ETV Bharat / state

ಗಡಿಜಿಲ್ಲೆಗೆ ಈ ಬಾರಿ ಸಿಗತ್ತಾ ಸಚಿವಗಿರಿ: ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ ಪ್ರಬಲ ಲಾಬಿ

ಪ್ರಸ್ತುತ ರಾಜ್ಯ ಸರ್ಕಾರದಲ್ಲಿ ಸಿಎಂ ಬದಲಾವಣೆಯಿಂದ ಚಾಮರಾಜನಗರ ಜಿಲ್ಲೆಯಲ್ಲಿ ಸಚಿವ ಸ್ಥಾನದ ಕೂಗು ಜೋರಾಗಿದೆ.

CHAMARAJANAGAR  CPL MEETING  DK SHIVAKUMAR  KARNATAKA POLITICS
ಸಚಿವ ಸ್ಥಾನ ನೀಡುವಂತೆ ಅಭಿಮಾನಿಗಳ ರ‍್ಯಾಲಿ (ETV Bharat)
author img

By ETV Bharat Karnataka Team

Published : May 30, 2026 at 4:18 PM IST

2 Min Read
Choose ETV Bharat

ಚಾಮರಾಜನಗರ: ಹಳೇ ಮೈಸೂರು ಭಾಗದ ಹಾಗೂ ದಲಿತರು, ಹಿಂದುಳಿದ ವರ್ಗಗಳ ಮತಗಳು ಹೆಚ್ಚಿರುವ ಚಾಮರಾಜನಗರ ಜಿಲ್ಲೆಗೆ ಈ ಬಾರಿ ಸಚಿವ ಸ್ಥಾನ‌ ಒಲಿದು ಬರುವ ನಿರೀಕ್ಷೆ ಜೋರಾಗಿದೆ.

ಮುಖ್ಯಮಂತ್ರಿ ಬದಲಾವಣೆಯಾದ ಬೆನ್ನಲ್ಲೇ ಚಾಮರಾಜನಗರದಲ್ಲಿ ಸಚಿವಗಿರಿಗಾಗಿ ಒತ್ತಾಯದ ಕೂಗು ಜೋರಾಗಿದೆ. ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ಎಂಎಸ್‌ಐಎಲ್ ಅಧ್ಯಕ್ಷ ಸಿ. ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ನೀಡಬೇಕು ಎಂದು ಅವರ ಬೆಂಬಲಿಗರು ಒತ್ತಾಯ ಮಾಡುತ್ತಿದ್ದಾರೆ. ಮತ್ತೊಂದೆಡೆ ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರಿಗೆ ಮಂತ್ರಿಗಿರಿ ನೀಡಬೇಕು ಎಂದು ಅವರ ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.

ಚಾಮರಾಜನಗರದಲ್ಲಿ ಸಚಿವ ಸ್ಥಾನದ ಕೂಗು (ETV Bharat)

ಚಾಮರಾಜನಗರ ಜಿಲ್ಲೆಯು ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದೆ. ಹನೂರು ತಾಲೂಕು ಜೆಡಿಎಸ್ ಪಾಲಾಗಿರುವುದು ಬಿಟ್ಟರೆ ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಶಾಸಕರಿದ್ದಾರೆ. ಲೋಕಸಭಾ ಕ್ಷೇತ್ರವೂ ಕೈವಶದಲ್ಲಿದೆ. ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದಾಗಲೇ ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಾಯ ಜೋರಾಗಿತ್ತು. ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಅವಕಾಶ ಸಿಗುವ ಭರವಸೆಯೂ ಮೂಡಿತ್ತು. ಆದರೆ ವಿಧಾನಸಭೆಯ ಉಪ ಸಭಾಪತಿ ಸ್ಥಾನಕ್ಕೆ ತೃಪ್ತಿ ಪಡಬೇಕಾದ ಪರಿಸ್ಥಿತಿ ಬಂತು. ಅವರು ಈ ಹುದ್ದೆಯನ್ನು ನಿರಾಕರಿಸಿದರು. ಬಳಿಕ ಎಂಎಸ್‌ಐಎಲ್ ನಿಗಮದ ಅಧ್ಯಕ್ಷರಾದರು.

ಅದೇ ರೀತಿ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೂ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಾಯಗಳು ಆಗಲೇ ಕೇಳಿ ಬಂದಿದ್ದವು. ರಾಗಿ ಹೊಲದಿಂದ ರಾಜಭವನದವರೆಗೆ ಸಾಗಿದ ಮಾಜಿ ರಾಜ್ಯಪಾಲರಾದ ದಿ.ಬಿ.ರಾಚಯ್ಯ ಸಿಎಂ ಸಿದ್ದರಾಮಯ್ಯ ಅವರ ಗುರುಗಳಾಗಿದ್ದು, ಇವರ ಮಗನಾದ ಎ.ಆರ್.ಕೃಷ್ಣಮೂರ್ತಿ ಅವರಿಗೆ ಸಚಿವ ಸ್ಥಾನ ದೊರೆಯುತ್ತದೆ ಎಂದು ಆಗ ಅಂದಾಜು ನಡೆಯುತ್ತಿತ್ತು. ಆದರೆ, ಇಬ್ಬರು ಶಾಸಕರಲ್ಲಿ ಒಬ್ಬರಿಗೂ ಅವಕಾಶ ಸಿಗದ ಕೊರತೆ ಜಿಲ್ಲೆಯ ಪಾಲಿಗೆ ಉಳಿದುಬಿಟ್ಟಿದೆ. ಪ್ರಸ್ತುತ ರಾಜ್ಯ ಸರ್ಕಾರದಲ್ಲಿ ಸಿಎಂ ಬದಲಾವಣೆಯಿಂದ ಮತ್ತೆ ಸಚಿವ ಸ್ಥಾನ ಕೇಳಲು ಅವಕಾಶ ಸಿಕ್ಕಿದೆ. ಆದರೆ, ಈ ಇಬ್ಬರೂ ಅನುಭವಿ ರಾಜಕಾರಣಿಗಳಲ್ಲಿ ಪಕ್ಷ ಯಾರಿಗೆ ಮಣೆ ಹಾಕುತ್ತದೆ ಎಂಬುದಕ್ಕೆ ಕಾಲವೇ ತೀರ್ಮಾನ ಮಾಡಲಿದೆ.

ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಪಂಚಾಯಿತಿಯಿಂದ ವಿಧಾನಸೌಧದವರೆಗೆ ಬಂದಿರುವ ರಾಜಕಾರಣಿ. ಸತತ ನಾಲ್ಕು ಬಾರಿ ಶಾಸಕರಾಗಿ ಒಮ್ಮೆ ಸಚಿವರಾಗಿರುವ ಹಿರಿಯ ಶಾಸಕರಾಗಿದ್ದಾರೆ.‌ ರಾಜ್ಯದ ಉಪ್ಪಾರ ಸಮುದಾಯದ ಏಕೈಕ ಶಾಸಕರಾಗಿದ್ದಾರೆ.

ಕೊಳ್ಳೇಗಾಲದ ಶಾಸಕ ಎ.ಆರ್. ಕೃಷ್ಣಮೂರ್ತಿ ಮೂರನೇ ಬಾರಿ ಶಾಸಕರಾಗಿದ್ದು ಈಗಾಗಲೇ 3 ವರ್ಷದ ಅವಧಿಯಲ್ಲಿ 500 ಕೋಟಿಗೂ ಅಧಿಕ ಅನುದಾನ ತಂದು ಅಭಿವೃದ್ಧಿ ಕಾರ್ಯ ನಡೆಸುತ್ತಿದ್ದಾರೆ. ದಲಿತ ಸಮುದಾಯದ ಶಾಸಕರಾಗಿದ್ದು ಇವರಿಗೆ ಮಂತ್ರಿ ಸ್ಥಾನ ನೀಡಬೇಕು ಎಂಬ ಕೂಗು ಹೆಚ್ಚಾಗಿದೆ.

ಈ ಸಲ ಸಚಿವ ಸಂಪುಟದಲ್ಲಿ ಗಡಿಜಿಲ್ಲೆಗೆ ಅವಕಾಶ ದೊರೆಯುವುದೇ ಎನ್ನುವ ಕುತೂಹಲ ಮನೆ ಮಾಡಿದೆ. ಪಕ್ಷದ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ಎಚ್.ಎಂ.ಗಣೇಶ್‌ಪ್ರಸಾದ್ ವರಿಷ್ಠರು, ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸಿ.ಪುಟ್ಟರಂಗಶೆಟ್ಟಿ ಮತ್ತು ಎ.ಆರ್. ಕೃಷ್ಣಮೂರ್ತಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂಬ ಕೂಗು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಹಾಗಾಗಿ ಜಿಲ್ಲೆಗೆ ಮಂತ್ರಿಗಿರಿ ಒಲಿಯುತ್ತದೆಯೇ?, ಇಬ್ಬರಲ್ಲಿ ಯಾರಿಗೆ ಅವಕಾಶ ಸಿಗಬಹುದು ಎನ್ನುವ ಚರ್ಚೆಗಳು ಹೆಚ್ಚಾಗಿದೆ.

ಎ.ಆರ್.ಕೆ. ಪೋಸ್ಟರ್ ಹಿಡಿದು ರ‍್ಯಾಲಿ: ಯಳಂದೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಎ.ಆರ್. ಕೃಷ್ಣಮೂರ್ತಿ ಅಭಿಮಾನಿಗಳು ಎಆರ್ ಕೆ ಪೋಸ್ಟರ್ ಹಿಡಿದು ಸಚಿವ ಸ್ಥಾನ ನೀಡುವಂತೆ ರ‍್ಯಾಲಿ ನಡೆಸಿದ್ದಾರೆ. ಯಳಂದೂರಿನ‌ ಕಾಂಗ್ರೆಸ್ ಕಚೇರಿ, ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಜಮಾಯಿಸಿದ ಅಭಿಮಾನಿಗಳು ಎ.ಆರ್‌. ಕೃಷ್ಣಮೂರ್ತಿ ಪರ ಜಯಘೋಷ ಕೂಗಿ ಮಂತ್ರಿ ಸ್ಥಾನ ಕೊಡಲೇಬೇಕು ಎಂದು ಒತ್ತಾಯಿಸಿದ್ದಾರೆ.

ಅದೇ ರೀತಿ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಪರ ಹಿಂದುಳಿದ ವರ್ಗಗಳ ಒಕ್ಕೂಟ, ಉಪ್ಪಾರ ಸಂಘಟನೆಗಳು ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಹಿರಿತನ ಆಧಾರದ ಮೇಲೆ ಸಚಿವ ಸ್ಥಾನ ನೀಡುವಂತೆ ಕೇಳಿದ್ದೇನೆ: ರಾಮಲಿಂಗಾರೆಡ್ಡಿ