ETV Bharat / state

ವಾಣಿಜ್ಯ ನಗರಿಯಲ್ಲಿ ಹೋಳಿ ಸಂಭ್ರಮಕ್ಕೆ ಫೈಬರ್ ಹಲಗೆಗಳ ದಾಂಗುಡಿ: ಪ್ರಿಂಟಿಂಗ್ ಹಲಗೆಗಳಿಗೆ ಭಾರಿ ಬೇಡಿಕೆ

ಹುಬ್ಬಳ್ಳಿ ಧಾರವಾಡದಲ್ಲಿ ಹೋಳಿ ಸಂಭ್ರಮಕ್ಕೆ ಫೈಬರ್ ಹಲಗೆಗಳಿಗೆ ಬೇಡಿಕೆ ಹೆಚ್ಚಿದೆ.

DHARWAD  HOLI 2026  HOLI DATE AND TIME 2026  ಫೈಬರ್ ಹಲಗೆ ಹೋಳಿ
ಹೋಳಿ ಸಂಭ್ರಮ- ಫೈಬರ್ ಹಲಗೆಗಳ ದಾಂಗುಡಿ (ETV Bharat)
author img

By ETV Bharat Karnataka Team

Published : March 2, 2026 at 8:51 PM IST

3 Min Read
Choose ETV Bharat

ವರದಿ: ಹೆಚ್​.ಬಿ. ಗಡ್ಡದ

ಹುಬ್ಬಳ್ಳಿ: ಹೋಳಿ ಹಬ್ಬಕ್ಕೂ ಹಲಗೆಗೂ ಅವಿನಾಭಾವ ಸಂಬಂಧವಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಹಲಗೆ ಸದ್ದು ಇಲ್ಲದೇ ಹೋಳಿ ಆಚರಣೆ ಇಲ್ಲ. ಹುಬ್ಬಳ್ಳಿ -ಧಾರವಾಡ ಅವಳಿ ನಗರ ಸೇರಿದಂತೆ ಎಲ್ಲೆಡೆ ಹೋಳಿ ಹಬ್ಬದ ತಯಾರಿ ಜೋರಾಗಿ ನಡೆಯುತ್ತಿದ್ದು, ಮಾರುಕಟ್ಟೆಯಲ್ಲಿ ಫೈಬರ್​​​​ ಹಲಗೆ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ.

ಆಧುನಿಕತೆ, ಚರ್ಮದ ಕೊರತೆ -ಚರ್ಮದ ಹಲಗೆ ಕಣ್ಮರೆ: ಆಧುನಿಕತೆಯ ಭರಾಟೆ ಹಾಗೂ ಚರ್ಮದ ಕೊರತೆ ಸೇರಿದಂತೆ ವಿವಿಧ ಕಾರಣಕ್ಕೆ ಸಾಂಪ್ರದಾಯಿಕ ಚರ್ಮದ ಹಲಗೆಗಳು ಕ್ರಮೇಣ ಕಡಿಮೆಯಾಗುತ್ತಿವೆ. ಅದರ ಜಾಗದಲ್ಲಿ ಮಹಾರಾಷ್ಟ್ರದ ಮಿರಜ್, ಬೆಂಗಳೂರು ಹಾಗೂ ದಾವಣಗೆರೆಯ ಫೈಬರ್​ ಹಲಗೆಗಳು ದಾಂಗುಡಿ ಇಟ್ಟಿವೆ. ನೋಡಲು ಆಕರ್ಷಕ, ಸದ್ದು ಕೂಡ ಜೋರಾಗಿದ್ದು, ಅವು ಗ್ರಾಹಕರನ್ನು ಸೆಳೆಯುತ್ತಿವೆ.

ನಗರದ ಸಾಯಿ ಮಂದಿರ ಬಳಿಯ ಕೋರ್ಟ್​​ ಸರ್ಕಲ್​​, ದುರ್ಗದಬೈಲ್​​, ಕೊಪ್ಪಿಕರ್​ ರಸ್ತೆ, ಸ್ಟೇಶನ್​​ ರಸ್ತೆ, ದಾಜೀಬಾನ್​​​ ಪೇಟೆ ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳಲ್ಲಿ ಚನ್ನದಾಸ ಸಮುದಾಯದವರು ಹಲಗೆಗ ಮಾರಾಟ ಮಾಡುತ್ತಿದ್ದಾರೆ.

