ಬೇಡಿದ ವರವ ನೀಡುವ ನವಲಗುಂದದ ರಾಮಲಿಂಗ ಕಾಮಣ್ಣ; ಇಲ್ಲಿ ಹರಕೆ ಕಟ್ಟಿಕೊಂಡರೆ ಇಷ್ಟಾರ್ಥ ಸಿದ್ಧಿ
ನವಲಗುಂದದ ರಾಮಲಿಂಗ ಕಾಮಣ್ಣನ ದೇಗುಲಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.

Published : March 3, 2026 at 6:01 PM IST
ವರದಿ : ವಿಠ್ಠಲ ಕರಡಿಗುಡ್ಡ
ಧಾರವಾಡ : ಬೇಡಿದ ವರ ನೀಡುವ ರಾಮಲಿಂಗ ಕಾಮಣ್ಣನ ದರ್ಶನ ಶುರುವಾಗಿದ್ದು, ಪ್ರತಿನಿತ್ಯ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡಿ ಪುನೀತರಾಗುತ್ತಿದ್ದಾರೆ. ಜಿಲ್ಲೆಯ ನವಲಗುಂದ ಪಟ್ಟಣದ ರಾಮಲಿಂಗೇಶ್ವರ ಕಾಮಣ್ಣ ಬೇಡಿದ ವರ ನೀಡುವ ದೇವರು ಎಂಬ ಖ್ಯಾತಿ ಹೊಂದಿದೆ. ಹೋಳಿ ಹುಣ್ಣಿಮೆ ಅಂದರೆ ರಂಗು ರಂಗಿನ ಬಣ್ಣ ಎರಚಿ ಮೋಜಿಗಾಗಿ ಅಲ್ಲದೇ ಶ್ರದ್ಧಾ ಭಕ್ತಿಯಿಂದಲೂ ಆಚರಸಲ್ಪಡುತ್ತದೆ ಎಂಬುದಕ್ಕೆ ನವಲಗುಂದ ರಾಮಲಿಂಗ ಕಾಮಣ್ಣ ಸಾಕ್ಷಿಯಾಗಿದೆ.
ರಾಜ್ಯವಲ್ಲದೇ ಇತರೆ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ರಾಮಲಿಂಗೇಶ್ವರ ಕಾಮಣ್ಣನ ಮೂರ್ತಿಯ ಪವಾಡ ಸದೃಶ ಮಹಿಮೆಗಳಿಂದಾಗಿ ನವಲಗುಂದಕ್ಕೆ ಒಂದು ಕ್ಷೇತ್ರದ ಹಾಗೂ ಜಾತ್ರೆಯ ಸ್ವರೂಪ ದೊರೆತಿದೆ.
ರಾಮಲಿಂಗ ಕಾಮಣ್ಣನ ಮಹಿಮೆಗೆ ಸಾಕ್ಷಿಯಾಗಿ ಸಹಸ್ರಾರು ಜನ ಹರಕೆ ಫಲಿಸಿದ ಸಂಗತಿಯನ್ನು ಬಂದವರಿಗೆ ವಿವರಿಸುತ್ತಿರುವುದು ಕೂಡಾ ಈ ಕಾಮದೇವನ ಪ್ರಖ್ಯಾತಿಗೆ ಕಾರಣ ಎಂಬುದನ್ನು ಮರೆಯುವಂತಿಲ್ಲ. ಸರ್ವ ಧರ್ಮದವರು ಜಾತಿ, ಭೇದ ಮರೆತು ಹೋಳಿಯನ್ನು ಆಚರಿಸುತ್ತಾ ಬಂದಿದ್ದಾರೆ.
ರಾಮಲಿಂಗ ಕಾಮಣ್ಣ ಸೇರಿದಂತೆ ಪಟ್ಟಣದ ಸುಮಾರು 14 ಕಡೆ ಕಾಮಣ್ಣಗಳನ್ನು ಪ್ರತಿವರ್ಷ ಏಕಾದಶಿಯಂದು ಪ್ರತಿಷ್ಠಾಪಿಸಲಾಗುತ್ತದೆ. ಪೂಜೆ, ಜಗ್ಗಲಿಗೆಯ ಮೆರವಣಿಗೆ ನಂತರ ಕಾಮಣ್ಣನನ್ನು ದಹಿಸಲಾಗುತ್ತದೆ. ಹೀಗೆ ಹಲವು ದಶಕಗಳಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ.
