ETV Bharat / state

ಚಿತ್ರದುರ್ಗ: ಬಸ್​ ಅಪಘಾತದಲ್ಲಿ ಆರು ಜನರ ಮೃತದೇಹ ಪತ್ತೆ; ಸುಟ್ಟು ಕರಕಲಾದ ಪುಟ್ಟ ಕಂದಮ್ಮ, ಗುರುತು ಪತ್ತೆಯೇ ಸವಾಲು

ಚಿತ್ರದುರ್ಗದಲ್ಲಿ ಇಂದು ನಡೆದ ಭೀಕರ ಬಸ್​ ಲಾರಿ ಅಪಘಾತದಲ್ಲಿ ಮೃತಪಟ್ಟ 6 ಜನರ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಘಟನೆಯಲ್ಲಿ 28 ಜನ ಬದುಕುಳಿದಿದ್ದಾರೆ.

CHITRADURGA  BUS LORRY ACCIDENT KARNATAKA  ಚಿತ್ರದುರ್ಗ ಬಸ್​ ಅಪಘಾತ  ಮೃತದೇಹ
ಚಿತ್ರದುರ್ಗ: ಅಪಘಾತದಲ್ಲಿ ಹೊತ್ತಿ ಉರಿದ ಬಸ್​, ಲಾರಿ (ETV Bharat)
author img

By ETV Bharat Karnataka Team

Published : December 25, 2025 at 4:11 PM IST

|

Updated : December 25, 2025 at 4:29 PM IST

3 Min Read
Choose ETV Bharat

ಚಿತ್ರದುರ್ಗ: ಹಿರಿಯೂರು ಬಳಿ ಗುರುವಾರ ಸಂಭವಿಸಿದ ಲಾರಿ ಹಾಗೂ ಬಸ್​ ನಡುವಿನ ಅಪಘಾತದಲ್ಲಿ ಪುಟ್ಟ ಮಗು, ನಾಲ್ವರು ವಯಸ್ಕರು, ಲಾರಿ ಚಾಲಕ ಸೇರಿ ಒಟ್ಟು 6 ಜನರ ಮೃತದೇಹವನ್ನು ಹೊರತೆಗೆಯಲಾಗಿದ್ದು, ಮೃತರನ್ನು ಪತ್ತೆ ಹಚ್ಚಲಾಗಿದೆ. ಆದರೆ ಗುರುತು ಪತ್ತೆಯೇ ಸವಾಲಿನ ಕೆಲಸವಾಗಿದೆ.

ಈಗಾಗಲೇ ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರು ಅವರು ಮೃತರನ್ನು ಬಿಂದು ಹಾಗು ಅವರ ಮಗಳು ಗ್ರೇಯ, ಮಾನಸ, ನವ್ಯ, ರಶ್ಮಿ ಮಹಲೆ ಒಟ್ಟು ಐದು ಜನ ಮೃತರೆಂದು ಖಚಿತಪಡಿಸಿದ್ದಾರೆ. ಇವರು ಯಾವ ಊರಿನವರು ಎಂಬುದು ತಿಳಿದು ಬರಬೇಕಿದೆ.‌ ಮೃತ ದೇಹಗಳು ಸುಟ್ಟುಕರಕಲಾಗಿದ್ದು ಪತ್ತೆ ಮಾಡುವುದು ಕುಟುಂಬಸ್ಥರಿಗೆ ಕಷ್ಟಕರವಾಗಿದೆ.

ಚಿತ್ರದುರ್ಗ ಬಸ್​ ಅಪಘಾತ: ಎಸ್ಪಿ ರಂಜಿತ್ ಕುಮಾರ್ ಬಂಡಾರು ಮಾಹಿತಿ (ETV Bharat)

ಮಗು ಸೇರಿ ಐವರ ಸಜೀವ ದಹನ, ಲಾರಿ ಚಾಲಕನ ಸಾವು: ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರು ಅವರು ಮಾತನಾಡಿ, "ಇಂದು ನಡೆದ ಬಸ್​ ಬೆಂಕಿ ಅವಘಡದಲ್ಲಿ ಒಟ್ಟು ಐದು ಮೃತದೇಹಗಳು ಪತ್ತೆಯಾಗಿವೆ. ಲಾರಿ ಚಾಲಕನ ಮೃತದೇಹ ಸೇರಿ ಒಟ್ಟು ಆರು ಜನ ಸಾವನ್ನಪ್ಪಿದ್ದಾರೆ. ಮೃತರನ್ನು ಬಿಂದು ಮತ್ತು ಬಿಂದು ಅವರ ಮಗು ಗ್ರೇಯ, ಮಾನಸ, ನವ್ಯಾ, ರಶ್ಮಿ ಮಹಲೆ ಇಷ್ಟು ಜನ ನಮಗೆ ಸಂಪರ್ಕಕ್ಕೆ ಸಿಕ್ಕಿರಲಿಲ್ಲ, ನಾಪತ್ತೆಯಾಗಿದ್ದರು.‌ ಮೃತ‌ದೇಹಗಳ ಪೈಕಿ ನಾಲ್ವರು ವಯಸ್ಕರ ಮೃತದೇಹ, ಒಂದು ಮಗುವಿನ ಮೃತದೇಹ ಸಿಕ್ಕಿದೆ. ಆ ಮೃತದೇಹಗಳನ್ನು ಗುರುತು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದೇವೆ. ಒಟ್ಟು 28 ಜನ ಟಿಕೆಟ್ ಬುಕ್ ಮಾಡಿದ್ದರು. ರಸ್ತೆ ಮಧ್ಯೆ ಇಬ್ಬರನ್ನು ಹತ್ತಿಸಿಕೊಂಡಿದ್ದರು. ಬಸ್ಸಿನಲ್ಲಿ ಓರ್ವ ಬಸ್ ಚಾಲಕ, ಓರ್ವ ಬಸ್ ಕಂಡಕ್ಟರ್ ಹಾಗೇ ಟಿಕೆಟ್​ ಬುಕ್​ ಮಾಡದ ಹಿನ್ನೆಲೆ ಮೃತ ಮಗು ಸೇರಿ ಒಟ್ಟು 33 ಜನರಿದ್ದರು. ಮಗುವಿದು ಟಿಕೆಟ್ ಬುಕ್ ಆಗದ ಹಿನ್ನೆಲೆಯಲ್ಲಿ ಲೆಕ್ಕ ಸಿಕ್ಕಿರಲಿಲ್ಲ. ಒಬ್ಬರು ಟಿಕೆಟ್ ಬುಕ್ ಮಾಡಿ ಬಸ್ ಹತ್ತಿರಲಿಲ್ಲ. ಬಿಂದು ಹಾಗು ಮಗು ಗ್ರೇಯ ಯಾವ ಊರಿನವರು ಅನ್ನೋದು ಗೊತ್ತಾಗಿಲ್ಲ, ತಿಳಿದುಕೊಂಡು ಹೇಳುವೆ. ಮುಸ್ಲಿಂ ದಂಪತಿಗಳಾದ ಮಸ್ರತ್ತುನ್ನಿ ಹಾಗು ಸೈಯದ್ ಜಮೀರ್ ಗೌಸ್ ಎಂಬುವರು ನಾಪತ್ತೆಯಾಗಿದ್ದರು. ಇದೀಗ ಪತ್ತೆ ಹಚ್ಚಲಾಗಿದೆ. ದಂಪತಿ ಇಬ್ಬರು ಶಿರಾ ಕಡೆ ಹೋಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ" ಎಂದು ತಿಳಿಸಿದರು.

CHITRADURGA  BUS LORRY ACCIDENT KARNATAKA  ಚಿತ್ರದುರ್ಗ ಬಸ್​ ಅಪಘಾತ  ಮೃತದೇಹ
ಅಪಘಾತಕ್ಕೀಡಾದ ಲಾರಿ (ETV Bharat)

ಮಗುವಿನದ್ದು ಬೇರೆ ಮೃತದೇಹದ ಭಾಗ ಎಂದುಕೊಂಡಿದ್ದ ತನಿಖಾ ತಂಡ: "ಮೃತ ನವ್ಯಾ ಹಾಗೂ ಮಾನಸ ಇಬ್ಬರು ಪ್ರಾಣ ಸ್ನೇಹಿತೆಯರಾಗಿದ್ದರು ಎಂದು ಕುಟುಂಬಸ್ಥರು ಹೇಳಿದ್ದಾರೆ. ದುರಂತ ಎಂದರೆ ಶವ ಪತ್ತೆ ಮಾಡುವುದು ಕಷ್ಟಕರವಾಗಿದೆ.‌ ಕೊರಳಲ್ಲಿರುವ ಚೈನ್ ಮೂಲಕ ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ. ಎಸ್ಪಿ ಮಾತು ಮುಂದುವರೆಸಿ "ಬಿಂದು ಹಾಗು ಮಗುವಿನ ಮೃತದೇಹ ಪತ್ತೆ ಹಚ್ಚಲಾಗಿದ್ದು, ನವ್ಯಾ ಮತ್ತು ಮಾನಸ ಇಬ್ಬರ ಮೃತದೇಹ ಗೊತ್ತಾಗುತ್ತಿಲ್ಲ. ಇಬ್ಬರು ಸ್ನೇಹಿತೆಯರು ಆಗಿದ್ದು, ಚೈನ್ ಬದಲಾವಣೆ ಮಾಡಿಕೊಳ್ಳುತ್ತಿದ್ದರು ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ. ಅಲ್ಲದೆ ರಶ್ಮಿ ಮಹಲೆ ಎಂಬುವರ ಪೋಷಕರು ಬಂದಿದ್ದಾರೆ. ಅವರ ಚೈನ್ ಫೋಟೋ ಪಡೆದು ಮೃತ‌ದೇಹ ಪತ್ತೆ ಮಾಡುತ್ತಿದ್ದಾರೆ. ಮಗು ಗ್ರೇಯಳ ಮೃತ‌ದೇಹ ಗೊತ್ತಾಗಲಿಲ್ಲ, ಬದಲಾಗಿ ಅದು ಬೇರೆಯವರ ಮೃತ‌ದೇಹದ ಒಂದು ಭಾಗ ಎಂದುಕೊಂಡೆವು. ನಮ್ಮ ಎಫ್ಎಸ್ಎಲ್ ಸರ್ಜನ್ ಹಾಗು ತಂಡ ಅದನ್ನು ಪರಿಶೀಲನೆ ನಡೆಸಿ ಇದೊಂದು ಮಗುವಿನ ಮೃತ‌ದೇಹ ಎಂದು ಗುರುತಿಸಿದರು" ಎಂದು ಎಸ್ಪಿ ಮಾಹಿತಿ ನೀಡಿದರು.

CHITRADURGA  BUS LORRY ACCIDENT KARNATAKA  ಚಿತ್ರದುರ್ಗ ಬಸ್​ ಅಪಘಾತ  ಮೃತದೇಹ
ಬಸ್​ನಿಂದ ಮೃತದೇಹ ಹೊರತೆಗೆಯುತ್ತಿರುವ ಅಗ್ನಿಶಾಮಕ ಸಿಬ್ಬಂದಿ. (ETV Bharat)

ಬದುಕುಳಿದವರು ಇವರು: ಮಂಜುನಾಥ್​, ಸಂಧ್ಯಾ, ಶಶಾಂಕ್, ದಿಲೀಪ್, ಪ್ರತೀಶ್ವರನ್, ಕವಿತಾ, ಅನಿರುದ್​​, ಅಮೃತ, ಇಷಾ, ಸೂರಜ್, ಮಿಲನ, ವಿಜಯ್, ಅಭಿಷೇಕ್, ಕಿರಣ್ ಪಾಲ್, ಕೀರ್ತನ, ನಂದಿತ, ದೇವಿಕ, ಮೇಘಾರಾಜ್, ಹೇಮರಾಜ್​ ಕುಮಾರ್,​ ಕಲ್ಪನ ಪ್ರಜಾವತಿ, ರಕ್ಷಿತ, ಗಗನಶ್ರೀ, ಬಸ್ ಚಾಲಕ ಮೊಹಮ್ಮದ್ ರಫೀಕ್, ಕ್ಲೀನರ್ ಮೊಹಮ್ಮದ್ ಸಾದೀಕ್, ಆದಿತ್ಯ, ವರುಣ್, ಮಸ್ರತ್ ಉನ್ನೀಸಾ, ಸೈಯದ್​ ಝಮೀರ್ ಗೌಸ್ ಒಟ್ಟು 28 ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ‌ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಬಸ್​ನ ಡೀಸೆಲ್ ಟ್ಯಾಂಕ್​ಗೆ ಲಾರಿ ಡಿಕ್ಕಿ ಹೊಡೆದಿದ್ದರಿಂದ ಬೆಂಕಿ ಹೊತ್ತಿಕೊಂಡಿತು: ಖಾಸಗಿ ಬಸ್ ಚಾಲಕ

ಇದನ್ನೂ ಓದಿ: ಚಿತ್ರದುರ್ಗ ಭೀಕರ ಅಪಘಾತ: ಪವಾಡ ಸದೃಶ ರೀತಿಯಲ್ಲಿ ಮತ್ತೊಂದು ಬಸ್​ನಲ್ಲಿದ್ದ 42 ಶಾಲಾ ಮಕ್ಕಳು ಪ್ರಾಣಾಪಾಯದಿಂದ ಪಾರು

Last Updated : December 25, 2025 at 4:29 PM IST