದ ಗೋವಿಂದ ಕಾರಜೋಳ