ಈ ಕುಟುಂಬಗಳು ಗದಗ ಮುಂಡರಗಿ, ಗುತ್ತಲ, ಹಾನಗಲ್ಲ ಸುತ್ತಮುತ್ತ ಹೆಚ್ಚು ವಾಸಿಸುತ್ತಿದ್ದು, ಪ್ರತಿವರ್ಷ ಹೋಳಿ ಹಬ್ಬದ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡದಂತಹ ಪ್ರಮುಖ ಮಾರುಕಟ್ಟೆಯಲ್ಲಿ ತಮ್ಮ ವ್ಯಾಪಾರಕ್ಕೆ ಆಗಮಿಸುತ್ತಾರೆ. ಈಗಾಗಲೇ ಒಂದು ವಾರದಿಂದ ನಗರಗಳಲ್ಲಿ ಬೀಡು ಬಿಟ್ಟು ಹಲಗೆ ವ್ಯಾಪಾರ ಆರಂಭಿಸಿದ್ದಾರೆ. ಮೊದಲು ಚರ್ಮದ ಹಲಗೆಗಳನ್ನು ಮಾರಾಟ ಮಾಡುತ್ತಿದ್ದರು. ಇದೀಗ ಚರ್ಮದ ಹಲಗೆಯನ್ನು ಹೋಲುವ ಫೈಬರ್ ಹಲಗೆಯನ್ನು ಮೀರಜ್‌ನಿಂದ ತಂದು ಮಾರಾಟ ಮಾಡುತ್ತಿದ್ದಾರೆ. ಚನ್ನದಾಸ ಸಮುದಾಯದವರು ಕೇವಲ ಹುಬ್ಬಳ್ಳಿಗೆ ಸೀಮಿತವಾಗದೇ ಹೋಳಿ ಹಬ್ಬದ ಸೀಜನ್ನಿನಲ್ಲಿ ಬೆಂಗಳೂರು, ದಾವಣಗೆರೆ, ರಾಣೇಬೆನ್ನೂರ, ಬೆಳಗಾವಿ, ವಿಜಯಪುರ, ದಾವಣಗೆರೆ ಸೇರಿದಂತೆ ಪ್ರಮುಖ ನಗರಗಳಲ್ಲಿ ತಮ್ಮ ವಹಿವಾಟು ನಡೆಸುತ್ತಾರೆ.

ದರಕ್ಕೆ ತಕ್ಕಂತೆ ಸೈಜ್: ಮಾರುಕಟ್ಟೆಯಲ್ಲಿ ವಿವಿಧ ಗಾತ್ರದ ಹಲಗೆಗಳು ಮಾರಾಟಕ್ಕೆ ಬಂದಿದ್ದು, ಚಿಕ್ಕ ಹಲಗೆ ದರ 60ರೂ. ಸ್ವಲ್ಪ ದೊಡ್ಡ ಹಲಗೆ ದರ 80 ರಿಂದ 120 ರೂ. ವರೆಗೆ ಇದೆ. ದೊಡ್ಡ ಗಾತ್ರದ ಹಲಗೆಯ ದರವು 350 ರೂ. ವರೆಗೂ ಇದೆ. ಅತಿ ದೊಡ್ಡದಾದ ಹಲಗೆ ದರವು 600-1200ಕ್ಕೆ ಮಾರಾಟ ಮಾಡಲಾಗುತ್ತದೆ. ಬೆಳಗ್ಗೆಯಿಂದ ಸಂಜೆಯವರೆಗೆ ಹಲಗೆ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ.

ಈ ಕುರಿತಂತೆ ಕಲ್ಲಪ್ಪ ಬಗರಿಕಾರ ಎಂಬುವವರು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, "ಕಳೆದ ಹತ್ತು ವರ್ಷಗಳಿಂದ ಫೈಬರ್ ಹಲಗೆ ಮಾರಾಟ ಮಾಡುತ್ತಿದ್ದೇವೆ. ಪ್ರತಿ ವರ್ಷವೂ ವಿಭಿನ್ನವಾದ ಹಲಗೆಗಳು ಮಾರುಕಟ್ಟೆಗೆ ಬರುತ್ತವೆ. ಉತ್ತರ ಕರ್ನಾಟಕದಲ್ಲಿ ಹೋಳಿ ಹುಣ್ಣಿಮೆಗೆ ಹೆಚ್ಚು ಜನ ಹಲಗೆ ಖರೀದಿ ಮಾಡುತ್ತಾರೆ. ಹೀಗಾಗಿ ಗ್ರಾಹಕರ ಬೇಡಿಕೆ ತಕ್ಕಂತೆ ಹಲಗೆಗಳನ್ನು ಮಾಡಿ ಮಾರಾಟ ಮಾಡುತ್ತೇವೆ. ಬಣ್ಣದ ಹಬ್ಬ ಮಕ್ಕಳಿಂದ ದೊಡ್ಡವರು ಆಚರಣೆ‌ ಮಾಡುವದರಿಂದ ಅತ್ಯಂತ ‌ಕಡಿಮೆ ದರದಲ್ಲಿ ಹಲಗೆ ಮಾರಾಟ ಮಾಡುತ್ತೇವೆ. ಕೇವಲ 10 ರೂಪಾಯಿ ಲಾಭಂಶ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದೇವೆ. ಪ್ರತಿಯೊಂದು ಸೈಜಿಗೂ‌ ಒಂದೊಂದು ದರವಿದೆ. 150 ರೂಪಾಯಿಂದ 600-700 ರೂಪಾಯಿವರೆಗೂ ದರವಿದೆ. ಕಳೆದ ಎರಡು ವರ್ಷಗಳಿಂದ ಪ್ರಿಂಟೆಡ್ ಹಲಗೆಗಳಿಗೆ ಬೇಡಿಕೆ ಹೆಚ್ಚಿದೆ. ಗ್ರಾಹಕರ ಬೇಡಿಕೆಯಂತೆ ಕಲರ್ ಹಲಗೆ ಮಾರಾಟ ಮಾಡುತ್ತಿದ್ದೇವೆ. ಈಗ ಚರ್ಮದ ಕೊರತೆಯಿಂದ ಅದನ್ನು ಕೊಳ್ಳುವರು ಇಲ್ಲದ ಕಾರಣ ಪೈಬರ್ ಹಲಗೆಗಳನ್ನು ಮಾರಾಟ ಮಾಡುತ್ತಿದ್ದೇವೆ" ಎಂದರು.

