ಸಚಿವ ಕೃಷ್ಣ ಬೈರೇಗೌಡ- ಜಮೀರ್ ಅಹ್ಮದ್ ಸಭೆ: ಗುರುವಾರದೊಳಗೆ ಫಕೀರ್ ಕಾಲೋನಿಯಲ್ಲಿ 25 - 30 ಜನರಿಗೆ ಮನೆ ನೀಡಲು ತೀರ್ಮಾನ
ಫಕೀರ್ ಕಾಲೋನಿಯಲ್ಲಿ ಗುರುವಾರದ ಒಳಗೆ 25 ರಿಂದ 30 ಜನರಿಗೆ ಮನೆ ನೀಡಬೇಕು. ಉಳಿದ ಎಲ್ಲ ಅರ್ಹರಿಗೂ ಹಂತ ಹಂತವಾಗಿ ಮನೆ ನೀಡುವ ಕೆಲಸ ಆಗಬೇಕೆಂದು ಕಂದಾಯ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

Published : January 5, 2026 at 6:26 PM IST
ಬೆಂಗಳೂರು: ಫಕೀರ್ ಕಾಲೋನಿಯಲ್ಲಿ 35 ಮನೆ ಇದ್ದು, ಬಹುಪಾಲು ಜನ ಅರ್ಹರಿದ್ದಾರೆ. ಈ ಪೈಕಿ ಗುರುವಾರದ ಒಳಗೆ 25 ರಿಂದ 30 ಜನರಿಗೆ ಮನೆ ನೀಡಬೇಕು. ಉಳಿದ ಎಲ್ಲ ಅರ್ಹರಿಗೂ ಹಂತ ಹಂತವಾಗಿ ಮನೆ ನೀಡುವ ಕೆಲಸ ಆಗಬೇಕು ಎಂದು ಕಂದಾಯ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ವಿವಾದಿತ ಕೋಗಿಲು ಲೇಔಟ್ ನಿರಾಶ್ರಿತರಿಗೆ ಸರ್ಕಾರಿ ಮನೆ ಮಂಜೂರು ಮಾಡುವ ಸಂಬಂಧ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಹಾಗೂ ವಸತಿ ಸಚಿವ ಜಮೀರ್ ಅಹ್ಮದ್ ಅವರ ನೇತೃತ್ವದಲ್ಲಿ ವಿಕಾಸಸೌಧದಲ್ಲಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಈ ಮಹತ್ವದ ತೀರ್ಮಾನಗಳು ನಡೆಯಿತು. ಸರ್ಕಾರಿ ಜಮೀನಲ್ಲಿ ಯಾರಿಗೋ ಹಣ ಕೊಟ್ಟು ಒತ್ತುವರಿ ಮಾಡ್ತಾರೆ ಎಂದರೆ ಏನು ಹೇಳಬೇಕು. ಅಲೆಮಾರಿಗಳಿಗೆ ಭೂ ಒತ್ತುವರಿ ಅಗತ್ಯ ಇಲ್ಲ. ಅವರು ಬರ್ತಾರೆ ಹೋಗ್ತಾರೆ. ಆದರೆ ಭೂ ಒತ್ತುವರಿದಾರರನ್ನು ಸಹಿಸಲು ಸಾಧ್ಯವಿಲ್ಲ. ಅಂತವರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದು ಸೂಚಿಸಲಾಯಿತು.
ಸರ್ಕಾರಿ ಜಮೀನಿನಲ್ಲಿ ಶೆಡ್ ಹಾಕಿದ ಕೂಡಲೇ ಅವರಿಗೆ ಮನೆ ಕೊಟ್ಟರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆ ಆಗುತ್ತೆ. ಸರ್ಕಾರಿ ಜಮೀನು ಒತ್ತುವರಿಗೆ ನಾವೇ ಪರೋಕ್ಷ ಕುಮ್ಮಕ್ಕು ಕೊಟ್ಟಂತಾಗುತ್ತೆ. ಎಷ್ಟೋ ಜನ ಸರ್ಕಾರಿ ಮನೆಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿರುವಾಗ ಹೀಗೆ ಒತ್ತುವರಿದಾರರಿಗೆ ಏಕಾಏಕಿ ಮನೆ ನೀಡುವುದು ಸರಿಯಲ್ಲ. ಆದರೆ, ಕೋಗಿಲು ಕ್ರಾಸ್ ಪ್ರಕರಣದಲ್ಲಿ ಬಡವರಿಗೆ ಮಾನವೀಯತೆ ಅಡಿ ಮನೆ ನೀಡಬೇಕು ನಿಜ. ಆದರೆ, ಆ ಕೆಲಸ ಕಾನೂನುಬದ್ಧವಾಗಿಯೇ ಆಗಬೇಕು ಎಂದು ತೀರ್ಮಾನ ಕೈಗೊಳ್ಳಲಾಯಿತು.
ಇಲ್ಲಿ ಗುಡಿಸಲು ಹಾಕಿರುವವರು ಎಲ್ಲಿಂದ ಬಂದರು ಎಂಬ ಬಗ್ಗೆ ಮೊದಲು ತನಿಖೆ ಆಗಬೇಕು. ಉತ್ತರ ಪ್ರದೇಶ ಹಾಗೂ ಬಿಹಾರದ ಐದಾರು ಕುಟುಂಬಗಳೂ ಸಹ ಇಲ್ಲಿರುವ ಮಾಹಿತಿ ಇದೆ. ಆದರೆ, ಅರ್ಹರಿಗೆ ಮಾತ್ರ ಮನೆ ನೀಡಬೇಕು. ಕರ್ನಾಟಕದಿಂದ ಬೆಂಗಳೂರಿಗೆ ಬಂದು ನೆಲೆಸಿದ್ದರೆ ಅಂತವರಿಗೆ ಮೊದಲ ಆದ್ಯತೆಯಾಗಿ ಮನೆ ನೀಡಲು ಪರಿಗಣಿಸಬೇಕು. ಕನ್ನಡಿಗರಾಗಿದ್ದು ಕೋಗಿಲು ಲೇಔಟ್ನಲ್ಲಿ 5 ವರ್ಷಕ್ಕಿಂತ ಹೆಚ್ಚು ಕಾಲ ನೆಲೆಸಿದ್ದರೆ ಆದ್ಯತೆಯಾಗಿ ಪರಿಗಣಿಸಬೇಕು ಎಂದು ಸೂಚಿಸಲಾಯಿತು.
ಮಾತೃ ಭಾಷೆ ಬೇರೆ ಇದ್ದೂ ಸಹ ತಲೆಮಾರಿನಿಂದ ಕರ್ನಾಟಕದಲ್ಲಿ ವಾಸ ಇದ್ದು, ಬೆಂಗಳೂರಿಗೆ ವಲಸೆ ಬಂದಿದ್ದರೂ ಸಹ. ಮೂಲ ತಾಲೂಕು-ಊರು ಯಾವುದು ಎಂದು ತಿಳಿದು ಅಲ್ಲಿನ ವಿಎ ಹಾಗೂ ದಫೇದಾರ್ ಮೂಲಕ ಪರಿಶೀಲಿಸಿದ ನಂತರ ನಿರಾಶ್ರಿತರಿಗೆ ಮನೆ ನೀಡಬೇಕು. ವಸೀಂ ಕಾಲನಿಯವರು ಮಾತೃ ಭಾಷೆ ಬೇರೆ ಇದ್ದರೂ ಕರ್ನಾಟಕದ ಮೂಲದವರಾಗಿದ್ದರೆ, ಕರ್ನಾಟಕದಲ್ಲೇ ನೆಲೆಸಿದ್ದವರಾದರೆ ಮನೆ ನೀಡಬೇಕು. ಬಡವರು ಬಡವರೇ ಭಾರತೀಯರು ಭಾರತೀಯರೇ. ಆದರೆ ಕನ್ನಡಿಗರಿಗೆ ಮೊದಲ ಆದ್ಯತೆ ಎಂದು ತೀರ್ಮಾನಿಸಲಾಯಿತು.
ಕರ್ನಾಟಕದವರು ಕನ್ನಡಿಗರು ಅಲ್ಲದಿದ್ದು, ಐದು ವರ್ಷ ಕರ್ನಾಟಕದಲ್ಲಿ ನೆಲೆಸಿದ್ದರೆ ಅಂತವರು ಬಡವರಿಗೆ 1 ಲಕ್ಷ ಮನೆ ನೀಡುವ ಸರ್ಕಾರದ ವಸತಿ ಯೋಜನೆ ಅಡಿಯಲ್ಲಿ ಅರ್ಜಿ ಹಾಕಿ ಮನೆ ಪಡೆಯಲಿ. ಒಂದೇ ಕುಟುಂಬದವರು ಮನೆಗಾಗಿ ಎರಡು ಅರ್ಜಿ ಸಲ್ಲಿಸಿದ್ದರೆ ಒಂದು ರೇಷನ್ ಕಾರ್ಡ್ ಆಧಾರದಲ್ಲಿ ಒಂದು ಮನೆ ನೀಡಬೇಕು. ಯಾರೋ ಹೊರ ರಾಜ್ಯದವರನ್ನ ಹುಡುಕುವ ಸಲುವಾಗಿ ಕನ್ನಡಿಗರಿಗೆ ಮನೆ ನೀಡಲು ತಡ ಮಾಡುವುದು ಸರಿಯಲ್ಲ. ಅರ್ಹರಿಗೆ ಮೊದಲ ಹಂತದಲ್ಲಿ ಮನೆ ನೀಡಲು ಆರಂಭಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಇವುಗಳನ್ನೂ ಓದಿ:

