ದಾಖಲೆ ಬರೆಯುತ್ತಿರುವ ಸಿಎಂಗೆ ತುಂಬು ಹೃದಯದ ಶುಭ ಹಾರೈಕೆ; ಈ ಬಗ್ಗೆ ಉತ್ತಮವಾಗಿ ಪ್ರಚಾರ ಮಾಡಿ ಎಂದ ಡಿಸಿಎಂ
ಸಿಎಂ ಸಿದ್ದರಾಮಯ್ಯ ಅವರು ದೀರ್ಘಾವಧಿ ಆಡಳಿತ ಮಾಡಿದ ದಾಖಲೆ ಬರೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಶಿವಕುಮಾರ್, ನಾನು ಅವರಿಗೆ ತುಂಬು ಹೃದಯದಿಂದ ಶುಭ ಹಾರೈಸುತ್ತೇನೆ ಎಂದಿದ್ದಾರೆ.

Published : January 5, 2026 at 8:29 PM IST
ಬೆಂಗಳೂರು: ”ದಾಖಲೆ ಬರೆಯುತ್ತಿರುವ ಸಿಎಂಗೆ ತುಂಬು ಹೃದಯದ ಶುಭ ಹಾರೈಕೆ. ಈ ಬಗ್ಗೆ ಉತ್ತಮವಾಗಿ ಪ್ರಚಾರ ಮಾಡಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ದೀರ್ಘಾವಧಿ ಆಡಳಿತ ಮಾಡಿದ ದಾಖಲೆ ಬರೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸುತ್ತಾ, ”ಇದು ಬಹಳ ಸಂತೋಷದ ವಿಷಯ. ನಮಗೆ, ನಿಮಗೆ ಎಲ್ಲರಿಗೂ ಸಂತೋಷದ ವಿಚಾರ. ನೀವು ಈ ಬಗ್ಗೆ ಉತ್ತಮವಾಗಿ ಪ್ರಚಾರ ಮಾಡಿ. ನಾನು ಅವರಿಗೆ ತುಂಬು ಹೃದಯದಿಂದ ಶುಭ ಹಾರೈಸುತ್ತೇನೆ. ಜೀವನದಲ್ಲಿ ಸಾಧನೆ ಮಾಡಬೇಕು ಎಂಬ ಬಯಕೆ ಎಲ್ಲರಿಗೂ ಇರುತ್ತದೆ. ನಮ್ಮ ಗೌರವಾನ್ವಿತ ಮುಖ್ಯಮಂತ್ರಿಗಳು ಇತಿಹಾಸದ ಪುಟಕ್ಕೆ ಹಿಂದೆಯೂ ಸೇರಿದ್ದಾರೆ, ಮುಂದೆಯೂ ಸೇರುತ್ತಾರೆ” ಎಂದರು.
ಇದರಿಂದ ನಿಮ್ಮ ಹಾದಿ ಸುಗಮವಾಗುತ್ತದೆಯೇ ಎಂಬ ಪ್ರಶ್ನೆಗೆ, “ಹಳ್ಳಿಯಿಂದ ಬಂದ ನಾನು ಇಲ್ಲಿಯವರೆಗೂ ತಲುಪಿದ್ದೇನೆ. ಇದಕ್ಕಿಂತ ಇನ್ನೇನು ಬೇಕು ನನಗೆ. ಯಾವುದನ್ನೂ ಹುಡುಕಿಕೊಂಡು ಹೋಗುವ ಅವಶ್ಯಕತೆ ಇಲ್ಲ. ನನ್ನ ಬಾಯಲ್ಲಿ ಏನೇನೋ ಮಾತನಾಡಿಸಲು ಪ್ರಯತ್ನಿಸಬೇಡಿ ಎಂದರು.
ಶುಭ ದಿನಗಳು ಬರುತ್ತಿವೆ ಎಂಬ ಡಿ.ಕೆ. ಸುರೇಶ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಮಗೆ ಎಲ್ಲಾ ದಿನವೂ ಒಳ್ಳೆಯ ದಿನಗಳು, ನಿನ್ನೆ ಭೂತಕಾಲ, ನಾಳೆ ಭವಿಷ್ಯಕಾಲ, ಇಂದು ವರ್ತಮಾನ. ನಿಮ್ಮ ಜೊತೆ ಮಾತನಾಡುತ್ತಿರುವುದು ಒಳ್ಳೆಯ ದಿನ ಎಂದು ಚಟಾಕಿ ಹಾರಿಸಿದರು.