ಗ್ರಾಹರರಾದ ವೆಂಕಟೇಶ ಅವರು ಈಟಿವಿ ಭಾರತದೊಂದಿಗೆ ಮಾತನಾಡಿ, "ಎಲ್ಲ ಗಾತ್ರದ ನಾನಾ ತರಹದ ಹಲಗೆಗಳು ಇವೆ‌. ದರವೂ ಕೂಡ ಪರವಾಗಿಲ್ಲ ಹೆಚ್ಚು ಇಲ್ಲ. ಕಡಿಮೆಯೂ ಇಲ್ಲ. ಕೋರ್ಟ್ ಸರ್ಕಲ್​ನಲ್ಲಿ ಈ ದರವಿದೆ. ಚಿಕ್ಕ ಹಲಗೆಗಳಿಂದ ಹಿಡಿದು 600 ರೂಪಾಯಿವರೆಗೂ ದರವಿದ್ದು, ತಗೆದುಕೊಳ್ಳಬಹುದು‌. ದರವೇನು ಹೆಚ್ಚು ಅನಿಸುವುದಿಲ್ಲ" ಎಂದರು.

ಎಲ್ಲರನ್ನೂ ಸೆಳೆಯುವ ಹಲಗೆ: ಹೋಳಿ ಹಬ್ಬದ ಮೆರಗನ್ನು ಹೆಚ್ಚಿಸುವಲ್ಲಿ ಹಲಗೆಗೆ ವಿಶೇಷ ಸ್ಥಾನವಿದೆ ಹಬ್ಬದಲ್ಲಿ ಮಕ್ಕಳು, ಯುವಕರು ಆದಿಯಾಗಿ ವಯಸ್ಕರರು ಸಹ ಹಲಗೆ ಬಾರಿಸಿ ಸಂತೋಷ ಪಡುತ್ತಾರೆ. ಆದರೆ, ಚರ್ಮದ ವಾದ್ಯದಲ್ಲಿ ಬಾರಿಸುವ ಖುಷಿ ಫೈಬರ್ ಹಲಿಗೆಗಳಲ್ಲಿ ಬರುವುದಿಲ್ಲ. ಆದರೂ ಮಾರುಕಟ್ಟೆಯಲ್ಲಿ ಜನರು ಸುಂದರವಾದ ಫೈಬರ್ ಹಲಗೆಯನ್ನೇ ಬಯಸುತ್ತಾರೆ. ಅದೇ ಕಾರಣಕ್ಕೆ ಗ್ರಾಹಕರ ಬೇಡಿಕೆಯಂತೆ, ಬಯಕೆಗೆ ತಕ್ಕಂತೆ ಇವೇ ತರಹೇವಾರಿ ಬಣ್ಣ ಬಣ್ಧ ಹಲಗೆಗಗಳು ಗಮನ ಸೆಳೆಯುತ್ತಿವೆ.

ಇದನ್ನೂ ಓದಿ: 'ಕಾಮ ದಹನಕ್ಕೂ ಮುನ್ನ ಈ ವಸ್ತುಗಳನ್ನು ನಿಮ್ಮ ಮನೆಯಿಂದ ಹೊರಗೆಸೆಯಿರಿ': ಜ್ಯೋತಿಷಿಗಳ ಸಲಹೆ