ETV Bharat / state

ಕೋಗಿಲು ಒತ್ತುವರಿದಾರರ ಪೈಕಿ 26 ಮಂದಿಗೆ ಮನೆ ನೀಡಲು ತೀರ್ಮಾನ: ಸಚಿವ ಜಮೀರ್ ಅಹಮದ್ ಖಾನ್

ಸಂತ್ರಸ್ತರ ಪೈಕಿ ಸ್ಥಳೀಯರು ಹಾಗೂ ಕರ್ನಾಟಕದವರಿಗೆ ಮಾತ್ರ ಮನೆ ಕೊಡುತ್ತೇವೆ ಎಂದು ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.

Minister Zameer Ahmed Khan
ಸಚಿವ ಜಮೀರ್ ಅಹಮದ್ ಖಾನ್ (ETV Bharat)
author img

By ETV Bharat Karnataka Team

Published : January 9, 2026 at 7:32 AM IST

2 Min Read
Choose ETV Bharat

ಬೆಂಗಳೂರು: ಕೋಗಿಲು ಬಡಾವಣೆ ತೆರವು ಪ್ರಕರಣದಲ್ಲಿ ಸಂತ್ರಸ್ತರಾದ 161 ಕುಟುಂಬಗಳ ಪೈಕಿ ಕೇವಲ 26 ಮಂದಿಗಷ್ಟೇ ಪರ್ಯಾಯವಾಗಿ ಮನೆ ನೀಡಲು ನಿರ್ಧಾರ ಮಾಡಲಾಗಿದೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.

ಈ ಕುರಿತಾಗಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮಾಹಿತಿ ನೀಡಿದ್ದು, 26 ಮಂದಿಯ ದಾಖಲೆ ಪರಿಶೀಲನೆ ನಡೆಸಲಾಗಿದೆ. ಕೋಗಿಲು ಸಂತ್ರಸ್ತರಿಗೆ ಮನೆ ನೀಡುವ ವಿಚಾರವಾಗಿ ಸಚಿವ ಕೃಷ್ಣಬೈರೇಗೌಡರು ನನಗೆ ಕರೆ ಮಾಡಿದ್ದರು. 26 ಜನರ ದಾಖಲೆ ಪರಿಶೀಲನೆ ಮುಗಿದಿದೆ ಎಂದು ಹೇಳಿದ್ದಾರೆ ಎಂದರು.

ಕೋಗಿಲು ಸಂತ್ರಸ್ತರ ದಾಖಲೆಗಳನ್ನು ಇನ್ನು ಪರಿಶೀಲನೆ ನಡೆಸಲಾಗುತ್ತಿದೆ. ಒಟ್ಟು 261 ಮನೆಗಳ ಪೈಕಿ 161 ಮನೆಗಳನ್ನು ತೆರವು ಮಾಡಲಾಗಿದೆ. ಪರ್ಯಾಯ ವ್ಯವಸ್ಥೆ ಕಲ್ಪಿಸಲು ಅರ್ಜಿಗಳು ಜಾಸ್ತಿ ಬಂದಿವೆ. ಆದರೆ ಅವರಿಗೆಲ್ಲ ಮನೆಗಳು ಕೊಡಲು ಆಗುವುದಿಲ್ಲ. ಯಾರ ಮನೆಗಳನ್ನು ತೆರವು ಮಾಡಲಾಗಿದೆ ಅವರನ್ನು ಪರಿಗಣಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ತೀರ್ಮಾನ ಮಾಡಿದ್ದಾರೆ. ಸಂತ್ರಸ್ತರ ಪೈಕಿ ಸ್ಥಳೀಯರು ಹಾಗೂ ಕರ್ನಾಟಕದವರಿಗೆ ಮಾತ್ರ ಮನೆ ಕೊಡುತ್ತೇವೆ. ಅವರು ಐದು ವರ್ಷಗಳ ಕಾಲ ಬೆಂಗಳೂರು ನಿವಾಸಿಗಳು ಆಗಿರಬೇಕು ಎಂದು ತಿಳಿಸಿದರು.

