ವಿದೇಶ ಪ್ರವಾಸದಿಂದ ಕಾಂಗ್ರೆಸ್ ಶಾಸಕರು ವಾಪಸ್: ವಿಭಿನ್ನ ಹೇಳಿಕೆಗಳು ಸೃಷ್ಟಿಸಿದ ಗೊಂದಲ
ಒಂದೇ ಪ್ರವಾಸದ ಬಗ್ಗೆ ವಿಭಿನ್ನ ಹೇಳಿಕೆಗಳು ಹೊರಬಿದ್ದ ಹಿನ್ನೆಲೆಯಲ್ಲಿ ಇದು ನಿಜವಾಗಿಯೂ ಅಧ್ಯಯನ ಪ್ರವಾಸವೇ ಅಥವಾ ರಾಜಕೀಯ ಉದ್ದೇಶದ ಭೇಟಿಯೇ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.

Published : March 4, 2026 at 2:12 PM IST
ದೇವನಹಳ್ಳಿ: ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ವಿದೇಶಕ್ಕೆ ತರಳಿದ್ದ ಶಾಸಕರು ಇಂದು ಮುಂಜಾನೆ ವಾಪಸ್ ಬಂದಿದ್ದಾರೆ. ಶಾಸಕರ ಹೇಳಿಕೆಗಳು ಗೊಂದಲಕಾರಿಯಾಗಿದ್ದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ನಡೆಯುತ್ತಿರುವ ಚರ್ಚೆಯ ಸಮಯದಲ್ಲಿ ಕಾಂಗ್ರೆಸ್ ಶಾಸಕ ಗುಂಪು ಅಧ್ಯಯನ ಹೆಸರಿನಲ್ಲಿ ವಿದೇಶ ಪ್ರವಾಸಕ್ಕೆ ತೆರಳಿದ್ದರು. ವಿದೇಶದಿಂದ ಇಂದು ಮುಂಜಾನೆ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ಜಗಳೂರು ಶಾಸಕ ದೇವೇಂದ್ರಪ್ಪ ಅವರು ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳಿದ್ದೇವೆ ಎಂದು ಹೇಳಿಕೆ ನೀಡಿದರೆ, ಸಿರುಗುಪ್ಪ ಶಾಸಕ ಬಿ.ಎಂ.ನಾಗರಾಜ್ ಅವರು ಅದನ್ನು ಸುಳ್ಳು ಎಂದು ಪ್ರತಿಕ್ರಿಯಿಸಿದ್ದಾರೆ. ಒಂದೇ ಪ್ರವಾಸದ ಬಗ್ಗೆ ವಿಭಿನ್ನ ಹೇಳಿಕೆಗಳು ಹೊರಬಿದ್ದ ಹಿನ್ನೆಲೆಯಲ್ಲಿ ಇದು ನಿಜವಾಗಿಯೂ ಅಧ್ಯಯನ ಪ್ರವಾಸವೇ ಅಥವಾ ರಾಜಕೀಯ ಉದ್ದೇಶದ ಭೇಟಿ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ. ಇದೇ ವೇಳೆ ವಿದೇಶ ಪ್ರವಾಸದಿಂದ ವಾಪಸಾದ ಕೆಲ ಶಾಸಕರು ಮಾಧ್ಯಮದವರ ಕಣ್ಣಿಗೆ ಸಿಗದೆ ಕಾರು ಹತ್ತಲು ಯತ್ನಿಸಿದ ಘಟನೆಯೂ ನಡೆಯಿತು.
ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಜಗಳೂರು ಶಾಸಕ ದೇವೇಂದ್ರಪ್ಪ, "ನಾವೆಲ್ಲ ಕುಟುಂಬ ಸಮೇತರಾಗಿ ಪ್ರವಾಸಕ್ಕೆ ತೆರಳಿದೆವು. ಅಧಿಕೃತವಾಗಿ ಅಧ್ಯಯನ ಪ್ರವಾಸ ಆಗಿರಲಿಲ್ಲ, ಈ ಕಾರಣದಿಂದ ಕೆಲವು ಕಡೆ ನಾವು ಹೋಗಲು ಅನುಮತಿ ಸಿಗಲಿಲ್ಲ. ಹೈನುಗಾರಿಕೆ ಕೃಷಿಗೆ ಸಂಬಂಧಿಸಿದಂತೆ ಕೆಲವು ಕಡೆ ಭೇಟಿ ನೀಡಿದೆವು. ಅಲ್ಲಿನ ಕೃಷಿಗೂ ನಮ್ಮ ಕೃಷಿಗೂ ಬಹಳ ವ್ಯತ್ಯಾಸವಿದೆ. ಅಲ್ಲಿನ ವ್ಯವಸ್ಥೆಯನ್ನು ನಾವು ಅಳವಡಿಸಿಕೊಳ್ಳಬೇಕು" ಎಂದರು.
ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, "ಇಲ್ಲಿಯೇ ಇದ್ದು ಏನು ಮಾಡುವುದಕ್ಕೂ ಆಗಲಿಲ್ಲ. ಇನ್ನೂ ಅಲ್ಲಿಗೆ ಹೋಗಿ ಏನು ಮಾಡಲು ಸಾಧ್ಯ? ನಾವೆಲ್ಲ ಒಂದೇ ಕಡೆ ಇದ್ದರೂ ರಾಜಕೀಯವಾಗಿ ನಾವು ಯಾವುದೇ ಚರ್ಚೆ ಮಾಡಿಲ್ಲ. ಮೂರು ವರ್ಷದಿಂದ ಇದೇ ವಿಚಾರ ನಡೆಯುತ್ತಿದೆ. ಮುಂದಿನ ಎರಡು ವರ್ಷ ಇದೇ ನಡೆಯುತ್ತದೆ" ಎಂದು ಹೇಳಿದರು.
ಇದನ್ನೂ ಓದಿ: ಕೈ ಶಾಸಕರಿಂದ ವಿದೇಶ ಪ್ರವಾಸದ ಸದ್ದು: ನಮ್ಮ ಇಲಾಖೆಯಿಂದ ಯಾರನ್ನೂ ವಿದೇಶಕ್ಕೆ ಕಳುಹಿಸುತ್ತಿಲ್ಲ; ಸಚಿವ ಕೆ.ವೆಂಕಟೇಶ್

