ಚಾಮರಾಜನಗರ ಜಿಲ್ಲೆಯ 5 ತಾಲೂಕುಗಳು ತೀವ್ರ ಬರಪೀಡಿತ; ಸಮಸ್ಯೆಯಾಗದಂತೆ ಪರಿಸ್ಥಿತಿ ನಿಭಾಯಿಸಿ: ಡಿಸಿಎಂ ಪರಮೇಶ್ವರ್
ಚಾಮರಾಜನಗರ ಜಿಲ್ಲೆಯ 5 ತಾಲೂಕುಗಳು ತೀವ್ರ ಬರಪೀಡಿತ ಎಂದು ಘೋಷಣೆ ಮಾಡಲಾಗಿದ್ದು, ಅಧಿಕಾರಿಗಳು ಯಾವುದೇ ಸಮಸ್ಯೆಯಾಗದಂತೆ ಪರಿಸ್ಥಿತಿಯನ್ನು ನಿಭಾಯಿಸುವಂತೆ ಡಿಸಿಎಂ ಪರಮೇಶ್ವರ್ ಸೂಚಿಸಿದರು.

Published : September 2, 2026 at 8:32 PM IST
ಚಾಮರಾಜನಗರ: ರಾಜ್ಯದ ಬರ ಪರಿಸ್ಥಿತಿ ದಿನೇ ದಿನೆ ಗಂಭೀರವಾಗುತ್ತಿದೆ. ಇಂದು ಸಭೆ ಕರೆದಿರುವ ಉದ್ದೇಶ ಬರದ ಕುರಿತಾದ ಪರಿಶೀಲನೆ ಮಾಡುವುದೇ ಆಗಿದೆ. ಸರ್ಕಾರ ಬರ ನಿರ್ವಹಣೆಯ ಕುರಿತು ಬಹಳ ಗಂಭೀರವಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಬರವನ್ನು ಹಗುರ ಮನಸ್ಥಿತಿಯಾಗಿ ಪರಿಗಣಿಸಬಾರದು ಎಂದು ಕಂದಾಯ ಸಚಿವ, ಉಪ ಮುಖ್ಯಮಂತ್ರಿಗಳೂ ಆದ ಡಾ.ಜಿ.ಪರಮೇಶ್ವರ್ ಹೇಳಿದರು.
ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ರಂಗನಾಥಪುರ, ನಿಟ್ರೆ, ಸೋಮಹಳ್ಳಿ, ಶೀಗೆವಾಡಿ, ಚಾಮರಾಜನಗರ ತಾಲೂಕಿನ ಮುಕ್ಕಡಹಳ್ಳಿ, ಹೆಗ್ಗೋಠಾರ ಗ್ರಾಮ ಹಾಗೂ ಹನೂರು ತಾಲೂಕಿನ ಅಜ್ಜೀಪುರದ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಹನೂರು ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಜಿಲ್ಲೆಯ ಐದು ತಾಲೂಕುಗಳು ತೀವ್ರ ಬರಪೀಡಿತವೆಂದು ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಲಭ್ಯತೆ, ಜಾನುವಾರುಗಳಿಗೆ ಮೇವು ಲಭ್ಯತೆ, ಜನರಿಗೆ ಉದ್ಯೋಗ ನೀಡುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಅಧಿಕಾರಿಗಳಿಂದ ಸಭೆಯಲ್ಲಿ ಮಾಹಿತಿ ಪಡೆದರು. ಬಳಿಕ ಜನರಿಗೆ ಯಾವುದೇ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ವಹಿಸಿ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು.

ಜನರಿಗೆ ಮೂಲಭೂತ ಅವಶ್ಯಕತೆಗಳಾದ ಕುಡಿಯುವ ನೀರು, ಆಹಾರ, ಜೀವನೋಪಾಯಕ್ಕೆ ಅಗತ್ಯವಿರುವ ಉದ್ಯೋಗ, ಆರೋಗ್ಯ, ಜಾನುವಾರುಗಳಿಗೆ ಮೇವು, ನೀರು ಒದಗಿಸುವುದು ನಮ್ಮ ಮುಂದಿರುವ ಸವಾಲುಗಳಾಗಿವೆ. ಇದನ್ನು ಕಂದಾಯ ಇಲಾಖೆಯು ಇತರ ಸಂಬಂಧಿತ ಇಲಾಖೆಗಳ ಜೊತೆ ಸೇರಿಕೊಂಡು ಜನ - ಜಾನುವಾರುಗಳಿಗೆ ಯಾವುದೇ ಸಮಸ್ಯೆಯಾಗದಂತೆ ಪರಿಸ್ಥಿತಿಯನ್ನು ನಿಭಾಯಿಸಬೇಕಾಗಿದೆ ಎಂದು ಹೇಳಿದರು.
ಚಾಮರಾಜನಗರದಲ್ಲಿ ಜುಲೈ 2026ರಿಂದ ಈಚೆಗೆ ಕೇವಲ 81 ಸಾವಿರ ಮಾನವ ದಿನಗಳಷ್ಟು ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಆದರೆ, ಕಳೆದ ವರ್ಷ ಇದೇ 2 ತಿಂಗಳುಗಳಲ್ಲಿ 2.50 ಲಕ್ಷ ಉದ್ಯೋಗಗಳನ್ನು ಸೃಜಿಸಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.67 ರಷ್ಟು ಕಡಿಮೆಯಾಗಿದೆ. ಉತ್ತಮ ಮಳೆ ಬಂದ ವರ್ಷ 2.50 ಲಕ್ಷ ಉದ್ಯೋಗ ಸೃಷ್ಟಿಯಾದರೆ, ಈ ವರ್ಷ ಯಾಕೆ ಇಷ್ಟು ಕಡಿಮೆಯಾಗಿದೆ?. ಜನರು ಉದ್ಯೋಗ ಕೇಳುತ್ತಿಲ್ಲವೇ? ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಮತ್ತು ಅವರ ಅಧೀನ ಅಧಿಕಾರಿಗಳು ಏನು ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದರು.
ಚಾಮರಾಜನಗರದಲ್ಲಿ ಕೃಷಿ ಬೆಳೆ ವಿಮೆಯೂ ಕಡಿಮೆಯಾಗಿದೆ. ರಾಜ್ಯದಲ್ಲಿ 49.64 ಲಕ್ಷ ರೈತರ ಅರ್ಜಿಗಳಿಗೆ ಹಾಗೂ 33,17,167 ಹೆಕ್ಟೇರ್ ಭೂಮಿಗೆ ಬೆಳೆ ವಿಮೆ ಮಾಡಿಸಲಾಗಿದೆ. ಆದರೆ, ಚಾಮರಾಜನಗರದಲ್ಲಿ ಕೇವಲ 18,436 ಜನ 9,984 ಹೆಕ್ಟೇರ್ ಪ್ರದೇಶಕ್ಕೆ ಮಾತ್ರ ನೋಂದಾಯಿಸಿ ಕೊಂಡಿರುತ್ತಾರೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನ ವಹಿಸಬೇಕು. ರೈತರಿಗೆ ಉತ್ತೇಜನ ನೀಡುವ ಕೆಲಸಗಳನ್ನು ಯಾಕೆ ಮಾಡಲಿಲ್ಲ?. ಈ ರೀತಿ ಆಗಬಾರದು ಎಂದು ಉಪ ಮುಖ್ಯಮಂತ್ರಿಗಳು ಎಚ್ಚರಿಸಿದರು.

ಚಾಮರಾಜನಗರದಲ್ಲಿ ವಾಡಿಕೆ ಮಳೆ 193 ಮಿ.ಮೀ ಆಗಬೇಕಿತ್ತು. ಆದರೆ, ಸುರಿದಿರುವುದು ಕೇವಲ 87 ಮಿ.ಮೀ ಮಳೆ. ಇಲ್ಲೂ ಕೂಡ ಶೇ.55ರಷ್ಟು ಮಳೆ ಕೊರತೆಯಾಗಿದ್ದು, ಜಿಲ್ಲೆ 'Deficit' ವರ್ಗದಲ್ಲಿದೆ. ವಿಶೇಷವಾಗಿ ಆಗಸ್ಟ್ ತಿಂಗಳಿನಲ್ಲಿ ಶೇ.76ರಷ್ಟು ಭಾರಿ ಮಳೆ ಕೊರತೆ ಉಂಟಾಗಿದೆ. ಜೂನ್ 1ರಿಂದ ಆಗಸ್ಟ್ 31ರವರೆಗಿನ ಮುಂಗಾರು ಮಳೆಯ ಅಂಕಿ - ಅಂಶಗಳನ್ನು ಗಮನಿಸಿದರೆ, ಜಿಲ್ಲೆಯ ಕೊಳ್ಳೇಗಾಲದಲ್ಲಿ ಅತಿ ಹೆಚ್ಚು ಅಂದರೆ ಶೇ.67ರಷ್ಟು ಮಳೆ ಕೊರತೆಯಾಗಿದೆ. ಯಳಂದೂರಿನಲ್ಲಿ ಶೇ.65ರಷ್ಟು ಹಾಗೂ ಮೈಸೂರು ಜಿಲ್ಲೆಯ ಕೆ.ಆರ್. ನಗರ ಮತ್ತು ಟಿ. ನರಸೀಪುರದಲ್ಲಿ ಶೇ.64ರಷ್ಟು ಮಳೆ ಕೊರತೆಯಾಗಿದೆ. ಚಾಮರಾಜನಗರ ಜಿಲ್ಲೆಯ ಎಲ್ಲಾ 5 ತಾಲೂಕುಗಳನ್ನು (ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು, ಯಳಂದೂರು) 'ತೀವ್ರ' (Severe) ಬರಪೀಡಿತ ಎಂದು ಸರ್ಕಾರ ಈಗಾಗಲೇ ಘೋಷಿಸಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯ 1 ತಾಲೂಕಿನ 17 ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಇಲ್ಲಿ 48 ಗ್ರಾಮಗಳಿಗೆ 48 ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದ್ದು, 11 ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆಯಲಾಗಿದೆ. 11 ಗ್ರಾಮಗಳಿಗೆ ನೀರು ಪೂರೈಸಲಾಗುತ್ತಿದೆ. ಚಾಮರಾಜನಗರದ 1 ನಗರ ಸ್ಥಳೀಯ ಸಂಸ್ಥೆಯ 4 ವಾರ್ಡ್‌ಗಳಿಗೆ 2 ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 2,22,566 ಟನ್ ಮೇವು ಲಭ್ಯವಿದ್ದು, ಇದು ಸರಿಸುಮಾರು 23 ವಾರಗಳಿಗೆ ಸಾಕಾಗುತ್ತದೆ. ಆದರೆ, ಗುಂಡ್ಲುಪೇಟೆ ತಾಲೂಕಿನಲ್ಲಿ ಕೇವಲ 17 ವಾರಗಳಿಗೆ ಮಾತ್ರ ಮೇವು ಲಭ್ಯವಿದ್ದು, ಮುಂದಿನ ಮುಂಗಾರಿನವರೆಗೆ ಮೇವಿನ ಕೊರತೆಯಾಗದಂತೆ ತುರ್ತು ಯೋಜನೆಯನ್ನು ಸಿದ್ಧಪಡಿಸಬೇಕಿದೆ. ಗುಂಡ್ಲುಪೇಟೆಯಲ್ಲಿ ಕೇವಲ 17 ವಾರಗಳಿಗೆ ಮಾತ್ರ ಮೇವು ಲಭ್ಯವಿರುವುದರಿಂದ, ಅಲ್ಲಿ ತಕ್ಷಣವೇ ಮೇವು ಬ್ಯಾಂಕ್ ಸ್ಥಾಪನೆಗೆ ಮತ್ತು ಮುಂದಿನ ಮುಂಗಾರಿನವರೆಗೆ ಮೇವು ಒದಗಿಸಲು ತುರ್ತು ಯೋಜನೆ ಮಾಡಿಕೊಳ್ಳಬೇಕಾಗಿದೆ. ಮೇವಿನ ಕಿಟ್‌ಗಳನ್ನು ವಿತರಿಸಲು ಪಶುಸಂಗೋಪನಾ ಇಲಾಖೆಗೆ ಸರ್ಕಾರ ಈಗಾಗಲೇ 25 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದೆ ಎಂದರು.
ಇದಕ್ಕೂ ಮನ್ನ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಗಟ್ಟವಾಡಿ ಗ್ರಾಮಕ್ಕೆ ಹಾನಿಗೊಳಗಾದ ರೈತರ ಜಮೀನಿಗೆ ತೆರಳಿ ಡಿಸಿಎಂ ಬರ ವೀಕ್ಷಣೆ ಮಾಡಿದರು. ಗ್ರಾಮದಲ್ಲಿ ಮಕ್ಕೆಜೋಳ ಮತ್ತು ಸೂರ್ಯಕಾಂತಿ ಬೆಳೆ ಬೆಳೆದಿದ್ದ ರೈತರಾದ ಶಿವಬಸಪ್ಪ ಮತ್ತು ಮಹದೇವಪ್ಪ ಅವರ ಜಮೀನುಗಳಿಗೆ ಭೇಟಿ ನೀಡಿ ಮಳೆ ಕೊರತೆಯಿಂದಾಗಿ ಬೆಳೆ ಒಣಗಿ ನಾಶವಾಗಿರುವುದನ್ನು ಪರಿಶೀಲಿಸಿದರು. ಈ ವೇಳೆ ಬೆಳೆ ಹಾನಿಯಿಂದ ಸಂಕಷ್ಟಕ್ಕೀಡಾಗಿರುವ ರೈತರು ತಾವು ಸಾಲ ಮಾಡಿ ಬೆಳೆ ಬೆಳೆದಿದ್ದು, ಈಗ ದಿಕ್ಕು ತೋಚದಂತಾಗಿದೆ. ಸರ್ಕಾರ ನೆರವು ನೀಡಬೇಕೆಂದು ಮನವಿ ಮಾಡಿಕೊಂಡರು. ಕೂಡಲೇ ಡಿಸಿಎಂ ಸ್ಥಳದಲ್ಲಿದ್ದ ಅಧಿಕಾರಿಗಳಿಂದ ಬರ ಪರಿಸ್ಥಿತಿಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡರು.
ತಾಲೂಕಿನಲ್ಲಿ ವಾರ್ಷಿಕ 4,500 ಹೆಕ್ಟೇರ್ ಪ್ರದೇಶದಲ್ಲಿ ಅಲಸಂದೆ, 4,200 ಹೆಕ್ಟೇರ್ ಪ್ರದೇಶದಲ್ಲಿ ಉದ್ದು, 3,500 ಹೆಕ್ಟೇರ್ ಪ್ರದೇಶದಲ್ಲಿ ಹೆಸರು, 3,400 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ, 8,000 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗುತ್ತದೆ. ಆದರೆ, ಈ ಬಾರಿ ಮಳೆ ಕೊರತೆಯಿಂದ ತಾಲೂಕಿನಲ್ಲಿ 3,500 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಈಗ ಬಿತ್ತನೆಯಾಗಿದ್ದ ಬೆಳೆ ಕೂಡ ತೀವ್ರ ಬರದಿಂದ ನಾಶವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ರೈತರು ಹಾಗೂ ಅಧಿಕಾರಿಗಳಿಂದ ಸ್ಥಿತಿಗತಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ಉಪಮುಖ್ಯಮಂತ್ರಿಗಳು, ಶೀಘ್ರವೇ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಫೈನಾನ್ಸ್ ಕಂಪನಿಗಳು ರೈತರಿಗೆ ಕಿರುಕುಳ ನೀಡಬಾರದು: ಡಿಸಿಎಂ ಪರಮೇಶ್ವರ್ ಎಚ್ಚರಿಕೆ