ಪಟ್ಟಣದ ಪ್ರಮುಖ ಬೀದಿಗಳಾದ ಚಾವಡಿ ಓಣಿ, ಸಿದ್ದಾಪೂರ ಓಣಿ, ಮಾದಿಗರ ಓಣಿ, ತೆಗ್ಗಿನಕೇರಿ ಓಣಿ, ಹಳ್ಳದ ಓಣಿ, ಅಕ್ಕಿ ಓಣಿ, ದೇಸಾಯಿಪೇಟೆ ಓಣಿ, ಭಯ್ಯಾರ ಓಣಿ, ರಾಮಲಿಂಗ ಓಣಿ ಮುಂತಾದ ಕಡೆ ಕಾಮಣ್ಣನನ್ನು ಪ್ರತಿಷ್ಠಾಪಿಸಲಾಗುತ್ತದೆ. ಇವುಗಳಲ್ಲಿ ಪಟ್ಟಣದ ಆರಾಧ್ಯ ದೈವ, ಕಲಿಯುಗದ ಕಾಮಧೇನು ರಾಮಲಿಂಗ ಓಣಿ ಕಾಮಣ್ಣ ಪ್ರಖ್ಯಾತಿ ಹೊಂದಿದ್ದಾರೆ.
ಇಲ್ಲಿಗೆ ಬರುವ ಭಕ್ತರು ಮದುವೆ, ಮಕ್ಕಳು, ಸಂತಾನ ಭಾಗ್ಯ, ಮನೆ, ಆಸ್ತಿ, ಸಂಪತ್ತು, ಆರೋಗ್ಯ ಸೇರಿದಂತೆ ಇನ್ನಿತರೆ ಇಷ್ಟಾರ್ಥಗಳನ್ನು ಬೇಡಿಕೊಳ್ಳುತ್ತಾರೆ. ನಂತರ ಹರಕೆ ಫಲಿಸಿದ ತರುವಾಯ ಬೆಳ್ಳಿಯ ತೊಟ್ಟಿಲು, ಬಾಸಿಂಗ, ಛತ್ರಿ, ಚಾಮರ ನೀಡುತ್ತಾರೆ. ಇದುವೇ ಕ್ವಿಂಟಾಲ್‌ಗಿಂತಲೂ ಅಧಿಕವಾಗುತ್ತದೆ.
ಪೂಜಾರಿಯಲ್ಲದ ದೇವರು : ಜಗತ್ತಿನ ಎಲ್ಲ ದೇವಸ್ಥಾನದ ದೇವರಿಗೆ ಪೂಜಾರಿ ಇರುತ್ತಾರೆ. ಆದರೆ ಈ ದೇವರಿಗೆ ಭಕ್ತರೇ ಪೂಜಾರಿಗಳು. ಹರಕೆ ಹೊತ್ತು, ಪೂಜೆ ಮಾಡಿದರೆ ಮುಗಿಯಿತು. ಅಲ್ಲದೇ ಈ ಕಾಮಣ್ಣ ಭಾವೈಕ್ಯದ ಸಂಕೇತ. ಹಿಂದೂ–ಮುಸ್ಲಿಂರು ಶ್ರದ್ಧಾ–ಭಕ್ತಿಯಿಂದ ಇಲ್ಲಿಗೆ ಬಂದು ಪಾಲ್ಗೊಳ್ಳುತ್ತಾರೆ ಎನ್ನುವುದೇ ವಿಶೇಷ.
ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ನಾಗರಿಕರು, ಸಂಘ-ಸಂಸ್ಥೆ, ರಾಜಕಾರಣಿಗಳು ತಮ್ಮ ಕೈಲಾದಷ್ಟು ಉಪಹಾರ, ಹಣ್ಣು-ಹಂಪಲು, ನೀರು ಮತ್ತು ತಂಪು-ಪಾನೀಯ ನೀಡುವ ಮೂಲಕ ಕಾಮದೇವರಿಗೆ ಹರಕೆಯ ರೂಪದಲ್ಲಿ ಸೇವೆ ಸಲ್ಲಿಸುತ್ತಾರೆ.