ಅಕ್ರಮದ ಆರೋಪಿ ಪರಿಚಯ ಇಲ್ಲ: ಕೋಗಿಲು ಬಡಾವಣೆ ಅಕ್ರಮದ ಆರೋಪಿ ಯಾರು ಎಂಬುದು ನನಗೆ ಗೊತ್ತಿಲ್ಲ. ಅವರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದರು.

ಮನೆ ತೆರವು: ಕೋಗಿಲು ಬಡಾವಣೆಯಲ್ಲಿ ಜಿಬಿಎಗೆ ಸೇರಿದ ಭೂಮಿಯಲ್ಲಿ ಅನಧಿಕೃತವಾಗಿ ಮನೆ ಕಟ್ಟಿಕೊಂಡು ವಾಸವಾಗಿದ್ದಾರೆಂದು ಜಿಬಿಎ ಅಧಿಕಾರಿಗಳು ಕಳೆದ ವಾರ ತೆರವು ಕಾರ್ಯಾಚರಣೆ ಮಾಡಿ 180 ಕುಟುಂಬಗಳನ್ನು ಸ್ಥಳಾಂತರಿಸಿದ್ದರು. ಬಳಿಕ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಕರ್ನಾಟಕ ಸರ್ಕಾರವು ಅಲ್ಪಸಂಖ್ಯಾತರ ವಿರುದ್ಧ ಬುಲ್ಡೋಜರ್ ಸಂಸ್ಕೃತಿ ಅಳವಡಿಸಿಕೊಂಡಿದೆ ಎಂದು ಆರೋಪಿಸಿದ್ದರು. ಕೇರಳದ ರಾಜ್ಯಸಭಾ ಸದಸ್ಯರು ಮತ್ತು ಆಡಳಿತ ಪಕ್ಷದ ಶಾಸಕರು ಕೂಡ ಸ್ಥಳಕ್ಕೆ ಭೇಟಿ ನೀಡಿ, ಸಂತ್ರಸ್ತ ಕುಟುಂಬಸ್ಥರಿಗೆ ಬೆಂಬಲ ನೀಡಿದ್ದರು. ಆ ನಂತರ ಈ ಪ್ರಕರಣ ದೇಶದ ಗಮನ ಸೆಳೆಯಿತು.

ಸಂತ್ರಸ್ತ ಕುಟುಂಬಗಳು ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಅವರು ತೆರವು ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿದ್ದರು. ಬಳಿಕ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ಸಿಎಂ ಮತ್ತು ಡಿಸಿಎಂಗೆ ಕರೆ ಮಾಡಿ ಮಾತನಾಡಿದ್ದರು.

ಆ ಬಳಿಕ ಸಂತ್ರಸ್ತರ ಬಳಿ ಸರಿಯಾದ ದಾಖಲೆ ಇದ್ದು, ಸ್ಥಳೀಯರಾಗಿದ್ದರೆ ಪರ್ಯಾಯವಾಗಿ ಮನೆ ಕೊಡುವುದಾಗಿ ಸಿಎಂ ತಿಳಿಸಿದ್ದರು. ಅದರಂತೆ ಸಚಿವ ಸಮೀರ್ ನೇತೃತ್ವದಲ್ಲಿ ದಾಖಲಾತಿ ಪರಿಶೀಲನೆ ನಡೆಸಿ, ಮನೆ ಹಂಚಲಾಗುತ್ತದೆ.

ಇದನ್ನೂ ಓದಿ: ಕೋಗಿಲು ಬಡಾವಣೆ ಮನೆಗಳ ತೆರವು: ಪುನರ್ವಸತಿಗೆ 3 ಸ್ಥಳ ಗುರುತಿಸಿದ್ದು, ತಾತ್ಕಾಲಿಕ ವ್ಯವಸ್ಥೆ ಮಾಡಿರುವುದಾಗಿ ಹೈಕೋರ್ಟ್‌ಗೆ ಮಾಹಿತಿ ನೀಡಿದ ಸರ್ಕಾರ