ಹೆಚ್ಡಿಕೆಗೆ ತಿರುಗೇಟು: ”ಕುಮಾರಸ್ವಾಮಿ ಅವರು ಯಾವಾಗಲೋ ಬರುತ್ತಾರೆ, ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಹೋಗುತ್ತಾರೆ. ಅವರು ಗಂಭೀರ ರಾಜಕಾರಣ ಮಾಡುವವರಲ್ಲ. ಮಾಧ್ಯಮಗಳ ಮುಂದೆ ಮಾತ್ರ ರಾಜಕಾರಣ ಮಾಡುವವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ” ಎಂದು ಇದೇ ವೇಳೆ ತಿರುಗೇಟು ನೀಡಿದರು.
”ನಾವು ಯಾರಿಗೆ ಭದ್ರತೆ ಕೊಡಬೇಕು?. ಯಾವ ಕಾರಣಕ್ಕೆ ಭದ್ರತೆ ನೀಡಬೇಕು ಎಂದು ಆಮೇಲೆ ಮಾತನಾಡೋಣ. ಈ ವಿಚಾರವಾಗಿ ಗೃಹ ಸಚಿವರು ಉತ್ತರ ನೀಡುತ್ತಾರೆ. ನಾನು ಯಾರಿಗೂ ಉತ್ತರ ನೀಡುವುದಿಲ್ಲ. ನಾನು ಕೂಡ ಬಳ್ಳಾರಿಗೆ ಹೋಗುತ್ತಿದ್ದೇನೆ. ನಮ್ಮ ಕಾರ್ಯಕರ್ತ ಸತ್ತಿದ್ದಾನೆ. ನಾನು ಪಕ್ಷದ ಸಮಿತಿಯಿಂದ ಮಾಹಿತಿ ಪಡೆದಿದ್ದೇನೆ. ಅಧಿಕೃತವಾಗಿ ವರದಿ ನೀಡಬೇಕಿದೆ. ನಾನು ಕುಮಾರಸ್ವಾಮಿ ಹಾಗೂ ಇತರರ ಹೇಳಿಕೆಗೆ ಉತ್ತರ ನೀಡುವ ಅವಶ್ಯಕತೆ ಇಲ್ಲ. ಅವರು ತಮ್ಮ ಖುಷಿಗೆ ಏನಾದರೂ ಹೇಳಿಕೊಳ್ಳಲಿ. ಕುಮಾರಸ್ವಾಮಿ ಅವರು ಬರುತ್ತಾರೆ, ಮಾತನಾಡುತ್ತಾರೆ, ಹೋಗುತ್ತಾರೆ. ಬಳ್ಳಾರಿಯಲ್ಲಿ ಶಾಂತಿ ನೆಲೆಸಬೇಕು. ಬಳ್ಳಾರಿ ಜನ ಈ ಹಿಂದೆ ಅನುಭವಿಸಿರುವುದೇ ಸಾಕು, ಮುಂದೆ ಯಾವುದೇ ತೊಂದರೆ ಆಗಬಾರದು. ನಮಗೆ ಅಷ್ಟೇ ಸಾಕು. ಈ ಹಿಂದೆ ಆಗಬಾರದ್ದೆಲ್ಲಾ ಆಗಿದೆ. ಮೊನ್ನೆ ನಡೆದ ದುರ್ಘಟನೆ ಆಗಬಾರದಿತ್ತು, ಆದರೆ ಆಗಿಹೋಗಿದೆ. ಇದರಿಂದ ನನಗೆ ದುಃಖವಾಗಿದೆ” ಎಂದರು.
”ಕುಮಾರಸ್ವಾಮಿ ಅವರಿಗೆ ನನ್ನ ಮೇಲೆ ಬಹಳ ಅಭಿಮಾನ ಇದೆಯಲ್ಲಾ, ಇದು ಬಹಳ ಒಳ್ಳೆಯದು. ಒಳ್ಳೆಯದ್ದಕ್ಕೆ ಹೇಳಿದ್ದಾರೋ, ಕೆಟ್ಟದ್ದಕ್ಕೆ ಹೇಳಿದ್ದಾರೋ, ಒಟ್ಟಿನಲ್ಲಿ ನನ್ನನ್ನು ಗ್ರೇಟ್ ಡಿಸಿಎಂ ಎಂದು ಕರೆದಿರುವುದಕ್ಕೆ ಸಂತೋಷ” ಎಂದರು.