ಅಷ್ಟೇ ಅಲ್ಲದೆ ದೇವಸ್ಥಾನದ ಟ್ರಸ್ಟ್ ಕಮಿಟಿಯವರು 5 ದಿನ ಅನ್ನಸಂತರ್ಪಣೆ ಮಾಡಲಿದ್ದು, ಪಟ್ಟಣದ ಯುವಕರು, ಹಿರಿಯರು ಹಾಗೂ ಎಲ್ಲ ಓಣಿಯ ಉತ್ಸಾಹಿ ಯುವಕರು ಸೇವೆಗೆ ಸಾಥ್ ನೀಡಲಿದ್ದಾರೆ.
ಫೆ. 28ರ ಶನಿವಾರದಿಂದಲೇ ರಾಮಲಿಂಗಕಾಮದೇವರ ದರ್ಶನ ಪ್ರಾರಂಭಗೊಂಡಿದ್ದು, ಇಂದು (ಮಾ. 3) ಹೋಳಿ ಹುಣ್ಣಿಮೆ, ನಾಳೆ (ಮಾ. 4) ಬಣ್ಣದ ಆಟ (ಓಕುಳಿ) ನಡೆಯಲಿದೆ. ಅಂದು ಸಾಯಂಕಾಲದವರೆಗೂ ಕಾಮಣ್ಣನ ದರ್ಶನ ನಿರಂತರವಾಗಿರುತ್ತದೆ.
ಇಂದು ರಾತ್ರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವೈಶಿಷ್ಟ್ಯ ಪೂರ್ಣ ಹಲಗಿ, ವಾದ್ಯ ಮೇಳದೊಂದಿಗೆ ರಾಮಲಿಂಗ ಕಾಮಣ್ಣನ ಮೆರವಣೆಗೆ ನಡೆಯಲಿದೆ. ಉಳಿದ ಕಾಮಣ್ಣಗಳ ಅಗ್ನಿಸ್ಪರ್ಶದ ನಂತರ ಇಷ್ಟಾರ್ಥ ಸಿದ್ಧಿ ರಾಮಲಿಂಗ ಕಾಮಣ್ಣನ ದಹನವಾಗಲಿದೆ.
ಯುಗಾದಿಗೆ ಕಾಮದೇವರು ಮರುಜನ್ಮ : ಹೊಸ ವರ್ಷದ ಯುಗಾದಿಯ ಪ್ರತಿಪದಂದು ಕಾಮದೇವರು ಮರುಜನ್ಮ ಪಡೆಯುತ್ತಾರೆ. ಅದರ ಪ್ರತೀಕವಾಗಿ ಪಾಡ್ಯದ ಒಂದು ದಿನ ಮತ್ತೆ ಕಾಮದೇವರ ಪ್ರತಿಷ್ಠಾಪನೆಯಾಗುತ್ತದೆ. ಭಕ್ತರಿಗೆ ಅಂದು ದರ್ಶನಕ್ಕೆ ಮುಕ್ತ ಅವಕಾಶವಿರುತ್ತದೆ. ಹುಣ್ಣಿಮೆಯ ಉತ್ಸವದಲ್ಲಿ ಬರದೇ ಇರುವ ಭಕ್ತರು ಯುಗಾದಿ ಪಾಡ್ಯದಂದು ಬಂದು ತಮ್ಮ ಇಷ್ಟಾರ್ಥ ಸಿದ್ಧಿ ಹಾಗೂ ಹರಕೆಗಳನ್ನು ಅರ್ಪಿಸುತ್ತಾರೆ.
ರಾಮಲಿಂಗ ಕಾಮದೇವನಿಗೆ ನಡೆದುಕೊಂಡರೆ ಮಕ್ಕಳಾಗದವರಿಗೆ ಮಕ್ಕಳು, ಮದುವೆಯಾಗದವರಿಗೆ ಮದುವೆ ಭಾಗ್ಯ ಲಭಿಸುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ, ಮಕ್ಕಳಾಗದವರು, ಮದುವೆಯಾಗದ ಯುವಕ-ಯುವತಿಯರು ಇಲ್ಲಿಗೆ ಬಂದು ದರ್ಶನ ಪಡೆಯುತ್ತಾರೆ.
ಅನಾರೋಗ್ಯ ಪೀಡಿತರು ಕೂಡ ಇಲ್ಲಿಗೆ ಬಂದು ಹರಕೆ ಮಾಡಿಕೊಳ್ಳುತ್ತಾರೆ. ಇನ್ನು ಮನೆ ಇಲ್ಲದವರು ಬಂದು ಹರಕೆ ಹೊತ್ತರೆ ಒಂದೆರಡು ವರ್ಷಗಳಲ್ಲಿ ಬೇಡಿಕೆ ಈಡೇರುತ್ತದೆ ಎಂಬ ನಂಬಿಕೆಯಿದೆ. ಮಕ್ಕಳಾಗದವರು ಬೆಳ್ಳಿಯ ತೊಟ್ಟಿಲು, ಮನೆ ಬೇಕಾದವರು ಬೆಳ್ಳಿಯ ಕೊಡೆಯನ್ನು ಖರೀದಿಸಿ ಒಯ್ಯುತ್ತಾರೆ. ತಮ್ಮ ಬೇಡಿಕೆ ಈಡೇರಿದ ನಂತರ ಇಲ್ಲಿಗೆ ಬಂದು ಅದನ್ನು ದೇವರಿಗೆ ಅರ್ಪಿಸಿ ಹೋಗುತ್ತಾರೆ. ವರ್ಷದಿಂದ ವರ್ಷಕ್ಕೆ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ.
ಈ ಕುರಿತು ರಾಮಲಿಂಗೇಶ್ವರ ಕಾಮಣ್ಣನ ಸಂಘದ ಅಧ್ಯಕ್ಷ ಯಲ್ಲಪ್ಪ ಬೋವಿ ಅವರು ಮಾತನಾಡಿದ್ದು, 'ಪ್ರತಿವರ್ಷಕ್ಕಿಂತ ಈ ಬಾರಿ ಭಕ್ತರು ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಬಂದಿದ್ದಾರೆ. ಬಂದಂತಹ ಭಕ್ತರಿಗೆ ನೆರಳು, ನೀರು, ಪ್ರಸಾದದ ವ್ಯವಸ್ಥೆ ಮಾಡಿದ್ದೇವೆ. ಕಮಿಟಿಯವರು ಮಾಡಿರುವ ವ್ಯವಸ್ಥೆಗೆ ಗುರು-ಹಿರಿಯರು ಹಾಗೂ ಯುವಕರು ಸಾಥ್ ಕೊಟ್ಟಿದ್ದಾರೆ. ಇಲ್ಲಿಗೆ ಬರುವ ಭಕ್ತರು ಹಲವು ಹರಕೆಗಳನ್ನು ಹೇಳಿಕೊಂಡು ಹೋಗುತ್ತಾರೆ. ಇಲ್ಲಿಗೆ ಬಂದ ಎಷ್ಟೋ ಭಕ್ತರಿಗೆ ಮಕ್ಕಳಾಗಿವೆ' ಎಂದು ತಿಳಿಸಿದರು.
'ನಾವು ಇಲ್ಲಿಗೆ ಬರಲು ಪ್ರಾರಂಭಿಸಿ ಎರಡು ವರ್ಷವಾಯ್ತು, ಹೋದ(ಕಳೆದ) ವರ್ಷವೂ ಬಂದಿದ್ದೆವು. ಬೇಡಿಕೊಂಡಿರುವುದು ಎಲ್ಲವೂ ಆಗಿದೆ. ಅದಕ್ಕೆ ಈ ವರ್ಷವೂ ಬಂದಿದ್ದೇವೆ. ನಮಗೆ ಸಾಲವಿತ್ತು, ತಮ್ಮನಿಗೆ ಮಗು ಆಗಲಿ ಎಂದು ಬೇಡಿಕೊಂಡಿದ್ದೆವು. ಅದೂ ಆಯ್ತು. ನಾವು ಏನನ್ನೂ ಬೇಡಿಕೊಂಡರೂ ಅದು ಆಗಿದೆ' ಎಂದು ಭಕ್ತೆ ಲಕ್ಷ್ಮಿ ಅವರು ಇಲ್ಲಿನ ಮಹಿಮೆ ಬಗ್ಗೆ ಹೇಳಿದರು.
ಇದನ್ನೂ ಓದಿ : ಶ್ರೀಶೈಲ ಮಲ್ಲಿಕಾರ್ಜುನನ ದರ್ಶನಕ್ಕೆ ದಾರಿ ತೋರುವ 'ನಂದಿ' ; ಶೇಗುಣಸಿ ಗ್ರಾಮದ ವಿಶಿಷ್ಟ ಸಂಪ್ರದಾಯ