ರೆಡ್ಡಿ ತಮ್ಮ ಇತಿಹಾಸದ ಪುಸ್ತಕ ನೋಡಿಕೊಳ್ಳಲಿ: ಕ್ರಿಮಿನಲ್ ಶಾಸಕರಿಗೆ ಡಿ.ಕೆ.ಶಿವಕುಮಾರ್ ಬೆಂಬಲ ನೀಡುತ್ತಿದ್ದಾರೆ ಎಂಬ ಜನಾರ್ದನ ರೆಡ್ಡಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, “ನನ್ನ ಮೇಲೂ ಕ್ರಿಮಿನಲ್ ಕೇಸ್ ದಾಖಲಿಸಿ ನನಗೂ ಕ್ರಿಮಿನಲ್ ಪಟ್ಟ ಕೊಟ್ಟಿದ್ದಾರೆ. ಜನಾರ್ದನ ರೆಡ್ಡಿ ಅವರು ತಮ್ಮ ಇತಿಹಾಸದ ಪುಸ್ತಕವನ್ನು ತೆರೆದು ಯಾರ ಮೇಲೆ ಕ್ರಿಮಿನಲ್ ಕೇಸ್ ಇದೆ ಎಂಬುದನ್ನು ನೋಡಿಕೊಳ್ಳಲಿ. ಮಾಜಿ ಸಿಎಂ, ಶಾಸಕರು, ಸಂಸದರ ಮೇಲೆ ಕ್ರಿಮಿನಲ್ ಕೇಸ್ಗಳಿವೆಯಲ್ಲಾ?. ಎಫ್ಐಆರ್ ದಾಖಲಿಸಿದ ನಂತರ ನ್ಯಾಯಾಲಯದಲ್ಲಿ ತೀರ್ಪು ಬರುವವರೆಗೂ ಆ ಕ್ರಿಮಿನಲ್ ಅನ್ನು ಆರೋಪಿ ಅಂತಲೇ ಪರಿಗಣಿಸುತ್ತಾರೆ ಅಲ್ಲವೇ? ಎಂದರು.
ಜ.8ರ ಸಂಜೆ ಮನರೇಗಾ ಉಳಿಸಿ ಹೋರಾಟ ಸಭೆ: ಮನರೇಗಾ ಹೋರಾಟದ ಬಗ್ಗೆ ಕೇಳಿದಾಗ, “ಜ.8 ರಂದು ಸಂಜೆ 5 ಗಂಟೆಗೆ ಎಲ್ಲಾ ಶಾಸಕರು, ಪರಿಷತ್ ಸದಸ್ಯರು, ಸಂಸದರನ್ನು ಮನರೇಗಾ ಉಳಿಸಿ ಹೋರಾಟದ ಪೂರ್ವಭಾವಿ ಸಭೆಗೆ ಆಹ್ವಾನಿಸಿದ್ದೇನೆ. ಎಐಸಿಸಿ ನಾಯಕರು ನಮಗೆ ನಿರ್ದೇಶನ ನೀಡಿದ್ದಾರೆ. ಮಾಧ್ಯಮಗಳ ಮೂಲಕ ನಾನು ನಮ್ಮ ನಾಯಕರನ್ನು ಆಹ್ವಾನಿಸುತ್ತಿದ್ದೇನೆ. ಈ ಪ್ರತಿಭಟನೆ ನಂತರ ಜಿಲ್ಲಾ ಹಾಗೂ ತಾಲೂಕು ಮಟ್ಟದ ಕಾರ್ಯಕ್ರಮ ರೂಪಿಸುತ್ತೇವೆ ಎಂದರು.
ಇದನ್ನೂ ಓದಿ: ಸುದೀರ್ಘ ಅವಧಿಗೆ ಸಿಎಂ ಎಂಬ ದಾಖಲೆ: ಜನರ ಆಶೀರ್ವಾದಿಂದ ಸಾಧ್ಯವಾಗಿದೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ

